ಇಂದು ಬುದ್ಧ ಬಸವ ಅಂಬೇಡ್ಕರರ ತತ್ವ ಅಗತ್ಯವಿದೆ: ಬಸವಲಿಂಗ ಸ್ವಾಮೀಜಿ

ಗದಗ :

ಜಗತ್ತು ಎಂದಿಗಿಂತ ಇಂದು ತೀವ್ರ ತಳಮಳದಲ್ಲಿದೆ. ಎಲ್ಲೆಡೆಯೂ ಅಸಮಾಧಾನ, ಅಶಾಂತಿ ತುಂಬಿ ತುಳುಕುತ್ತಿದೆ. ಇಂತಹ ಕಾಲಘಟ್ಟದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಸಮಾನತೆಯ ತತ್ವದ ಅಳವಡಿಕೆ ಎಂದಿಗಿಂತ ಇಂದು ಹೆಚ್ಚು ಅವಶ್ಯಕತೆಯಿದೆ.

ಅದರಲ್ಲೂ ತಮ್ಮದೇ ಆದ ಧರ್ಮತತ್ವ ನೀಡಿದ ಮೊದಲಿನ ಇಬ್ಬರು ಮಹನೀಯರು ಮನುಷ್ಯ ಕ್ರೌರ್ಯದ ಪ್ರತೀಕದಂತಿದ್ದ ಪುರೋಹಿತ ಶಾಹಿತ್ವ, ಜಾತೀಯತೆ, ವರ್ಣಾಶ್ರಮ ಪದ್ದತಿ, ಮೂಢನಂಬಿಕೆ ಆಚರಣೆ, ಸ್ತ್ರೀಯರನ್ನು ಪಶುಗಳಿಗಿಂತ ಕಡೆಯಾಗಿ ಕಾಣುವುದು ಇವೆಲ್ಲವನ್ನು ತೀವ್ರವಾಗಿ ವಿರೋಧಿಸಿದ್ದರು.

ಈ ಪರಿಣಾಮ ಈ ಮಹನೀಯರು ಪಟ್ಟಭದ್ರರಿಂದ ತೀವ್ರ ವಿರೋಧ ಎದುರಿಸಿಯೂ ಸಮರ್ಥವಾಗಿ ತಮ್ಮ ತತ್ವಗಳನ್ನು ಜನಸಾಮಾನ್ಯರಿಗೆ ಅರುಹಿದರು. ಈ ಸರಳ ತತ್ವಗಳೆಡೆಗೆ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾದರೆಂದು ಬೈಲೂರು ಗುರುಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು, ತಿಳಿಸಿದರು.

ಅವರು ಬಸವದಳದ ೧೬೯೨ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ನಡೆದ ‘ವೀರ ವೈರಾಗ್ಯನಿಧಿ ಅಕ್ಕಮಹಾದೇವಿ’ ಹಾಗೂ ‘ಲಿಂಗೈಕ್ಯ ಶರಣರಾದ ಕಾಶೀನಾಥ ಹಂಜಗಿ’ ಅವರ ಸ್ಮರಣೋತ್ಸವದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತ, ಮೇಲಿನ ಮೂವರು ಮಹನೀಯರು ಇದೇ ಮಣ್ಣಿನಲ್ಲಿ ಹುಟ್ಟಿ ಜಗದ ಜ್ಯೋತಿಯಾಗಿ ಬೆಳಗಿದರೆಂದರು.

ಹಾಗೆಯೇ ವೀರವೈರಾಗ್ಯಧಾರಿಣಿ ಅಕ್ಕಮಹಾದೇವಿ ಕುರಿತು ಮಾತನಾಡುತ್ತಾ, ಅಕ್ಕಮಹಾದೇವಿ ವೈರಾಗ್ಯದ ಪ್ರತಿರೂಪವಾಗಿದ್ದರು. ಅವರು ಅನುಭವ ಮಂಟಪಕ್ಕೆ ಜ್ಞಾನದ ನಕ್ಷತ್ರದಂತೆ ಬಂದರು. ಅಲ್ಲಮಪ್ರಭು ಬಗೆ-ಬಗೆಯಿಂದ ಪ್ರಶ್ನಿಸಿದಾಗ ಅವಕ್ಕೆಲ್ಲ ಸಮರ್ಥವಾಗಿ ಉತ್ತರಿಸಿದ ಆ ತಾಯಿಯ ವಚನಗಳಲ್ಲಿ ವೈರಾಗ್ಯ ಅಡಗಿದೆ. ಅವರು ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ವಚನವೂ ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತದೆಂದರು.

ಸಭೆಯ ಆರಂಭದಲ್ಲಿ ಅಕ್ಕಮಹಾದೇವಿ ಅವರ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಮಂಜುಳಾ ಹಾಸೀಲಕರ ಅವರು, ೧೨ನೇ ಶತಮಾನದ ಶ್ರೇಷ್ಟ ವಚನಕಾರರಲ್ಲೊಬ್ಬರಾದ ಅಕ್ಕಮಹಾದೇವಿಯವರು ಚಿಕ್ಕವಯಸ್ಸಿನಲ್ಲೇ ವೈರಾಗ್ಯದತ್ತ ವಾಲಿದರು. ಚೆನ್ನಮಲ್ಲಿಕಾರ್ಜುನನ್ನು ಕಾಣುವ ಹಂಬಲ ಅವರಲ್ಲಿ ಪ್ರಬಲವಾಗಿತ್ತು. ಆದರೆ ಅನುಭವ ಮಂಟಪಕ್ಕೆ ಬಂದ ಆ ತಾಯಿ ತನ್ನಲ್ಲೇ ಮಲ್ಲಿಕಾರ್ಜುನನಿದ್ದಾನೆಂಬುದನ್ನು ಕಂಡುಕೊಂಡಳು ಎಂದರು.

ಮತ್ತೋರ್ವ ಅತಿಥಿ ಮಾರ್ತಾಂಡಪ್ಪ ಹಾದಿಮನಿ ಅವರು, ಕಾಶೀನಾಥ ಹಂಜಗಿಯವರನ್ನು ಸ್ಮರಿಸಿಕೊಳ್ಳುತ್ತಾ, ಕಾಶೀನಾಥ ಹಂಜಗಿಯವರು ಮೂಲತಃ ಬಡತನದಿಂದ ಬಂದವರು. ಆರಂಭದಲ್ಲಿ ಬೀದಿಬದಿಯ ವ್ಯಾಪಾರದಿಂದ ಬೆಳೆಯುತ್ತಾ ಅವರು ಗದುಗಿನ ಪ್ರತಿಷ್ಠಿತ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿ ಆಗಿದ್ದರು.

ಸೌಮ್ಯ ಸ್ವಭಾವದರಾಗಿದ್ದ ಅವರು ತಮ್ಮಲ್ಲಿ ದುಡಿಯುವ ಕೆಲಸಗಾರರನ್ನು ಗೌರವದಿಂದ ಕಾಣುತ್ತಿದ್ದರು. ತಮ್ಮ ಬಳಿ ಸಹಾಯ ಯಾಚಿಸಿ ಬಂದ ಯಾರನ್ನು ಅವರು ಎಂದೂ ಬರಿಗೈಯಿಂದ ಕಳಿಸುತ್ತಿರಲಿಲ್ಲ ಎಂದರು.

ಕಾಶೀನಾಥರ ಧರ್ಮಪತ್ನಿ ಪದ್ಮಾ ಹಂಜಗಿಯವರು ತಮ್ಮ ಪತಿಯನ್ನು ನೆನೆದು ಮಾತನಾಡಿದರು. ಜೊತೆಗೆ ಅಳಿಯಂದಿರಾದ ಡಾ. ಶ್ರೀಧರ, ಸಹೋದರ ನಾಗೇಶ ಹಂಜಗಿ, ಕಾಶೀನಾಥರ ಹೆಣ್ಣುಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಸಹೋದರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಅಲ್ಲದೇ ಶರಣತತ್ವ ಚಿಂತಕರಾದ ಶೇಖಣ್ಣ ಕವಳಿಕಾಯಿ, ಬಸವರಾಜ ಹಿರೇಹಡಗಲಿ ಕೂಡಾ ಕಾಶೀನಾಥರನ್ನು ನೆನೆದು ಮಾತನಾಡಿದರು. ಬಸವದಳ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗಮ್ಮ ಹೂಗಾರ ಪ್ರಾರ್ಥಿಸಿದರು.  ರಾಮಣ್ಣ ಕಳ್ಳಿಮನಿಯವರು ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ಎಸ್. ಎ. ಮುಗದ ಅವರು ಮಾಡಿದರು. ಶರಣು ಸಮರ್ಪಣೆಯನ್ನು ಎಂ.ಬಿ. ಲಿಂಗದಾಳ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *