ಕಲಬುರಗಿ
ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತದ ಸಹಯೋಗದಲ್ಲಿ ಏ. 16ರಿಂದ 20ರವರೆಗೆ 893ನೇ ಬಸವ ಜಯಂತಿ ಆಚರಿಸಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಹಾಗೂ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ತಿಳಿಸಿದರು.
ಏ. 16ರಿಂದ ಮೂರು ದಿನಗಳ ಕಾಲ ನಗರದ ಬಸವೇಶ್ವರ ಮೂರ್ತಿ ಹಿಂದಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ.
17ರಂದು ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿಯವರು ವಹಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಪೂಜ್ಯ
ಡಾ. ದಾಕ್ಷಾಯಣಿ ಎಸ್. ಅಪ್ಪ ಉದ್ಘಾಟಿಸಲಿದ್ದಾರೆ. ಭದ್ರಾವತಿಯ ಗಂಗಾಂಬಿಕಾ ಬಸವರಾಜಪ್ಪ ಗುರುಬಸವಣ್ಣನವರ ಸಮಗ್ರ ಕ್ರಾಂತಿ ವಿಷಯ ಕುರಿತು ಅನುಭಾವ ನೀಡಲಿದ್ದಾರೆ. ಡಾ. ಮೀನಾಕ್ಷಿ ಬಾಳಿ, ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ವಿಲಾಸವತಿ ಖೂಬಾ
ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದ್ದುಗೆ ಮಠದ ಚರಲಿಂಗ ಸ್ವಾಮಿಗಳು ವಹಿಸಲಿದ್ದಾರೆ. ರಾವೂರು ಸಿದ್ಧಲಿಂಗ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಬಸವತತ್ವದ ಪ್ರಸ್ತುತತೆ ಕುರಿತು ಡಾ. ಸೋಮಶೇಖರ ಯಾಳವಾರ ಅನುಭಾವ ನೀಡಲಿದ್ದಾರೆ.
ಶಾಸಕ ಅಲ್ಲಮಪ್ರಭು ಪಾಟೀಲ, ಬಸವರಾಜ ಯಲಗಾರ, ಶರಣಕುಮಾರ ಮೋದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಆರ್.ಜಿ. ಶೆಟಗಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
18ರಂದು ನಡೆಯುವ ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಆಳಂದನ ಕೋರಣೇಶ್ವರ ಸ್ವಾಮೀಜಿ ನೇತೃತ್ವ, ಡಾ. ಗುರುಲಿಂಗಪ್ಪ ದಬಾಲೆ ಮಹಾನೇತಾರ ಬಸವಣ್ಣನವರ ಬಹುಮುಖ ವ್ಯಕ್ತಿತ್ವ ವಿಷಯ ಕುರಿತು ಅನುಭಾವ ನೀಡಲಿದ್ದಾರೆ. ಅರುಣಕುಮಾರ ಎಂ.ವೈ. ಪಾಟೀಲ, ಆರ್.ಕೆ. ಪಾಟೀಲ, ಪ್ರೊ.ಆರ್.ಕೆ. ಹುಡಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೋಡಲಹಂಗರಗಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
19ರಂದು ಬೆಳಗ್ಗೆ 6-30 ಗಂಟೆಗೆ ಶರಣಬಸವೇಶ್ವರ ದೇವಸ್ಥಾನ ಆವರಣದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಇಲಕಲ್ ಮಠದ ಗುರುಮಹಾಂತ ಸ್ವಾಮೀಜಿಗಳು ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗ-ದೀಕ್ಷಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 5 ಗಂಟೆಗೆ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಮಾವೇಶ ನೆರವೇರಲಿದೆ ಎಂದರು.
ಅರಣ್ಯ ಇಲಾಖೆ ಹಾಗೂ ಪರಿಸರ ಖಾತೆ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಗುವುದು. ಹಂದಿಗುಂದಿ ಮಠದ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಸಾಹಿತಿ ಶಂಕರ ದೇವನೂರ ಅವರು ವ್ಯಕ್ತಿತ್ವ ಮತ್ತು ಬಸವಣ್ಣ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
20ರಂದು ಬೆಳಿಗ್ಗೆ ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವೆವು. ಸಂಜೆ ನಗರೇಶ್ವರ ಶಾಲೆಯಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದರು. ಅಲ್ಲಮಪ್ರಭು ಪಾಟೀಲ, ಅಮರನಾಥ ಪಾಟೀಲ, ದೊಡ್ಡಪ್ಪಗೌಡ ಪಾಟೀಲ, ಆರ್.ಕೆ. ಹುಡಗಿ, ಆರ್.ಜಿ. ಶೆಟಗಾರ, ಸೋಮಶೇಖರ ಹಿರೇಮಠ, ರಾಜಶೇಖರ ಸಿರಿ, ಅರುಣಕುಮಾರ ಪಾಟೀಲ, ರಾಜಶೇಖರ ಯಂಕಂಚಿ, ರಮೇಶ ಮರಗೋಳ, ಅಶೋಕ ಘೂಳಿ, ಡಾ. ಭೀಮಾಶಂಕರ ಬಿಲಗುಂದಿ, ಶರಣು ಭೂಸನೂರ, ಶಿವಾನಂದ ದ್ಯಾಮಗೊಂಡ ಇತರರು ಗೋಷ್ಠಿಯಲ್ಲಿದ್ದರು.
ವಿಶೇಷ ಕಾರ್ಯಕ್ರಮಗಳು:
ಬಸವ ಜಯಂತಿ ಅಂಗವಾಗಿ ರಕ್ತದಾನ ಶಿಬಿರ, ಮಹಿಳೆಯರಿಂದ ಬೈಕ್ ರ್ಯಾಲಿ, ಕಾರ್ ರ್ಯಾಲಿ, ವಚನ ಗ್ರಂಥಗಳ ಮೆರವಣಿಗೆ, 50 ಸಾವಿರ ವಚನ ಗ್ರಂಥಗಳ ವಿತರಣೆ ಮುಂತಾದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
(ಬಸವ ಜಯಂತಿಗೆ ಸಂಬಂಧಿಸಿದ ವರದಿ, ಫೋಟೋ, ವಿಡಿಯೋಗಳನ್ನು ಸ್ವಾಗತಿಸುತ್ತೇವೆ. ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

