ಬಸವ ಭಾಷೆ : ‘ಸದಾಚಾರವೇ ಸಚ್ಚರಿತ್ರ ಭಾಷೆ’

(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)

ದಿನಾಂಕ : 09.04.2026

ಪ್ರವಚನಕಾರರು
ಶ್ರೀ ಪ್ರಭುದೇವ ಮಹಾಸ್ವಾಮಿಗಳು,
ಲಿಂಗಾಯತ ಮಹಾಮಠ,
ಬಸವಗಿರಿ, ಬೀದರ

ಸಂಘಟಕರು
ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸಮಿತಿ, ಕೊಪ್ಪಳ

ಕೊಪ್ಪಳ :

ಸದಾಚಾರವೇ ಸಚ್ಚರಿತ್ರ, ಒಳ್ಳೆಯ ನಡತೆ-ಸದ್ಗುಣ-ಶೀಲಗಳೆ ಸಚ್ಚರಿತ್ರದ ಲಕ್ಷಣಗಳು, ಸದ್ಗುಣ-ಸದಾಚಾರಗಳೇ ಮಾನವ ಕುಲಕೋಟಿಯ ನಿಜವಾದ ಸಂಪತ್ತು. ಉಡುವ ಬಟ್ಟೆಗಿಂತ ನಡೆವ ಬಟ್ಟೆಗೆ (ಮಾರ್ಗ) ಪ್ರಾಮುಖ್ಯತೆ ನೀಡಿದವರು ಬಸವಾದಿ ಶರಣರು. ಸತ್ಯಾನುಭವದ ಪ್ರಥಮ ಮೆಟ್ಟಿಲೇ ಸದಾಚಾರ.

ಸದಾಚಾರವೇ ಶ್ರೇಷ್ಠ. ಅನಾಚಾರವೇ ಕನಿಷ್ಠ, ಆರಾಧನೆಗಿಂತ ಮೊದಲು ಆಚಾರವೇ ಅಳವಡಬೇಕು. ಇದು ಊಟಕ್ಕಿಂತ ಮೊದಲು ತಟ್ಟೆ ತೊಳೆಯುವಂಥ ಕ್ರಿಯೆ. ಹೊಲಸಾಗಿರುವ ತಟ್ಟೆಯಲ್ಲಿ ಪಂಚಾಮೃತ ಬಡಿಸಿದರೂ ಉಣ್ಣಲಾಗದು. ಹಾಗೆಯೇ ಸದಾಚಾರದ ಮೂಲಕ ಈ ತನುವನ್ನು ಸ್ವಚ್ಚಗೊಳಿಸುವುದು ಅವಶ್ಯ, ಆವಾಗ ಪರಮಾನುಭವದ ಅಮೃತ ಬಡಿಸಿಕೊಳ್ಳಲು ಯೋಗ್ಯವಾಗುವುದು. ಇದುವೇ ಪರಮನ ನಿಜ ಪೂಜೆ.

ಸಚ್ಚಾರಿತ್ರದಲ್ಲಿ ಇತರರ ಲೋಪ ದೋಷಗಳನ್ನು ಎತ್ತಿ ಮಾತನಾಡದೇ ಇರುವ ಸದ್ಗುಣವು ಮುಖ್ಯವಾಗಿದೆ. ನಾಲಿಗೆ ಚಪಲಶೀಲ. ಸದಾ ಇತರರನ್ನು ನಿಂದಿಸುವ ಅವರ ಕುಂದುಗಳನ್ನು ಎತ್ತಿ ಮಾತನಾಡುವ ಹೀನತೆ ಇದಕ್ಕಂಟಿದೆ. ನಾಲಿಗೆಗೆ ಕಡಿವಾಣ ಹಾಕದಿದ್ದರೆ ಆಗುವ ಹಾನಿಗಳಿಗೆ ಲೆಕ್ಕವಿಲ್ಲ. ಮೂರಂಗುಲದ ನಾಲಿಗೆ ಆರಡಿಯ ಮಾನವನನ್ನು ಕುಸಿಯುವಂತೆ ಮಾಡಬಲ್ಲದು. ಲೋಕವನ್ನೆ ಕಂಗೆಡಿಸಬಲ್ಲದು. ಇದರ ಭಯಂಕರತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಬಸವಣ್ಣನವರು ಮಾನವ ಉನ್ನತಿಗೆ ಇದು ಮಾರಕವೆಂದು ಭಾವಿಸಿ ಸಚ್ಚಾರಿತ್ರದ ಭಾಷೆಯ ಕಟ್ಟಳೆ ವಿಧಿಸಿಕೊಳ್ಳಲು ಸಂದೇಶ ನೀಡಿದ್ದಾರೆ.

ಅತೀ ಮಾತು ಆಪತ್ತಿನ ಮೂಲ. ತನ್ನ ಉನ್ನತಿ ಬಯಸುವವರು ಕಡಿಮೆ ಮಾತನಾಡಬೇಕು. ಮೃದು-ಮಧುರವಾದ ಮಾತನಾಡಬೇಕು. ಸ್ಪಷ್ಟವಾಗಿ ಮಾತನಾಡಬೇಕು. ದೇವರು ಮೆಚ್ಚುವಂಥ ಮಾತುಗಳನ್ನು ಮಾತ್ರ ಆಡಬೇಕೆಂದು ಬಸವಣ್ಣನವರು ಹೇಳುತ್ತಾರೆ.

ಆಡುವ ಮಾತಿನಲ್ಲಿ ಎಚ್ಚರವಿದ್ದರೆ ಕಡಿಮೆ ಮಾತನಾಡುತ್ತೇವೆ. ಬಾಹ್ಯ ಮಾತು ಕಡಿಮೆಯಾದಷ್ಟು ಅಂತರಾವಲೋಕನ ಹೆಚ್ಚಾಗುತ್ತದೆ. ತಾನಾರೆಂಬ ಅರಿವು ಮೂಡತೊಡಗುತ್ತದೆ. ಒಮ್ಮೆ ತನ್ನವಲೋಕನ ಪ್ರಾರಂಭವಾದರೆ ಸಾಕು. ಪರರ ಕುರಿತು ಮಾತನಾಡಲು ಸಮಯವಿರದು.

ವ್ಯಕ್ತಿ ಅಂತರ್ಮುಖಿಯಾಗುತ್ತಾನೆ. ತನ್ನ ಅಂಕುಡೊಂಕುಗಳೇ ಅಧಿಕವೆನಿಸಿ, ಅವುಗಳ ತಿದ್ದು-ತೀಡುವಿಕೆಯಲ್ಲಿ ಮಗ್ನತೆ ಆವರಿಸುತ್ತದೆ. ಲೋಕದ ಡೊಂಕು ಅವನಿಗೆ ಕಾಣದು. ತನ್ನ ತನು-ಮನ ಸಂತೈಸುವ ಮಹತ್ಕಾರ್ಯದಲ್ಲಿ ತೊಡಗಿಕೊಳ್ಳುವನು. ಜಗತ್ತು ಹೆಚ್ಚು ಕುಂದುಗಳ ಸಮ್ಮಿಶ್ರಣ. ಎಲ್ಲೆಲ್ಲೂ ಕುಂದುಗಳನ್ನ ಕಾಣುವುದು ಅವಗುಣವಾದರೆ, ಹೆಚ್ಚುಗಾರಿಕೆಯನ್ನೇ ಕಾಣುವುದು ಸದ್ಗುಣ ತನ್ನೊಳಗೆ ಶುದ್ಧವಾಗಿರುವ, ಲೋಕವೆಲ್ಲಾ ಶುದ್ಧವಾಗಿಯೇ ಕಾಣುವ ಇಲ್ಲಿ ಯಾರೂ ಪರಿಪೂರ್ಣರಲ್ಲ. ಪರಮಾತ್ಮನೊಬ್ಬನೆ ಪರಿಪೂರ್ಣ, ಅದಕ್ಕಾಗಿ ಎಲ್ಲರಲ್ಲಿಯ ಉತ್ತಮಿಕೆಯನ್ನೆ ಕಾಣುವ ಗುಣ ಬೆಳೆಸಿಕೊಳ್ಳಬೇಕು.

ಇನ್ನೊಬ್ಬರ ಕುಂದುಗಳನ್ನೇ ಎತ್ತಿ ನುಡಿಯುತ್ತಾ ಕಾಲ ಕಳೆಯುವವ ತನಗರಿವಿಲ್ಲದಂತೆ ಕುಂದುಗಳನ್ನ ತನ್ನದಾಗಿಸಿಕೊಳ್ಳುತ್ತಾನೆ. ತನ್ನಲ್ಲಿಯ ಓರೆ ಕೋರೆಗಳನ್ನು ತಿದ್ದಿಕೊಂಡು ನಡೆದು ತೋರಿ ಇತರರಿಗೆ ಆದರ್ಶ ಪ್ರಾಯನಾಗುತ್ತಾನೆ. ಮನ ಹರಿದತ್ತ ಹರಿಯದೇ ಅಗತ್ಯವಿದ್ದತ್ತ ಹರಿಸುವ ನಿಯಂತ್ರಣ ಶಕ್ತಿ ವೃದ್ಧಿಸಿಕೊಳ್ಳಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *