ಬಸವ ಜಯಂತಿ: ಕೊಪ್ಪಳದಲ್ಲಿ ಯೋಗ ತರಬೇತಿ ಶಿಬಿರ ಶುರು

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

ಬಸವಣ್ಣನವರು ಜಗತ್ತಿಗೆ ನೀಡಿದ ಅತ್ಯಮೂಲ್ಯ ಕೊಡುಗೆ ಎಂದರೆ ಅದು ಶಿವಯೋಗವಾಗಿದೆಯೆಂದು ಬೀದರ ಬಸವಗಿರಿಯ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ನುಡಿದರು. ಅವರು ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿರುವ “ಯೋಗ ತರಬೇತಿ ಶಿಬಿರ” ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಷ್ಟಾಂಗ ಯೋಗವು ಸಮಾಧಿ ಹಂತದವರೆಗೆ ಬಂದರೆ ಶಿವಯೋಗ ಅದಕ್ಕೂ ಮುಂದೆ ಸಾಗಿ ನಿಜಲಿಂಗೈಕ್ಯ ಸಾಧನೆ ಬೋಧಿಸುತ್ತದೆ. ಯೋಗದ ಸಮಾಧಿ ‘ಐಕ್ಯ’ವನ್ನು ಮಾತ್ರ ಸಾಧಿಸಿದರೆ, ‘ನಿಜಲಿಂಗೈಕ್ಯ’ವನ್ನು ಸಾಧಿಸುತ್ತದೆ. ಅಂದರೆ ಜೀವಾತ್ಮ ವಿಶ್ವಾತ್ಮನಾಗಿ ಮುಂದೆ ವಿಶ್ವಾತೀತ ಆತ್ಮನೊಂದಿಗೆ ಸಮರಸ ಸಾಧಿಸುವ ಯೋಗವೇ ಶಿವಯೋಗವಾಗಿದೆ. ಇದನ್ನೇ “ಲಿಂಗಾಂಗ ಸಾಮರಸ್ಯ ಅಥವಾ ಲಿಂಗಾಂಗ ಯೋಗ”ವೆನ್ನುತ್ತಾರೆಂದರು.

ಶಿಬಿರದ ಮುಖ್ಯ ತರಬೇತಿದಾರರಾದ ಬಸವಕಲ್ಯಾಣದ ಲೋಕೇಶ ಗುರೂಜಿಯವರು ಮಾತನಾಡುತ್ತ, “ಯೋಗ” ಎಂದರೆ ಕೇವಲ ದೇಹವನ್ನು ಬಗ್ಗಿಸುವುದು ಅಥವಾ ಕಸರತ್ತು ಮಾಡುವುದಲ್ಲ. ಇದು ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸುವ ಅದ್ಭುತ ಕಲೆ. ಇಂದಿನ ಧಾವಂತದ ಜಗತ್ತಿನಲ್ಲಿ, ಒತ್ತಡದ ಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತಿದ್ದೇವೆ. ಇಂತಹ ಸಮಯದಲ್ಲಿ ಯೋಗವು ನಮಗೆ ದಾರಿದೀಪವಾಗಿದೆ ಎಂದರು.

ಬಸವಕಲ್ಯಾಣ ತಾಲ್ಲೂಕಿನ ರಾಜೋಳ ಗ್ರಾಮದ ಯೋಗಗುರುಗಳಾದ ಲೋಕೇಶ ಗುರೂಜಿಯವರು ಯೋಗದಲ್ಲಿ ಸ್ನಾತಕೋತ್ತರ ಪದವೀಧರರು. ಯೋಗ ಮತ್ತು ಶಿವಯೋಗದಲ್ಲಿ  ಅನುಭಾವಿಗಳಾಗಿದ್ದಾರೆ.

ಯೋಗ ಶಿಬಿರ 10ರಿಂದ 19ರವರೆಗೆ ನಡೆಯಲಿದೆ.

ಯೋಗ ಶಿಬಿರವನ್ನು ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್, ಬಸವ ಜಯಂತಿ ಪ್ರವಚನ ಸೇವಾ ಸಮಿತಿ, ಪಂತಜಲಿ ಯೋಗ ಸಮಿತಿ ಮತ್ತು ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳ ಘಟಕ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕಗಳು ಸಂಯುಕ್ತವಾಗಿ ಸಂಘಟಿಸಿದ್ದು ಕೊಪ್ಪಳದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಲ ಮತ್ತು ಕಾರ್ಯದರ್ಶಿ ಬಾಪೂಗೌಡ ಪಾಟೀಲ, ಪತಂಜಲಿ ಯೋಗ ಸಮಿತಿಯ ಬಿ.ಎಸ್. ಅಂಗಡಿ, ಯೋಗ ತರಬೇತಿದಾರ ಶಿವಬಸಯ್ಯ ವೀರಾಪೂರ, ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ವಣಗೇರಿ ಮತ್ತು ಕಾರ್ಯದರ್ಶಿ ಶೇಖರ ಇಂಗಳದಾಳ, ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಅರ್ಚನಾ ಸಸಿಮಠ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಕುಮಾರ ಕುಕನೂರ ಇನ್ನಿತರ ಮುಖಂಡರು ಮತ್ತು  ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *