ಅನುಭವ ಮಂಟಪ ಲೇಖನ ಸರಣಿಯ ಕೊನೆಯ ಭಾಗ
ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ
ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು
ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು
ಭಾಗ 4: ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ
ಭಾಗ 5 – ಸಿಖ್ಖರ ಸುವರ್ಣ ಮಂದಿರದಂತೆ ಅನುಭವ ಮಂಟಪ ನಿರ್ವಹಣೆಯಾಗಲಿ
ಭಾಗ 6: ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ
ಭಾಗ 7 – ಅನುಭವ ಮಂಟಪ: ವಿರಕ್ತ ಮಠಗಳು ನೇತೃತ್ವ ವಹಿಸಲಿ
ಬೆಂಗಳೂರು
ಸರಕಾರ ಇಷ್ಟೊಂದು ವೆಚ್ಚದಲ್ಲಿ ಭವ್ಯವಾದ ಅನುಭವ ಮಂಟಪ ನಿರ್ಮಾಣ ಮಾಡುತ್ತಿರುವುದು ಯಾಕೆ? ಬೇರೆ ಧರ್ಮಗಳಿಗೆ ನೀಡದ ಮಹತ್ವವನ್ನು ಲಿಂಗಾಯತ ಧರ್ಮದಲ್ಲಿ ಉಗಮಿಸಿದ ಸಂಸ್ಥೆಗೆ ಯಾಕೆ ನೀಡುತ್ತಿದೆ?
ಬಸವಾದಿ ಶರಣರು ನೇರವಾಗಿ ಮತ್ತು ಪರೋಕ್ಷವಾಗಿಯೂ ರಾಜ್ಯಸತ್ತೆಯನ್ನು ವಿರೋಧಿಸಿ ನಿಂತರು. ಪ್ರಜಾರಾಜ್ಯದ ಕನಸು ಕಂಡರು. ಶರಣ ತತ್ವಗಳು ಪ್ರಜಾರಾಜ್ಯ ಕಲ್ಪನೆಯ ಮೂಲ ಸಿದ್ದಾಂತ ಮತ್ತು ಆಚರಣೆಗಳಿಗೆ ಪೂರಕವಾಗಿರುವುದು ಇದಕ್ಕೆ ಮುಖ್ಯ ಕಾರಣ.
ಹನ್ನೆರಡನೆಯ ಶತಮಾನದಲ್ಲಿ ಶರಣರು ಅನುಭವ ಮಂಟಪದಲ್ಲಿ ಸಮಾಜದಲ್ಲಿನ ಒಳಿತು ಕೆಡುಕಗಳನ್ನು ಚರ್ಚಿಸುತ್ತಿದ್ದರು. ಅಲ್ಲಿ ಆಗಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳ ಬಗ್ಗೆ ತೀವ್ರತರವಾದ ಸಂವಾದಗಳು ನಡೆಯುತ್ತಿದ್ದವು.
ಕಳೆದ ಒಂದು ಸಹಸ್ರಮಾನದಲ್ಲಿ ಸಮಾಜ, ರಾಷ್ಟ್ರ ಮತ್ತು ಸಾಮೂಹಿಕ ಬದುಕಿನಲ್ಲಿ ಊಹಿಸಲಾರದಷ್ಟು ಬದಲಾವಣೆಗಳು ಬಂದಿವೆ. ಆದರೂ ಅಂದು ಶರಣರನ್ನು ಕಾಡಿದ ಸಮಸ್ಯೆಗಳು ಇಂದಿಗೂ ಜೀವಂತವಾಗಿರುವುದು ಭಾರತೀಯ ಸಮಾಜ ಎಷ್ಟು ಜಡವಾಗಿದೆ ಎಂದು ತೋರಿಸುತ್ತದೆ.
ಶರಣರು ಬಯಸಿದ ಪ್ರಜಾರಾಜ್ಯ ಇಂದು ನಿರ್ಮಾಣವಾಗಿದೆ. ಆದರೆ ಅವರು ಮತ್ತು ಸಂವಿಧಾನ ಆಶಯಿಸಿದ ದಾರಿಯಲ್ಲಿ ಅದು ಸಾಗುತ್ತಿಲ್ಲ.
ಇಂದಿನ ವ್ಯವಸ್ಥೆಯ ನ್ಯೂನತೆಗಳನ್ನು ಚರ್ಚಿಸುವ, ಪರಿಹಾರಗಳನ್ನು ಸೂಚಿಸುವ, ಅದಕ್ಕೆ ತಕ್ಕಂತೆ ಪ್ರಜೆಗಳಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಿ ಅನುಭವ ಮಂಟಪ ರೂಪುಗೊಳ್ಳಬೇಕು.
ಅನುಭವ ಮಂಟಪ ಗಂಭೀರವಾದ ರಾಜಕೀಯ, ಪ್ರಜಾತಾಂತ್ರಿಕ ಚರ್ಚೆ, ವಿಚಾರ ಮಂಥನ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಕೇಂದ್ರವಾಗಬೇಕು.
ಇಲ್ಲಿ ಪ್ರಜಾರಾಜ್ಯ ತತ್ವಗಳ ಪ್ರಚಾರ, ಪ್ರಸಾರ ಮತ್ತು ತರಬೇತಿ ಸಂಸ್ಥೆಯೊಂದನ್ನೂ ಸರಕಾರದ ಸಹಾಯದಿಂದ ಸ್ಥಾಪಿಸಲು ಯೋಚಿಸಬಹುದು.
ಈ ನಿಟ್ಟಿನಲ್ಲಿ ಮಾಡಬಹುದಾದ ಕೆಲಸ ಎಷ್ಟು ಮಹತ್ವದ್ದು ಎಂದು ಕೆಲವು ಉದಾಹರಣೆಗಳ ಮೂಲಕ ಗಮನಿಸಬಹುದು.
ಶರಣರು ನಡೆಸಿದ ಅನೇಕ ಹೋರಾಟಗಳಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿದ್ದು ಪ್ರಮುಖವಾದುದು.
ಜಾತಿಯ ನಿರ್ಮೂಲನೆಗೆ ಈಗ ವಿವಿಧ ರೀತಿಯ ಕಾನೂನುಗಳು ಬಂದಿವೆ. ಅಲ್ಪಸಂಖ್ಯಾತ ಧರ್ಮಗಳ ರಕ್ಷಣೆ, ಪರಿಶಿಷ್ಟ, ಹಿಂದುಳಿದ ಜಾತಿಗಳ ಅಭ್ಯುದಯಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇವುಗಳಿಗೆ ಸಂವಿಧಾನದಲ್ಲೂ ಗಟ್ಟಿಯಾದ ತಳಹದಿ ಹಾಕಲಾಗಿದೆ. ಆದರೆ ಆ ಸಮಸ್ಯೆಗಳಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ.
ಸ್ತ್ರೀ ಸಮಾನತೆ, ಸ್ವಾತಂತ್ರ್ಯ ಬಹುದೂರ ಬಂದಿದೆ. ಮಹಿಳೆಯರ ಶಿಕ್ಷಣ, ಆರೋಗ್ಯ, ವಿವಾಹ ಸಂಬಂಧಿ ಕಾನೂನುಗಳ ಸುಧಾರಣೆ, ಆಸ್ತಿ ಹಕ್ಕು, ದತ್ತಕ ಹಕ್ಕು, ಇತ್ಯಾದಿಗಳ ಬಗ್ಗೆ ಊಹಿಸಲಾರದಷ್ಟು ಬೆಳವಣಿಗೆಗಳಾಗಿವೆ. ಆದಾಗ್ಯೂ ಮಹಿಳೆಯರ ಶೋಷಣೆ, ಬಲತ್ಕಾರ, ಅಸಮಾನತೆಗಳಂತಹ ಸಮಸ್ಯೆಗಳು ಇಂದಿಗೂ ಮುಂದುವರೆದಿವೆ.
ಎಲ್ಲ ಕಾನೂನು ಮತ್ತು ಸರ್ಕಾರಿ ಯೋಜನೆಗಳಿದ್ದರೂ ದಲಿತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ದೇವದಾಸಿಯಂತಹ ಅನಿಷ್ಟ ಪದ್ದತಿಗಳು ಭೂಗತವಾಗಿ ಮುಂದುವರೆದಿವೆ.
ಶರಣರು ಪ್ರಾರಂಭಿಸಿದ ಅಂತರಜಾತಿಯ ವಿವಾಹಗಳಿಗೆ ಅಂದು ಬಿಜ್ಜಳ ನೀಡಿದಂತಹ ಶಿಕ್ಷೆ ಈಗಿಲ್ಲ. ಸರ್ಕಾರಗಳು, ಕಾನೂನುಗಳು ಮತ್ತು ನ್ಯಾಯಾಲಯಗಳು ಸೂಕ್ತ ಮನ್ನಣೆ ಮತ್ತು ರಕ್ಷಣೆ ನೀಡುತ್ತವೆ. ಆದರೂ ಅಂತಹ ವಿವಾಹಗಳು ಈಗಲೂ ಎಂತಹ ಗಂಡಾಂತರಗಳನ್ನು ಸೃಷ್ಟಿಸುತ್ತವೆ ಎನ್ನುವುದನ್ನು ನೋಡಿದ್ದೇವೆ.
ಇವುಗಳ ಮೇಲೆ ಲವ್ ಜೀಹಾದ್ ಅನ್ನುವಂತಹ ಕಲ್ಪನೆಗಳನ್ನು ಹೇರಿ ಕೋಮುವಾದ ಬೆಳೆಸುವ ಪ್ರಯತ್ನಗಳು ಅತ್ಯಂತ ಉಗ್ರ ರೂಪ ತಾಳಿವೆ. ನೂತನ ಅನುಭವ ಮಂಟಪದಲ್ಲಿ ಈ ಸಮಸ್ಯೆಗಳನ್ನು ಚರ್ಚಿಸಬಹುದೇ? ಅಂತರಜಾತಿಯ ವಿವಾಹಗಳನ್ನು ಬೆಂಬಲಿಸುವ ರಕ್ಷಿಸುವ ಅಂಥ ವಿವಾಹವಾಗಿರುವವರಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ರೂಪಿಸಬಹುದೇ?
ನಮ್ಮ ಸಮಾಜವನ್ನು ಇಂದೂ ಕಾಡುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ನೂತನ ಅನುಭವ ಮಂಟಪದಲ್ಲಿ ನಿರಂತರ ಚಿಂತನ ಮಂಥನ ನಡೆಸಬಹುದೇ?
ಸಾಮಾಜಿಕ ಸಮ್ಮಿಲನ, ಸಮಾನತೆ, ಇವುಗಳ ಬಗ್ಗೆ ಅಂದು ಶರಣರು ಚಿಂತಿಸಿದರು ಮತ್ತು ಅವುಗಳ ಪರಿಹಾರಕ್ಕಾಗಿ ಹೋರಾಡಿದರು. ಅದೇ ಕಾಳಜಿಯಿಂದ ಅನುಭವ ಮಂಟಪ ಅವರ ಕೆಲಸವನ್ನು ಮುಂದುವರೆಸಬಹುದೇ?
ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ತಳಹದಿ ಹಾಕಿರುವುದು ನಮ್ಮ ಸಂವಿಧಾನ. ನಮ್ಮ ದೇಶದಲ್ಲಿ ಪ್ರಗತಿಪರ ಸಮಾಜ ನಿರ್ಮಿಸುವ, ಎಲ್ಲರ ಹಿತ ಕಾಯುವ ಸೂತ್ರಗಳೂ ಸಂವಿಧಾನದಲ್ಲಿದೆ. ಆದರೆ ತನ್ನ ಕಾರ್ಯಾಚರಣೆಯಲ್ಲಿ ಇಂದು ಸಂವಿಧಾನ ಅನೇಕ ಸವಾಲುಗಳನ್ನು ಎದುರಿಸುತ್ತಲಿದೆ. ಇವುಗಳನ್ನು ವಿಶ್ಲೇಷಿಸುವ, ನಮ್ಮ ಮುಂದಿರುವ ಸಮಸ್ಯೆಗಳಿಗೆ ಪರಿಹಾರ ತೋರಿಸುವ ಸಂವಿಧಾನ ರಕ್ಷಣಾ ವೇದಿಕೆಯಾಗಿ ಅನುಭವ ಮಂಟಪ ಬೆಳೆಯಬಹುದೇ?
ಈಗ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ತನ್ನ ಮೂಲ ಉದ್ದೇಶಕ್ಕೆ ತಕ್ಕಂತೆ ನಡೆಯುವಂತೆ ನೋಡಿಕೊಳ್ಳುವುದು ಸುಲುಭದ ಮಾತಲ್ಲ. ಆದರೆ ದೇಶದಲ್ಲಿ ಅಸಂಖ್ಯಾತ ಬದ್ಧತೆಯಿರುವ ಬಸವಾಭಿಮಾನಿಗಳಿದ್ದಾರೆ. ಇವರೆಲ್ಲ ಮನಸ್ಸು ಮಾಡಿ ಕೈ ಜೋಡಿಸಿದರೆ ಅನುಭವ ಮಂಟಪ ವೈಚಾರಿಕ ಕ್ರಾಂತಿಯ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ.
ಈ ಕೆಲಸ ಬೇಗ ಶುರುವಾಗಲಿ.
(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)
