ಬಸವ ಜಯಂತಿ: ದಾವಣಗೆರೆಯಲ್ಲಿ 110ನೇ ವರ್ಷದ ಬಸವ ಪ್ರಭಾತ್ ಪೇರಿ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ :

‘ಬಸವತತ್ವ ಪಾಲನೆಯಿಂದ ಭಾರತವು ವಿಶ್ವಗುರುವಿನ ಪಟ್ಟ ಅಲಂಕರಿಸಬಲ್ಲದು. ಬಸವಣ್ಣನವರ ತತ್ವಗಳನ್ನು ಇಡೀ ಪ್ರಪಂಚವೆ ಗೌರವಿಸುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಅಮೆರಿಕದಲ್ಲಿನ ಒಂದು ರಾಜ್ಯವು ಬಸವ ಜಯಂತಿಯ ದಿನವನ್ನು ಬಸವ ದಿನ ಎಂದು ಆಚರಣೆ ಮಾಡುತ್ತಿದೆ’ ಎಂದು ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮಿಗಳು ನುಡಿದರು.

ಸ್ಥಳೀಯ ವಿರಕ್ತಮಠದಲ್ಲಿ ಮಂಗಳವಾರ ಬಸವ ಜಯಂತಿ ಅಂಗವಾಗಿ ಶಿವಯೋಗಾಶ್ರಮ ಹಾಗೂ ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 114ನೇ ಬಸವ ಜಯಂತ್ಯುತ್ಸವ ಹಾಗೂ 110ನೇ ವರ್ಷದ ಬಸವ ಪ್ರಭಾತ್ ಪೇರಿಯ ನೇತೃತ್ವ ವಹಿಸಿ ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

‘ಸಮಾಜದಲ್ಲಿನ ಮೇಲು- ಕೀಳು, ಮೌಢ್ಯ, ಕಂದಾಚಾಗಳನ್ನು ತೊಲಗಿಸಿ, ಸರ್ವರಿಗೂ ಸಮಪಾಲು, ಸಮಬಾಳು ಎಂದು ಸ್ವಾತಂತ್ರ್ಯ, ಸಮಾನತೆಯನ್ನು ನೀಡಿದವರು 12ನೇ ಶತಮಾನದ ಗುರು ಬಸವಣ್ಣನವರು. ಅಂತಹ ಮಹಾತ್ಮರ ಜಯಂತಿಯನ್ನು 113 ವರ್ಷಗಳ ಹಿಂದೆ ಆರಂಭಗೊಂಡ ಐತಿಹಾಸಿಕ ಸ್ಥಳ ದಾವಣಗೆರೆಯ ಈ ವಿರಕ್ತಮಠ’ ಎಂದರು.

‘ಬಸವತತ್ವ, ಸಿದ್ಧಾಂತಗಳನ್ನು ಮನ ಮನೆಗಳಿಗೆ ತಲುಪಿಸುವ ಹಿನ್ನೆಲೆಯಲ್ಲಿ 1917ರಲ್ಲಿ ಬಸವ ಜಯಂತಿ ಆಚರಣೆಯನ್ನು ಇದೇ ವಿರಕ್ತಮಠದಿಂದ ಮೃತ್ಯುಂಜಯಪ್ಪ ಹಾಗೂ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರು ಆರಂಭಿಸಿದ್ದು, ಅದು ಇಂದಿಗೂ ಮುಂದುವರಿಯುತ್ತಿದೆ’ ಎಂದು ಹೇಳಿದರು.

ಪ್ರಭಾತ್ ಪೇರಿಗೆ ಬಸವ ಬಳಗದ ಮಂದಾಕಿನಿ ಅವರು ಚಾಲನೆ ನೀಡಿದರು.

ಪ್ರಮುಖರಾದ ಚೇತನಾ ಶಿವಕುಮಾರ, ಲಿಂಗಾಯತ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ವಿರಕ್ತಮಠದ ಧರ್ಮದರ್ಶಿಗಳಾದ ಕರಿಬಸಪ್ಪ ಹಾಸಬಾವಿ, ಲಂಬಿ ಮುರುಗೇಶ, ಕುಂಟೋಜಿ ಚನ್ನಪ್ಪ, ಮಹಾಲಿಂಗೇಶ, ಶಿವಮೂರ್ತಿ, ಚಿಗಟೇರಿ ಜಯದೇವ, ಚನ್ನಬಸವ ಶೀಲವಂತ್, ಕೆ.ಸಿ.ಉಮೇಶ, ಆನಂದ, ಜಯರಾಜ್, ಕಣಕುಪ್ಪಿ ಕರಿಬಸಪ್ಪ, ವೀಣಾ ಮಂಜುನಾಥ, ಬಸವ ಕೇಂದ್ರದ ಮಹಿಳಾ ಘಟಕದ ಮಹದೇವಮ್ಮ, ಸಂಕಲ್ಪ ಸೇವಾ ಫೌಂಡೇಷನ್‍ನ ಮಹಾಂತೇಶ, ಭಾಜಪ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಶಾಲಾ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಸವ ಕಲಾಲೋಕದವರು ವಚನ ಗಾಯನ ಪೇರಿಯಲ್ಲಿ ವಚನ ಗಾಯನ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *