‘ಶರಣರ ಜೀವನ ದರ್ಶನ’ ಪ್ರವಚನದಲ್ಲಿ ಅಂಬೇಡ್ಕರ್ ಜನ್ಮದಿನ ಆಚರಣೆ

ಗಂಗಾವತಿ:

ಬಸವ ಜಯಂತಿ ಆಚರಣೆ ಸಮಿತಿ ಆಯೋಜಿಸಿದ ‘ಶರಣರ ಜೀವನ ದರ್ಶನ ಪ್ರವಚನ’ ಕಾರ್ಯಕ್ರಮದಲ್ಲಿ ಡಾ. ಬಾಬಾಸಾಹೇಬರ ಜನ್ಮದಿನವನ್ನು ವಿಶೇಷವಾಗಿ  ಆಚರಿಸಲಾಯಿತು.

ಒಂದು ಕಾಲವಿತ್ತು, ಲಿಂಗಾಯತರ ವೇದಿಕೆಯ ಮೇಲೆ ಅಂಬೇಡ್ಕರ್ ಅವರ ಪೋಟೊ ಇಡೋದೆ ಒಂದು ದೊಡ್ಡ ಸವಾಲಾಗಿತ್ತು. ಇಂದು ಬಾಬಾ ಸಾಹೇಬರನ್ನು ಅರಿತು ಪ್ರೀತಿಸುವ ಪ್ರತಿಯೊಂದು ಮನಸ್ಸುಗಳಲ್ಲಿ ಬಾಬಾ ಸಾಹೇಬರು ಇದ್ದಾರೆ ಎನ್ನುವುದಕ್ಕೆ ಸಾಕ್ಷಿಯಾದಂತಿತ್ತು ಇಂದಿನ ಕಾರ್ಯಕ್ರಮ.

ಮತ್ತೆ ಈ ತಿಂಗಳಲ್ಲಿ ಇಡೀ ಕರ್ನಾಟಕದ ತುಂಬೆಲ್ಲಾ ಬಸವಪರ ಮತ್ತು ಬಸವಪ್ರಣೀತ ಲಿಂಗಾಯತರು ನಡೆಸುತ್ತಿರುವ ಪ್ರತಿ ಪ್ರವಚನ ಕಾರ್ಯಕ್ರಮದ ವೇದಿಕೆ ಮೇಲೆ ಬಾಬಾಸಾಹೇಬರ ಜನ್ಮದಿನಾಚರಣೆ ಮಾಡಿದ್ದು ವಿಶೇಷವೆನಿಸಿತು.

ಕಾರ್ಯಕ್ರಮ ವೇದಿಕೆಯ ಸಾನಿಧ್ಯ ವಹಿಸಿದ ಪೂಜ್ಯ ಡಾ. ಮಹಾಂತ ಗುರುಬಸವ ಸ್ವಾಮಿಗಳು ಮಾತಾನಾಡುತ್ತಾ, ಇಂದಿನ ಆಚರಣೆಗಳು ನಮಗೆ ಹೇಗೆ ಆದರ್ಶವಾಗಬೇಕು, ಆದರ್ಶವಾಗಬೇಕಾದ ಆಚರಣೆಗಳು ಎಡವುತ್ತಿರುವುದು ಎಲ್ಲಿ ಎಂದು ಮನ ಮುಟ್ಟುವಂತೆ ತಿಳಿಸಿದರು.

ಇಂದು ಬುದ್ದ , ಬಸವ ಮತ್ತು ಅಂಬೇಡ್ಕರ್ ಸಿದ್ದಾಂತಗಳು ವಿಶ್ವಮಾನ್ಯವಾಗುವ ಬದಲು ಜಾತಿ, ಜಾತಿಗೆ ಸೀಮಿತವಾಗುತ್ತಿವೆ. ದಲಿತ ಸಂಘಟನೆಗಳು ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಅಡಿಯಲ್ಲಿ ಮಾಡಬೇಕಿತ್ತು ಇದು ಇಂದಿನ ಅವಶ್ಯಕತೆ ಆಗಿದೆ. ಆದರೆ ಆಳುವವ ವರ್ಗಗಳ ಹಿಡಿತಕ್ಕೆ ಸಿಕ್ಕು ಆಚರಣೆಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಣ, ಸಂಘಟನೆ, ಹೋರಾಟ ಇವು ಶೋಷಿತ ಸಮುದಾಯಗಳನ್ನು ದಬ್ಬಾಳಿಕೆ, ವಿಮೋಚನೆ ಮಾಡುವ ಮಾರ್ಗಗಳು. ವ್ಯಕ್ತಿ ತಾನೂ ಶಿಕ್ಷಣದಿಂದ ಜ್ಞಾನಪಡೆದು, ಸಮಾಜವನ್ನು ಸಂಘಟನೆ ಮಾಡಿ, ಸಮಾಜದಲ್ಲಿ ಶೋಷಿತರಿಗೆ, ದಮನಿತರಿಗೆ ಆದ ಅನ್ಯಾಯದ ವಿರುದ್ದ ಹೋರಾಟ ರೂಪಿಸುವ ಆಶಯನ್ನು ಹೊಂದಿದ್ದ ಬಾಬಾ ಸಾಹೇಬರ ಆ ಆಶಯಗಳಿಗೆ ಎಳ್ಳು ನೀರು ಬಿಟ್ಟಂತ ವ್ಯವಸ್ಥೆ ಈಗ ಆಗಿದೆ. 

ಬಸವ ಸಿದ್ದಾಂತದ ಗುರು, ಲಿಂಗ, ಜಂಗಮ ತತ್ವಗಳು, ಬಾಬಾಸಾಹೇಬರ ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳು ಎರಡೂ ಒಂದೆ.  ಆದರೆ ಇಂದು ಇಬ್ಬರು ಮಹನಿಯರ ಸಿದ್ದಾಂತಗಳು ಬರಿ ವೈಯಕ್ತಿಕ ಹಿತಾಸಕ್ತಿಗೆ ಸೀಮಿತವಾಗಿ, ವ್ಯಷ್ಠಿಯಿಂದ ಸಮಷ್ಠಿ ಕಡೆ ಹಾಕಿದ ಅವರ ಹೆಜ್ಜೆಗಳನ್ನು ಮರೆತು ಬಿಟ್ಟಿದ್ದಾರೆ.

ಶರಣ ಸಿದ್ದಪ್ಪ ಕಂಬಳಿ ಮತ್ತು ಡಾ. ಬಾಬಾಸಾಹೇಬರ ಪ್ರಸಂಗವನ್ನು ನೆನಪಿಸುತ್ತಾ , ಒಂದು ವೇಳೆ ಲಿಂಗಾಯತ ಜಾತಿವಾದಿಗಳ ಕಪಿ ಮುಷ್ಠಿಯಲ್ಲಿರದೇ, ಅಂದು ಬಾಬಾಸಾಹೇಬರು ಲಿಂಗಾಯತವನ್ನು ಅಪ್ಪಿಕೊಂಡಿದ್ದರೆ ಇಂದು ಹೇಗೆ ಇರುತಿತ್ತು ಅಂತ ತಿಳಿಸುತ್ತಾ, ವಿಶ್ವಮಾನ್ಯತೆಯ ಮಹಾ ಆಶಯವುಳ್ಳ ಲಿಂಗಾಯತ ತತ್ವವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವ ಮಾತುಗಳನ್ನು ನೆನಪಿಸಿದರು.

ವಿಶ್ವಮಾನವ ಹಕ್ಕುಗಳ ಸಂಸ್ಥೆ ಇತ್ತೀಚಿಗೆ ಸ್ಥಾಪಿತವಾಗಿದೆ. ಆದರೆ 12ನೇ ಶತಮಾನದಲ್ಲೇ ಶರಣರು ಮಾನವ ಹಕ್ಕುಗಳನ್ನು ಪ್ರತಿಪಾದಿಸಿದರು. ಅವರ ಒಂದೊಂದು ವಚನ ಒಂದೊಂದು ಹಕ್ಕುಗಳಾಗಿದ್ದವು ಎಂದು ತಿಳಿಸಿದರು.

ಇಂದು ಆಚರಣೆಗಳು ಆದರ್ಶಪ್ರಾಯವಾಗುವ ಬದಲು ಹೆಂಡ, ಖಂಡಗಳಿಗೆ, ಡಿಜೆಯ ಚೀರಾಟಗಳಿಗೆ  ಸೀಮಿತವಾಗಿವೆ. ಬಸವ, ಬಾಬಾರ ಆದರ್ಶಗಳು ಹೃದಯಲ್ಲಿರಬೇಕಿತ್ತು. ದುರಂತ ಅಂದ್ರೆ ಇಂದು ರಸ್ತೆ, ಸರ್ಕಲ್, ಕಾಲೋನಿ ಯುವ ಸಂಘಗಳು ಬರಿ ಸ್ಥಾವರವಾಗಿ ಉಳಿದಿವೆ ಹೊರತು ಜಂಗಮದ ಕಡೆ ಮುಖ ಮಾಡಲಿಲ್ಲ. ಈ ನಾಡಿನಲ್ಲಿ ಒಬ್ಬ ವ್ಯಕ್ತಿಯನ್ನು ಮತ್ತು ಆತನ ಚಿಂತನೆಗಳನ್ನು ಕೊಲ್ಲಬೇಕೆಂದರೆ ಪುಕ್ಕಟೆಯಾಗಿ ವೈಭವೀಕರಿಸಿ ಹೊಗಳಿಬಿಟ್ಟರೆ ಸಾಕು. ಅದು ಹಲ್ಲು ಕಳಚಿದ ಹಾವಾಗುತ್ತದೆ. ತಮ್ಮ ಪುಂಗಿಗೆ ನೇರವಾಗಿ ಸುಲಭವಾಗಿ ಅದು ತಲೆದೂಗುತ್ತದೆ. ಇಂದು ಆಚರಣೆಗಳು ಹೀಗೆ ಆಗಿವೆ.

ಬಸವ, ಬಾಬಾ ಅವರ ಸಿದ್ದಾಂತಗಳು ವೇದಿಕೆಯ ಮೇಲಿನ ಮಾತಾಗಲಾರದೇ ಆ ಸಿದ್ದಾಂತಗಳನ್ನು ಹೃದಯಕ್ಕೆ ಇಳಿಸಿಕೊಂಡ ಬದುಕಾದಾಗ ಮಾತ್ರ ಈ ಇಬ್ಬರೂ ಮಹನೀಯರಿಗೆ ನಾವು ಸಲ್ಲಿಸುವ ಗೌರವ ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ನ್ಯಾಯಧೀಶರಾದ ಸದಾನಂದ ನಾಯ್ಕ ಮಾತಾನಾಡುತ್ತಾ, ಬಸವಣ್ಣನರ ಸಿದ್ದಾಂತಗಳು ಅಂಬೇಡ್ಕರ್ ಮೂಲಕ ಕಾನೂನು ಆಗಿ ಜಾರಿಗೆ ಬಂದವು. ಅವರಿಬ್ಬರ ಆಶಯ ಒಂದೆ ಆಗಿತ್ತು, ಅದು ಮನುಕುಲದ ಒಳಿತಿಗಾಗಿ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಶಾಂತಾ ಬಸವರಾಜ ಅವರ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರ’ ಎಂಬ ಕೃತಿ ಬಿಡುಗಡೆಯಾಯಿತು. ವೇದಿಕೆ ಮೇಲೆ ಅಂಬಣ್ಣ, ಶಾಂತಾ ಬಸವರಾಜ, ಕೆ. ಬಸವರಾಜ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎ.ಕೆ. ಮಹೇಶ ಮತ್ತು ವೀರೇಶ ಅಸರಡ್ಡಿ ಅವರು ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *