ಕಲಬುರಗಿ :
ದೈಹಿಕ ಗುಲಾಮಗಿರಿಗಿಂತ ಮಾನಸಿಕ ಗುಲಾಮಗಿರಿ ಬಹಳಷ್ಟು ಅಪಾಯಕಾರಿಯಾದದ್ದು, ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕು ಎಂದು ಬೈಲೂರ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ನುಡಿದರು.
ನಗರದ ಹೀರಾಪುರ ಕ್ರಾಸ್ ನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಮುಂತಾದವರ ಜಯಂತಿಗೆ ಸೀಮಿತವಾಗದೆ ಅರಿವಿಗೆ ಸೀಮಿತವಾಗಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಹೋರಾಟ ಮಾಡದಿದ್ದರೂ ಪರವಾಗಿಲ್ಲ. ಮಾರಾಟವಾಗಬಾರದು. ಬುದ್ಧಿ ಮಾರಾಟ ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು.

ಕಣ್ಣಿಗೆ ಕಾಣುವ ಮನುಷ್ಯರನ್ನು ಪ್ರೀತಿಸದಿದ್ದರೆ ದೇವರನ್ನು ಪ್ರೀತಿಸಲು ಸಾಧ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಮನುಷ್ಯರ ಜೊತೆ ಮಾತನಾಡಿದರು.
ಅಂಬೇಡ್ಕರ್ ರಾಜ್ಯವಾಳಿದವರಲ್ಲ. ಅರಿವಿನ ಪೆನ್ನು ಹಿಡಿದು ಪ್ರಜ್ಞೆ ತುಂಬಿದವರು. ಅವರು ಕೇವಲ ದಲಿತರ ಉದ್ಧಾರಕರಲ್ಲ. ಕಾನೂನಿನ ಮೂಲಕ ಎಲ್ಲರನ್ನು ಉದ್ಧಾರ ಮಾಡಿದ ಮಹಾ ಮಾನವತಾವಾದಿ. ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕಿನ ಮಹತ್ವ ಅರಿಯಬೇಕು ಎಂದು ಹೇಳಿದರು.
ಜಯಂತಿ ನಿಮಿತ್ತ ಸ್ಪರ್ಧಾತ್ಮಕ ಪರೀಕ್ಷೆ, ರಾಷ್ಟ್ರೀಯ ಕೊಡುಗೆಗಳ ಕುರಿತು ಭಾಷಣ ಸ್ಪರ್ಧೆ, ಉಚಿತ ನೋಟ್ ಬುಕ್ ವಿತರಣೆ, ನೇತ್ರದಾನ, ರಕ್ತದಾನ ಶಿಬಿರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಿರುವುದು ಸ್ತುತ್ಯರ್ಹವಾದ ಕೆಲಸ. ಶಬ್ದ, ಸಂಭ್ರಮದಲ್ಲಿ ಅಂಬೇಡ್ಕರ್ ನೋವು ಮರೆಯಾಗುತ್ತಿದೆ. ಅರಿವು ಉತ್ಸವ ಮಾಡಿರುವುದು ಬಹಳ ಸಂತಸ ತಂದಿದೆ ಎಂದು ಸ್ವಾಮೀಜಿ ಹೇಳಿದರು.
ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ, ಮೇಯರ್ ವರ್ಷಾ ರಾಜೀವ ಜಾನೆ, ವಚನ ಡೆವಲಪರ್ಸ್ ನ ಶಿವಕುಮಾರ ಸಾಲಿ, ಡಾ. ಸುರೇಶ ಶರ್ಮಾ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹನಮಂತ ಇಟಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಮಿತಿ ಸದಸ್ಯ ಲಕ್ಷ್ಮೀಕಾಂತ ಹುಬ್ಬಳ್ಳಿ, ಜಯಂತ್ಯುತ್ಸವ ಸಮಿತಿಯ ಗೌರವಾದ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಕಾರ್ಯಾಧ್ಯಕ್ಷ ಮುತ್ತಣ್ಣ ನಡಗೇರಿ, ಗೌರವ ಸಲಹೆಗಾರರಾದ ಅರವಿಂದ ಕಮಲಾಫುರ, ಕಾರ್ಯದರ್ಶಿ ಪಂಡಿತ ಬಿ. ಮದಗುಣಕಿ ಸೇರಿದಂತೆ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಇದ್ದರು.
ನಾಗಾರ್ಜುನ ಕೋಟನೂರ ನಿರೂಪಿಸಿದರು. ಡಾ. ಅನಿಲ ಟೆಂಗಳಿ ಪ್ರಾಸ್ತಾವಿಕ ಮಾತನಾಡಿದರು.

ಇದೇವೇಳೆಯಲ್ಲಿ ದೇಹದಾನ ಮಾಡಿದ ಮಹನೀಯರನ್ನು ಹಾಗೂ ಜೀವಮಾನದ ಸಾಮಾಜಿಕ ಸೇವೆಗಾಗಿ ಗೀತಾ ಎಸ್. ಶರ್ಮಾ ಡಾ. ಸುರೇಶ ಎಲ್. ಶರ್ಮಾ ದಂಪತಿಯನ್ನು ಸನ್ಮಾನಿಸಲಾಯಿತು.
