ಮಲ್ಲೂರು ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ‘ಕರಣ ಹಸಿಗೆ’ ಕಮ್ಮಟ

ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಚರ್ಚೆಗಳಲ್ಲಿ ಪಾಲ್ಗೊಂಡರು.

ಸವದತ್ತಿ:

ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ ಮತ್ತು ವೈಜ್ಞಾನಿಕ ಚಿಂತನ ಕಮ್ಮಟ ಯಶಸ್ವಿಯಾಗಿ ನಡೆಯಿತು.

ಪ್ರತಿವರ್ಷ ಜುಲೈ ತಿಂಗಳಿನಲ್ಲಿ ನಡೆಯುವ ಕಮ್ಮಟದಲ್ಲಿ ಬಸವಾದಿ ಶರಣರ ತಾತ್ವಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತನ ಮಂಥನ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ.

ಈ ಬಾರಿಯು ಜುಲೈ 10, 11, 12, 2026 ನಡೆದ ಕಮ್ಮಟದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಲಾತೂರ, ನಾಂದೇಡ್ ಸೇರಿದಂತೆ 400ಕ್ಕೂ ಹೆಚ್ಚು ಬಸವತತ್ವ ಸಾಧಕ ವರ್ಗ ಜುಲೈ 10ರಂದೆ ಸಾಯಂಕಾಲ ಆಗಮಿಸಿದ್ದರು.

ಭಾಗವಹಿಸಿದ ಎಲ್ಲರಿಗೂ ಉಚಿತ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನೂ ಅಲ್ಲಿನ ಬಸವಭಕ್ತರು ವ್ಯವಸ್ಥೆ ಮಾಡಿಕೊಟ್ಟಿದ್ದರು.

10ರಂದು ಸಾಯಂಕಾಲ 7 ಗಂಟೆಗೆ ಸಾರ್ವಜನಿಕ ಚಿಂತನಗೋಷ್ಠಿ ಪ್ರಾರಂಭವಾಯಿತು. ಅಧ್ನಕ್ಷತೆಯನ್ನು ಚನ್ನಪ್ಪ ನರಸಣ್ಣನವರ ವಹಿಸಿದ್ದರು. ಅತಿಥಿಗಳಾಗಿ ವಿಜಯ ಮೆಟಗುಡ್ಡ ಕೆಎಲ್ಇ ಸಂಸ್ಥೆ ನಿರ್ದೇಶಕರು, ವಿ.ಡಿ. ಸಂಗಣ್ಣನವರ ಅಧ್ಯಕ್ಷರು ಶ್ರೀ ಕ್ಷೇತ್ರ ಸೊಗಲ ಇವರು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಲೇಮನಗೌಡ ಗೌಡರ, ಮಲ್ಲೂರು ಆಗಮಿಸಿದ್ದರು.

“ವಿಶ್ವಗುರು ಬಸವ ” ಎನ್ನುವ ವಿಷಯದ ಮೇಲೆ ನೇಗಿನಹಾಳದ ಮಂಜುನಾಥ ಶಿಕ್ಷಕರು ಅನುಭಾವ ನೀಡಿದರು.

11ರಂದು, ಮುಂಜಾನೆ 7 ರಿಂದ 8.45 ರವರೆಗೆ ಶಿವಯೋಗ ಪ್ರಾತ್ಯಕ್ಷಿಕೆಯನ್ನು ಮಂಜುನಾಥ ನೇಗಿನಾಳ ಶಿಕ್ಷಕರು ನಡೆಸಿಕೊಟ್ಟರು.

ಬೆಳಿಗ್ಗೆ 9 ಗಂಟೆಗೆ ಷಟಸ್ಥಲ ಧ್ವಜಾರೋಹಣ ಭಕ್ತಿ ಪೂರ್ವಕವಾಗಿ ನೆರವೇರಿತು. ಬಳ್ಳಾರಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರಾದ, ಕಂಪ್ಲಿಯ ಹೇಮಯ್ಯಸ್ವಾಮಿ ಅವರು ಧ್ವಜರೋಹಣ ನೆರವೇರಿಸಿದರು.

10 ಗಂಟೆಗೆ “ಬ್ರಹ್ಮಾಂಡ” ವಿಷಯದ ಮೇಲೆ ಬೆಂಗಳೂರಿನ ಶರಣೆ ಭಾರತಿ ಕೆಂಪಯ್ಯ ಅನುಭಾವ ನೀಡಿದರು. ಸಾಕಾರದ ಬ್ರಹ್ಮಾಂಡ ಅರಿವಿನ ವಿಸ್ತಾರದ ರೂಪವೇ ಹೊರತು ಮಿಥ್ಯ ಅಲ್ಲ ಎನ್ನುವದನ್ನು ಪ್ರತಿಪಾದಿಸಿದರು.

ಶಂಭುಲಿಂಗಪ್ಪ ನ್ಯಾಮತಿ, ರವೀಂದ್ರ ಮಠದ, ಧಾರವಾಡರವರು ಗೌರವ ಉಪಸ್ಥಿತಿ ವಹಿಸಿದ್ದರು. ನಂತರ ಸಭಿಕರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.

ಮಧ್ಯಾಹ್ನ 12.15 ರಿಂದ 2ಗಂಟೆಯವರೆಗೆ ಎರಡನೇ ವಿಷಯ “ಪಿಂಡಾಂಡ ” ವಿಷಯದ ಮೇಲೆ ಕೊಪ್ಪಳದ ನಿವೃತ ವೈದ್ಯಾಧಿಕಾರಿ ಡಾ. ಸಂಗಮೇಶ ಕಲಹಾಳ ಅನುಭಾವ ನೀಡಿದರು. ಸಂವಾದ ಕಾರ್ಯಕ್ರಮ ಉತ್ಕೃಷ್ಟವಾಗಿ ಜರುಗಿತು. ಗೋಷ್ಠಿಯಲ್ಲಿ ಮೈಸೂರು ಜಿಲ್ಲೆಯ ಹೆಮ್ಮಿಗೆಯ ಹೆಚ್. ಸಿ. ಗಂಗಾಧರ ಮತ್ತು ಧಾರವಾಡ ಬಸವ ಕೇಂದ್ರದ ಬಸವಂತಪ್ಪ ತೋಟದ ಉಪಸ್ಥಿತರಿದ್ದು ಅನುಭಾವಕ್ಕೆ ಸಾಕ್ಷಿಯಾದರು. ನಂತರ ಸಭಿಕರೊಂದಿಗೆ ವಿಷಯದ ಕುರಿತು ಸಂವಾದ ನಡೆಯಿತು.

ಮಧ್ಯಾನ್ಹ 3 ಗಂಟೆಯಿಂದ 4 ಗಂಟೆಯವರೆಗೆ, ಮೂರನೇ ಅನುಭಾವ “ಶರೀರ ಕ್ರಿಯಾಶಾಸ್ತ್ರ” ಕುರಿತು ಚಿಕ್ಕೋಡಿಯ ಡಾ. ದಯಾನಂದ ನೂಲಿ ಅವರು ಪಿಪಿಟಿ ಮೂಲಕ ಹಾಸ್ಯ ಮಿಶ್ರಿತ ಅನುಭಾವ ನೀಡಿದರು.

ಕಾಣುವ ಶರೀರ, ಕಾಣಲಾರದ ಶರೀರದ ಜೊತೆ ಹೇಗೆ ಸಂಬಂಧ ಹೊಂದಿದೆ ಎನ್ನುವದನ್ನು ಕರಣ ಹಸಿಗೆ ಮತ್ತು ವೈದ್ಯಕೀಯ ಶಾಸ್ತ್ರದ ಜೊತೆ ಸಮೀಕರಿಸಿ ಅವರು ವಿವರಣೆ ನೀಡಿದರು. ಈ ಕಾರ್ಯಕ್ರಮಕ್ಕೆ ಧಾರವಾಡದ ಎಂ.ಜಿ. ಮುಳಕೂರ ಮತ್ತು ಬೈಲಹೊಂಗಲದ ನಿವೃತ್ತ ಸೈನಿಕ ಮಹಾಂತೇಶ ಬಾನಿ ಉಪಸ್ಥಿತರಿದ್ದು ಅನುಭಾವ ಪಾಠಕ್ಕೆ ಮೆರಗು ತಂದರು. ಸಭೀಕರ ಪ್ರಶ್ನೆಗಳು ಉತ್ತರಿಸಲು ಕಠಿಣವೆನಿಸುವಷ್ಟು ಮೊನಚಾಗಿದ್ದವು.

4.30 ರಿಂದ 6 ಗಂಟೆಯವರೆಗೆ ಅನುಭಾವ “ಮನಶಾಸ್ತ್ರ” ಕುರಿತು ಸಿಂಧನೂರಿನ ಪಿ. ರುದ್ರಪ್ಪ ಅವರು ನಿವೇದನೆ ಮಾಡಿದರು. ಮನಸ್ಸು ಎನ್ನುವುದರ ವ್ಯಾಖ್ಯಾನ ಮನುಕುಲಕ್ಕೆ ಇನ್ನು ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ. ಪಾಶ್ಚಿತ್ಯ ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರೈಡ್ ಯಾಂಗ ಅಂಥವರು ಪ್ರಸ್ತುತ ಪಡಿಸಿದ ಮನಶಾಸ್ತ್ರ, ಪೂರ್ವದ ಮನಶಾಸ್ತ್ರದ ಹೋಲಿಕೆ ಮಾಡುತ್ತಾ, ಶರಣರ ವಚನಗಳ ಪ್ರಕಾರ ಮನಸ್ಸಿನ ವ್ಯಾಖ್ಯಾನ, ಅದರ ಅಸ್ತಿತ್ವ, ಅಧ್ಯಾತ್ಮದಲ್ಲಿ ಮನಸ್ಸಿನ ಪಾತ್ರ, ಮಾನವನ ಆಧ್ಯಾಂತಿಕ ಸಂತೃಪ್ತಿಯಲ್ಲಿ ಮನಸ್ಸಿನ ನಿಲುಗಡೆ ಕುರಿತು ವಚನಧಾರಿತವಾಗಿ ವಿಷಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಗೋಕಾಕದ ಅನುಭಾವಿ ಶಂಕರ ಅಮರಶೆಟ್ಟಿ, ಸವದತ್ತಿಯ ಎನ್. ಬಿ. ಬೆಂಡಿಗೇರಿ ಉಪಸ್ಥಿತರಾಗಿ ಚಿಂತನೆಯಲ್ಲಿ ಪಾಲ್ಗೊಂಡರು.

ಸಾಯಂಕಾಲ 7 ಗಂಟೆಯಿಂದ “ಲಿಂಗಾಯತ ಧರ್ಮ”ದ ಕುರಿತು ಹೈಕೋರ್ಟ್ ನ್ಯಾಯವಾದಿ ಕೆ.ಎಸ್. ಕೊರಿಶೆಟ್ಟರ ಸುಧೀರ್ಘ ಅನುಭಾವ ನೀಡಿದರು.

ಹಿಂದಿನ ಆರ್ಯ ಡ್ರಾವಿಡರ ಸಂಘರ್ಷದಲ್ಲಿ ಉಂಟಾದ ಆಧ್ಯಾತ್ಮಿಕ ತುಮುಲಗಳ ಬಗ್ಗೆ ಎಳೆ ಎಳೆಯಾಗಿ ವಿವರಣೆ ನೀಡಿದರು. ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ ಅತಿಥಿಗಳಾಗಿ ಆಗಮಿಸಿದ್ದರು. ಮಾಜಿ ಶಾಸಕ ಡಾ.ವಿ.ಆಯ್. ಪಾಟೀಲ ಸಹ ಅತಿಥಿಗಳಾಗಿದ್ದರು.

ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.

ನಂತರ 8.30 ರಿಂದ 9.30ರವರೆಗೆ, ಮತ್ತೊಂದು ಆತ್ಮ ವಿಮರ್ಶೆಯ ಕಾರ್ಯಕ್ರಮ “ಬಸವ ತತ್ವವನ್ನು ಮುನ್ನಡೆಸುವಲ್ಲಿ ನಮ್ಮ ಪಾತ್ರ” ಕುರಿತು ಸಿಂಧನೂರಿನ ಪಿ. ರುದ್ರಪ್ಪ ವಿಷಯ ಹಂಚಿಕೊಂಡರು.

ಬಸವತತ್ವವನ್ನು ಆಪೋಷನ್ ಮಾಡಿಕೊಳ್ಳಲು ಹವಣಿಸಿ ಕಾರ್ಯಕ್ರಮ ರೂಪಿಸುವಲ್ಲಿ ವಿರೋಧಿ ಶಕ್ತಿಗಳು ಹೆಣೆದಿರುವ ಷಡ್ಯಂತ್ರಗಳನ್ನು ವಿವರಿಸಿ, ಬಸವತತ್ವ ಅನುಭಾವಿಗಳು ಒಂದು ಒಕ್ಕೂಟ ರಚಿಸಿಕೊಂಡು ಮುನ್ನೆಡೆಯುವ ಅವಶ್ಯಕತೆಯನ್ನು ಮನವರಿಕೆ ಮಾಡಿದರು.

ಹಾಜರಿದ್ದ ಬಸವಭಕ್ತರು ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವದಾಗಿ ಚಪ್ಪಾಳೆ ತಟ್ಟಿ ಬೆಂಬಲಿಸಿದರು.

ಕಾರ್ಯಕ್ರಮದಲ್ಲಿ ಶರಣ ಚಂದ್ರಶೇಖರ ಪಿ. ಅಧ್ಯಕ್ಷರು ಗುರುಬಸವ ವಿದ್ಯಾಸಂಸ್ಥೆ ತುಮಕೂರು ಅವರು ಅಧ್ಯಕ್ಷತೆ ವಹಿಸಿದ್ದರು. ಈ ಕೆಲಸದ ಉಸ್ತುವಾರಿಯನ್ನು ಪಿ. ಚಂದ್ರಶೇಖರ ಅವರಿಗೆ ಸಭೆ ನೀಡಿತು.

12 ರಂದು ಬೆಳಿಗ್ಗೆ 7 ಗಂಟೆಯಿಂದ 8.45 ರವರೆಗೆ ಶಿವಯೋಗ ಪ್ರಾತ್ಯಕ್ಷಿಕೆಯನ್ನು ನೇಗಿನಾಳದ ಮಂಜುನಾಥ ಶಿಕ್ಷಕರು ನೆರವೇರಿಸಿದರು.

10 ಗಂಟೆಯಿಂದ 12.30 ರವರೆಗೆ “ತನು-ಮನ-ವ್ಯಾಧಿ” ಶಾಸ್ತ್ರದ ಬಗ್ಗೆ ಬೆಳಗಾವಿ ಕೆ ಎಲ್ ಇ ಸಂಸ್ಥೆಯ ಡಾ. ಅವಿನಾಶ ಕವಿ ಅವರು ಪಿಪಿಟಿ ಮೂಲಕ ವಚನಧಾರಿತವಾಗಿ ಅನುಭಾವ ನೀಡಿದರು.

ಬೆಂಗಳೂರಿನ ಶರಣೆ ಸವಿತಾ ಎಸ್. ಬಿ. ಮತ್ತು ರಾಯಚೂರಿನ ಪಾರ್ವತಿ ಪಾಟೀಲ ಉಪಸ್ಥಿತಿ ನೀಡಿದರು. ಪ್ರಶ್ನೆಗಳೇ ಉದ್ಭವ ಆಗದಷ್ಟು ವಿಶಾಲವಾಗಿ ವಿವರಣೆ ವಿಸ್ತರವಾಗಿತ್ತು.

ಮಧ್ಯಾನ್ಹ 12.30 ರಿಂದ 2.0 ಗಂಟೆಯವರೆಗೆ ಅನುಭಾವ “ಸದ್ಭಾವ ತ್ರಯಂಗಳು” ವಿಷಯ ಕುರಿತು ಪಿ. ರುದ್ರಪ್ಪ ನವರು ವಿಷಯ ಹಂಚಿಕೊಂಡರು. “ಮನಸ್ಸು”‘ ವಿಷಯಕ್ಕೆ ಒಂದು ಚರ್ಚೆ, ವಿವರಣೆ ಸಾಧ್ಯವಾಗಿದೆ ಆದರೆ ಭಾವದ ಬಗ್ಗೆ ಎಲ್ಲಿಯೂ ಗ್ರಂಥಗಳ ವಿವರಣೆ ಇಲ್ಲ ಎಂದು ಪ್ರಾರಂಭಿಸಿ, ಭಾವ, ಸದ್ಭಾವ, ನಿರ್ಭಾವಗಳ ಬಗ್ಗೆ ಶರಣರು ಕೊಟ್ಟ ವಚನಗಳ ಆಧಾರದ ಮೇಲೆ ಅನುಭಾವ ನೀಡಿದರು.

ಹಾಜರಿದ್ದ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಮಂತ್ರಮುಗ್ದರಾಗಿ ವಿಷಯಗಳ ಚರ್ಚೆಯಲ್ಲಿ ಪಾಲ್ಗೊಂಡರು.

ಎಚ್ ಬಿ ಸುರೇಶ ನಂಜನಗೂಡು ಮತ್ತು ಚನ್ನಬಸನಗೌಡ ಉಪಸ್ಥಿತಿ ನೀಡಿ ಚಿಂತನೆಗೆ ಮೆರಗು ತಂದರು.

ಮಧ್ಯಾನ್ಹ 3 ಗಂಟೆಯಿಂದ 4 ಗಂಟೆಯವರೆಗೆ ಏಳನೇ ಅನುಭಾವ “ಅಂಗ ಲಿಂಗ ಸಂಬಂಧ” ವಿಷಯವಾಗಿ ಸತೀಶ ಸವದಿ ಸಂಚಾಲಕರು ತಪೋವನ, ಧಾರವಾಡ ಅವರು ಪಿಪಿಟಿ ಮೂಲಕ ಅನುಭಾವ ನೀಡಿದರು.

ಮಲ್ಲಪ್ಪ ಧಾಬೋಲಿ ಇಂಗಳದಾಳ ಉಪಸ್ಥಿತಿ ನೀಡಿದರು.

ಮಧ್ಯಾನ್ಹ 4.30 ಗಂಟೆಯಿಂದ 6 ಗಂಟೆಯವರೆಗೆ ಎಂಟನೇ ಅನುಭಾವ “ಕರಣ ಹಸಿಗೆಯ ಅನ್ವಯಿಕ ಜ್ಞಾನ” ಕುರಿತು ಬೆಂಗಳೂರಿನ ಭಾರತಿ ಕೆಂಪಯ್ಯ ಅವರು ಸರಳವಾಗಿ ಅನುಭಾವ ನೀಡಿದರು.

ಮೂಗಪ್ಪ ಬಾಳಿಕಾಯಿ ಕೋರಿಕೊಪ್ಪ, ಪುಂಡಲೀಕ ಇಂಗಲೀಕ ಹೊಸೂರ, ಈರಣ್ಣ ಯಡಾಲ ಹೊಸೂರ ಉಪಸ್ಥಿತರಿದ್ದರು.

ಸಾಯಂಕಾಲ 7 ಗಂಟೆಗೆ, ಶರಣ ಡಾ. ಫ ಗು ಹಳಕಟ್ಟಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು. ಮಲ್ಲೂರಿನ ಅನುಭಾವ ಮಂಟಪದ ಅಧ್ಯಕ್ಷ ಶರಣ ರಾಯಪ್ಪ ಸಣ್ಣಮನಿ ಅವರು ಹಳಕಟ್ಟಿ ಶರಣರ ತ್ಯಾಗ, ಸಮರ್ಪಣೆ ಬಗ್ಗೆ ವಿವರಣೆ ನೀಡಿ ಆ ಮಹಾತ್ಮನಿಗೆ ಭಾವ ಪೂರ್ಣ ನಮನ ಸಲ್ಲಿಸಿದರು.

ಮಲ್ಲೂರಿನ ಸಂಗಪ್ಪ ಮುರಗೋಡ, ಕುಮಾರ ಸಣ್ಣಮನಿ, ಕಲ್ಲನಗೌಡ ಪಾಟೀಲ ಅವರು ಅತಿಥಿಗಳಾಗಿದ್ದರು. ಶರಣು ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

ಇಡೀ ಮೂರು ದಿನ ನೇಗಿನಾಳದ ಮಂಜುನಾಥ ಶಿಕ್ಷಕರು ಸಂಗಡಿಗರೊಂದಿಗೆ ವಚನ ಸಂಗೀತ ಸೇವೆ ನಡೆಸಿಕೊಟ್ಟರು.

ಸಮಯಕ್ಕೆ ತಕ್ಕಂತೆ ಸಾವಯುವ ಪದಾರ್ಥಗಳಿಂದ ತಯಾರಿಸಿದ ಪ್ರಸಾದ ಎಲ್ಲರಿಗೂ ಸಂತೋಷ ನೀಡಿತು. ಆತಿಥ್ಯ ವಹಿಸಿದ ಮಲ್ಲೂರಿನ ಬಸವಭಕ್ತರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದರು.

ಈ ಎಲ್ಲ ಕೆಲಸದ ಹಿಂದೆ ಅನುಭಾವಿ ಎಂ.ಎಂ. ಸಂಗೊಳ್ಳಿ ಶಿಕ್ಷಕರು ಮತ್ತು ಶಿವಾನಂದ ಅರಭಾವಿ, ಶಿಕ್ಷಕರು, ಈರಣ್ಣ ಬಾನಿ, ರಾಯಪ್ಪ ಸಣ್ಣಮನಿ, ಕುಮಾರ ಸಣ್ಣಮನಿ ಮತ್ತು ಮಲ್ಲೂರಿನ ಬಸವ ಭಕ್ತರ ಶ್ರಮ ಎದ್ದು ಕಾಣುತ್ತಿತ್ತು.

ನೀರಿಕ್ಷೆಗೂ ಮೀರಿ ಕಮ್ಮಟ ಯಶಸ್ವಿ ಆಯಿತು. ಬಸವ ತತ್ವದ ವಿಸ್ತರಣೆಯಲ್ಲಿ ವೈಚಾರಿಕ ವಿಷಯಗಳ ಜೊತೆಗೆ, ಇಂತಹ ಅನುಭಾವ ಆಧಾರಿತ ಕಮ್ಮಟಗಳ ಅಯೋಜನೆ ಇಂದಿನ ಅವಶ್ಯಕತೆ ಎಂದು ಎಲ್ಲರ ಮಾತಾಡುತ್ತಿದ್ದುದು ಕೇಳಿ ಬಂದಿತು.

ಮಲ್ಲೂರು ಅನುಭವ ಮಂಟಪ :

ಸವದತ್ತಿ ತಾಲ್ಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪ ಶುದ್ಧ ಆಧ್ಯಾತ್ಮಿಕ, ವೈಚಾರಿಕ ನೆಲೆಯಲ್ಲಿ ಬಸವ ತತ್ವವನ್ನು ಅಳವಡಿಸಿಕೊಳ್ಳುವ ಸಾಧಕರಿಗಾಗಿ ನಿರ್ಮಾಣಗೊಂಡ ಒಂದು ಸಣ್ಣ ಸಂಸ್ಥೆ.

ಬೈಲಹೊಂಗಲ ಮುನವಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ, ಒಂಬತ್ತು ಗುಂಟೆ ಸ್ಥಳದಲ್ಲಿ ಸ್ವಾಮೀಜಿಯೊಬ್ಬರು ಅಲ್ಲಿ ಒಂದು ಸಣ್ಣ ಆಶ್ರಮ ಮಾಡಿಕೊಂಡು ಸಾಧನೆಯಲ್ಲಿ ತೊಡಗಿದ್ದರು. ಅವರು ಆ ಸ್ಥಳವನ್ನು ಬಿಟ್ಟು ಬೇರೆಡೆಗೆ ಹೋಗುವಾಗ ಆದನ್ನು ಮಾರಾಟ ಮಾಡಲು ಸನ್ನದ್ಧರಾದಾಗ, ಅದೇ ಊರಿನ ಕೃಷಿಕರೆಲ್ಲ ಸೇರಿ ಹಣ ಕೂಡಿಸಿ ಆ ಸ್ಥಳವನ್ನು ಆಶ್ರಮದ ಕಟ್ಟಡದ ಜೊತೆಗೆ ಖರೀದಿಸಿದ್ದು ಇತಿಹಾಸ.

ಈಗ ಆ ಆಶ್ರಮ ಅನುಭವ ಮಂಟಪವಾಗಿ ಪರಿವರ್ತನೆಯಾಗಿ, ಬಸವತತ್ವದ ಸಾಧಕರಿಗೆ ಮಾರ್ಗದರ್ಶನ ಮಾಡುವ ಸಂಸ್ಥೆಯಾಗಿ ಮುಂಚೂಣಿಯಲ್ಲಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *