‘ಹಸಿವಿನ’ ಬಸವಣ್ಣ ಬದುಕಾಗುವುದೇ ನಿಜವಾದ ಬಸವ ಜಯಂತಿ

ಗಂಗಾವತಿ

ಬಸವಣ್ಣ ಅಂದ್ರೆ ಅದ್ಭುತ. ಆ ಬಹುಮುಖ ವ್ಯಕ್ತಿತ್ವವನ್ನು  ಸಂಪೂರ್ಣವಾಗಿ ಅರಿಯುವುದು ಇಂದಿಗೂ ಯಾರಿಗೂ ಸಾಧ್ಯವಾಗಿಲ್ಲ ಅನಿಸುತ್ತೆ. ಅವರವರ ದೃಷ್ಠಿಗೆ ಅವರವರಂತೆ ಕಾಣುವ ಬಸವಣ್ಣನ ಸಂಪೂರ್ಣ ವ್ಯಕ್ತಿತ್ವವೇ ಒಂದು ಅದ್ಭುತ.

ಒಬ್ಬ ವ್ಯಕ್ತಿಯ ಕುರಿತು ಮಾತಾಡುವಾಗ ಅವನ ವಿಚಾರಗಳನ್ನು ಬಿಟ್ಟು ಬೇರೇನೂ ಇರುವುದಿಲ್ಲ, ಆದರೆ ಬಸವಣ್ಣ ಹಂಗಲ್ಲ. ಸಾಹಿತ್ಯ ಚರಿತ್ರೆಯಲ್ಲಿ ಇವರು ಕಾಣಿಸಿಕೊಂಡರೂ, ಅವರ ವಚನಗಳನ್ನು ಬದಿಗಿರಿಸಿದರೂ, ಬಸವಣ್ಣನ ಬಗ್ಗೆ ಹೇಳುವುದಕ್ಕೆ ತುಂಬಾ ಅವಕಾಶಗಳಿವೆ.

ಬಸವಣ್ಣ ಒಬ್ಬ ಚಾರಿತ್ರಿಕ ಪುರುಷನಾಗಿ, ಪುರಾಣ ಪುರುಷನಾಗಿ ಕಂಡರೂ ಸಮಾಜದಲ್ಲಿ ಬಸವಣ್ಣ ಅನೇಕ ಬಸವಣ್ಣನಾಗಿ ಕಾಣುತ್ತಾನೆ. ಬಸವಣ್ಣ ಕಥೆಗಳ ಮೂಲಕ, ವಚನಗಳ ಮೂಲಕ, ಅಧುನಿಕ ಕಾಲದ  ಚಿಂತಕರ ಬಸವಣ್ಣ, ಹೀಗೆ ಬಸವಣ್ಣ ಯಾವ ಸಂಧರ್ಭದಲ್ಲಿ ಯಾವ ರೀತಿಯಾಗಿ ಕಾಣುತ್ತಾನೆ ಎನ್ನುವ ಬಹುಮುಖದ ಬಸವಣ್ಣ ಇಂದಿಗೂ ಅಖಂಡ ಬಸವಣ್ಣನಾಗಿ ಯಾರಿಗೂ ಸಿಕ್ಕಿಲ್ಲ.

ಬಸವಣ್ಣ ವಚನಗಳ ಮೂಲಕ ಸಿಗುವ ಹಾಗೆ, ಹರಿಹರನ ಬಸವಣ್ಣ, ಶೂನ್ಯ ಸಂಪಾದನೆಯ ಬಸವಣ್ಣ, ಭೀಮ ಕವಿಯ ಬಸವಣ್ಣ  ಹೀಗೆ ಪುರಾಣಗಳ ಬಸವಣ್ಣ ಸೃಷ್ಠಿಯಾದ ಅದೊಂದು ಕಾಲ.

ಅನುಭಾವಿಗಳು, ಕಾವಿಧಾರಿಗಳು, ಇಂದು ಬಸವತತ್ವ ಹೇಳುವವರ ಬಸವಣ್ಣ ಬೇರೆ. ಅಧುನಿಕ ಸಾಹಿತಿಗಳ ದೃಷ್ಠಿಯಲ್ಲಿನ ಬಸವಣ್ಣನ ಹುಟ್ಟು (ಕಾಣುವ ದೃಷ್ಠಕೋನ) ಬೇರೆನೆ ಇದೆ. ಆದರೆ ಇಂದಿಗೂ ಒಟ್ಟಾರೆ ಬಸವಣ್ಣನ ವ್ಯಕ್ತಿತ್ವ ಸಂಪೂರ್ಣವಾಗಿ ಅರಿಯಲು ಸೋತಿದ್ದು ಮಾತ್ರ ಸತ್ಯ.

ಬಸವಣ್ಣನ ಮುಂದಾಳತ್ವದಲ್ಲಿ ನಡೆದ ಅಂದಿನ ಚಳುವಳಿ, ಹೊರಗಿನ ಶತ್ರುಗಳಿಂದ ಒಳಗಿನ ಶತ್ರುಗಳ ಒಡಕುಗಳಿಂದ ಅನುಭವಿಸಿದ್ದೆ ಹೆಚ್ಚು. ಅದು ಇಂದಿಗೂ ಸತ್ಯವಾದದ್ದು ಅಂತ ಅನಿಸುತ್ತೆ. ಅಂದಿನ ಅಧಿಕಾರದ ಪ್ರಭುತ್ವಕ್ಕೆ ಮತ್ತು ಧರ್ಮ ಪ್ರಭುತ್ವಕ್ಕೆ ಪರ್ಯಾಯವಾಗಿ ಒಂದು ಹೊಸ ಸಮಾಜವನ್ನು ಕಟ್ಟಬೇಕೆಂಬ ಹಂಬಲದ ಬಸವಣ್ಣ ಚಳುವಳಿ,

ಏನಾದರೂ ಕಟ್ಟಬೇಕೆಂಬ ಹಸಿವಿನ ಬಸವಣ್ಣನನ್ನು ಅರಿಯಲು ಸೋತ ಸಮಾಜ, ಪುರಾಣದ ಬಸವಣ್ಣನೊಂದಿಗೆ ರಾಜಿ ಮಾಡಿಕೊಂಡು ಹಸಿವಿನ ಬಸವಣ್ಣನನ್ನು ಮರೆತೇ ಬಿಟ್ಟಿತು.

“ಹಸಿವು” ಎನ್ನುವ ಪದ ಉದರಕ್ಕೆ ಸಂಭಂದಿಸಿದ್ದಕ್ಕಿಂತ ಜ್ಞಾನಕ್ಕೆ ಹೆಚ್ಚು ಸೂಕ್ತ. ಬಸವಣ್ಣನ ಹಸಿವು ಹೇಗಿತ್ತು ಅಂದ್ರೆ, ಅದು ಒಡಲ ಹಸಿವಲ್ಲ. ಬಿಜ್ಜಳನ ಭಂಡಾರಿಯಾಗಿ    ಅರಮನೆಯ ಸುಖವನ್ನುಂಡು ಶರಣರಿಗಾಗಿ ಮಹಾಮನೆ ಕಟ್ಟುವ ಹಸಿವು ಬಸವಣ್ಣನದು.

ಶ್ರಮಿಕಜೀವಿಗಳಿಗಾಗಿ ಸದಾ ಮಿಡಿಯುವ ಹಸಿವು ಬಸವಣ್ಣದು. ಬಸವಣ್ಣ ಯಾವಾಗಲೂ “ಆಗುವಿಕೆ” ಯ ತುಡಿತ. ಅನುಭವ ಮಂಟಪ ಕಟ್ಟಿ ಅದರ ಮುಖ್ಯಸ್ಥ ತಾನಾಗದೆ ಅಲ್ಲಮನನ್ನು ಮಾಡಿದ ಆಗುವಿಕೆ ಬಸವಣ್ಣ.

ಬಸವಣ್ಣನ ಬದ್ಧತೆ ಇರುವುದು ಶರಣರಿಗಾಗಿ ಅಲ್ಲ, ಭವಿಗಳಿಗಾಗಿ.

 ” ಎನ್ನಯ್ಯಾ ವಿಪ್ರರು ನುಡಿದಂತೆ ನಡೆಯರು ” ಎನ್ನುವ ನಡೆ-ನುಡಿಯ ಆಗುವಿಕೆ ತುಡಿತ ಬಸವಣ್ಣ. ಪಕ್ಕದಲ್ಲಿ ಮಲಗಿರುವ ಮಗುವನ್ನು ಸಂಭಾಳಿಸುವುದೋ, ಜೊತೆಗೆ ಮಲಗಿರುವ ವಿಟನನ್ನು ಸಂಭಾಳಿಸುವುದೊ ಎಂದು ಅರಿಯದ ಮುಗ್ದ ಜೀವಿಗಳನ್ನು ಉದ್ದರಿಸುವ ಹಸಿವು ಬಸವಣ್ಣನದು. ಕುಲಗೋತ್ರ ಕೇಳಿದವರ ಮುಂದೆ ತಲೆ ತಗ್ಗಿಸಿ ಕಾಲಿನಿಂದ ನೆಲ ತಿಕ್ಕುವವರಿಗೆ, ಗೋತ್ರ ಮಾದಾರ ಚೆನ್ನಯ್ಯ, ಗೋತ್ರ ಡೋಹಾರ ಕಕ್ಕಯ್ಯ ಎಂದು ಹೇಳಲಾರದವರ ಜೊತೆಗಿನ ಸಾತ್ವಿಕ ಸಿಟ್ಟಿನ ಹಸಿವು ಬಸವಣ್ಣನದು.

ವೇದ, ಆಗಮ, ಶಾಸ್ತ್ರ, ಪುರಾಣಗಳು ಜನಸಾಮಾನ್ಯನಿಗೆ ನಿಲುಕಲಾರದೇ ಬರಿ ಗೊಂದಲ ಸೃಷ್ಠಿಸಿ ಶೋಷಿಸುವ ಭಾಷೆಗಳಿಗೆ ಒರೆಯಕಟ್ಟಿ ಹಾಕಿದ್ದು ಬಸವಣ್ಣನ ಹಸಿವು. ಶ್ರೇಷ್ಠನಾಗುವುದೆ ವ್ಯಸನವಾದ ಸಂಸ್ಕ್ರತಿಗೆ ಅಂತ್ಯಜನಾಗುವ ಕೆಲಸ ಸುಲುಭವೂ ಅಲ್ಲ, ಜಾಣತನದ ಮಾತು ಅಲ್ಲ. ಆದು ನಿರಂತರ ಎಚ್ಚರದಿಂದ ಮಾತ್ರ ಸಾಧ್ಯವಾಗುವಂತದ್ದು ಎನ್ನುವ ಹಸಿವು ಬಸವಣ್ಣನದು.

ಬಸವಣ್ಣನ ಹೊಸ ಸಮಾಜದಲ್ಲಿ ನೂರಾರು ತಳಸಮುದಾಯದ ಅಸ್ಪ್ರಶ್ಯ ಸಮುದಾಯಗಳು  ಬಂದು ಕೂಡಿದ್ದು ಚಾರಿತ್ರಿಕ ಸತ್ಯ. ಇಂತಹ ಅಸ್ಪ್ರಶ್ಯ  ಸಮುದಾಯಗಳ ಜೊತೆ ಕರಳು ಬಳ್ಳಿ ಸಂಬಂಧ ಕುದರಿಸಿಕೊಳ್ಳಲು

” ಊಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು

ಕೊಂಬಲ್ಲಿ ಕೊಡುವಲ್ಲಿ ಕುಲವನರಿಸುವರು, ಎಂತಯ್ಯಾ ಅವರ ಭಕ್ತರೆಂಬೆ ?

ಎಂತಯ್ಯಾ ಅವರ ಯುಕ್ತರೆಂಬೆ ?

ಕೂಡಲಸಂಗಮದೇವಾ ಕೇಳಯ್ಯಾ

ಹೊಲತಿ ಶುದ್ದ ನೀರು, ಮಿಂದಂತಾಯಿತ್ತಯ್ಯಾ “

ಎನ್ನುವ  ತುಡಿತ ಬಸವಣ್ಣನದು.

” ನೆಲನೊಂದೆ ಹೊಲೆಗೇರಿ ಶಿವಾಲಯಕ್ಕೆ ” ಎನ್ನುವ ಹಸಿವು ಬಸವಣ್ಣನದು.

ಇಂದು ನಾವು 21 ನೇ ಶತಮಾನಕ್ಕೆ ಕಾಲಿಟ್ಟರೂ ಹಸಿವಿನ ಬಸವಣ್ಣ ಹಿನ್ನೆಲೆಗೆ ಸರಿದು, ಹರಿಹರನ ಬಸವಣ್ಣ, ಶೂನ್ಯ ಸಂಪಾದನೆಯ ಬಸವಣ್ಣ, ಭೀಮ ಕವಿಯ ಬಸವಣ್ಣ ಇಂದಿಗೂ ನಮ್ಮ ವೇದಿಕೆಗಳ ಮೇಲೆ ವಿಜ್ರಂಭಿಸುತ್ತಿದ್ದಾನೆ.

ಹಸಿವಿನ ಬಸವಣ್ಣ ಮರೆಯಾಗಿ ಪುರಾಣದ ಬಸವಣ್ಣ ಮುನ್ನಲೆಗೆ ಬರುತ್ತಿರುವುದು ಇಂದಿನ ಶತಮಾನದಲ್ಲಿನ ಬಸವಣ್ಣನನ್ನು ಅರಿಯುವುದು ಮುಖ್ಯ. ಬರಿ ಅರಿಯುವುದಲ್ಲ ಬಸವಣ್ಣ ಬದುಕು ಆಗಬೇಕು. ಬಸವಣ್ಣ ಬದುಕಾದಾಗ  ಮಾತ್ರ ಬಸವಣ್ಣನಿಗೆ ನಾವು ಬಸವ ಜಯಂತಿಗೆ ಸಲ್ಲಿಸುವ ನಿಜಗೌರವ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *