ಅನೇಕ ಲಿಂಗಾಯತ ಕಾಯಕ ಸಮುದಾಯಗಳು ರಾಜಕೀಯವಾಗಿ ಮೂಲೆಗುಂಪಾಗಿವೆ.
ಲಂಡನ್
ಭಾರತೀಯ ಸಂವಿಧಾನ ಆಶಿಸುವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಲ್ಪನೆ ವಚನ ಚಳುವಳಿಯಲ್ಲೇ ಅಡಕವಾಗಿತ್ತು.
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಹೇಳುವಂತೆ “ಸಂವಿಧಾನವು ವಚನಗಳ ಆಧುನಿಕ ರಾಜಕೀಯ ಆವೃತ್ತಿಯಾಗಿದೆ.”
ಆದರೆ, ಇಂದಿನ ಲಿಂಗಾಯತರ ಸ್ಥಿತಿಗತಿ ನೋಡಿದರೆ 12ನೇ ಶತಮಾನದ ಚಳುವಳಿಯಿಂದಲೇ ಹೊಮ್ಮಿದ ಈ ಸಮುದಾಯ ಶರಣರ ಮೂಲ ಆಶಯಗಳನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದೆ ಎಂಬ ಪ್ರಶ್ನೆಯೇಳುತ್ತದೆ.
ಉದಾಹರಣೆಗೆ ಲಿಂಗಾಯತ ರಾಜಕಾರಣ ಈಗ ಬಣಜಿಗ, ಪಂಚಮಸಾಲಿಗಳಂತಹ ಕೆಲವು ಪ್ರಬಲ ಪಂಗಡಗಳ ಸುತ್ತ ಸುತ್ತುತ್ತಿದೆ.
ಜಿ.ಬಿ. ಪಾಟೀಲ್ ಮತ್ತು ಜೆ.ಎಸ್. ಪಾಟೀಲ್ ಹೇಳುವಂತೆ ‘ಲಿಂಗಾಯತ ಕೋಟಾ’ ಎಂಬುದು ಪ್ರಬಲ ಪಂಗಡಗಳ ಅಧಿಕಾರವನ್ನು ಗಟ್ಟಿ ಮಾಡುವ ಸಾಧನವಾಗಿದೆ.
ಲಿಂಗಾಯತ ಹೆಸರಿನಲ್ಲಿ ಗೆಲ್ಲುವ ಶಾಸಕರು ಕೇವಲ ತಮ್ಮ ವರ್ಗದ ಹಿತಾಸಕ್ತಿಯನ್ನು ರಕ್ಷಿಸುತ್ತಿದ್ದಾರೆ ಹೊರತು, 770 ಅಮರಗಣಂಗಳ ಪರಂಪರೆಯ ಸಣ್ಣ ಕಾಯಕ ಪಂಗಡಗಳನ್ನಲ್ಲ. ಇದರ ಪರಿಣಾಮವಾಗಿ ಅನೇಕ ಕಾಯಕ ಸಮುದಾಯಗಳು ರಾಜಕೀಯವಾಗಿ ಮೂಲೆಗುಂಪಾಗಿವೆ.
ಅನುಭವ ಮಂಟಪವು 770 ಅಮರಗಣಂಗಳ ಒಕ್ಕೂಟವಾಗಿತ್ತು. ಅದರಲ್ಲಿ ಶೂದ್ರ, ದಲಿತ ಮತ್ತು ಕುರುಬ ಸಂಸ್ಕೃತಿಯ ಶರಣರಿದ್ದರು. ಇಂದಿಗೂ ಲಿಂಗಾಯತವು 101ಕ್ಕೂ ಹೆಚ್ಚು ಕಾಯಕ ಉಪಪಂಗಡಗಳನ್ನು ಒಳಗೊಂಡಿದೆ.
2011ರ ಭಾರತದ ಜನಗಣತಿಯ ಪ್ರಕಾರ, ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಲಿಂಗಾಯತ ಸಣ್ಣ ಪಂಗಡಗಳ ಪಾಲು ಗಣನೀಯವಾಗಿದ್ದರೂ ಶಾಸನಸಭೆಯಲ್ಲಿ ಅವರ ಪ್ರಾತಿನಿಧ್ಯ ಶೇ. 5ಕ್ಕಿಂತಲೂ ಕಡಿಮೆ ಇದೆ.
ಇದು ಬಸವಣ್ಣನವರ “ಇವ ನಮ್ಮವ” ಆಶಯದ ಉಲ್ಲಂಘನೆ. ಅಂಬೇಡ್ಕರ್ ಎಚ್ಚರಿಸಿದಂತೆ “ಅಧಿಕಾರವು ಒಂದೆಡೆ ಕೇಂದ್ರೀಕೃತವಾದರೆ ಪ್ರಜಾಪ್ರಭುತ್ವವು ಸರ್ವಾಧಿಕಾರವಾಗುತ್ತದೆ.”
ಇದೇ ಅಪಾಯವನ್ನು ಎದುರಿಸುತ್ತಿರುವ ಲಿಂಗಾಯತ ರಾಜಕಾರಣವು ಹೊಸ ದಿಕ್ಕನ್ನು ಹುಡುಕಿಕೊಳ್ಳಬೇಕು, ಬಸವಾದಿ ಶರಣರ ಮೂಲ ಆಶಯಗಳನ್ನು ಜಾರಿಗೆ ತರುವ ಸಾತ್ವಿಕ ಶಕ್ತಿಯಾಗಬೇಕು.
