ಲಕ್ಷಾಂತರ ಲಿಂಗಾಯತರ ಆಕ್ರೋಶಕ್ಕೆ ಪೂಜ್ಯರು ಧ್ವನಿ ನೀಡಿದ್ದಾರೆ
ವಿಜಯಪುರ
ಪುರಾತನ ಪರ್ಷಿಯನ್ನರು ಸಿಂಧು ನದಿಯ ತೀರದ ಜನಾಂಗವನ್ನು ಹಿಂದೂಗಳೆಂದು ಕರೆದರು. ಹಿಂದೂ ಒಂದು ಧರ್ಮವಲ್ಲ, ಒಂದು ಜನಾಂಗದ ಜೀವನ ಕ್ರಮವಷ್ಟೇ. ಅದಕ್ಕೆ ಸ್ಥಾಪಕರಿಲ್ಲ, ನಿಖರವಾದ ಇಸ್ವಿಯಿಲ್ಲ.
ಆದರೂ ಪುರೋಹಿತಷಾಹಿಗಳು ಕ್ರಮೇಣ ವೇದ, ಆಗಮ, ಉಪನಿಷತ್ತು ಹಾಗೂ ಸ್ಮೃತಿಗಳನ್ನು ಸೃಷ್ಠಿಸಿ ಅದಕ್ಕೊಂದು ಧರ್ಮದ ಸ್ವರೂಪ ನೀಡಿದರು.
ಅದರ ಜೊತೆಗೆ ವರ್ಣಾಶ್ರಮ, ಜಾತಿ, ಲಿಂಗಾಧರಿತ ಶೋಷಣೆ, ಸ್ವಾತಂತ್ರ್ಯ ಹರಣ ಮುಂತಾದ ಸಮಸ್ಯೆಗಳೂ ಹುಟ್ಟಿಕೊಂಡವು ಎಂಬುದು ಸರ್ವರಿಗೂ ತಿಳಿದ ಸಂಗತಿ.
ಇದೇ ಪರಂಪರೆಯಲ್ಲಿ ಹುಟ್ಟಿ ಬೆಳೆದ ವೀರಶೈವರು ರೇಣುಕಾಚಾರ್ಯರೆಂಬ ಕಾಲ್ಪನಿಕ ಸ್ಥಾಪಕರನ್ನು ಸೃಷ್ಟಿಸಿದರು. ಅವರು ಸ್ಥಾವರಲಿಂಗದಿಂದ ಉದ್ಬವಿಸಿದರು, ಸಿದ್ಧಾಂತ ಶಿಖಾಮಣಿ ರಚಿಸಿದರು ಮುಂತಾದ ಕಪೋಲಕಲ್ಪಿತ ಕಥೆಗಳನ್ನೂ ವ್ಯವಸ್ಥಿತವಾಗಿ ಹೆಣೆದರು.
ಇವುಗಳಿಗಿಂತ ಭಿನ್ನವಾದ ಸನ್ಮಾರ್ಗವನ್ನು ತೋರಿಸಲು ಬಂದವರೇ ಜ್ಞಾನಜ್ಯೋತಿ ಬಸವಣ್ಣನವರು. ಅವರು ಕಾಯಕ, ದಾಸೋಹ, ಶ್ರದ್ಧಾಭಕ್ತಿಯ ಹಾಗೂ ಎಲ್ಲರನ್ನೂ ಒಪ್ಪಿಕೊಳ್ಳುವ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದ್ದರ ಬಗ್ಗೆ ಈಗ ಶರಣ ಸಮಾಜದಲ್ಲಿ, ನಾಡಿನ ಪ್ರಜ್ಞಾವಂತರಲ್ಲಿ ಅರಿವು ಬೆಳೆಯುತ್ತಿದೆ.
ಆದರೆ ಕೆಲವು ಐತಿಹಾಸಿಕ ಕಾರಣಗಳಿಂದ ಬಸವಣ್ಣನವರ ಭಕ್ತರೆಂದು ಶರಣ ಸಮಾಜದಲ್ಲಿ ಸೇರಿಕೊಂಡ ವೀರಶೈವರು ಕ್ರಮೇಣ ತಾವೇ ಬಸವಣ್ಣನವರ ಹಾಗೂ ಅವರ ಅನುಯಾಯಿಗಳ ಗುರುಗಳೆಂದು ಹೇಳಿಕೊಳ್ಳಲು ಆರಂಭಿಸಿದರು.
ಬಸವ ತತ್ವಕ್ಕೆ ವಿರುದ್ಧವಾದ ನಂಬಿಕೆ, ಆಚರಣೆಗಳನ್ನು ಮತ್ತೆ ಜಾರಿಗೆ ತಂದು ಮುಗ್ದ ಸಮಾಜವನ್ನು ದಾರಿ ತಪ್ಪಿಸಿದರು. ಲಿಂಗಾಯತದ ಹೆಗಲ ಮೇಲೆ ವೀರಶೈವ ಕೂರಿಸಿ, ವೀರಶೈವ-ಲಿಂಗಾಯತ ಸಮಾಜ ಒಂದೇ ಎಂಬ ಭ್ರಮೆ ಹುಟ್ಟಿಸಿದರು.
ಈ ಬೆಳವಣಿಗೆಗಳು, ಅದರ ಹಿಂದಿರುವ ಕುತಂತ್ರಗಳು ಈಗ ಕ್ರಮೇಣ ಲಿಂಗಾಯತರಿಗೆ ಅರ್ಥವಾಗಿ ಅವರಿಂದ ತೀಕ್ಷ್ಣ ಪ್ರತಿಕ್ರಿಯೆ ಬರಲಾರಂಭಿಸಿದೆ. ಇದು ಕೆಲವರಿಗೆ ಸಮಸ್ಯೆಯಾಗಿ, ವಿವಾದದಂತೆ ಕಾಣಲಾರಂಭಿಸಿದೆ.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಈಗ ಸೃಷ್ಠಿ ಮಾಡಲಾಗುತ್ತಿರುವ ವಿವಾದವನ್ನು ಈ ಹಿನ್ನಲೆಯಲ್ಲಿ ನೋಡಬೇಕು.
ಅಲ್ಲಿ ಚರಂತೇಶ್ವರ ಮಠದ ಪೂಜ್ಯ ಶರಣಬಸವ ದೇವರು ಪರಕೀಯ ನಂಬಿಕೆಗಳನ್ನು ಲಿಂಗಾಯತರ ಮೇಲೆ ಒತ್ತಾಯದಿಂದ ಹೇರುವ ಕುಟೀಲ ನೀತಿಯನ್ನು ಖಂಡಿಸಿದ್ದಾರೆ.
“ಇವರು ವೀರಶೈವರು ಅಂತಾರೆ, ಹಿಂದೂ ಧರ್ಮದ ಭಾಗ ಅಂತಾರೆ. ಇದನ್ನು ಒಪ್ಪಿಕೊಂಡರೆ ಭಗವದ್ಗೀತೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ… ಶೈವರೇ ಇರಲಿ ವೀರಶೈವರೇ ಇರಲಿ ಲಿಂಗಾಯತರು ಅನಿಸಿಕೊಂಡರೆ ವಚನಗಳು ಧರ್ಮಗ್ರಂಥ ಬಸವಣ್ಣ ಧರ್ಮ ಗುರು ಅಂತ ಒಪ್ಪಿಕೊಳ್ಳಲೇಬೇಕು.” ಇದು ಪೂಜ್ಯರ ಮಾತಿನ ಮುಖ್ಯಾಂಶ.
ಪೂಜ್ಯರ ಮಾತನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದು ಯಾರೂ ಷರತ್ತು ಹಾಕಿಲ್ಲ. ಯಾರಿಗಾದರೂ ಬೇರೆ ಅಭಿಪ್ರಾಯವಿದ್ದರೆ ಚರ್ಚೆಗೆ ಬನ್ನಿರೆಂದು ಸ್ವಾಮೀಜಿ ಅವರೇ ಆಹ್ವಾನಿಸಿದ್ದಾರೆ.
ಚರ್ಚೆ ಮಾಡಲು ಮುಕ್ತ ಅವಕಾಶವಿದೆ. ಎಲ್ಲಿ ಬೇಕಾದರೆ ಅಲ್ಲಿ ಆಯೋಜಿಸಲು ಬಸವ ಸಂಘಟನೆಗಳೇ ಮುಂದೆ ಬರುತ್ತವೆ. ಇದು ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಸರಿಯಾದ ಮಾರ್ಗ.
ಆದರೆ ಬೇರೆ ಯಾವುದಾದರು ರೀತಿ ಪೂಜ್ಯರ ಮೇಲೆ ಒತ್ತಡ ತರಲು ಅಥವಾ ಬೆದರಿಕೆ ಹಾಕಲು ಪ್ರಯತ್ನಿಸಿದರೆ ಬಸವ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತು ಸೂಕ್ತವಾದ ಪ್ರತಿಕ್ರಿಯೆ ನೀಡಬೇಕಾಗುತ್ತದೆ.
ನಿರಂತರವಾಗಿ ಬಸವತತ್ವ ಬಿತ್ತುತ್ತಿರುವ ನಿಷ್ಠ ಸಂಚಾರಿ ಜಂಗಮರಾದ ಪೂಜ್ಯರಿಗೆ ತಾಲೂಕು ತಾಲೂಕುಗಳಲ್ಲಿ ಸಾವಿರಾರು ಅನುಯಾಯಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಬೆಂಬಲಿಗರಿದ್ದಾರೆ.
ಪೂಜ್ಯರು ಈ ಸಂದರ್ಭದಲ್ಲಿ ಬಳಸಿರುವ ಭಾಷೆಯ ಬಗ್ಗೆ ಆಕ್ಷೇಪ ಬಂದಿದೆ. ಸ್ವಲ್ಪ ಭಾವಾವೇಶದಿಂದ ಮಾತನಾಡಿದ್ದಾರೆ. ಅದು ಅವರ ಪ್ರಾಯದ ಹಾಗೂ ತತ್ವನಿಷ್ಠೆಯ ಧ್ವನಿ.
ಇಂದು ಲಿಂಗಾಯತ ಸಮಾಜದ ಮೇಲೆ ನಡೆಯುತ್ತಿರುವ ಕುತಂತ್ರಗಳನ್ನು ಎಲ್ಲರೂ ನೋಡುತ್ತಿದ್ದಾರೆ. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಕೂಡ ಬರುತ್ತಿದೆ. ಸಾಮಾನ್ಯ ಬಸವ ಭಕ್ತರ ಆಕ್ರೋಶಕ್ಕೆ ಪೂಜ್ಯರು ಧ್ವನಿ ನೀಡಿದ್ದಾರೆ.
ಲಿಂಗಾಯತ ಹೆಸರ ಬಳಸುತ್ತಿರುವವರು “ಬಸವಾದಿ ಶರಣರನ್ನು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಒಪ್ಪಿಸುವ ಕಾಲ ಬರುತ್ತದೆ.” ಪೂಜ್ಯರ ಈ ಮಾತು ಎಚ್ಚರಿಕೆಯ ಗಂಟೆ ಮಾತ್ರವಲ್ಲ, ಮಹತ್ವದ ದಿಕ್ಸೂಚಿ ಹೇಳಿಕೆ ಕೂಡ.
ಸಾರ್ವಜನಿಕ ಸಂವಾದ ಸೌಮ್ಯವಾಗಿ ನಡೆದರೆ ಒಳ್ಳೆಯದು. ಆದರೆ ಕನ್ನೇರಿ ಸ್ವಾಮಿಯಂತ ವಿಷಪೂರಿತ ವ್ಯಕ್ತಿಗಳಿಂದ ಸಾರ್ವಜನಿಕ ಚರ್ಚೆಯ ಗುಣಮಟ್ಟ ಕುಸಿದಿದೆ. ಈ ವಿಷಯದಲ್ಲಿ ಲಿಂಗಾಯತ, ವೀರಶೈವ, ಹಿಂದೂ ಸಮಾಜಗಳ ಮುಖಂಡರು ಸೇರಿ ಸೂಕ್ತವಾದ ನೀತಿ ಸಂಹಿತೆ ರೂಪಿಸಲಿ. ಇದರಿಂದ ನಮ್ಮಗಳಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಹಾಯವಾಗುತ್ತದೆ.

ಇದು ಸರಿಯಾದ ಸಲಹೆ, ಚರ್ಚೆಗೆ ಬರಲಿ. ಲಿಂಗಾಯತರ, ವೀರಶೈವರ ಸತ್ಯ ಎಲ್ಲರಿಗೂ ತಿಳಿಯಲಿ
ವೀರಶೈವರು, ಲಿಂಗಾಯತರು ಒಂದೇ ಎಂದು ಪಂಚಪೀಠಗಳು ವಾದಿಸುವುದನ್ನು ನಿಲ್ಲಿಸುವವರೆಗೂ ಇಂತಹ ಪ್ರತಿಕ್ರಿಯೆಗಳು ಬರುತ್ತಿರುತ್ತವೆ.
ಪೂಜ್ಯರೆ, ತಾವು ತುಂಬ ಸತ್ಯ ವಾಸ್ತವ ಸಂಗತಿ ತಿಳಿಸಿದ್ದೀರಿ ಅನಂತ ಧನ್ಯವಾದಗಳು ಶರಣು ಶರಣಾರ್ಥಿ, ತಮ್ಮಗೆ ಸದಾ ಬೆಂಬಲ ವಾಗಿರುತ್ತೇವೆ , ನಮ್ಮ ಲಿಂಗಾಯತ ಧರ್ಮಕೆ, ಅನಾವಶ್ಯಕವಾಗಿ, ವೀರಶೈವ ವಾದಿಗಳು ಜೋತು ಬಿದ್ದಾರೆ, ಮತ್ತು, RSS ಬಿಜೆಪಿ ಮನುವಾದಿಗಳು , ಲಿಂಗಾಯತ ಧರ್ಮದ ಮಾನ್ಯತೆ ಸಿಗದಂತೆ ಕುತಂತ್ರ ಕಾರ್ಯಕ್ರಮಗಳು ಮಾಡಿ , ಲಿಂಗಾಯತ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ , ನೋಡಿ
ಲಿಂಗಾಯತ ಎದ್ದರೆ ಎದುರು ನಿಲ್ಲುವ ಶಕ್ತಿ ಅವ್ರಿಗಿಲ್ಲ. ಜಾಗ್ರತೆ ಉಂಟಾಗಿದೆ ಜಯ ಬಸವ ಜಯ ಲಿಂಗಾಯತ 👏🏻👏🏻✌🏻
ಪೂಜ್ಯರು ಸರಿಯಾಗಿರುವುದನ್ನೇ ಹೇಳಿದ್ದಾರೆ. ಗಾದೆಯೇ ಇದೆಯಲ್ಲಾ ! “ಇದ್ದದ್ದನ್ನ ಇದ್ದಂಗ ಹೇಳಿದರ, ಎದಿಗೆ ಬಂದ ಒದ್ದಂಗ”. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
*ಮನುಸ್ಮೃತಿಯ* *ಕತ್ತಲೆಯಿಂದ* *ಸಂವಿಧಾನದ* *ಬೆಳಕಿನೆಡೆಗೆ* – ಅಂಬೇಡ್ಕರ್ ಎಂಬ ಯುಗಪುರುಷ
ಭಾರತದ ಚರಿತ್ರೆಯಲ್ಲಿ ಅಂಬೇಡ್ಕರ್ ಜಯಂತಿ ಎನ್ನುವುದು ಕೇವಲ ಒಂದು ದಿನದ ಆಚರಣೆಯಲ್ಲ; ಅದು ಈ ದೇಶದ ಕೋಟ್ಯಂತರ ಶೋಷಿತ ಸಮುದಾಯಗಳು ಕಂಡುಕೊಂಡ ‘ಸ್ವಾತಂತ್ರ್ಯದ ಉಸಿರು’. *ಬುದ್ಧನ* *ಕರುಣೆ* ಮತ್ತು *ಬಸವಣ್ಣನವರ* *ಸಮಾನತೆಯ* ಆಶಯಗಳು ಸಮಾಜದಲ್ಲಿ ಮರೆಯಾದಾಗ, ಮನುಸ್ಮೃತಿಯಂತಹ ಅಮಾನವೀಯ ಸಂಕೋಲೆಗಳು ಮನುಷ್ಯತ್ವವನ್ನು ಬಂಧಿಸಿದ್ದವು. ಆ ಸಂಕೋಲೆಗಳನ್ನು ಕಾನೂನಿನ ಅಸ್ತ್ರದ ಮೂಲಕ ತುಂಡರಿಸಿದ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
ಬುದ್ಧ, ಬಸವ ಮತ್ತು ಅಂಬೇಡ್ಕರ್
ಇತಿಹಾಸವನ್ನು ಗಮನಿಸಿದರೆ, ಗೌತಮ ಬುದ್ಧ ಅಹಿಂಸೆ ಮತ್ತು ಪ್ರಜ್ಞೆಯ ಮೂಲಕ ಅಸಮಾನತೆಯನ್ನು ಪ್ರಶ್ನಿಸಿದರು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎನ್ನುತ್ತಾ ಜಾತಿರಹಿತ ಸಮಾಜಕ್ಕೆ ಮುನ್ನುಡಿ ಬರೆದರು. ಆದರೆ, ಇಷ್ಟೆಲ್ಲಾ ಮಹಾತ್ಮರ ಹೋರಾಟದ ನಂತರವೂ ಭಾರತದಲ್ಲಿ ಶೋಷಣೆ ಸಜೀವವಾಗಿರಲು ಕಾರಣವಾಗಿದ್ದು ‘ಮನುಸ್ಮೃತಿ’ ಎಂಬ ಅಲಿಖಿತ ಮತ್ತು ಲಿಖಿತ ಕ್ರೂರ ನಿಯಮಗಳು. ಈ ಸ್ಮೃತಿಯು ಸಮಾಜವನ್ನು ವಿಭಜಿಸಿ, ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟಿತ್ತು. ಸ್ತ್ರೀಯರು ಮತ್ತು ಶೂದ್ರರು ಶಿಕ್ಷಣದಿಂದ ವಂಚಿತರಾಗಿ, ಕೇವಲ ಗುಲಾಮರಂತೆ ಬದುಕುವಂತೆ ಮಾಡಿದ್ದು ಇದೇ ವ್ಯವಸ್ಥೆ.
ಮನುಸ್ಮೃತಿಯ ದಹನ: ಬಂಡಾಯದ ಮೊದಲ ಕಿಚ್ಚು
1927ರಲ್ಲಿ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದ್ದು ಕೇವಲ ಒಂದು ಪ್ರತಿಭಟನೆಯಲ್ಲ; ಅದು ಸಾವಿರಾರು ವರ್ಷಗಳ ಅನ್ಯಾಯದ ವಿರುದ್ಧ ಸಾರಿದ ಯುದ್ಧವಾಗಿತ್ತು. ” *ಯಾವ* *ಗ್ರಂಥವು* *ಮನುಷ್ಯರನ್ನು* *ಮನುಷ್ಯರನ್ನಾಗಿ* *ಕಾಣುವುದಿಲ್ಲವೋ* , ಅದು *ಧರ್ಮಗ್ರಂಥವಾಗಲು* *ಸಾಧ್ಯವಿಲ್ಲ* ” ಎಂಬ ಅವರ ತರ್ಕವು ಭಾರತದ ಸಾಮಾಜಿಕ ವ್ಯವಸ್ಥೆಯ ಅಡಿಪಾಯವನ್ನೇ ನಡುಗಿಸಿತು.
ಸಂವಿಧಾನದ ಅನಿವಾರ್ಯತೆ
ಒಂದು ವೇಳೆ ಈ ದೇಶಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನ ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಇದು ಇಂದಿನ ಪೀಳಿಗೆ ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ. ಸಂವಿಧಾನವಿಲ್ಲದಿದ್ದರೆ:
ಅಕ್ಷರ ವಂಚಿತ ಬದುಕು: ಶಿಕ್ಷಣ ಎಂಬುದು ಕೇವಲ ಒಂದು ವರ್ಗದ ಸೊತ್ತಾಗಿ ಉಳಿಯುತ್ತಿತ್ತು. ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಶೋಷಿತ ಸಮುದಾಯದ ಮಕ್ಕಳು ಅಕ್ಷರ ಕಲಿಯುವುದು ಅಸಾಧ್ಯವಾಗುತ್ತಿತ್ತು.
ಮಹಿಳೆಯರ ಸ್ಥಿತಿ: ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಮಾತನಾಡಲು ಅಂಬೇಡ್ಕರ್ ತಂದ ‘ಹಿಂದೂ ಕೋಡ್ ಬಿಲ್’ ಮೂಲಾಧಾರ. ಇಲ್ಲದಿದ್ದರೆ ಮಹಿಳೆಯರು ಇಂದಿಗೂ ಮನುಸ್ಮೃತಿಯ ‘ಅಸ್ವಾತಂತ್ರ್ಯ’ದ ಕಪಿಮುಷ್ಠಿಯಲ್ಲೇ ಇರುತ್ತಿದ್ದರು.
ರಾಜಕೀಯ ಶಕ್ತಿ: ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿ ಎಂದರೆ ‘ಒಬ್ಬ ವ್ಯಕ್ತಿ – ಒಂದು ಮತ’. ಈ ಸಮಾನ ಮೌಲ್ಯದ ಹಕ್ಕು ಇಲ್ಲದಿದ್ದರೆ ಶೋಷಿತರ ಧ್ವನಿ ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಕೇಳಿಬರುತ್ತಿರಲಿಲ್ಲ.
ತೀರ್ಮಾನ
ಅಂಬೇಡ್ಕರ್ ಅವರು ಕೇವಲ ಒಂದು ವರ್ಗದ ನಾಯಕರಲ್ಲ, ಅವರು ಇಡೀ ಮಾನವಕುಲದ ವಿಮೋಚಕ. ಬುದ್ಧನ ಜ್ಞಾನ, ಬಸವಣ್ಣನವರ ಕಾಯಕ ನಿಷ್ಠೆ ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ಹಕ್ಕುಗಳು ಇಂದು ನಮಗೆ ಶ್ರೀರಕ್ಷೆಯಾಗಿವೆ. ನಾವು ಅವರನ್ನು ನೆನೆಯುವುದು ಎಂದರೆ ಅವರು ನೀಡಿದ ಸಂವಿಧಾನವನ್ನು ಗೌರವಿಸುವುದು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿಯನ್ನು ರೂಢಿಸಿಕೊಳ್ಳುವುದು ಎಂದರ್ಥ.
*ಬಾಬಾಸಾಹೇಬರು* *ನಮ್ಮ* *ಪಾಲಿಗೆ* *ಕೇವಲ* *ವ್ಯಕ್ತಿಯಲ್ಲ* , ಅವರು ಎಂದಿಗೂ ಆರಿಹೋಗದ ಜ್ಞಾನದ ಜ್ಯೋತಿ. *ಡಾಕ್ಟರ್* . *ಶಿವರಾಜ್* *ಪಾಟೀಲ* . *ಸಿಂಧನೂರ* .