ಹೊನ್ನಾಳಿ ಗ್ರಾಮದಲ್ಲಿ ಕಂಚಿನ ಬಸವ ಪ್ರತಿಮೆ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಗ್ರಾಮಸ್ಥರು ಸಾಮೂಹಿಕ ಇಷ್ಟಲಿಂಗ ದೀಕ್ಷೆ ಪಡೆಯಲು ಸಾಣೇಹಳ್ಳಿ ಸ್ವಾಮೀಜಿ ಕರೆ

ಹೊನ್ನಾಳಿ:

ವಿಶ್ವಗುರು ಬಸವಣ್ಣನವರು ನಡೆ-ನುಡಿಯ ಸಿದ್ಧಾಂತವನ್ನು ನಂಬಿದವರು. ತಮ್ಮ ನಡೆಯಲ್ಲಿ ಕುದುರೆ ಕೂದಲಿನಷ್ಟು ವ್ಯತ್ಯಾಸ ಕಂಡು ಬಂದರು ನನ್ನನ್ನು ತುಳಿದು ಮುಂದೆ ನಡೆಯಿರಿ ಎಂದು ಸವಾಲು ಹಾಕಿದ್ದರು ಎಂದು ಸಾಣೆಹಳ್ಳಿಯ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗುರುವಾರ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ತರಗನಹಳ್ಳಿಯ ಗ್ರಾಮಸ್ಥರು ಸಾಮೂಹಿಕವಾಗಿ ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಬೇಕು. ಇದರಿಂದ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಕಂಡುಬರುತ್ತದೆ ಎಂದು ತಿಳಿಸಿದರು.

ಬಸವಣ್ಣನವರು ತಮ್ಮ ಸರಳವಾದ ವಚನಗಳ ಮೂಲಕ ವ್ಯಕ್ತಿ, ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದವರು. ಕಷ್ಟಪಟ್ಟು ಅರ್ಥ ಮಾಡಿಕೊಳ್ಳುವ ಸಾಹಿತ್ಯಕ್ಕಿಂತ, ಸರಳ ವಚನಗಳ ಮೂಲಕ ಜನರ ಬದುಕಿನ ಮೌಲ್ಯಗಳನ್ನು ಹೇಳಿದರೆ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ನಂಬಿದ್ದವರು ಬಸವಣ್ಣನವರು ಎಂದರು.

ವಚನಗಳನ್ನು ಎಲ್ಲರೂ ಸುಲಭವಾಗಿ ಹೇಳಿಬಿಡುತ್ತಾರೆ. ಆದರೆ ಅದರಂತೆ ಜೀವನವನ್ನು ರೂಪಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಮದ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಗುಟ್ಕಾ, ಸಿಗರೇಟ್, ತಂಬಾಕು, ಸಾರಾಯಿ ಮಾರಾಟ ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಲು ಸಾಧ್ಯವೆ? ಗ್ರಾಮದ ಯುವಕರು, ಜನರು ಇವನ್ನೆಲ್ಲ ಸೇವಿಸುವುದಿಲ್ಲ ಎಂದು ಸಂಕಲ್ಪ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮದ್ಯ ಮಾರಾಟ ಮಾಡುವವನು ನಿಮ್ಮ ಗ್ರಾಮಕ್ಕೆ ಬಂದರೆ, ಮೊದಲು ನೀವು ಅವನಿಗೆ ದೇವಸ್ಥಾನಕ್ಕೆ ಎಷ್ಟು ಕೊಡುತ್ತೀಯಾ ಎಂದು ಕೇಳುತ್ತೀರಿ. ಅವನ ಜೊತೆ ಒಡಂಬಡಿಕೆ ಮಾಡಿಕೊಂಡೇ ನೀವು ನಿಮ್ಮ ಗ್ರಾಮಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತೀರಿ. ಇನ್ನು ದುಶ್ಚಟಗಳಿಂದ ದೂರ ಇರಿ ಎಂದು ಹೇಳುವುದಾದರೂ ಹೇಗೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸಮಾರಂಭಕ್ಕೂ ಮೊದಲು ಗ್ರಾಮಸ್ಥರು ನನ್ನ ಬಳಿ ಬಂದು ಈ ಗ್ರಾಮದ ಕೆರೆಗಳನ್ನು ತುಂಬಿಸಿ ಎಂದು ಬೇಡಿಕೆ ಇಟ್ಟದ್ದಾರೆ. ಜುಲೈ 15 ರಿಂದ ನವೆಂಬರ್15 ರೊಳಗೆ ಎಲ್ಲಾ ಕೆರೆಗಳನ್ನು ತುಂಬಿಸುವುದಾಗಿ ಭರವಸೆ ನೀಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ಟಿ.ಜಿ. ರಮೇಶಗೌಡ, ಡಿ.ಜಿ. ವಿಶ್ವನಾಥ, ಎಚ್.ಎ. ಗದ್ದಿಗೇಶ, ನಿವೃತ್ತ ಪ್ರಾಂಶುಪಾಲ ಬಸವರಾಜಪ್ಪ, ಹನುಮನಹಳ್ಳಿ ಬಸವರಾಜಪ್ಪ ಮಾತನಾಡಿದರು.

ವೇದಿಕೆಯಲ್ಲಿ ಹೊನ್ನಾಳಿ ಶಿವ ಬ್ಯಾಂಕ್ ಅಧ್ಯಕ್ಷ ಎಚ್.ಜಿ. ರುದ್ರೇಶಪ್ಪ, ಕೋಡಿಕೊಪ್ಪ ಶಿವಪ್ಪ, ಕೆಂಗಲಹಳ್ಳಿ ಷಣ್ಮುಖಪ್ಪ, ವಿಎಸ್‌ಎಸ್ ಎನ್‌ ನಿರ್ದೇಶಕ ಬಸವನಗೌಡ, ಪಿ. ರಾಜಪ್ಪ, ಆಂಜನೇಯ, ಪ್ರಭಣ್ಣ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *