ಕಾಯಕ ಶರಣರು ಲಿಂಗಾಯತ ಧರ್ಮವನ್ನು ಬಾನೆತ್ತರಕ್ಕೆ ಕೊಂಡೊಯ್ದರು : ತೋಂಟದ ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

೧೨ನೆಯ ಶತಮಾನದ ಶರಣರು ಕಾಯಕ-ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ್ದಾರೆ. ಕಾಯಕದಿಂದ ಸಮೃದ್ಧಿ, ದಾಸೋಹದಿಂದ ಸಂತೃಪ್ತಿ ಉಂಟಾಗುತ್ತದೆ. ಸತ್ಯಶುದ್ಧ ಕಾಯಕ ನಮ್ಮ ಸಂಸ್ಕೃತಿ ಆಗಬೇಕು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೯೬ನೆಯ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಶರಣರು ಹಾಕಿಕೊಟ್ಟ ಕಾಯಕ, ದಾಸೋಹದಿಂದ ಬಡತನ ಮತ್ತು ಹಸಿವುಮುಕ್ತ ಕಲ್ಯಾಣರಾಜ್ಯವನ್ನು ಕಟ್ಟಲು ಸಾಧ್ಯವಿದೆ. ಶರಣರು ನಡೆದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದರೆ ನಾವು ಕಲ್ಯಾಣ ರಾಜ್ಯದ ಪ್ರತಿನಿಧಿಗಳಾಗಲು ಸಾಧ್ಯವಿದೆ ಎಂದರು.

೧೨ನೇ ಶತಮಾನದಲ್ಲಿದ್ದ ಕಾಯಕ ಶರಣರಾದ ಹಡಪದ ರೇಚಣ್ಣ, ಕ್ಷೌರಿಕ ರೇಮಯ್ಯ, ಕನ್ನಡಿ ಕಾಯಕದ ಆಮುಗಿ ದೇವಯ್ಯ, ಓಲೆಯ ಶಾಂತಯ್ಯ, ತುರುಗಾಯಿ ರಾಮಣ್ಣ, ಗ್ರಾಮ ರಕ್ಷಣೆಗೆ ಇದ್ದ ತಳವಾರ ಕಾಮಿದೇವಯ್ಯ ಮೊದಲಾದವರು ತಮ್ಮ ಕಾಯಕವನ್ನು ಮಾಡುವುದರ ಜೊತೆ ಜೊತೆಗೆನೇ ವಚನ ರಚನೆಗಳನ್ನು ಮಾಡಿ ಕನ್ನಡ ವಚನ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ಭಾನೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದರು.

ಕಾಯಕ ಸಂಸ್ಕೃತಿಯ ಬಗ್ಗೆ ಡಾ. ಆರ್.ಎಂ. ಕಲ್ಲನಗೌಡರ ಮಾತನಾಡಿ, ೧೨ನೆಯ ಶತಮಾನದಲ್ಲಿ ಶರಣರು ಕೇವಲ ತತ್ವ ಸಿದ್ಧಾಂತಗಳನ್ನು ಬೋಧಿಸಲಿಲ್ಲ. ವಚನಗಳನ್ನು ರಚನೆ ಮಾಡುವುದರೊಂದಿಗೆ ತಮ್ಮ ವಚನಗಳ ಆಶಯದಂತೆ ನಡೆದು ತೋರಿಸಿದರು. ಕೆಲಸವನ್ನು ಕಾಯಕದ ಎತ್ತರಕ್ಕೆ ಏರಿಸಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶರಣರ ವಚನಗಳನ್ನು ಕೃಷ್ಣಪ್ರಿಯ ಬದಿ ಮತ್ತು ತನುಶ್ರೀ ಬದಿ ಸಹೋದರಿಯರು ಸುಂದರವಾಗಿ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಧರ್ಮಗ್ರಂಥ ಪಠಣವನ್ನು ಚಾರ್ವಿ ರವಿಕುಮಾರ, ವಚನ ಚಿಂತನವನ್ನು ದೀಕ್ಷಾ ಎಸ್. ಲಮಾಣಿ ಮಾಡಿದರು. ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಐಟಿಐ ಕಾಲೇಜಿನ ಸಿಬ್ಬಂದಿಗಳು ವಹಿಸಿಕೊಂಡಿದ್ದರು.

ಪ್ರಾರಂಭದಲ್ಲಿ ಶ್ರೀಮಠದ ಪರಮಭಕ್ತರು ಮತ್ತು ಬಸವಾನಿಯಾಯಿಗಳು ಆಗಿದ್ದ ನಿವೃತ್ತ ಶಿಕ್ಷಕರಾದ ಶೇಖರಪ್ಪ ನರೇಗಲ್ಲ ಅವರು ಲಿಂಗೈಕ್ಯರಾಗಿದ್ದ ನಿಮಿತ್ತ ಒಂದು ನಿಮಿಷ ಮೌನಾಚರಣೆಯನ್ನು ಮಾಡಿ ಸಂತಾಪ ಸೂಚಿಸಲಾಯಿತು.

ಶಿವಾನುಭವದಲ್ಲಿ ನೆರೆದ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಆಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ದರಾಮೇಶ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಎಸ್. ಅಂಗಡಿ ಹಾಗೂ ಖ್ಯಾತ ಸಂಗೀತ ಕಲಾವಿದರಾದ ಪ್ರೊ. ಪಾಠಕ ದಂಪತಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *