‘ನಮ್ಮೂರಲ್ಲಿ ಸಮಾನತೆ ಬರಲು ಬಸವತತ್ವವೇ ಕಾರಣ’
ಬೆಳಗಾವಿ
ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ರೈತ ದಂಪತಿಗಳಾದ ಲಕ್ಷ್ಮಿ ಮತ್ತು ಧರೆಪ್ಪ ಕೆಂಪವಾಡ ಅವರ ಮಗ ಬಸವರಾಜ ಧರೆಪ್ಪ ಕೆಂಪವಾಡ ಯುಪಿಎಸ್ಸಿ ನಡೆಸುವ ನಡೆಸಿದ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದು, ಇಡೀ ರಾಜ್ಯಕ್ಕೆ, ಬೆಳಗಾವಿ ಜಿಲ್ಲೆಗೆ ಬಸವರಾಜ ಕೀರ್ತಿ ತಂದಿದ್ದಾರೆ.
ಒಬ್ಬ ಸಾಮಾನ್ಯ ರೈತನ ಮಗನಾಗಿ, ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಸಾಧನೆ ಮಾಡಿರುವುದು ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದೆ.
ಬಸವರಾಜರ ಸಾಧನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿತು. ಗ್ರಾಮಸ್ಥರು ಹಾಗೂ ಸಂಬಂಧಿಕರು ಬಸವರಾಜ ಅವರ ಮನೆಗೆ ಧಾವಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸವದಿ, ಅಥಣಿ, ಶಿರಸಿಯಲ್ಲಿ ಓದಿದ ಬಸವರಾಜ ಯಾವುದೇ ಕೋಚಿಂಗ್ ಸೆಂಟರ್‌ಗಳ ನೆರವಿಲ್ಲದೆ, ಸ್ವಂತ ಪರಿಶ್ರಮದಿಂದ ಎರಡನೇ ಪ್ರಯತ್ನದಲ್ಲೇ ಇಡೀ ದೇಶಕ್ಕೆ ಮೊದಲು ಬಂದರು.
ಬಸವರಾಜ ಅವರ ಅದ್ಭುತ ಸಾಧನೆಗಾಗಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಬಸವರಾಜ ರೊಟ್ಟಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಅವರಿಂದ ಸನ್ಮಾನ
ಬಸವ ಮೀಡಿಯಾದರವೀಂದ್ರ ಹೊನವಾಡ ಅವರ ಜೊತೆ ಸಂವಾದದಲ್ಲಿ ಬಸವರಾಜ ಧರೆಪ್ಪ ಕೆಂಪವಾಡ
ನೀವು ಎಲ್ಲೆಲ್ಲಿ ಓದಿದ್ದು…
ನನ್ನ ಮೊದಲು ಓದು ಸವದಿಯ ಸಂಗನಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ. ನಂತರ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಓದಿದೆ.
ಜಮಖಂಡಿಯ ಜ್ಞಾನಗಂಗೋತ್ರಿ ಕಾಲೇಜಲ್ಲಿ ಪಿಯುಸಿ ಮುಗಿಸಿ, ನಾಲ್ಕು ವರ್ಷದ ಪದವಿ ಬಿ.ಎಸ್.ಸಿ. ಫಾರೆಸ್ಟ್ರಿಯನ್ನು ಕವಿವಿ ಮಹಾವಿದ್ಯಾಲಯ, ಶಿರಸಿ ಕಾಲೇಜಲ್ಲಿ ಓದಿದೆ.
ಭಾರತೀಯ ಅರಣ್ಯ ಸೇವೆಯನ್ನೇ (ಐಎಫ್ಎಸ್) ಆಯ್ಕೆ ಮಾಡಿಕೊಂಡಿದ್ದೇಕೆ?
ಮೊದಲಿನಿಂದಲೂ ಗಿಡ-ಮರ, ಪ್ರಾಣಿ-ಪಕ್ಷಿಗಳು, ಗುಡ್ಡ-ಬೆಟ್ಟ, ಕಾಡು, ಪ್ರಕೃತಿಗಳ ಬಗ್ಗೆ ಆಸಕ್ತಿ, ಕುತೂಹಲ ಇತ್ತು. ಹಾಗಾಗಿ ಬೇಕೆಂದೇ ಬಿಎಸ್ಸಿ ಫಾರೆಸ್ಟ್ರಿ ಮಾಡಿದೆ. ಮುಂದೆ ಐಎಫ್ಎಸ್ ಮಾಡಬೇಕೆಂಬ ತೀವ್ರ ಆಸಕ್ತಿ ಹುಟ್ಟಿತು.
ಎಷ್ಟು ವರ್ಷ ತಯಾರಿ ನಡೆಯಿತು, ದಿನಾಲು ಹೇಗೆ ಓದುತ್ತಾ ಇದ್ರಿ?
ನಂದು 2023ರಲ್ಲಿ ಪದವಿ ಮುಗೀತು. 2024ರಲ್ಲಿ ಐಎಫ್ಎಸ್ ಸಿದ್ಧತೆ ಶುರುಮಾಡಿದೆ, ಗುರಿ ಮುಟ್ಟಲು ಎರಡು ವರ್ಷ ತಗೊಂಡೆ. ದಿನಾಲು ನಿರಂತರವಾಗಿ 10ರಿಂದ 12 ತಾಸು ಓದ್ತಾ ಇದ್ದೆ. ರೂಂ ಬಿಟ್ಟು ಎಲ್ಲೂ ಹೊರಗಡೆ ಹೋಗುತ್ತಲೇ ಇರಲಿಲ್ಲ. ಊಟಕ್ಕೆ ಮಾತ್ರ ಹೋಗಿ ಬಂದುಬಿಡುತ್ತಿದ್ದೆ.
ಬೆಂಗಳೂರಿನ ವಿಜಯನಗರದಲ್ಲಿ ನನ್ನ ಓದಿಗೆ ಬೇಕಾದ ಗ್ರಂಥಾಲಯವಿತ್ತು. ಗ್ರಂಥಾಲಯಗಳಲ್ಲಿ ಪುಸ್ತಕಗಳ ಸೌಲಭ್ಯ, ಓದುವ ಉತ್ತಮ ವಾತಾವರಣ ಇತ್ತು.
ಎಷ್ಟು ಬಾರಿ ಈ ಪರೀಕ್ಷೆಗೆ ಪ್ರಯತ್ನಪಟ್ಟಿರಿ?
ಎರಡನೇ ಅವಕಾಶದಲ್ಲಿ ಪಾಸಾದೆ.
ದೇಶಕ್ಕೆ ಪ್ರಥಮ ಬರ್ತೀನಿ ಅಂತ ಅನ್ಕೊಂಡಿದ್ರಾ?
ಹಂಗೆನೂ ಅಂದುಕೊಂಡಿರಲಿಲ್ಲ. ಒಟ್ಟ ಕಾಯಕವೇ ಕೈಲಾಸ ಅನ್ನೋ ರೀತಿಯೊಳಗೆ ಓದಿ ಪರೀಕ್ಷೆ ಬರೆದು ಬಂದಿದ್ದೆ.
ದೇಶಕ್ಕೇನೆ ತಾವು ಪ್ರಥಮ ಅನ್ನೋ ಫಲಿತಾಂಶ ಬಂದ ಮೇಲೆ ಏನನಿಸಿತು?, ನಿಮ್ಮ ತಂದೆ-ತಾಯಿ ಪ್ರತಿಕ್ರಿಯೆ ಏನಂತ ಬಂತು?
ನನಗ ಖುಷಿ ಅನಿಸಿತು. ಅರಣ್ಯದ ಮೇಲೆ ಕಾಳಜಿ, ಆಸಕ್ತಿ ಹೊಂದಿದ ನನಗೆ ಅದನ್ನು ಉಳಿಸಿ, ಬೆಳೆಸುವ ಸೇವೆಯನ್ನೇ ಮಾಡಲಿಕ್ಕೆ ಒದಗಿ ಬಂದ ಅವಕಾಶವೆಂದು ಭಾವಿಸಿ, ನಾನು ಸೇವೆಗೆ ಅಣಿಯಾಗುವೆ.
ತಂದೆ ತಾಯಿಗಳಿಗೆ ಫಲಿತಾಂಶ ಗೊತ್ತಾದಾಗ ಅವರು ಹೊಲದಲ್ಲಿದ್ದರು. ಬಹಳ ಸಂತೋಷಪಟ್ಟರು. ಇನ್ನೆಂಟು ದಿನಗಳಲ್ಲಿ ಐಎಎಸ್ ಪರೀಕ್ಷೆಯಿದೆ. ಅದಕ್ಕೂ ಓದಿಕೊಂಡಿರುವೆ, ಅದನ್ನೂ ಬರೆಯುತ್ತೇನೆ.
ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಸಲಹೆ ಏನು?
ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದವನು ನಾನು. ಸವದಿ ಅಂತಹ ಸಣ್ಣ ಗ್ರಾಮದಲ್ಲಿ ಇದ್ದುಕೊಂಡೇ ನಾನು ಈ ಸಾಧನೆ ಮಾಡಿರುವುದರಿಂದ ಎಲ್ಲರೂ ಮಾಡಬಹುದು. ಈಗ ಎಲ್ಲ ಕಡೆ ಒಳ್ಳೆಯ ಶಿಕ್ಷಣ, ಶೈಕ್ಷಣಿಕ ಸೌಲಭ್ಯ ಸಿಗ್ತಾ ಇದೆ.
ಸರ್ಕಾರದ ಕಡೆಯಿಂದಲೂ ಸೌಲಭ್ಯ, ಪ್ರೋತ್ಸಾಹ ಲಭ್ಯ ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಂದೆ ತಾಯಿಗಳು ಇದನ್ನೆಲ್ಲ ಅರಿತುಕೊಂಡು ಮಕ್ಕಳಿಗೆ ಪ್ರೋತ್ಸಾಹಿಸಬೇಕು.
ಮಕ್ಕಳು ಕೂಡ ಸರಿಯಾದ ರೀತಿಯಲ್ಲಿ ಶ್ರಮಪಟ್ಟು ಓದಿದರೆ ನನಗಿಂತ ಹೆಚ್ಚಿನ ಸಾಧನೆ ಮಾಡಬಹುದು.

ಸವದಿ ವಿರಕ್ತಮಠ
ಬಸವಣ್ಣ, ಬಸವತತ್ವ ಇಂದಿನ ಸಮಾಜಕ್ಕೆ ಪ್ರಸ್ತುತವೇ?
ನಮ್ಮೂರಲ್ಲಿ ಚಿತ್ತರಗಿ-ಇಳಕಲ್ಲ ಮಹಾಂತಸ್ವಾಮಿಗಳ ವಿರಕ್ತಮಠವಿದೆ. ಅಲ್ಲಿ ಬಸವತ್ವದ ಕಾರ್ಯಕ್ರಮ ನಡೆಯುತ್ತವೆ. ನಮ್ಮೂರು ಪ್ರಸಿದ್ಧಿಗೆ ಬಂದದ್ದೇ ಬಸವತತ್ವಕ್ಕೆ. ಇದೀಗ ನಮ್ಮೂರು ಬಸವಣ್ಣನ ಹೆಸರಿನ ಬಸವರಾಜನಿಂದ ಮತ್ತೊಮ್ಮೆ ಸ್ವಲ್ಪ ಪ್ರಸಿದ್ಧಿಗೆ ಬಂದಂತಾಯಿತು.
ಈಗ ಎಲ್ಲ ಕಡೆ ನಡೆದಿರುವ ಭೇದಭಾವ ನೋಡಿದರೆ ಈಗ ಬಸವತತ್ವದ ಅವಶ್ಯಕತೆ ಇದೆ.
ನಮ್ಮೂರ ಮಠದಲ್ಲಿ ಯಾವಾಗಲೂ ಯಾವುದೇ ಸಾಮಾಜಿಕ ಜಾತಿ ಭೇದಭಾವ ಇಲ್ಲ. ಮಠದಲ್ಲಿ ಎಲ್ಲರೂ ಪ್ರವೇಶ ಮಾಡುತ್ತಾರೆ, ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈ ಸಮಾನತೆ ನಮ್ಮೂರಲ್ಲಿ ಇದೆ. ಈ ಸಮಾನತೆಯನ್ನು ನೋಡಿ ಎಲ್ಲ ಊರವರೂ ಕಲಿಯುವುದಿದೆ. ನಮ್ಮೂರಲ್ಲಿ ಸಮಾನತೆ ಬರಲು ಬಸವತತ್ವವೇ ಕಾರಣ ಎಂದು ಹೇಳ ಬಯಸುವೆ.
ಸಣ್ಣವನಿದ್ದಾಗ ಊರ ಮಠದಲ್ಲಿ ನಡೆಯುವ ಕಾರ್ಯಕ್ರಮ, ಉತ್ಸವಗಳಲ್ಲಿ ತಪ್ಪದೇ ಭಾಗಿಯಾದವನು ನಾನು. ಅವುಗಳೆಲ್ಲ ನನ್ನ ಮೇಲೆ ಖಂಡಿತ ಪ್ರಭಾವ ಬೀರಿವೆ.
ನನ್ನ ಮುಂದಿನ ಸೇವೆಯಲ್ಲಿ ಬಸವಣ್ಣನವರ ಕಾಯಕ, ದಾಸೋಹ ತತ್ವ ಅರಿತು, ಆಚರಿಸುವ ಪ್ರಯತ್ನ ಮಾಡುವೆ.
