ಚಿಟಗುಪ್ಪ :
ಬಸವಣ್ಣನವರ ವಚನ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆ, ಇಷ್ಟಲಿಂಗ ನಿಷ್ಠೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ತಾಲೂಕಿನ ರಾಂಪೂರ ಗ್ರಾಮದಲ್ಲಿ ಮಂಗಳವಾರ ಬಸವ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರೀಗಳು ಅಂತರಂಗದಲ್ಲಿ ಬಸವ ನಿಷ್ಠೆ ಗಟ್ಟಿಯಾಗಿ ಇರಬೇಕು. ಶತಶತಮಾನಗಳಿಂದ ಜ್ಞಾನದ ಬೆಳಕು ಚೆಲ್ಲಿದ ಕಾಯಕಯೋಗಿ ಬಸವಣ್ಣನವರ, ಕಾಯಕದ ಮಹತ್ವವನ್ನು ಅವರು ವಿಶ್ವಕ್ಕೆ ಸಾರಿ, ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಬಿತ್ತುವ ಮುಖಾಂತರ, ಸಮ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ.
ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಬಸವತತ್ವ ಪ್ರಚಾರ ಹೆಚ್ಚಾಗಿ ಆಗಬೇಕು.
ಸಮಾನತೆ ಸಾರಿದ ಭಾವೈಕ್ಯತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಇಂದು ರಾಂಪೂರ ಗ್ರಾಮದಲ್ಲಿ ಲೋಕಾರ್ಪಣೆ ಮಾಡಿರುವುದು ಬಹಳಷ್ಟು ಸಂತೋಷ ತಂದಿದೆ ಮತ್ತು ಸಮಾರಂಭ ಅರ್ಥಪೂರ್ಣವಾಗಿದೆ. ಬಸವಣ್ಣನವರ ಆದರ್ಶಗಳನ್ನು ಸರ್ವರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ನೇತೃತ್ವ ವಹಿಸಿದ್ದ ಖೇಳಗಿ ಶಿವಲಿಂಗೇಶ್ವರ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶಿವಲಿಂಗೇಶ್ವರ ಮಾಹಾಸ್ವಾಮಿಗಳು ಮಾತನಾಡಿ, ಜಾತಿ ಮತ ಧರ್ಮ ಬೇಧವಿಲ್ಲದೆ ಸರ್ವರೂ ಒಂದಾಗಿ ಬಸವೇಶ್ವರ ಮೂರ್ತಿ ಅನಾವರಣ ಮಾಡಿರುವುದು ಖುಷಿ ತಂದಿದೆ.
ಹೀಗೆಯೇ ಅಂದಿನ ೧೨ನೇ ಶತಮಾನದ ಕಾಲದಲ್ಲಿ ಬಸವಣ್ಣನವರು ಸಮಾನತೆಗಾಗಿ ದುಡಿದಿದ್ದರು. ಇಂದು ನಿಮ್ಮೂರಿನ ಗ್ರಾಮದಲ್ಲಿ ಸಮಾನತೆಯ ಸಮಾಜವನ್ನು ನೋಡಲು ತುಂಬಾ ಹೆಮ್ಮೆ ಎನಿಸುತ್ತದೆ.
ಈ ಊರು ಭಾವೈಕ್ಯತೆಯ ಸಂಕೇತವಾಗಿದೆ, ಸೌಹಾರ್ದತೆಯ ತವರೂರು ಆಗಿದೆ.
ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಸಾಗುವ ಧೀಮಂತ ವ್ಯಕ್ತಿತ್ವದ ವ್ಯಕ್ತಿಗಳೂ ಈ ಊರಿನಲ್ಲಿ ಇದ್ದದ್ದು ಒಳ್ಳೆಯ ಬೆಳವಣಿಗೆ. ಬಸವಣ್ಣನವರ ಭಕ್ತಿ- ಕಾಯಕ ಮತ್ತು ದಾಸೋಹ ಸೇವೆ ಜಗತ್ತಿಗೆ ಮಾದರಿ. ಅಂತೆಯೇ ಎಲ್ಲರೂ ಬಸವತತ್ವ ದಾರಿಯಲ್ಲಿ ಸಾಗುವ ಕೆಲಸ ಮಾಡಬೇಕು. ಅಂದಾಗಲೇ ಮಾತ್ರ ಮೂರ್ತಿ ಅನಾವರಣ ಮಾಡಿದಕ್ಕೂ ಸಾರ್ಥಕವಾಗಲಿದೆ.
ದಯವಿಟ್ಟು ಯುವಕರು ದುಶ್ಚಟಗಳಿಂದ ದೂರವಿದ್ದು, ಆದರ್ಶರಾಗಿ ಬಾಳಬೇಕು. ಬಸವಣ್ಣನವರ ಆಶೀರ್ವಾದ, ಅನುಗ್ರಹ ಈ ಊರಿನ ಗ್ರಾಮಸ್ಥರ ಮೇಲೆ ಸದಾ ಕಾಲ ಇರಲೆಂದರು.
ಸಾನಿಧ್ಯ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನ ಮುಖ್ಯಸ್ಥರು, ಪ್ರವಚನಕಾರರಾದ ಪೂಜ್ಯ ಗಂಗಾಂಬಿಕೆ ಪಾಟೀಲ ತಾಯಿಯವರು ಮಾತನಾಡಿ, ಬಸವಾದಿ ಶರಣರು ಮೇಲು ಕೀಳು ಎಂಬ ಬೇಧಭಾವನೆ ತೆಗೆದು ಹಾಕಿದ್ದಾರೆ. ಸಮಾನತೆ ಸಮಭಾವ ತಂದಿದ್ದಾರೆ.
ಬಸವತತ್ವ ಸಿದ್ಧಾಂತಗಳನ್ನು ಚಾಚುತಪ್ಪದೇ ಪಾಲಿಸಿದರೆ ದೇಶ ಅಭಿವೃದ್ಧಿ ಪಥದತ್ತ ಖಂಡಿತವಾಗಿಯೂ ಸಾಗಲಿದೆ.
ಸಮಯ ವ್ಯರ್ಥಮಾಡದೆ ದಿನನಿತ್ಯವೂ ಕಾಯಕದಲ್ಲಿ ತೊಡಗಬೇಕು. ಊರಿನ ಅಭಿವೃದ್ಧಿಗಾಗಿ ಸದಾ ದುಡಿಯಬೇಕು. ಸತ್ಯದ ದಾರಿಯಲ್ಲಿ ಸಾಗಬೇಕು. ಅಂತರಂಗ ಬಹಿರಂಗ ಶುದ್ಧಿಕರಣದಿಂದ ಧರ್ಮದ ಮಾರ್ಗದಲ್ಲಿ ಸಂಚರಿಸಬೇಕು.
ಬಸವಣ್ಣನವರ ತತ್ವಗಳು ಸಮಾಜದಲ್ಲಿ ಸಮಾನತೆ ಸಾರುತ್ತವೆ. ನಿತ್ಯ ಜೀವನದಲ್ಲಿ ಅವುಗಳನ್ನು ಅನುಸರಿಸಿದರೆ 12ನೇ ಶತಮಾನದ ಶರಣ ಪರಂಪರೆ ಮರುಕಳಿಸುತ್ತದೆ ಎಂದರು.
ಬಸವತತ್ವ ಪ್ರಚಾರಕರಾದ ಪೂಜ್ಯ ಇಂದುಮತಿ ಗಾರಂಪಳ್ಳಿ ತಾಯಿಯವರು ಮಾತನಾಡಿ, ಹಿರಿಯರ ಮಾರ್ಗದರ್ಶನ, ಯುವಕರ ಅದಮ್ಯ ಶಕ್ತಿ, ಮಾತೆಯರ ಅಚಲ ಸಹಕಾರದಿಂದ ಬಸವೇಶ್ವರ ಮೂರ್ತಿ ಅನಾವರಣವಾಗಲು ಸಾಧ್ಯವಾಗಿದೆ. ಈ ಮೂರ್ತಿ ಅನಾವರಣ ಸಮಾರಂಭ ಕೇವಲ ಒಂದು ದಿನದ ಸಂಭ್ರಮಕ್ಕೆ ಖಂಡಿತವಾಗಿಯೂ ಸೀಮಿತವಾಗಿರಬಾರದು. ಪ್ರತಿನಿತ್ಯ ಬಸವತತ್ವದ ಸಂಭ್ರಮವಾಗಬೇಕು. ಬಸವ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕಬೇಕೆಂದು ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಡಾ. ಚನ್ನಬಸವ ಪಟ್ಟದ್ದೇವರ ಗುರುಕುಲ ಶಾಲೆ ಕುಂದಗೋಳ ಮಕ್ಕಳಿಂದ ವಚನ ನೃತ್ಯ ಪ್ರದರ್ಶನಗೊಂಡಿತು.
ಸಮಾರಂಭದಲ್ಲಿ ಸುರೇಶ ಮಾಶೆಟ್ಟಿ, ರೇವಪ್ಪಾ ಪಾಟೀಲ, ಮನೋಜಕುಮಾರ ಕಾಂಬಳೆ, ರಾಮಶೆಟ್ಟಿ ಮೂಲಗೆ, ದಯಾನಂದ ಪಾಟೀಲ, ರಾಮಶೆಟ್ಟಿ ಪಾಟೀಲ, ಜಗದೀಶ ಮೂಲಗೆ, ರಾಜಶೇಖರ ದೇವಣಿ, ರಮೇಶ ಮಾಶೆಟ್ಟಿ, ರಾಜಕುಮಾರ ನೆಲ್ವಾರೆ, ಅಮರ ಜೋಳಗೆಪ್ಪಾ, ಕಾಶಿನಾಥ ಗಿರಿಗಿರಿ, ಗಣಪತಿ ಗಿರಿಗಿರಿ, ಸೋಮು ಪಾಟೀಲ, ದಿಲೀಪಕುಮಾರ ಹೂಗಾರ, ರೇವಣ್ಣಪ್ಪಾ ಗಿರಿಗಿರಿ, ಪ್ರಕಾಶ ಮಾಶೆಟ್ಟಿ, ಮಾಹಾಂತೇಶ ಮೂಲೆಗೆ, ವೀರಶೆಟ್ಟಿ ಹಡಪದ, ರಮೇಶ ಸಲಗರ, ಕರಬಸಪ್ಪ ಕಟಗಿ, ಬಂಡೆಪ್ಪಾ ರೇಖಳಗಿ, ಬೀಮಶಾ ಹಜ್ಜರಗಿ ಸೇರಿದಂತೆ ಬಸವೇಶ್ವರ ಮೂರ್ತಿ ಅನಾವರಣ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮಾತೆಯರು ಬಸವಾಭಿಮಾನಿಗಳು, ಮಕ್ಕಳು , ಗ್ರಾಮಸ್ಥರು ಉಪಸ್ಥಿತರಿದ್ದರು. ಜಗದೀಶ ಮೂಲಗೆ ನಿರೂಪಿಸಿ, ವಂದಿಸಿದರು.

