ಬೆಳಗಾವಿ :
ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಮಹಾಂತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ಮಹಾಶರಣೆ ಅಕ್ಕಮಹಾದೇವಿ’ ಕುರಿತು ಮಾಸಿಕ ಅನುಭಾವ ಗೋಷ್ಠಿ ಆಯೋಜಿಸಲಾಗಿತ್ತು.
ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಪ್ರಭದೇವರ ವಚನ ಉಲ್ಲೇಖಿಸುತ್ತ ಮಹಾಶರಣೆ ಅಕ್ಕಮಹಾದೇವಿಯವರ ವ್ಯಕ್ತಿತ್ವವನ್ನು ವಿವರಿಸಿದರು.

2017ರ ಲಿಂಗಾಯತ ಧರ್ಮದ ಹೋರಾಟದಲ್ಲಿ ಬೆಳಗಾವಿ ಬಾರ್ ಅಸೋಸಿಯೇಶನದ ಪದಾಧಿಕಾರಿಗಳು ಹಾಗೂ ನ್ಯಾಯವಾದಿಗಳು ಸಕ್ರೀಯವಾಗಿ ಭಾಗವಹಿಸಿದ್ದನ್ನು ಸ್ಮರಿಸುತ್ತ, ಧರ್ಮದ ಹೋರಾಟ ನಿರಂತರವಾಗಿ ಇರುತ್ತದೆ. ತಾವುಗಳೆಲ್ಲ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಬೇಕೆಂದು ನ್ಯಾಯವಾದಿಗಳಿಗೆ ಕರೆ ನೀಡಿದರು.
ಈಗ ಬಹಳಷ್ಟು ಯುವಕ ಯುವತಿಯರು ಬಸವಣ್ಣನವರ ಆಶಯದಂತೆ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಂಡು ಬಸವತತ್ವದ ಮಹತ್ವವನ್ನು ತಿಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಡಾ. ಗೀತಾ ದೇಯಣ್ಣವರ 12ನೇಯ ಶತಮಾನದ ಬಸವ ಕಲ್ಯಾಣದ ವಚನಕ್ರಾಂತಿ ಮಾನವ ಕುಲದ ಸುವರ್ಣ ಯುಗ. ಅದು ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿಯೇ ಪ್ರಪ್ರಥಮವಾದದ್ದು. ಒಬ್ಬ ಮಹಿಳೆ ತನುಮನವನ್ನು ಗೆದ್ದು ವೀರವಿರಾಗಿಣಿಯಾದರು. ಸ್ತ್ರೀಕುಲದ ತಿಲಕ, ಮನುಕುಲದ ಮಾಣಿಕ್ಯ, ವೈರಾಗ್ಯ ಶಿವಧ್ಯಾನಿ ಶಿವಶರಣೆ ಅಕ್ಕಮಹಾದೇವಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಸವರಾಜ ರೊಟ್ಟಿ ಅವರು, ಬಸವತತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕು ಹಾಗೂ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಗಬೇಕು ಎಂಬ ಉದ್ದೇಶಗಳೊಂದಿಗೆ ಜಾಗತಿಕ ಲಿಂಗಾಯತ ಮಹಾಸಭಾ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಇತ್ತೀಚಿಗೆ ಜರುಗಿದ ಬಾರ್ ಅಸೋಶಿಯೇಶನ್ ಚುನಾವಣೆಯಲ್ಲಿ ಆಯ್ಕೆ ಆದ ಹತ್ತು ಜನ ಸಮಾಜದ ನ್ಯಾಯವಾದಿಗಳನ್ನು ಜಾಗತಿಕ ಲಿಂಗಾಯತ ಮಹಾಸಭಾದಿಂದ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ನ್ಯಾಯವಾದಿ ಸಚಿನ ಶಿವನ್ನವರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಶರಣೆ ವಾಗ್ದೇವಿ ತಾಯಿ ಹಾಗೂ ಶರಣೆ ಕುಮುದಿನಿ ತಾಯಿಯವರ ಪ್ರೇರಣೆಯಿಂದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಜಯಂತಿ ನಿಮಿತ್ತ ಬೆಳಗಾವಿಯ ಗುರು ಬಸವ ಬಳಗದವರು ಜೂನ್ 28ರಂದು ನಡೆಸುವ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಪ್ರಾರಂಭದಲ್ಲಿ ಪ್ರೀತಿ ಗುರಯ್ಯ ಹಿರೇಮಠ ಸ್ವಾಗತಿಸಿದರು. ಪ್ರಸಾದ ದಾಸೋಹಿಗಳಾದ ಸರೋಜಿನಿ ಗಂಗಪ್ಪ ನಡವಿನಹಳ್ಳಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನೈನಾ ಗಿರಿಗೌಡರ ಕಾರ್ಯಕ್ರಮ ನಿರೂಪಿಸಿದರು. ಸಿ.ಎಂ ಬೂದಿಹಾಳ ಪರಿಚಯಿಸಿದರು. ನೇತ್ರಾವತಿ ಕೆಂಪಣ್ಣ ರಾಮಾಪುರಿ ಶರಣು ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ ಜಿ ಸಿದ್ನಾಳ, ಮುರಿಗೆಪ್ಪ ಬಾಳಿ, ಕೆಂಪಣ್ಣ ರಾಮಾಪುರಿ, ಎಫ್. ಆರ್. ಪಾಟೀಲ, ಈರಣ್ಣ ಚಿನಗುಡಿ, ಸುರೇಶ ನರಗುಂದ, ಅಡಿವೆಪ್ಪ ಇಟಗಿ, ಪ್ರವೀಣಕುಮಾರ ಚಿಕಲಿ, ಬಸವರಾಜ ಸುಲ್ತಾನಪುರಿ, ರತ್ನಾ ಬೆಣಚನಮರಡಿ, ಶೋಭಾ ಶಿವಳ್ಳಿ, ಅನುಷಾ ಬಶೆಟ್ಟಿ, ಭಾಗ್ಯಶ್ರೀ ಬೆಣಚನಮರಡಿ, ಅನಿತಾ ಚಟ್ಟೇರ ಹಾಗೂ ನಗರದ ಬೇರೆ ಬೇರೆ ಭಾಗದಿಂದ ಬಂದಿದ್ದ ನೂರಾರು ಬಸವಭಕ್ತರು ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.
