‘ಬಸವಣ್ಣನವರ ಸಂದೇಶ ತಲುಪಿಸುತ್ತಿರುವ ಶಿವಸಂಚಾರ ಕಲಾತಂಡ’

ರಂಗಶಾಲಾ ನಾಟಕೋತ್ಸವ ಉದ್ಘಾಟನೆ

ಸಾಣೇಹಳ್ಳಿ :

“ರಂಗಭೂಮಿ ಅತ್ಯಂತ ಫಲವತ್ತಾದ ಕ್ಷೇತ್ರವಾಗಿದ್ದು, ವ್ಯಕ್ತಿಯಲ್ಲಿ ಚೈತನ್ಯ ತುಂಬುವ, ಸುಸಂಸ್ಕೃತ ಸಮಾಜ ನಿರ್ಮಿಸುವ ಶಕ್ತಿ ಅದಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆಗೆ ಬಾಲ್ಯದಿಂದಲೇ ರಂಗಭೂಮಿಯ ಸ್ಪರ್ಶವಾಗಬೇಕಾಗಿದ್ದು, ಪ್ರತಿಯೊಂದು ಶಾಲೆಯಲ್ಲೂ ರಂಗಶಿಕ್ಷಕರ ನೇಮಕಾತಿ ಅತ್ಯಂತ ಅನಿವಾರ್ಯವಾಗಿದೆ,” ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಹುಣಸೇಮರದ ಬಯಲು ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ, ಮೇ 17 ರಿಂದ ಜೂನ್ 5ರವರೆಗೆ ನಡೆಯಲಿರುವ ಯುವಜನ ಶೈಕ್ಷಣಿಕ ತರಬೇತಿ ಶಿಬಿರ ಹಾಗೂ ರಂಗಶಾಲಾ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಜಾಗತಿಕ ಮಟ್ಟದ ನಾಯಕರಾದ ಅಮೆರಿಕದ ಅಧ್ಯಕ್ಷರಾಗಲಿ ಅಥವಾ ಇರಾನ್, ಇರಾಕ್, ಇಸ್ರೇಲ್ ಮುಂತಾದ ದೇಶಗಳ ನಾಯಕರಿಗಾಗಲಿ ರಂಗಭೂಮಿ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಪರಿಚಯ ಅವರಿಗಿದ್ದಿದ್ದರೆ ಇಂದು ಅಲ್ಲಿ ರಕ್ತಪಾತವಾಗುತ್ತಿರಲಿಲ್ಲ.

ರಂಗಭೂಮಿ ಕೇವಲ ದೈಹಿಕ ಕಸರತ್ತಲ್ಲ; ಅದು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಭಾಷೆ, ಭಾವನೆ ಹಾಗೂ ನೈತಿಕತೆಯನ್ನು ಕಲಿಸುತ್ತದೆ ಎಂಬುದಕ್ಕೆ ನಟ ಡಾ. ರಾಜಕುಮಾರ ಅವರ ಭಾಷಾ ಬಳಕೆಯೇ ಅತ್ಯುತ್ತಮ ಉದಾಹರಣೆ ಎಂದರು.

ಶಾಲೆಗಳಿಗೆ ಕನಿಷ್ಠ 100 ಶಿಕ್ಷಕರನ್ನು ನೇಮಿಸಿಕೊಂಡರೂ ಅದರಲ್ಲಿ 10 ಜನ ರಂಗಶಿಕ್ಷಣ ಪಡೆದ ಅನುಭವಿಗಳಿರಬೇಕು ಎಂದು ಸರ್ಕಾರದ ಮೇಲೆ ಪತ್ರದ ಮೂಲಕ ಒತ್ತಾಯಿಸಲಾಗಿದೆ. ರಂಗಭೂಮಿಯ ಚಟುವಟಿಕೆಗೆ ನೀಡುವ ಅನುದಾನವನ್ನು ಕಡಿತಗೊಳಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಗೆ ಬೇಸರ ವ್ಯಕ್ತಪಡಿಸಿದರು.

ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಚಿಂತಕ ಎಸ್.ಜಿ. ಸಿದ್ಧರಾಮಯ್ಯ ಬಸವಣ್ಣನವರ ‘ಇವನಾರವ ಇವನಾರವನೆನ್ನದೆ ಇವ ನಮ್ಮವ ಎಂದೆನಿಸಯ್ಯ’ಎಂಬ ತತ್ವವನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಂಡು, ನಾಸ್ತಿಕರಾಗಿದ್ದ ಸಿ.ಜಿ.ಕೆ. ಅವರಂತಹ ಕಲಾವಿದರಿಗೂ ಈ ಧಾರ್ಮಿಕ ಕ್ಷೇತ್ರದಲ್ಲಿ ಕಲಾಕ್ಷೇತ್ರವನ್ನು ಬೆಳೆಸಲು ಪ್ರೋತ್ಸಾಹ ನೀಡಿದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳ ವಿಶಾಲ ಮನೋಭಾವನೆ ಅನನ್ಯವಾದುದು.

ಅಲ್ಲಮಪ್ರಭುಗಳ ವಚನವನ್ನು ಸ್ಮರಿಸುತ್ತಾ, ಚರಿತ್ರೆಯನ್ನು ಒಳಗಣ್ಣಿನ ದರ್ಶನದ ಮೂಲಕ ಅರಿವಿಗೆ ತಂದುಕೊಂಡಾಗ ಮಾತ್ರ ವರ್ತಮಾನದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿವೇಕವನ್ನು ಬೆಳೆಸಿಕೊಳ್ಳಲು ಸಾಧ್ಯ. ಸಾಂಸ್ಕೃತಿಕ ಮನಸ್ಸಿಲ್ಲದ ನಾಯಕರು ಜಗತ್ತಿನ ವಿನಾಶಕ್ಕೆ ಕಾರಣರಾಗುತ್ತಾರೆ.

ಕಲೆ ಕಲೆಗಾಗಿ ಅಲ್ಲ, ಕಲೆ ಬದುಕಿಗಾಗಿ ಮತ್ತು ನಿಸರ್ಗ ಧರ್ಮಕ್ಕಾಗಿ ಎಂಬ ತತ್ವದಡಿ ಸಾಮಾಜಿಕ ಜವಾಬ್ದಾರಿಯೊಂದಿಗೆ ರಂಗಭೂಮಿಯನ್ನು ಅಧ್ಯಯನ ಮಾಡಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕ ಟಿ.ಹೆಚ್.  ಲವಕುಮಾರ ಮಾತಮಾಡಿ; “ಜಗತ್ತಿನ ಧಾರ್ಮಿಕ ಇತಿಹಾಸವನ್ನು ಗಮನಿಸಿದಾಗ ಕಲೆ, ಸಾಹಿತ್ಯ ಮತ್ತು ಧರ್ಮದ ನಡುವೆ ನಿರಂತರ ಸಂಘರ್ಷಗಳು ನಡೆದಿವೆ. ರಂಗಭೂಮಿಯನ್ನು ಅನುಮಾನದಿಂದ ನೋಡುವ ಧಾರ್ಮಿಕ ಪರಂಪರೆಗಳ ನಡುವೆ, ಸಾಣೇಹಳ್ಳಿಯ ಈ ಜಾಗವು ಧರ್ಮ ಮತ್ತು ಕಲೆಗಳನ್ನು ಮೇಳೈಸುವ ಮೂಲಕ ಇಡೀ ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ವಿಶೇಷವಾದ ಸ್ಥಾನ ಪಡೆದುಕೊಂಡಿದೆ.

“ಇಂದು ಬಸವಣ್ಣನವರನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸಿ, ಅವರನ್ನು ದೇವರನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಬಸವಣ್ಣನವರನ್ನು ನಮ್ಮೆದುರು ಒಬ್ಬ ನಟನಾಗಿ, ಹಾಡುಗಾರನಾಗಿ, ಬಹುರೂಪಿಯಾಗಿ ಕಲ್ಪಿಸಿಕೊಂಡು ನಮ್ಮ ಹೃದಯಕ್ಕಿಳಿಸುವುದು ಒಂದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಸಾಣೇಹಳ್ಳಿಯ ಶಿವಸಂಚಾರ ಕಲಾತಂಡ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಬಸವಣ್ಣನವರ ಆಚರಣಾತ್ಮಕ ಸಂದೇಶವನ್ನು ಯಶಸ್ವಿಯಾಗಿ ತಲುಪಿಸುತ್ತಿದೆ,” ಎಂದರು.

“ರಂಗ ಶಿಕ್ಷಣ ಎಂದರೆ ಕೇವಲ ವೇದಿಕೆಯ ತಂತ್ರಗಳನ್ನು, ಸಂಭಾಷಣೆಯನ್ನು, ಅಭಿನಯವನ್ನು ಕಲಿಯುವುದಷ್ಟೇ ಅಲ್ಲ; ಅದರ ಮೂಲಕ ದೊಡ್ಡ ಆಶಯಗಳನ್ನು ಮೈಗೂಡಿಸಿಕೊಳ್ಳುವುದಾಗಿದೆ. ‘ಥಿಯೇಟರ್ ಫಾರ್ ಚೇಂಜ್’ ಎಂಬುದು ಕೇವಲ ಶಾಲೆಗಳಿಗಷ್ಟೇ ಸೀಮಿತವಲ್ಲ. ನಮ್ಮ ಮನೆಗಳು, ನಾವು ಓಡಾಡುವ ದಾರಿಗಳು, ಬಸ್ಸುಗಳು ಎಲ್ಲವೂ ಶೈಕ್ಷಣಿಕ ಕೇಂದ್ರಗಳೇ ಆಗಿವೆ. ರಂಗಭೂಮಿಯು ಆಧ್ಯಾತ್ಮವನ್ನು ಭೂಮಿಗೆ ತಂದು, ಜನರ ಮನಸ್ಸಿನೊಂದಿಗೆ ಸಂವಾದ ನಡೆಸುವಂತೆ ಮಾಡುತ್ತದೆ,” ಎಂದರು.

ಮಠ ಎಂದ ತಕ್ಷಣ ನಮಗೆ ಸ್ಥಾವರದ ಕಲ್ಪನೆ ಬರುತ್ತದೆ. ಆದರೆ ಸಾಣೇಹಳ್ಳಿಯ ಮಠವು ಜಂಗಮ ಸ್ವರೂಪಿಯಾಗಿದೆ. ಧರ್ಮವನ್ನೇ ವಿಡಂಬಿಸುವ, ತಪ್ಪುಗಳನ್ನು ಪ್ರಶ್ನಿಸುವ ಮುಕ್ತ ವೇದಿಕೆಯನ್ನು ಇಲ್ಲಿನ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಕಲ್ಪಿಸಿಕೊಟ್ಟಿರುವುದು ಇಡೀ ಜಗತ್ತಿನ ಧಾರ್ಮಿಕ ಕೇಂದ್ರಗಳಲ್ಲೇ ಅಪರೂಪದ ಪ್ರಯೋಗವಾಗಿದೆ. ಆದ್ದರಿಂದಲೇ ಇದು ಪ್ರದರ್ಶನ ಶಾಲೆಯಾಗದೆ ‘ರಂಗ ಪ್ರಯೋಗ ಶಾಲೆ’ಯಾಗಿ ರೂಪುಗೊಂಡಿದೆ.

“ಯಾವ ಐಡಿಯಾಲಜಿಗಳಿಗೂ ಸಿಲುಕದೆ ಮುಕ್ತ ಮನಸ್ಸಿನಿಂದ ರಂಗಭೂಮಿಯ ಸಾಧ್ಯತೆಗಳನ್ನು ಕಲಿಯಿರಿ. ವಚನಕಾರರು ಹೇಳಿದಂತೆ ‘ಎನ್ನ ಕಾಲೇ ಕಂಬ, ದೇಹವೇ ದೇಗುಲ’. ಇಂದು ರಂಗಭೂಮಿಯ ಪ್ರಯೋಗಕ್ಕೆ ಮನುಷ್ಯನ ದೇಹವೇ ಪ್ರಧಾನ ಕೇಂದ್ರ. ಇಲ್ಲಿಂದ ಕಲಿತು ನಿಮ್ಮ ಊರುಗಳಿಗೆ ಮರಳಿದಾಗ, ಅಲ್ಲಿನ ಪ್ರತಿಯೊಂದು ಮರ, ಗಿಡ, ವ್ಯಕ್ತಿ ಮತ್ತು ಅನುಭವಗಳಲ್ಲೂ ರಂಗಭೂಮಿಯ ದೊಡ್ಡ ಸಾಧ್ಯತೆಗಳನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಬಿ. ನೀಲಮ್ಮ ಮಾತನಾಡಿ, ಸಾಣೇಹಳ್ಳಿಯ ಈ ರಂಗಶಿಬಿರವು ಅತ್ಯಂತ ಉದಾತ್ತ ಚಿಂತನೆಗಳ ಹಿನ್ನೆಲೆಯಲ್ಲಿ ರೂಪಗೊಂಡಿದೆ. ಇಲ್ಲಿನ ಶ್ರದ್ಧೆ ಮತ್ತು ಧ್ಯಾನಸ್ಥ ವಾತಾವರಣವು ರಂಗಚಟುವಟಿಕೆಗಳಿಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಕಾಡೆಮಿಗೆ ಹೆಚ್ಚಿನ ಅನುದಾನ ಸಿಗುವಂತಾಗಲಿ, ಆ ಮೂಲಕ ಇಂತಹ ರಂಗಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗಲಿ ಎಂದರು.

ರಂಗಶಿಕ್ಷಕ ವೆಂಕಟೇಶ ಮಾತನಾಡಿ; ತದೇಕಚಿತ್ತದಿಂದ ತಮ್ಮನ್ನು ತಾವು ಧ್ಯಾನಿಸಿಕೊಳ್ಳಲು ಇಂತಹ ಸೂಕ್ತವಾದ ಮತ್ತು ಶಾಂತಿಯುತವಾದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ ಎಂದರು.

ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ಪ್ರಾಸ್ತಾವಿಕವಾಗಿ ಮಾತಮಾಡಿ; ರಂಗಶಾಲೆಯ ಇಡೀ ವರ್ಷದ ಅಭ್ಯಾಸ ಮಾಲಿಕೆಯಿಂದ ಸಿದ್ಧಗೊಂಡಿರುವ 5 ನಾಟಕಗಳು ಹಾಗೂ ಹೊರಗಿನಿಂದ ಆಹ್ವಾನಿಸಲಾದ 2 ಏಕವ್ಯಕ್ತಿ ಪ್ರದರ್ಶನಗಳು ಸೇರಿದಂತೆ ಒಟ್ಟು 7 ನಾಟಕಗಳು ಇಂದಿನಿಂದ 5 ದಿನಗಳ ಕಾಲ ಪ್ರದರ್ಶನಗೊಳ್ಳಲಿವೆ. ಕೇವಲ ನಾಟಕ ನೋಡುವುದಷ್ಟೇ ಅಲ್ಲದೆ, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ 11:30 ರವರೆಗೆ ಮುಕ್ತ ಸಂವಾದ ಮತ್ತು ವಿಮರ್ಶಾ ಗೋಷ್ಠಿಗಳು ನಡೆಯಲಿವೆ. 20 ದಿನಗಳ ಶಿಬಿರದ ಕೊನೆಯಲ್ಲಿ, ತರಬೇತಿ ಪಡೆದ ಶಿಬಿರಾರ್ಥಿಗಳಿಂದಲೇ ಸಿದ್ಧಗೊಳ್ಳುವ 2 ವಿಶೇಷ ನಾಟಕಗಳು ಜೂನ್ 5 ರಂದು ರಂಗದ ಮೇಲೆ ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ವೇದಿಕೆಯ ಮೇಲೆ ರಂಗ ಶಿಕ್ಷಕ ಮಲ್ಲೇಶ, ರಂಗಾಸಕ್ತರು, ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ನಾಗರಾಜ, ಶರಣ್ ವಚನಗೀತೆಗಳನ್ನು ಹಾಡಿದರು. ಶಿಕ್ಷಕಿ ಸಂಗೀತ ಬಿಡೆ ಸ್ವಾಗತಿಸಿದರೆ, ರಾಜು ನಿರೂಪಿಸಿದರು. ಕೊನೆಯಲ್ಲಿ ರಾಘು ಪುರಪ್ಪೆಮನಿ ನಿರ್ದೇಶನದ ಆ ಮನಿ ನಾಟಕ ಪ್ರದರ್ಶನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *