ಹರಿಹರ
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ನೋಟೀಸ್ ನೀಡಿದ್ದಾರೆ.
ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಬಾಲಕನೋರ್ವನ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ ಸ್ವಾಮೀಜಿಯ ವಿಚಾರಣೆ ಎರಡು ಬಾರಿ ನಡೆದು, ಮೆಡಿಕಲ್ ಟೆಸ್ಟ್ ಕೂಡ ನಡೆಸಲಾಗಿದೆ.
ತನಿಖಾಧಿಕಾರಿ ವರ್ಗಾವಣೆ
ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ ಎಸ್ಐ ಮಂಜುಳಾ ಅವರ ವರ್ಗಾವಣೆ ನಂತರ ತನಿಖೆ ಚುರುಕಾಗಿದೆ.
ಪಂಚಮಸಾಲಿ ಪೀಠ ಟ್ರಸ್ಟ್ನ ಪದಾಧಿಕಾರಿಗಳು ಪ್ರಕರಣದ ತನಿಖೆ ಸರಿಯಾಗಿ ಮಾಡುತ್ತಿಲ್ಲ ಎಂದು ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಅವರು ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಎಸ್ಪಿ ಡಾ.ಎಚ್.ಟಿ. ಶೇಖರ್ ಅವರಿಗೆ ಸೂಚಿಸಿದ್ದರು. ಈ ಆದೇಶದ ಮೇರೆಗೆ ಮಂಜುಳಾ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ದಾವಣಗೆರೆಯ ಆಜಾದ್ನಗರ ಠಾಣೆಯ ಎಸ್ಐ ಜಯರತ್ನಮ್ಮ ಅವರನ್ನ ನೇಮಕ ಮಾಡಿದ್ದಾರೆ.
ನಿರೀಕ್ಷಣಾ ಜಾಮೀನು ರದ್ದಿಗೆ ಮನವಿ
ತಮ್ಮ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಪ್ರಕರಣ ದಾಖಲಾಗುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಏಪ್ರಿಲ್ 21ರಂದು ಸಲ್ಲಿಸಿದ್ದ ಈ ಅರ್ಜಿಗೆ ಜಿಲ್ಲಾ ನ್ಯಾಯಾಲಯ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಈಗ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಈ ಕುರಿತು ವರದಿ ಸಲ್ಲಿಸಿದ್ದಾರೆ.
ನಿರೀಕ್ಷಣಾ ಜಾಮೀನು ರದ್ದಾದರೆ ಸ್ವಾಮೀಜಿ ಅರೆಸ್ಟ್ ಆಗುವ ಸಾಧ್ಯತೆ ಇದೆ.
“ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ನಿರೀಕ್ಷಣಾ ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ಅವರು ಮೇ 25ರಂದು ಮತ್ತೊಮ್ಮೆ ವಿಚಾರಣೆಗಾಗಿ ಠಾಣೆಗೆ ಹಾಜರಾಗಲಿದ್ದಾರೆ” ಎಂದು ಹರಿಹರ ಗ್ರಾಮಾಂತರ ಠಾಣೆಯ ಪಿಐ, ತನಿಖಾಧಿಕಾರಿ ಸುರೇಶ್ ಸಗರಿ ಹೇಳಿದರು.
