ಅನುಭವದ ಆತ್ಮಶಕ್ತಿಯಿಂದಲೇ ವಚನ ರಚಿಸಬೇಕು: ಮರುಳಸಿದ್ಧ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಲತಾ ಶೇಖರ್ ಅವರ ಭಾವತೀರ, ವಚನಾನುಭವ ಕೃತಿಗಳ ಬಿಡುಗಡೆ

ಚಿಕ್ಕಮಗಳೂರು:

ಇತಿಹಾಸದಲ್ಲಿ ಶರಣ ಪರಂಪರೆಗಳ ವಚನ ಹಾಗೂ ಆಧುನಿಕ ವಚನಕಾರರ ನಡುವೆ ಬಹಳಷ್ಟು ಅಂತರವಿದೆ. ವಚನ ರಚನೆಗೆ ಜ್ಞಾನಾರ್ಜನೆ, ಬರವಣಿಗೆ ಹಿಡಿತ, ಅನುಭವದ ಆತ್ಮಶಕ್ತಿ ಹೊಂದಿದ್ದಲ್ಲಿ ಶ್ರೇಷ್ಠ ವಚನಕಾರರಾಗಲು ಸಾಧ್ಯ ಎಂದು ಬಸವತತ್ವ ಪೀಠದ ಪೂಜ್ಯ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ಬಸವತತ್ವ ಪೀಠದಲ್ಲಿ ಈಚೆಗೆ ಸಂಜೆ ಆಯೋಜಿಸಿದ್ದ ೫೭ನೇ ಶಿವಾನುಭವ ಗೋಷ್ಠಿ ಮತ್ತು ಲತಾ ಶೇಖರ ಅವರ ಭಾವತೀರ, ವಚನಾನುಭವ ಕೃತಿಗಳ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.

ಹಣಕ್ಕಾಗಿ ವಚನಗಳನ್ನು ರಚಿಸಿ ಮುದ್ರಣಗೊಳಿಸುವ ಪ್ರವೃತ್ತಿಯಿದೆ. ಇದು ವಚನಕಾರರಿಗೆ ಮಾಡುವ ದೊಡ್ಡ ಅಪಮಾನ. ಶರಣಾದಿ ಪರಂಪರೆಯಲ್ಲಿ ವಚನಕ್ಕೆ ಬಹುದೊಡ್ಡ ಕೊಡುಗೆಯಿದೆ. ವಚನಗಳ ರಚನೆಗೆ ಸ್ವಂತ ಅನುಭವ, ಜ್ಞಾನ ಸಂಪತ್ತು, ಕಲಿಕೆ ಹವ್ಯಾಸಗಳು ಬರಗಾರರಿಗೆ ಅಗತ್ಯ. ಆ ನಿಟ್ಟಿನಲ್ಲಿ ಲತಾ ಶೇಖರ್ ರಚಿಸಿರುವ ಕೃತಿಗಳ ಸಾಲುಗಳು ಅರ್ಥಪೂರ್ಣವಾಗಿವೆ ಎಂದು ತಿಳಿಸಿದರು.

ಜೀವನದ ಅನುಭವಗಳನ್ನು ಕಥೆ, ಕಾದಂಬರಿ ಹಾಗೂ ವಚನಗಳ ಪರಿಚಯಿಸುವುದು ಸುಲಭದ ಮಾತಲ್ಲ. ನೈಪುಣ್ಯತೆ, ಬರವಣಿಗೆ ಶಕ್ತಿ ಹಾಗೂ ಸಮಗ್ರ ಅಧ್ಯಯನ ಹೊಂದಿರಬೇಕು. ಹೀಗಾಗಿ ವಚನಗಳ ರಚನೆಗೂ ಮುನ್ನ ದೀರ್ಘಾವಧಿ ಶ್ರಮವಿರಬೇಕು ಎಂದರು.

ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ ಮೊಟ್ಟಮೊದಲ ಕನ್ನಡಿಗ ಹಾಗೂ ಜನಾಂಗದ ಚಿಂತಕ ಬಸವಣ್ಣನವರು. ಅನುಭವ ಮಂಟಪದಲ್ಲಿ ಎಲ್ಲಾ ಸಮುದಾಯದವರನ್ನು ಒಂದುಗೂಡಿಸಿ ಸ್ವಅನುಭವಕ್ಕೆ ಅವಕಾಶ ಮಾಡಿಕೊಟ್ಟವರು. ಇಂದಿನ ಸಂಸತ್ತಿನ ಮೂಲಕತೃವೇ ೧೨ನೇ ಶತಮಾನದ ಬಸವಣ್ಣನವರ ಅನುಭವ ಮಂಪಟವೇ ಸಾಕ್ಷಿ ಎಂದು ಹೇಳಿದರು.

ಹೊಳಲ್ಕೆರೆ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಉಪನ್ಯಾಸ ನೀಡುತ್ತ, ಅನುಭವ ಮಂಟಪ ಪ್ರಜಾಪ್ರಭುತ್ವದ ಜೀವಂತ ಮಾದರಿ. ಈ ರಚನೆಗೆ ಬಸವಣ್ಣನವರ ಕೊಡುಗೆ ಅಪಾರವಿದೆ. ಮುಕ್ತ ಮಾತುಕತೆ, ಚಿಂತನೆ, ಸಮಾನತೆ ಹಾಗೂ ಮನುಷ್ಯ ಧರ್ಮ ಒಂದೇ ಎಂಬ ಸಂದೇಶ ಸಾರಿದವರು ಶರಣರು ಎಂದರು.

ಮೇಳು-ಕೀಳು, ಅಸೃಶ್ಯತೆ ಹೋಗಲಾಡಿಸಲು ಬಸವಣ್ಣನವರು ಇಷ್ಟಲಿಂಗ ದೈವತತ್ವಕ್ಕೆ ತಂದೆಯಾದವರು. ವೈಜ್ಞಾನಿಕ ಪೂಜಾ ವಿಧಾನ, ಸಮಾಜದ ಏರಿಳಿತಕ್ಕೆ, ಸಮ ಸಮಾಜಕ್ಕೆ ಸ್ಪೂರ್ತಿ ಸೆಲೆಯಾಗುವ ಮೂಲಕ ಮಾನವನೇ ಮಹಾದೇವ ಸತ್ಯ ಎಂಬ ಬಸವಾದಿ ಶರಣರ ಮೌಲ್ಯಗಳನ್ನು ಭಿತ್ತಿದ ಕೀರ್ತಿ ಅವರಿಗೆ ಸಲ್ಲಬೇಕಿದೆ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಬಿ.ಹೆಚ್. ಸೋಮಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವ ಪೀಠದ ಶ್ರೀಗಳು ಬಸವಣ್ಣನವರ ವಿಚಾರಧಾರೆ, ಅನುಭವ ಮಂಪಟದ ಇತಿಹಾಸ, ಆಧ್ಯಾತ್ಮಕ ಶಕ್ತಿ, ಹಿಂದೂ ಪೂಜಾ ಪದ್ಧತಿ, ಸಂಪ್ರದಾಯ ಆಚಾರಗಳ ಬಗ್ಗೆ ವಿದೇಶಿ ಪ್ರಜೆಗಳ ಪ್ರಶ್ನೆಗಳಿಗೆ ನೈಜವಾಗಿ ಅರ್ಥೈಸುವ ಮೂಲಕ ಈಚೆಗೆ ಯೂರೋಪ್ ಪ್ರವಾಸದಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ ಎಂದರು.

ಸಾಹಿತಿ ಲತಾ ಶೇಖರ ಮಾತನಾಡಿ, ಪೋಷಕರ ಹಳೆಯ ನೆನಪನ್ನು ವಚನಗಳ ಮೂಲಕ ಅಡಕಗೊಳಿಸಲಾಗಿದೆ. ಅಲ್ಲದೇ ಹಿರಿಯರ ಮಾರ್ಗದರ್ಶನವೇ ಲೇಖಕಿ, ಸಾಹಿತಿ ಹಾಗೂ ವಚನಗಾರ್ತಿಯಾಗಲು ನನಗೆ ಸ್ಪೂರ್ತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕವನ ಸಂಕಲನ, ವಚನಗಳನ್ನು ರಚಿಸಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಲತಾ ಶೇಖರ ರಚಿಸಿರುವ ಭಾವತೀರ, ವಚನಾನುಭವ ಕೃತಿಗಳನ್ನು ಬಸವಶ್ರೀಗಳು ಬಿಡುಗಡೆಗೊಳಿಸಿದರು. ಬಳಿಕ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ ವಿಜೇತ ಎಸ್. ಮಂಜುನಾಥ ಅವರಿಗೆ ಶ್ರೀಗಳಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಬಿ. ತಿಪ್ಪೇರುದ್ರಪ್ಪ, ಡಿ.ಎಂ. ಮಂಜುನಾಥಸ್ವಾಮಿ, ದಾಸೋಹ ಸೇವಾದಾರರಾದ ಬಿ.ಜಿ. ಶೇಖರ, ಲೇಖಕ ಮನ್ಸೂಳಿ ಮೋಹನ್, ಬಸವತತ್ವ ಪೀಠದ ಖಜಾಂಚಿ ಸಿ.ಎಸ್. ಸದಾಶಿವಪ್ಪ, ಟ್ರಸ್ಟಿ ಜಗದೀಶ್ ಬಾಬು, ಮುಖಂಡರಾದ ಸಿ.ಎಂ. ಪರಮೇಶ್ವರಪ್ಪ, ವೀಣಾ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *