ಸಾಣೇಹಳ್ಳಿ:
ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಮೇ 17 ರಿಂದ ಜೂನ್ 5 ರವರೆಗೆ ಆಯೋಜಿಸಲಾಗಿದ್ದ ೨೦ ದಿನಗಳ ‘ಯುವ ಜನ ಶೈಕ್ಷಣಿಕ ರಂಗ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ನಡೆಯಿತು.
ಸಾನಿಧ್ಯ ವಹಿಸಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಅವರು ಮಾತನಾಡಿ, ಯುವ ಸಮುದಾಯದಲ್ಲಿ ಶ್ರದ್ಧೆ, ಸದ್ಭಾವನೆ ಹಾಗೂ ಕಾಲದ ಪ್ರಜ್ಞೆ ಇದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ.

“ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ರಂಗಭೂಮಿಯೇ ಸಾಕ್ಷಿ. ರಂಗಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಆದರೆ, ಕಲಾವಿದರು ಯಾವುದೇ ಹಂತದಲ್ಲೂ ಅಹಂಕಾರ ಮತ್ತು ದೌರ್ಬಲ್ಯಕ್ಕೆ ಒಳಗಾಗಬಾರದು; ಅಹಂಕಾರ ಆವರಿಸಿದರೆ ಇದೇ ರಂಗಭೂಮಿ ನಮ್ಮನ್ನು ಕೈಬಿಡುತ್ತದೆ.
ಪ್ರತಿಯೊಬ್ಬ ಯುವಕನೂ ಸಮಾಜದಲ್ಲಿನ ಪ್ರತಿಯೊಂದನ್ನೂ ಕಣ್ಣಿಟ್ಟು, ಮನಸ್ಸಿಟ್ಟು ನೋಡಿ ವಿಚಾರ ಮಾಡಬೇಕು. ಇಂತಹ ಸೂಕ್ಷ್ಮ ಅವಲೋಕನದ ಮೂಲಕ ಮಾತ್ರ ನಮ್ಮಲ್ಲಿ ಆಂತರಿಕ ಪರಿವರ್ತನೆ ಸಾಧ್ಯ.
ಈ ೨೦ ದಿನಗಳ ಶಿಬಿರವು ಸಮುದ್ರದಲ್ಲಿ ಸೂಜಿಯಿಂದ ನೀರು ತೆಗೆದಷ್ಟೇ ಸಣ್ಣ ಅನುಭವ. ಇನ್ನು ಸಮಾಜದಲ್ಲಿ ನಾವು ಕಲಿಯಬೇಕಾದ ತರಬೇತಿ ಸಾಕಷ್ಟಿದೆ. ಶಿಬಿರಾರ್ಥಿಗಳು ಪ್ರದರ್ಶಿಸಿದ ‘ಅಮ್ಮ ತಾಯಿ’ ನಾಟಕವು ಬಡತನ, ಹಸಿವು, ಅಧಿಕಾರ ಹಾಗೂ ಕೊನೆಗೆ ತಾಯಿಯೊಬ್ಬಳ ಮನಸ್ಸು ಪರಿವರ್ತನೆಯಾಗುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದೆ. ಪ್ರಸ್ತುತ ದೇಶದಲ್ಲಿ ಹಸಿವಿನಿಂದ ಕಷ್ಟಪಡುತ್ತಿರುವವರನ್ನು ನಾವು ನೆನೆಯಬೇಕು. ಅನ್ನದ ಒಂದೊಂದು ಅಗಳಿನ ಮಹತ್ವವನ್ನು ಅರಿತು, ಯಾರೂ ಕೂಡ ಆಹಾರವನ್ನು ಎಲ್ಲೂ ವ್ಯರ್ಥ ಮಾಡಬಾರದು ಎಂದರು.

ಸಮಾರೋಪದ ನುಡಿಗಳನ್ನಾಡಿದ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಧೀಶರಾದ ಹೆಚ್. ಬಿಲ್ಲಪ್ಪ ಅವರು ಮಾತನಾಡಿ, “ಸಾಹಿತ್ಯದ ಎಲ್ಲಾ ಪ್ರಕಾರಗಳಿಗಿಂತ ನಾಟಕವು ಅತ್ಯಂತ ರಮ್ಯವಾದುದಾಗಿದೆ. ಅದು ಮನುಷ್ಯನ ಅಂತರಂಗ ಮತ್ತು ಬಹಿರಂಗವನ್ನು ಸಮಾನವಾಗಿಸುವ ಒಂದು ಅದ್ಭುತ ಕಲೆ. ಮಹಾತ್ಮ ಗಾಂಧೀಜಿಯವರ ಸತ್ಯನಿಷ್ಠೆಗೆ ಬಾಲ್ಯದಲ್ಲಿ ಅವರು ವೀಕ್ಷಿಸಿದ ‘ಸತ್ಯ ಹರಿಶ್ಚಂದ್ರ’ ಮತ್ತು ‘ಶ್ರವಣಕುಮಾರ’ ನಾಟಕಗಳೇ ಪ್ರೇರಣೆ ಎಂದು ನೆನಪಿಸಿಕೊಂಡರು.

“ಬಸವಣ್ಣ, ಮಡಿವಾಳ ಮಾಚಯ್ಯ, ಅಲ್ಲಮಪ್ರಭುಗಳಂತಹ ಶರಣರ ಪಾತ್ರಗಳು ನಮ್ಮಲ್ಲಿ ಸತ್ಚಿಂತನೆ ಮೂಡಿಸುತ್ತವೆ. ನಾಟಕಗಳು ಮನುಷ್ಯನಿಗೆ ‘ವಿಚಾರಗಳ ಸ್ಪಷ್ಟತೆ’ (Clarity of thoughts) ನೀಡುತ್ತವೆ. 12ನೇ ಶತಮಾನದಲ್ಲಿ ಬಸವಣ್ಣನವರು ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ’ ಎಂದಿದ್ದರು. ಆದರೆ ಇಂದು 21ನೇ ಶತಮಾನದಲ್ಲಿ ಸಮಾಜವು ’30-40 ಸೈಟು ನನ್ನದು’ ಎನ್ನುವ ಸ್ವಾರ್ಥಕ್ಕೆ ಬಿದ್ದಿರುವುದು ವಿಷಾದನೀಯ.
ಸಂವಿಧಾನದಲ್ಲಿರುವ ಸಾಮಾಜಿಕ ನ್ಯಾಯದ (Distributive Justice) ಪರಿಕಲ್ಪನೆಯಂತೆ ದುಡಿದು ಬಂದ ಅಧಿಕ ಸಂಪತ್ತನ್ನು ಇತರರಿಗೆ ಹಂಚುವ ‘ದಾಸೋಹ’ ಮನೋಭಾವ ಬೆಳೆಯಬೇಕು. ಕಲಾವಿದರಿಗೆ ಸಾಮಾನ್ಯ ಕಣ್ಣುಗಳ ಆಚೆಗಿನ ‘ಕಲಾ ದೃಷ್ಟಿ’ ಮತ್ತು ಸೂಕ್ಷ್ಮ ಅವಲೋಕನ ಅತ್ಯಗತ್ಯ” ಎಂದರು.

ಮುಖ್ಯ ಅತಿಥಿಯಾಗಿ ರಂಗಶಿಬಿರದ ನಿರ್ದೇಶಕ ಟಿ. ವೆಂಕಟೇಶ್ ಮಾತನಾಡಿ, “ಇಲ್ಲಿ ಕಲಿತ ರಂಗಶಿಸ್ತನ್ನು ವಿದ್ಯಾರ್ಥಿಗಳು ಕೇವಲ ವೇದಿಕೆಗೆ ಸೀಮಿತಗೊಳಿಸದೆ ವೈಯಕ್ತಿಕ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಆಸಕ್ತರಿಗೆ ರಂಗಪ್ರಯೋಗ ಶಾಲೆಯಲ್ಲಿ ಒಂದು ವರ್ಷದ ಡಿಪ್ಲೊಮಾ ತರಬೇತಿ ಪಡೆಯಲು ಅವಕಾಶವಿದೆ” ಎಂದರು.
ಶಿಬಿರಾರ್ಥಿ ಭಾವನಾ ತಮ್ಮ ಅನುಭವ ಹಂಚಿಕೊಳ್ಳುತ್ತಾ, ರಂಗಭೂಮಿಯ ಶಕ್ತಿಯಿಂದಾಗಿ ತಮ್ಮ ದೈಹಿಕ ತೊಂದರೆಯನ್ನು ಮರೆತು ಪಾತ್ರದಲ್ಲಿ ತೊಡಗಿಸಿಕೊಂಡದ್ದನ್ನು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ಮಾತಮಾಡಿದರು. ಸಮಾರೋಪದ ಅಂಗವಾಗಿ ಶಿಬಿರಾರ್ಥಿಗಳಿಂದ ರಾಜಪ್ಪ ದಳವಾಯಿ ರಚನೆಯ, ಕೆ. ವೆಂಕಟೇಶ ನಿರ್ದೇಶನದ ‘ಅಮ್ಮ ತಾಯಿ’ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ರಚನೆಯ, ಸಂಗೀತ ಭಿಡೆ ನಿರ್ದೇಶನದ ‘ನುಲಿಯ ಚಂದಯ್ಯ’ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಗೆದ್ದವು.

ರಂಗಶಿಕ್ಷಕಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಂಗಭೂಮಿ ಕಲಾವಿದ ಉದಯಕುಮಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
