‘ಬಸವ ತಾಲಿಬಾನ್’ – ಇದು ನೇರವಾಗಿ ಬಸವಣ್ಣನವರನ್ನೇ ನಿಂದಿಸುವ ಪದ

ನಿಮ್ಮ ಹೆಸರ ಮುಂದೆ ತಾಲಿಬಾನ್ ಪದ ಜೋಡಿಸಿಕೊಂಡರೆ ಯಾವ ಅರ್ಥ ಬರುತ್ತದೆ ಹೇಳಿ.

ಬಸವಕಲ್ಯಾಣ

ಇಂದು ಬಸವಕಲ್ಯಾಣದಲ್ಲಿ ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಸಂಘಪರಿವಾರ ನಡೆಸುತ್ತಿರುವ ಹಿಂದೂ ಸಮಾವೇಶವನ್ನು ಪ್ರತಿಭಟಿಸಲು ಪೂರ್ವಭಾವಿ ಸಭೆ ನಡೆಯುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ.

ಈ ಹಿಂದೂ ಸಮಾವೇಶಗಳಲ್ಲಿ ಬಸವಾದಿ ಶರಣರ ಬಗ್ಗೆ ಅಪಪ್ರಚಾರವಾಗುತ್ತಿದೆ. ಮುಖ್ಯವಾಗಿ ಅಲ್ಲಿ ಮತ್ತೇ ಮತ್ತೆ ಬಳಕೆಯಾಗುತ್ತಿರುವ ‘ಬಸವ ತಾಲಿಬಾನ್’ ಪದದ ಬಗ್ಗೆ ನಾವು ಗಮನ ಕೊಡಬೇಕು.

ಈ ಪದವನ್ನು ಸನಾತನಿಗಳು ಸೃಷ್ಟಿಸಿ ಕನ್ನೇರಿ ಸ್ವಾಮಿಯಂತವರ ಮೂಲಕ ಹೇಳಿಸುತ್ತಿದ್ದಾರೆ. ಅವರ ಪ್ರಕಾರ ಈ ಪದ ‘ಉಗ್ರವಾಗಿ ಬಸವತತ್ವ ಪ್ರಚಾರ ಮಾಡುತ್ತಿರುವವರಿಗೆ’, ‘ಎಡಪಂಥೀಯ’ರಿಗೆ ಅನ್ವಯಿಸುತ್ತದೆ.

ಆದರೆ ಈ ಪದವನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಅದು ಬಸವ ಅನುಯಾಯಿಗಳಿಗೆ ಅನ್ವಯವಾಗುವ ಪದವಲ್ಲ. ನೇರವಾಗಿ ಬಸವಣ್ಣನವರನ್ನೇ ನಿಂದಿಸುವ ಪದ.

ನಿಮ್ಮ ಹೆಸರ ಮುಂದೆ ತಾಲಿಬಾನ್ ಪದ ಜೋಡಿಸಿಕೊಂಡು, ಅದನ್ನು ಒಂದೇ ಉಸುರಿನಲ್ಲಿ ಉಚ್ಚರಿಸಿ, ಅದರಿಂದ ಯಾವ ಅರ್ಥ ಬರುತ್ತದೆ ಹೇಳಿ. ಉದಾಹರಣೆಗೆ ನಿಮಗೆ ‘ಮಲ್ಲಿಕಾರ್ಜುನ’ ಹೆಸರಿನ ಸ್ನೇಹಿತರು ಇದ್ದು, ಅವರಿಗೆ ತಾಲಿಬಾನ್ ಜೋಡಿಸಿ, ‘ಮಲ್ಲಿಕಾರ್ಜುನ ತಾಲಿಬಾನ್’ ಅಂತ ಒಟ್ಟಿಗೆ ಹೇಳಿ.

ಅದರಿಂದ ತಾಲಿಬಾನ್ ಎಂಬ ಅಪಖ್ಯಾತಿ ವೈಯಕ್ತಿಕವಾಗಿ ನಿಮ್ಮ ಸ್ನೇಹಿತರಿಗೆ ಅಂಟುತ್ತದೆ ಹೊರತು ಬೇರೆಯವರಿಗಲ್ಲ.

ಸಂಘಪರಿವಾರದವರು ‘ಬಸವ ತಾಲಿಬಾನ್’ ಅಂತ ಮತ್ತೇ ಮತ್ತೇ ಹೇಳುತ್ತಾ ಉದ್ದೇಶಪೂರ್ವಕವಾಗಿ ಬಸವಣ್ಣನವರ ಹೆಸರು ಕೆಡಿಸುತ್ತಿದ್ದಾರೆ.

ವೈದಿಕರಿಗೆ ಲಿಂಗಾಯತ ಸ್ವಾಮೀಜಿಗಳಿಗಿಂತ, ಬಸವತತ್ವದ ಅನುಯಾಯಿಗಳಿಗಿಂತ ಸಿಟ್ಟಿರುವುದು ಬಸವಣ್ಣನವರ ಮೇಲೆ, ಇತರ ಶರಣರ ಮೇಲೆ, ಹಾಗೂ ವಚನಗಳ ಮೇಲೆ.

ಶರಣರ ತತ್ವ, ಶರಣ ಇತಿಹಾಸ ತಿರುಚಿದ ‘ವಚನ ದರ್ಶನ’ ಪುಸ್ತಕ ಪ್ರಕಟಮಾಡಿದ್ದೂ ಇದೇ ಉದ್ದೇಶಕ್ಕೆ. ಕನ್ನೇರಿ ಸ್ವಾಮಿಯ ನೇತೃತ್ವದಲ್ಲಿ ಸಮಾವೇಶಗಳನ್ನು ಮಾಡುತ್ತಿರುವುದೂ ಇದೇ ಉದ್ದೇಶಕ್ಕೆ.

ಸನಾತನಿಗಳ ಮೂಲ ಉದ್ಧೇಶವೇ ಬಸವಾದಿ ಶರಣರ ಚಿಂತನೆಗಳನ್ನು ಖಂಡಿಸುವುದೇ ಆಗಿದೆ. ಅಂದು ಹನ್ನೆರಡನೇ ಶತಮಾನದಲ್ಲಿ ಮನು ಸಂಸ್ಕೃತಿ ವಿರುದ್ಧ ಬಂಡೆದ್ದ ಬಸವಾದಿ ಪ್ರಮಥರನ್ನು ಹತ್ಯಕಾಂಡ ಮಾಡಿದ ವೈದಿಕ ಮನಸುಗಳು ಇನ್ನೂ ನಾಶವಾಗಿಲ್ಲ. ವಚನ ಸಾಹಿತ್ಯದ ಮೇಲಿನ ಸೇಡು ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂಬುದು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು.

ಸಿಖ್ ಧರ್ಮದವರಿಗೆ ‘ಸಿಖ್ ತಾಲಿಬಾನಿಗಳು,’ ಇಸ್ಲಾಂ ಧರ್ಮದವರಿಗೆ ‘ಮುಸ್ಲೀಂ ತಾಲಿಬಾನಿಗಳು,’, ಕ್ರಿಸ್ತ ಧರ್ಮಕ್ಕೆ ‘ಕ್ರೈಸ್ತ ತಾಲಿಬಾನಿಗಳು,’ ಎಂದಿದ್ದರೇ ಇಷ್ಟೊತ್ತಿಗೆ ಕನ್ನೇರಿ ಸ್ವಾಮಿಗಳು ಎಲ್ಲಿರುತಿದ್ದರೋ ದೇವರೇ ಬಲ್ಲ.

ಆದರೆ ದುರಾಭಿಮಾನಿ ಲಿಂಗಾಯತರು, ಮಠಾಧೀಶರು ತಮ್ಮ ಧರ್ಮದ ಗುರುವನ್ನೇ ತಾಲಿಬಾನ್ ಎಂದು ಕರೆದು ಅವಮಾನಿಸಿದರೂ ಸುಮ್ಮನೇ ಗೂಬೆಯಂತೆ ಕುಳಿತಿರುವುದು ನಾಚಿಕೆಗೇಡಿನ ಸಂಗತಿ.

ಪೂಜ್ಯ ಲಿಂಗಾನಂದ ಅಪ್ಪಾಜಿಯವರು, ‘ನಿಮಗೆ ಯಾರು ಏನೇ ಅಂದರೂ ಸುಮ್ನೆ ಕೂಡ್ರಿ, ಆದರೆ ಧರ್ಮಗುರುವಿಗೆ ಬೈದರೆ ಮಲಕಿಗೆ ಹೊಡೆಯಿರಿ,’ ಎಂದು ಹೇಳುತ್ತಿದ್ದರು. ಆ ಮಾತು ಈಗ ನೆನಪಾಗುತ್ತಿದೆ.

ಕನ್ನೇರಿ ಸ್ವಾಮಿಯ ಸಮಾವೇಶಗಳನ್ನು ವಿರೋಧಿಸಿದರೆ ಸಾಲದು. ಅವರ ಈ ಅಸಹ್ಯ ಮಾತುಗಳನ್ನೂ ವಿರೋಧಿಸಿ ನಿಲ್ಲಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
3 Comments
  • ಸಾಂಸ್ಕೃತಿಕ ನಾಯಕ ಬಸವಣ್ಣನವವರಿಗೆ ಅವಮಾನ ಮಾಡಿದ್ದಾರೆ ಎಂದು RSS BJP ವಿರುದ್ಧ ಬೃಹತ್ ಪ್ರತಿಭಟನೆ ನಡೆಯಬೇಕು ಆದರೆ ಲಿಂಗಾಯತರು ಅವರ ಜೊತೆಗೆ ಇದ್ದಾರೆ ಅವರ ಮೇಲೆ ಕೇಸ್ ಹಾಕಬೇಕು ಆದರೆ ಯಾರೂ ಹಾಕುವವರಿಲ್ಲ.

  • ಅವರ ಮುಖವಾಡ ಬಯಲು ಮಾಡಿ ಸರ್ವರಿಗೂ ತಿಳಿಸಿ ಧನ್ಯವಾದಗಳು 💐👏🏻👍🏻ಜಯ ಬಸವ 👏🏻

  • ಬಸವ ತಾಲಿಬಾನ್ ಪದ ಪ್ರಯೋಗ ಅಕ್ಷಮ್ಯ ಅಪರಾಧ. ಇದು ಧರ್ಮ ನಿಂದನೆ. ನಾವು ನಂಬಿರುವ ಲಿಂಗಾಯತ ಧರ್ಮ ಗುರುವಿಗೆ ತಾಲಿಬಾನ್ ಪದ ಸೇರ್ಪಡೆಯನ್ನು ಲಿಂಗಾಯತರು ಸಹಿಸಿಕೊಳ್ಳಬಾರದು. ಇದು ಈಗ ದೊಡ್ಡಮಟ್ಟದಲ್ಲಿ ಪ್ರಚಾರದಲ್ಲಿದೆ. ಲಿಂಗಾಯತರಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಈಗಲಾದರೂ ಎಚ್ಚತ್ತುಕೊಂಡು ಪ್ರತಿಭಟಿಸಿ ಮತ್ತು ಈ ಪದವನ್ನು ನ್ಯಾಯಾಲಯದ ಮೂಲಕವಾದರೂ ಉಪಯೋಗಿಸದಂತೆ ತಡೆ ತರಬೇಕು.

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.