ಲಿಂಗಾಯತ ಹೋರಾಟ ವಿರೋಧಿಗಳಿಗೆ ಚುನಾವಣೆಯಲ್ಲಿ ಪಾಠ ಕಲಿಸಿ: ಡಾ. ಸಿದ್ದರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಪ್ರತ್ಯೇಕ ಧರ್ಮದ ಮಾನ್ಯತೆಗೆ ಬೃಹತ್ ಹೋರಾಟ ರೂಪಿಸಬೇಕು.

ಹುಬ್ಬಳ್ಳಿ

“ಲಿಂಗಾಯತ ಎಂದು ಹೇಳಿಕೊಂಡು ಲಿಂಗಾಯತ ಕೋಟಾದಲ್ಲಿ ಚುನಾವಣೆ ಟಿಕೆಟ್, ಸ್ಥಾನಮಾನ ಪಡೆಯುವ ಜನಪ್ರತಿನಿಧಿಗಳು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಇಂತಹ ಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು,” ಎಂದು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಕರೆ ನೀಡಿದರು.

ಲಿಂಗಾಯತ ಒಳಪಂಗಡಗಳ ಒಕ್ಕೂಟ ನಗರದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತ ಲಿಂಗಾಯತರ ಮಾನ್ಯತೆಗಾಗಿ ಹೋರಾಟ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಿ ಮಾತನಾಡಿದರು.

“ಪ್ರತ್ಯೇಕ ಧರ್ಮದ ಮಾನ್ಯತೆಗೆ ಬೃಹತ್ ಹೋರಾಟ ರೂಪಿಸಬೇಕು. ಆ ಹೋರಾಟಕ್ಕೆ ಬೆಂಬಲಿಸುವ ನಾಯಕರನ್ನು ಮಾತ್ರ ಚುನಾವಣೆಯಲ್ಲಿ ಬೆಂಬಲಿಸುವ ಕೆಲಸ ಸಮುದಾಯದಿಂದ ಆಗಬೇಕು. ಜನಪ್ರತಿನಿಧಿಗಳ ಷಡ್ಯಂತ್ರದಿಂದ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತಿಲ್ಲ,” ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತರಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಎಲ್ಲ ಒಳಪಂಗಡಗಳು ಒಂದಾಗಬೇಕು. ಧರ್ಮದ ಹೆಸರಿನಲ್ಲಿ ಕೋಮುವಾದ ಸೃಷ್ಟಿಸುವ ಹುನ್ನಾರದ ಬಗ್ಗೆ ಜಾಗೃತರಾಗಬೇಕೆಂದರು.

” ಯುವಕರಿಗೆ ಕೇಸರಿ ಶಾಲು ಧರಿಸಿ ಧರ್ಮದ ಹೆಸರಿನಲ್ಲಿ ಕೋಮುವಾದ ಹರಡುವ ಕೆಲಸ ನಡೆದಿದೆ. ಅದನ್ನು ತಡೆಗಟ್ಟುವ ಜತೆಗೆ, ಅಂತಹ ಸಂಘಟನೆಗಳಲ್ಲಿ ಲಿಂಗಾಯತ ಯುವಕರು ಪಾಲ್ಗೊಳ್ಳದಂತೆ ನೋಡಿಕೊಳ್ಳಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಲಬುರಗಿಯ ಬಸವ ತತ್ವ ಚಿಂತಕ ಪ್ರೊ.ಸಂಜಯಕುಮಾರ ಮಾಕಲ ಲಿಂಗಾಯತ ಸ್ವತಂತ್ರ ಧರ್ಮವಾಗಲು ಎಲ್ಲ ಒಳಪಂಗಡಗಳ ಒಗ್ಗಟ್ಟು, ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಸಿಖ್ಖರು, ಜೈನರು ಪ್ರತ್ಯೇಕ ಧರ್ಮ ರಚನೆಗಾಗಿ ಹೋರಾಟ ನಡೆಸಿ ಪ್ರತ್ಯೇಕ ಧರ್ಮ ಮಾನ್ಯತೆ ಪಡೆದರು. ಗೌತಮ ಬುದ್ಧ ಬೌದ್ಧ ಧರ್ಮ ಸ್ಥಾಪಿಸಿದರು. ಮಹಾವೀರರು ಜೈನ್ ಧರ್ಮ ಸ್ಥಾಪಿಸಿದರು. ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಇದು ಕೇಂದ್ರ ಸರ್ಕಾರದಲ್ಲಿರುವ ದಾಖಲಾತಿಯಲ್ಲಿರುವ ಅಂಶವಾಗಿದೆ.

ವೀರಶೈವ ಎಂಬುದು ಒಂದು ಧರ್ಮ ಎಂದು ಪರಿಗಣಿಸಲು ಆಧಾರಗಳಿಲ್ಲ ಎಂದು ಕೇಂದ್ರವೇ ಸ್ಪಷ್ಟಪಡಿಸಿದೆ. ಹಿಂದೂ ಎಂಬುದು ಧರ್ಮ ಅಲ್ಲ, ಅದೊಂದು ಜೀವನ ಪದ್ಧತಿ ಎಂದು ಕೂಡ ಕೇಂದ್ರ ಹೇಳಿದೆ. ಲಿಂಗಾಯತ ಧರ್ಮ ಎಂದು ಶರಣರ ಕಾಲದಲ್ಲಿ ರಾಜರ, ಬ್ರಿಟಿಷರ ಆಡಳಿತದ ಅವಧಿಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲ ಒಳಪಂಗಡಗಳು ಒಂದಾಗಿ ಹೋರಾಟ ನಡೆಸಿದಾಗ ಮಾತ್ರ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಲಿದೆ. ಇದರಿಂದ ಲಿಂಗಾಯತರ ಅಸ್ತಿತ್ವ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ಹೇಳಿದರು.

ಲಿಂಗಾಯತ ಒಳಪಂಗಡ ಒಕ್ಕೂಟದ ಅಧ್ಯಕ್ಷ ಚಿಂತಾಮಣಿ ಸಿಂದಗಿ ಮಾತನಾಡಿ, ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಸಮುದಾಯವನ್ನು ಬಳಸಿ ಕೊಳ್ಳುತ್ತಿದ್ದಾರೆ. ಆದರೆ, ಸಮುದಾಯಕ್ಕೆ ಯಾವುದೇ ರೀತಿಯ ಕೊಡುಗೆ ನೀಡುತ್ತಿಲ್ಲ. ಅವರ ಷಡ್ಯಂತ್ರದಿಂದಾಗಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತಿಲ್ಲ, ಈ ಪ್ರತ್ಯೇಕ ಧರ್ಮದ ಮಾನ್ಯತೆಗೆ ಹೋರಾಟ ಅವಶ್ಯ

ಈ ಒಕ್ಕೂಟದ ಮೂಲಕ ರಾಜಕಾರಣಿಗಳನ್ನು, ಮಠಾಧೀಶರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ ಲಿಂಗಾಯತರನ್ನು ಜಾಗೃತಗೊಳಿಸುವ, ಒಗ್ಗೂಡಿಸುವ ಸಭೆ ಸಮಾರಂಭ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸಮಾಜದ ಮಠಾಧಿಶರು ಮುಂಚೂಣಿಯಲ್ಲಿ ನಿಲ್ಲಬೇಕು, ಅಂದಾಗ ಮಾತ್ರ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿವಣ್ಣ ವಿ. ಅಂಗಡಿ, ನಿಂಗನಗೌಡ ವಿ. ಮರಿಗೌಡರ, ಪ್ರಕಾಶ ಬಿ. ಭಾವಿಕಟ್ಟಿ, ಮಲ್ಲಿಕಾರ್ಜುನ ಪಿ. ಕುಂಬಾರ, ವಿಜಯಕುಮಾರ, ರಘುನಾಥಗೌಡ, ಉಳವಪ್ಪ ಪರಣ್ಣವರ, ವೀರನಗೌಡ ಮರಿಗೌಡ್ರ, ಎಸ್‌.ಕೆ. ಬಣಕಾರ, ಲತಾ ಉಮಾಣಿ, ಮಲ್ಲಿಕಾರ್ಜುನ ನರವಣಿ, ಸದಾನಂದ ತೇರದಾಳ, ಗೀತಾ ಮರಿಲಿಂಗಣ್ಣವರ ಹಾಗೂ ಮತ್ತಿತರರಿದ್ದರು. ರಂಗರೆಡ್ಡಿ ಪಾಸ್ತಾವಿಕ ಮಾತನಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *