ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ತಡೆಯಲು ಬಸವ ಸಂಘಟನೆಗಳ ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಾಯತರು ಒಂದಾಗಿ ಹೋರಾಟ ಮಾಡುವ ಸಂದರ್ಭ ಬಂದಿದೆ: ಭಾಲ್ಕಿ ಶ್ರೀ

ಬೀದರ

ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಅವರು ಜೂನ್ 28 ಬಸವಕಲ್ಯಾಣ ಪ್ರವೇಶಿಸುವುದನ್ನು ತಡೆಯಲು ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಬಸವಾನುಯಾಯಿಗಳು ನಿರ್ಧರಿಸಿದ್ದಾರೆ.

ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಂಡರು.

ಕನ್ನೇರಿ ಸ್ವಾಮಿ ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಅವಮಾನಿಸಿದ್ದಾರೆ. ಬಸವತತ್ವ ಪ್ರಚಾರ ಮಾಡುತ್ತಿರುವ ಮಠಾಧೀಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸವತತ್ವವನ್ನು ಮನ ಬಂದಂತೆ ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾರಣ, ಅವರಿಗೆ ಬಸವಾದಿ ಶರಣರ ಪುಣ್ಯ ಭೂಮಿ ಬಸವಕಲ್ಯಾಣವನ್ನು ಸ್ಪರ್ಶಿಸಲು ಬಿಡುವುದಿಲ್ಲ ಎಂದು ಘೋಷಿಸಿದರು.

ಕನ್ನೇರಿ ಸ್ವಾಮಿಗೆ ಬಸವಾದಿ ಶರಣರ ಪುಣ್ಯ ಭೂಮಿ ಬಸವಕಲ್ಯಾಣವನ್ನು ಸ್ಪರ್ಶಿಸಲು ಬಿಡುವುದಿಲ್ಲ.

ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ವಿರೋಧಿಸಿ ಬೀದರ ಸೇರಿದಂತೆ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸ್ವಾಮಿ ಬಸವಕಲ್ಯಾಣ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.

ಕನ್ನೇರಿ ಸ್ವಾಮಿ ವಿನಾಕಾರಣ ಬಸವತತ್ವ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸುಪ್ರೀಂಕೋರ್ಟ್ ನೀನೊಬ್ಬ ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿದರೂ, ಹಳೆಯ ಚಾಳಿ ಬಿಟ್ಟಿಲ್ಲ. ಹೀಗಾಗಿ ಬಸವಾನುಯಾಯಿಗಳು ಅವರ ವಿರುದ್ಧ ಒಗ್ಗಟ್ಟಿನಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕನ್ನೇರಿ ಸ್ವಾಮಿ ಸುಳ್ಳಿನ ಸರದಾರರು. ಅವರ ಬಸವತತ್ವ ವಿರೋಧಿ ನಡೆಯನ್ನು ಖಂಡಿಸಲಾಗುತ್ತದೆ ಎಂದು ಹೇಳಿದರು.

ಕಾಡಸಿದ್ಧೇಶ್ವರ ಮಠ ಶರಣ ಪರಂಪರೆಯ ಮಠವಾಗಿದೆ. ಮಠದಲ್ಲಿ ಭಾರತದ ಎಲ್ಲ ದಿವ್ಯ ಪುರುಷರ ಮೂರ್ತಿಗಳು ಇವೆ. ಬಸವಾದಿ ಶರಣರ ಮೂರ್ತಿಗಳೇಕಿಲ್ಲ ಎಂದು ಪ್ರಶ್ನಿಸಿದರು.

ಕಾಡಸಿದ್ಧೇಶ್ವರ ಮಠದಲ್ಲಿ ಬಸವಾದಿ ಶರಣರ ಮೂರ್ತಿಗಳೇಕಿಲ್ಲ?

ಕನ್ನೇರಿ ಸ್ವಾಮಿ ಅವರ ವಿರುದ್ಧ ಲಿಂಗಾಯತರು, ಬಸವಪರ ಸಂಘಟನೆಗಳೆಲ್ಲ ಒಂದಾಗಿ ಹೋರಾಟ ಮಾಡುವ ಸಂದರ್ಭ ಬಂದಿದೆ ಎಂದು ತಿಳಿಸಿದರು.

ಬಸವಾದಿ ಪ್ರಮಥರ ಪವಿತ್ರ ನೆಲವನ್ನು ಕನ್ನೇರಿ ಸ್ವಾಮಿ ಅವರ ಅಪವಿತ್ರ ಪಾದಗಳು ಸ್ಪರ್ಶಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ಬಸವಣ್ಣನವರ ವಾರಸುದಾರರೆಲ್ಲ ಪ್ರತಿಜ್ಞೆ ಮಾಡುತ್ತೇವೆ ಎಂದು ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ಪುರೋಹಿತಶಾಹಿಗಳಿಂದ ನಡೆಯುತ್ತಿರುವ ಅನ್ಯಾಯ ಬಸವಕಲ್ಯಾಣದ ಪವಿತ್ರ ನೆಲದಲ್ಲಿ ಘಟಿಸಲು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

ಬಸವ ತತ್ವ ಪ್ರಸಾರದ ಹೆಚ್ಚುವಿಕೆ ಜಾತಿವಾದಿಗಳ ನಿದ್ದೆಗೆಡಿಸಿದೆ. ಅದರ ಪರಿಣಾಮವೇ ಕನ್ನೇರಿ ಸ್ವಾಮಿ ಅರಚಾಟ ಎಂದರು.

ಬಸವ ತತ್ವ ಪ್ರಸಾರದ ಹೆಚ್ಚುವಿಕೆ ಜಾತಿವಾದಿಗಳ ನಿದ್ದೆಗೆಡಿಸಿದೆ.

ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬುವಾಲಿ ಮಾತನಾಡಿ, ರಾಜಕೀಯ ರಹಿತವಾಗಿರುವವರನ್ನು ಬಸವ ತಾಲಿಬಾನಿಗಳೆಂದ ಕನ್ನೇರಿ ಸ್ವಾಮಿ ಮಾತುಗಳನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.

ಯಾವುದೇ ರಾಜಕೀಯ ಹಿತಾಸಕ್ತಿಗೆ ಕಟ್ಟು ಬೀಳದೆ, ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ಮಾಡುವುದನ್ನು ವಿರೋಧಿಸುತ್ತೇವೆ. ಯಾವುದೇ ಪಕ್ಷದ ಕೈಗೊಂಬೆಯಾಗದೆ, ಪಕ್ಷಾತೀತವಾಗಿ ಲಿಂಗಾಯತ ಧರ್ಮೀಯರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಅಪಮಾನಿಸಿರುವ ಕನೇರಿ ಸ್ವಾಮಿ ದಂಡ ನಮಸ್ಕಾರ ಹಾಕಿ ಬಸವ ಭಕ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಯಾವುದೇ ಪಕ್ಷದ ಕೈಗೊಂಬೆಯಾಗದೆ, ಪಕ್ಷಾತೀತವಾಗಿ ಲಿಂಗಾಯತ ಧರ್ಮೀಯರು ಹೋರಾಟದಲ್ಲಿ ಭಾಗವಹಿಸಬೇಕು

ಕನ್ನೇರಿ ಸ್ವಾಮೀಜಿ ಬಸವತತ್ವ ಪ್ರಸಾರ ಮಾಡುತ್ತಿರುವ ಲಿಂಗಾಯತ ಮಠಾಧೀಶರನ್ನು ಗುರಿಯಾಗಿಸಿ ನಿಂದನೆ ಮತ್ತು ಅಪಮಾನ ಮಾಡುತ್ತಿದ್ದಾರೆ. ಅಂತಹ ಸ್ವಾಮೀಜಿಯ ಬಸವಕಲ್ಯಾಣ ಪ್ರವೇಶವನ್ನು ಉಗ್ರವಾಗಿ ವಿರೋಧಿಸುತ್ತೇವೆ. ಅವರನ್ನು ತಡೆಯಲು ಯಾವುದೇ ರೀತಿಯ ಉಗ್ರ ಹೋರಾಟ ಮಾಡಲು ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ಬೆಲ್ದಾಳ ಸಿದ್ಧರಾಮ ಶರಣರು, ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಆಳಂದದ ಕೋರಣೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಮತ್ತಿತರರು ಮಾತನಾಡಿದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಮಹಾಲಿಂಗ ದೇವರು, ಪ್ರಭುಲಿಂಗ ಸ್ವಾಮೀಜಿ, ಬಸವ ಮಂಟಪದ ಮಾತೆ ಸತ್ಯದೇವಿ, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಮಾತೆ ಲಾವಣ್ಯ, ಅನಿಲ ಮಹಾರಾಜ, ಬಸವಪ್ರಿಯ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಬಸವದೇವರು, ಶಿವಬಸವ ಸ್ವಾಮೀಜಿ, ಲೋಕೇಶ ಗುರೂಜಿ, ಶ್ರೀಶೈಲ ದೇವರು, ಕಲ್ಯಾಣಮ್ಮ ನೇತೃತ್ವ ವಹಿಸಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ. ಶೆಟಕಾರ, ಮುಖಂಡರಾದ ಶಿವರಾಜ ಪಾಟೀಲ, ಜೈರಾಜ ಖಂಡ್ರೆ, ಸಿದ್ದಯ್ಯ ಕಾವಡಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಕಾರ್ಯದರ್ಶಿ ಜಯದೇವಿ ಯದಲಾಪುರೆ, ಸಂಘಟನಾ ಕಾರ್ಯದರ್ಶಿ ಸುವರ್ಣಾ ಧನ್ನೂರ, ಬಸವ ಕೇಂದ್ರದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಸಾಹಿತಿಗಳಾದ ವಿಜಯಲಕ್ಷ್ಮಿ ಗಡ್ಡೆ, ಡಾ. ಬಸವರಾಜ ಬಲ್ಲೂರು, ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ನಗರ ಘಟಕದ ಅಧ್ಯಕ್ಷ ವಿವೇಕಾನಂದ ಧನ್ನೂರ, ಕಂಟೆಪ್ಪ ಗಂದಿಗುಡಿ, ವಿಜಯಕುಮಾರ ಪಾಟೀಲ ಯರನಳ್ಳಿ, ರಮೇಶ ಪಾಟೀಲ ಚಿಟ್ಟಾವಾಡಿ, ಗಣೇಶ ಬಿರಾದಾರ, ಮಲ್ಲಿಕಾರ್ಜುನ ಪಂಚಾಕ್ಷರಿ, ಉಮೇಶ ಗಾಯತೊಂಡೆ, ಪ್ರವೀಣ ಕಾಡಾದಿ ಹುಲಸೂರು, ವಿನಯ ಮಾಳಗೆ, ರವೀಂದ್ರ ಕೋಳಕೂರ ಬಸವಕಲ್ಯಾಣ, ಕಲಬುರಗಿಯ ರಾಜಶೇಖರ ಎನಕಂಚಿ, ಯೋಗೇಂದ್ರ ಯದಲಾಪುರೆ, ರವಿ ಪಾಪಡೆ, ಓಂಪ್ರಕಾಶ್ ರೊಟ್ಟೆ, ರಾಜಕುಮಾರ ಕಮಠಾಣೆ, ವಿವೇಕ್ ಪಟ್ನೆ, ಶಿವಶರಣಪ್ಪ ಹುಗ್ಗಿ ಪಾಟೀಲ, ಯೋಗೇಶ ಶ್ರೀಗಿರೆ, ಅರವಿಂದ ಕಾರಬಾರಿ, ಗುರುನಾಥ ಬಿರಾದಾರ, ಚಂದ್ರಕಾಂತ ಹಿಪ್ಪಳಗಾಂವ, ಬಸವರಾಜ ಮರೆ, ಬಸವರಾಜ ಜನವಾಡೆ, ವೀರಶೆಟ್ಟಿ ಪಾಟೀಲ, ಶಿವಾನಂದ ಮಹಾದೇವ, ಸುಶೀಲಕುಮಾರ ಜಿವಣಿ ಸೇರಿದಂತೆ ನೂರಾರು ಜನ ಸೇರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
4 Comments
  • ಸಾಕಾಲಿಕ ಮತ್ತು ಮಾಡಲೇಬೇಕಾದ್ದ ಕೆಲಸವನ್ನು ಕೈಗೆಟ್ಟಿಕೊಂಡಿದ್ದಕ್ಕೆ ಧನ್ಯವಾದಗಳು. ಇಡೀ ಬಸವ ಪ್ರಣೀತ ಲಿಂಗಾಯತ ಸಮಾಜ ಮಿಮ್ಮಾ ಬೆಂಬಲಕ್ಕೆ ಇರುತ್ತದೆ.

  • ಸರ್ಕಾರದಿಂದಲೇ ಅವರನ್ನು ತಡೆದು ನಿಲ್ಲಿಸೋ ಕೆಲಸ ಆಗಲಿ ಮತ್ತು ಕಾನೂನಾತ್ಮಕ ಹೋರಾಟ ನಡೆಯಲಿ

Leave a Reply

Your email address will not be published. Required fields are marked *