ವೀರಣ್ಣ ರಾಜೂರ ದತ್ತಿ ಸಮಾರಂಭ
ಧಾರವಾಡ:
ಹಿರಿಯ ಕಲಾವಿದ ಎಂ. ಎಸ್. ಕೊಟ್ರೇಶ್ ಅವರಿಗೆ ಜೀವನವೇ ರಂಗಭೂಮಿಯಾಗಿತ್ತು. ಅವರು ಸುಮಾರು ೬೪ ವರ್ಷಕ್ಕೂ ಹೆಚ್ಚುಕಾಲ ರಂಗಭೂಮಿಗೆ ಸೇವೆ ಸಲ್ಲಿಸಿದ್ದು ಸಣ್ಣ ಸಂಗತಿಯಲ್ಲ. ಇದು ಒಂದು ದಾಖಲೆ ಎಂದು ಸಾಹಿತಿ ಡಾ. ಬಾಳಣ್ಣ ಶೀಗೀಹಳ್ಳಿ ಅಭಿಪ್ರಾಯಪಟ್ಟರು.
ಅವರು, ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ವೀರಣ್ಣ ರಾಜೂರ ದತ್ತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಜಮಾರ್ಗ ಪ್ರಶಸ್ತಿ’ ಪ್ರದಾನ, ರಂಗ ಗೌರವ ಮತ್ತು ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಭಿನಂದನಾ ಪರವಾಗಿ ಮಾತನಾಡಿದರು.

ಎಂ. ಎಸ್. ಕೊಟ್ರೇಶ್ ಓದಿದ್ದು ಕಡಿಮೆಯಾದರೂ ಅಪಾರವಾದ ಜೀವನಾನುಭವ ಹೊಂದಿದವರು. ಬಾಲ್ಯದಿಂದಲೇ ರಂಗಕಲೆಯ ಬಗ್ಗೆ ಆಸಕ್ತಿ ಹೊಂದಿದ ಇವರಿಗೆ ಹೆಚ್ಚು ಕೀರ್ತಿ ತಂದ ನಾಟಕಗಳೆಂದರೆ, ಸಂತ ಶಿಶುನಾಳ ಶರೀಫ ಸಾಹೇಬ ಮಹಾತ್ಮೆ, ಹುಬ್ಬಳ್ಳಿ ಸಿದ್ಧಾರೂಢರ ಮಹಾತ್ಮೆ, ಅಜಾತ ನಾಗಲಿಂಗ ಲೇಲೆ. ಈ ಮೂರು ನಾಟಕಗಳು ಸುಮಾರು ೨೫೦೦೦ ಪ್ರಯೋಗ ಕಂಡಿದ್ದು ದಾಖಲೆ. ಸುಮಾರು ೩೮ ನಾಟಕಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದಿಂದ ಜನಮಾನಸದಲ್ಲಿ ಉಳಿದಿದ್ದಾರೆ.
ಗುಬ್ಬಿ, ಸುಳ್ಳ, ಗುಡಗೇರಿ, ಗೋಕಾಕ ಕಂಪನಿಗಳಲ್ಲಿ ರಂಗಸೇವೆ ಸಲ್ಲಿಸಿದ ಇವರು ೧೯೮೯ ರಲ್ಲಿ ಕೊಟ್ಟೂರೇಶ್ವರ ನಾಟಕ ಮಂಡಳಿ ಸ್ಥಾಪಿಸಿ ಕಲಾ ಸೇವೆ ಮುಂದುವರೆಸಿದ್ದಾರೆ. ಇವರ ಸಂಪತ್ತಿಗೆ ಸವಾಲು ಭದ್ರನ ಪಾತ್ರ ವೀಕ್ಷಿಸಿದ ಡಾ. ರಾಜಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರಂತೆ ಪಂಡಿತ ಪುಟ್ಟರಾಜ ಗವಾಯಿಗಳಿಂದಲೂ ಪ್ರಶಂಸಿಸಲ್ಪಟ್ಟವರು ಎಂದರು.
ವೃತ್ತಿ ರಂಗಭೂಮಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನೈತಿಕ ಜೀವನ ಸಾಗಿಸಿದ ಇವರ ರಂಗಚಿಂತನೆಗಳು ರಾಜ್ಯದ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತ್ತು. ರಂಗ ಜೀವನದಲ್ಲಿ ಅನೇಕ ಸಮಸ್ಯೆ ಎದುರಿಸಿ ದೃತಿಗೆಡದೆ ರಂಗಸಾಧನೆ ಮಾಡಿದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೇರು ಕಲಾವಿದ ಎಂದರು.
ರಾಜಮಾರ್ಗ ಪ್ರಶಸ್ತಿ ಸ್ವೀಕರಿಸಿದ ಎಂ. ಎಸ್. ಕೊಟ್ರೇಶ ಮಾತನಾಡಿ, ಡಾ. ವೀರಣ್ಣ ರಾಜೂರ ಅವರ ಹೆಸರಿನಿಂದ ಅವರ ಶಿಷ್ಯರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿ ಇರಿಸಿ ನಮ್ಮಂಥ ಕಲಾವಿದರನ್ನು ಗೌರವಿಸುವುದು ಅಭಿನಂದನೀಯ. ವೃತ್ತಿರಂಗಭೂಮಿಯಲ್ಲಿ ನಾನು ನಟನಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದ ನಾನು ಕೊನೆಗೆ ಧಾರವಾಡಕ್ಕೆ ಬಂದು ನೆಲೆಯೂರಬೇಕಾಗಿ ಬಂದಾಗ ನನ್ನ ಹಸಿವಿನ ದಾಹ ತೀರಿಸಿದವರು ಶಂಕರ ಹಲಗತ್ತಿ, ಡಾ. ಸಿದ್ಧನಗೌಡ ಪಾಟೀಲರು ಅವರನ್ನು ಸ್ಮರಿಸಲೇಬೇಕು.
ಮೈಸೂರು ಮಹಾರಾಜರ ಒತ್ತಾಸೆಯ ಮೇರೆಗೆ ದಶಾವತಾರ ನಾಟಕ ಪ್ರದರ್ಶನ ಮಾಡಿ ಮಹಾರಾಜರಿಂದ ಪುರಸ್ಕರಿಸಲ್ಪಟ್ಟಿದ್ದು ನನ್ನ ಭಾಗ್ಯ. ಮಹಾನ್ ಶರಣರ ಪಾತ್ರ ನಿರ್ವಹಿಸಿದ್ದರಿಂದ ಅವರ ಕೃಪೆ ನನ್ನ ಮೇಲಿದೆ. ಬೇಂದ್ರೆಯವರು ನನ್ನ ನಾಟಕವನ್ನು ವೀಕ್ಷಿಸಿ ರಂಗಭೂಮಿ ಚಲಿಸುವ ವಿಶ್ವವಿದ್ಯಾಲಯ ಇದ್ದಂತೆ ಎಂದು ಹೇಳಿ ನಿನಗೆ ರಂಗಭೂಮಿಯಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹರಿಸಿದ್ದನ್ನು ಸ್ಮರಿಸಿಕೊಂಡರು.
ರಂಗಗೌರವ ಸ್ವೀಕರಿಸಿದ ಕಲಾವಿದ ಪ್ರಭು ಹಂಚಿನಾಳ ಹಾಗೂ ಗೋಕಾಕದ ರೇವಣಸಿದ್ದಪ್ಪ ನೂಲ್ವಿ ಮಾತನಾಡಿ, ಡಾ. ವೀರಣ್ಣ ರಾಜೂರ ಸರ್ ದತ್ತಿ ಕಾರ್ಯಕ್ರಮದಲ್ಲಿ ನಮಗೆ ರಂಗಗೌರವ ನೀಡಿದ್ದು ಖುಷಿ ತಂದಿದೆ. ರಂಗಭೂಮಿ ಯಾವುದೇ ಜಾತಿಗೆ ಸೀಮಿತವಾದುದಲ್ಲ. ಅದು ಒಲಿಯುವುದು ಒಂದು ಅದೃಷ್ಟ. ರಂಗನಟರು ಪರಕಾಯ ಪ್ರವೇಶಿಸಿ ಅಭಿನಯಿಸಬೇಕಾಗುತ್ತದೆ. ರಂಗಭೂಮಿ ಹಿಂದಿನ ವೈಭವ ಇಂದು ಇಲ್ಲ ಎಂದು ವಿಷಾದಿಸಿದರು.
ಡಾ. ವೀರಣ್ಣ ರಾಜೂರ ಮಾತನಾಡಿ, ಎಂ.ಎಸ್. ಕೊಟ್ರೇಶ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಸಿಗಬೇಕು. ಈ ಪ್ರಶಸ್ತಿ ಅವರಿಗೆ ನೀಡುವುದರ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷರಾದ ಡಾ. ಪಾಂಡುರಂಗ ಪಾಟೀಲ ಮಾತನಾಡಿ, ರಂಗಭೂಮಿಗೆ ಹೊಸ ತಲೆಮಾರಿನ ಕಲಾವಿದರು ಸೃಷ್ಟಿಯಾಗಬೇಕು. ರಂಗಕಲೆ ಉಳಿಯಬೇಕು, ಬೆಳೆಯಬೇಕು ಅದು ಎಂದೂ ಬಡವಾಗಬಾರದು. ಕಲೆ, ಕಲಾವಿದರನ್ನು ಬದುಕಿಸುವ ಕಾರ್ಯವಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ವೀರಣ್ಣ ರಾಜೂರ ಅವರ ‘ಬಸವಣ್ಣ’ ಹಾಗೂ ಅಕ್ಕಮಹಾದೇವಿಯ ವಚನಗಳು’ ಎರಡು ಕೃತಿಗಳು ಲೋಕಾರ್ಪಣೆಗೊಂಡವು.
ಸತೀಶ ತುರಮರಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಬೆಂಗೇರಿ, ಡಾ. ರಾಮೂ ಮೂಲಗಿ, ಡಾ. ಮಲ್ಲಿಕಾರ್ಜುನ ಕುಂಬಾರ, ಡಾ. ಕಲ್ಮೇಶ ಹಾವೇರಿಪೇಟ, ಡಾ. ಚಂದ್ರಶೇಖರ ರೊಟ್ಟಿಗವಾಡ ಡಾ. ವೈ. ಎಂ. ಯಾಕೊಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
