ಅರ್ಧ ವಚನ ಮುಚ್ಚಿಟ್ಟು ಬಸವಣ್ಣನವರ ಬಗ್ಗೆ ಸುಳ್ಳು ಹೇಳಿದ ಕನ್ನೇರಿ ಸ್ವಾಮಿ

ಎಂ. ಎ. ಅರುಣ್
ಎಂ. ಎ. ಅರುಣ್

ಪ್ರಾಮಾಣಿಕತೆಯ ಜೊತೆ ಇದ್ದ ತುಣುಕು ಬುದ್ಧಿಯನ್ನೂ ಕಳೆದುಕೊಂಡಿರುವುದು ಈ ಕನ್ನೇರಿ ಸ್ವಾಮಿಯ ದೌರ್ಭಾಗ್ಯ.

ಬೆಂಗಳೂರು

ಗದಗದಲ್ಲಿ ನಡೆದ ಹಿಂದುತ್ವ ಸಮ್ಮೇಳನದಲ್ಲಿ ಕನ್ನೇರಿ ಸ್ವಾಮಿ ಹೇಳಿದ ಅನೇಕ ವಚನಗಳು ಚರ್ಚೆಯಾಗುತ್ತಿದೆ.

ತಮ್ಮ ಭಾಷಣದಲ್ಲಿ ಬಸವಣ್ಣ ವೈದಿಕ ವಿರೋಧಿಯಲ್ಲ, ಅವರನ್ನು ಪುರಾಣ ವಿರೋಧಿ ಎಂದು ಬಿಂಬಿಸುವುದು ತಪ್ಪು ಎಂದು ಕನ್ನೇರಿ ಸ್ವಾಮಿ ಹೇಳಿದರು.

ಬಸವಣ್ಣ ವೇದ, ಪುರಾಣಗಳನ್ನು ಒಪ್ಪಿಕೊಂಡಿದ್ದಾರೆ ರಾಮಾಯಣ ಮಹಾಭಾರತದ ಬಗ್ಗೆ ‘ಚಂದ’ ಮಾತಾಡಿದ್ದಾರೆ, ಶ್ರೀ ರಾಮನನ್ನು ‘ಕೊಂಡಾಡಿದ್ದಾರೆ’ ಎಂದೆಲ್ಲಾ ಹೇಳಿ ಕೆಲವು ವಚನಗಳನ್ನೂ ಸಾಕ್ಷಿಯಾಗಿ ಕೊಟ್ಟರು.

ಕನ್ನೇರಿ ಸ್ವಾಮಿ ಉದಾಹರಣೆ ಕೊಟ್ಟ ಕೆಲವು ವಚನಗಳಲ್ಲಿ ಒಂದನ್ನು ಗಮನಿಸೋಣ:

“ಎಚ್ಚು ಬಾಲಿಯ ಕೊಂದ, ಕಟ್ಟಿದನು ಶರಧಿಯನು,
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ,
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ.”

ಇದು ಕನ್ನೇರಿ ಸ್ವಾಮಿ ಬಸವಣ್ಣನವರ ವಚನ ಮತ್ತದರ ಅರ್ಥ ಹೇಳಿದ ರೀತಿ:

“ಬಾಣ ಬಿಟ್ಟು ಬಲಶಾಲಿಯಾದ ವಾಲಿಯನ್ನು ಕೊಂದ, ವಾನರ ಸೇನೆ ಬಳಸಿ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ, ಹತ್ತು ತಲೆಯ ರಾವಣನನ್ನು ಒಂದೇ ಅಂಬಿನಿಂದ ಸಂಹರಿಸಿದ, ತನ್ನ ಛಲದಿಂದ ಲಂಕಾ ದ್ವೀಪವನ್ನೇ ಧೂಳೀಪಟ ಮಾಡಿದ .ಶೂರನಾದ ವಿಭೀಷಣನಿಗೆ ಲಂಕೆಯ ಪಟ್ಟಾಭಿಷೇಕ ಮಾಡಿದ.”

ಕನ್ನೇರಿ ಸ್ವಾಮಿಯ ಪ್ರಕಾರ ಈ ವಚನದ ಮೂಲಕ ಬಸವಣ್ಣ ಶ್ರೀ ರಾಮನನ್ನು ಕೊಂಡಾಡಿದ್ದಾರೆ.

ಇಲ್ಲಿ ಒಂದು ದೊಡ್ಡ ಸಮಸ್ಯೆಯಿದೆ.

ಬಸವಣ್ಣನವರಿಗೆ ಜನಿವಾರ ಹಾಕುವ ಭರದಲ್ಲಿ ಕನ್ನೇರಿ ಸ್ವಾಮಿ ಪೂರ್ತಿ ವಚನ ಹೇಳದೆ, ಕೊನೆಯ ಈ ಮೂರು ಸಾಲು ಎಗರಿಸಿಬಿಟ್ಟರು.

ಅವುಗಳನ್ನೂ ಸೇರಿಸಿ, ಈಗ ಇದು ಪೂರ್ಣ ವಚನದ ಪಠ್ಯ ನೋಡೋಣ:

ಎಚ್ಚು ಬಾಲಿಯ ಕೊಂದ, ಕಟ್ಟಿದನು ಶರಧಿಯನು,
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ,
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ.
ಮಾಯದ ಸಂಸಾರವ ನಚ್ಚಿ, ಕೆಟ್ಟು
ಬರುದೊರೆವೊಗಬೇಡ.
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ.

ಸಂಘ ಪರಿವಾರವೂ ಅಧಿಕೃತ ಎಂದು ಒಪ್ಪಿಕೊಂಡಿರುವ ಎಂ ಎಂ ಕಲಬುರ್ಗಿ ಅವರು ಸಂಪಾದಿಸಿರುವ ವಚನ ಸಂಪುಟದಲ್ಲಿ (೬೨೩) ಈ ಏಳು ಸಾಲುಗಳೂ ಇವೆ.

ತರಳಬಾಳು ಮಠದ ಜನಪ್ರಿಯ ವಚನ ಸಂಪುಟದಲ್ಲಿಯೂ ಈ ಏಳು ಸಾಲುಗಳೂ ಇವೆ.

ಆದರೆ ಶತಾವಧಾನಿ ಕನ್ನೇರಿ ಸ್ವಾಮಿ ಸಂಪಾದಿಸಿರುವ ದುರುದ್ದೇಶದ ಸಂಪುಟದಲ್ಲಿ ಮಾತ್ರ ಈ ಕೊನೆ ಮೂರು ಸಾಲುಗಳು ಕಣ್ಮರೆಯಾಗಿವೆ.

ಮಾಯದ ಸಂಸಾರವ ನಚ್ಚಿ, ಕೆಟ್ಟು
ಬರುದೊರೆವೊಗಬೇಡ.
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ.

ಇವು ವಚನದ ಬಹು ಮುಖ್ಯ ಸಾಲುಗಳು. ಇವುಗಳಿಂದ ವಚನದ ಪೂರ್ತಿ ಅರ್ಥವೇ ಬದಲಾಗುತ್ತದೆ.

ರಾಮಾಯಣದಲ್ಲಿ ಬರುವ ರಾಮನ ಸಾಹಸಗಳನ್ನೆಲ್ಲ ಹೇಳಿ ಬಸವಣ್ಣ, ರಾಮನಂತೆ ಮಾಯದ ಸಂಸಾರದಲ್ಲಿ ಸಿಲುಕಿ ಕೆಟ್ಟು ಬದುಕ ವ್ಯರ್ಥ ಮಾಡಿಕೊಳ್ಳಬೇಡ ಎಂದು ಹೇಳುತ್ತಾರೆ.

ಇಲ್ಲಿ ‘ಬರುದೊರೆ’ ಗಮನ ಕೊಡಬೇಕಾಗಿರುವ ಪದ. ವಚನಕಾರರು ಬಳಸಿರುವ ಈ ಪದ ‘ವ್ಯರ್ಥ’ ಅಥವಾ ‘ಹಾಳು’ ಎಂಬ ಅರ್ಥ ನೀಡುತ್ತದೆ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ವ್ಯರ್ಥವಾಗಿ (ರಾಮನಂತೆ) ಲೌಕಿಕ ಸುಖದ ಬೆನ್ನತ್ತಬೇಡ, ​ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ ಎಂದು ಬಸವಣ್ಣನವರಿಗೆ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ.

ಪಿ ರುದ್ರಪ್ಪ ಕುರಕುಂದಿ ಅವರು ಬಿಡಿಸಿರುವ ಈ ವಚನದ ಭಾವಾರ್ಥ ನೋಡಿ:

“ರಾಮನಿಗೆ ಅದ್ವೀತಿಯ ಸಾಮರ್ಥ್ಯ ಇದ್ದಿತ್ತು, ಆದರೆ ಅದು ಪ್ರಯೋಗ ಆದದ್ದು ಮಾತ್ರ ಬೇರೆ ರೀತಿಯಲ್ಲಿ. ಅದು ವಾಲಿಯನ್ನು ವಧೆ ಮಾಡಲು, ಸಮುದ್ರಕ್ಕೆ ಸೇತುವೆ ಕಟ್ಟಲು, ರಾವಣನನ್ನು ಕೊಂದು ಲಂಕಾ ಪಟ್ಟಣವನ್ನು ಸುಡಲು, ತನಗೆ ಆಪ್ತನಾಗಿಹ ವಿಭಿಷಣನಿಗೆ ಪಟ್ಟಗಟ್ಟಲು ಬಳಕೆಯಾಯಿತು. ಇವೆಲ್ಲ ಪ್ರಾಪಂಚಿಕ ಕ್ರಿಯೆಗಳೇ ಹೊರತು, ಬದುಕನ್ನು ಸಾರ್ಥಕ ಮಾಡಿಕೊಳ್ಳುವ ಕ್ರಿಯೆಗಳಲ್ಲ ಎನ್ನುವುದು ಈ ವಚನದ ತಾತ್ಪರ್ಯ.”

ಇನ್ನೂ ಅನೇಕ ವಿದ್ವಾಂಸರೂ ಇದನ್ನೇ ಹೇಳಿದ್ದಾರೆ. ಇದು ಹೆಚ್ ತಿಪ್ಪೇರುದ್ರಸ್ವಾಮಿ ಅವರ ನಿರ್ವಚನ:

“ರಾಮನ ಕಥೆಯ ಮೂಲಕ ಸಂಸಾರದ ನಿರರ್ಥಕತೆಯನ್ನು ಇಲ್ಲಿ ನಿರೂಪಿಸುತ್ತಿದ್ದಾರೆ. ರಾಮ ವಾಲಿಯನ್ನು ಕೊಂದು ಸಮುದ್ರಕ್ಕೆ ಸೇತುವೆ ಕಟ್ಟಿದ. ಹತ್ತು ತಲೆಯ ರಾವಣನನ್ನು ಕೊಂದ. ಲಂಕಾದ್ವೀಪವನ್ನು ನೆಲಸಮ ಮಾಡಿದ ಮತ್ತು ವಿಭೀಷಣನಿಗೆ ಪಟ್ಟವನ್ನು ಕಟ್ಟಿದ. ಇಂತಹ ರಾಮ ಕೂಡ ಸಂಸಾರದಲ್ಲಿ ಸುಖಪಡಲಿಲ್ಲ. ಅವನ ಕಥೆ ಅಲ್ಲಿಗೇ ಮುಗಿಯಿತು. ಆದುದರಿಂದ ಈ ಮಾಯದ ಸಂಸಾರವನ್ನು ನೆಚ್ಚಿ ವ್ಯರ್ಥವಾಗಿ ಕೆಟ್ಟು ಹೋಗದೆ, ಬರಿದೆ ನೀರು ಹರಿದು ಹೋದ ಹಾಗೆ ನಿಷ್ಪಲವಾಗದೆ ಕೂಡಲಸಂಗನಿಗೆ ಶರಣಾಗಿ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬುದನ್ನು ಮನದಟ್ಟು ಮಾಡಿಕೊಡಲು ಉದ್ದೇಶಿಸಿದೆ ಈ ವಚನ.”

ಅರ್ಧ ವಚನ ಮುಚ್ಚಿಟ್ಟ ಶತಾವಧಾನಿ ಕನ್ನೇರಿ ಸ್ವಾಮಿ ಹೇಳುವಂತೆ ಬಸವಣ್ಣ ರಾಮನನ್ನು ಕೊಂಡಾಡುತ್ತಿದ್ದಾರೋ ಅಥವಾ ಟೀಕಿಸುತ್ತಿದ್ದಾರೋ ನೀವೇ ನೋಡಿ.

ಪ್ರಾಮಾಣಿಕತೆಯ ಜೊತೆ ಇದ್ದ ತುಣುಕು ಬುದ್ಧಿಯನ್ನೂ ಕಳೆದುಕೊಂಡಿರುವುದು ಈ ಕನ್ನೇರಿ ಸ್ವಾಮಿಯ ದೌರ್ಭಾಗ್ಯ.

ಈ ಹಿಂದುತ್ವ ಸಮಾವೇಶಗಳಲ್ಲಿ ಕನ್ನೇರಿ ಸ್ವಾಮಿ ಮೂಲಕ ಸಂಘ ಪರಿವಾರದವರು ವಚನಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಸಂಘ ಪರಿವಾರದವರು ಬಸವಣ್ಣನವರು ವೈದಿಕತೆಯ ಪ್ರತಿಪಾದಕ ಎಂದು ಅಪಪ್ರಚಾರ ಮಾಡಲು ‘ಬಸವ ಶೈವ’ ಎಂಬ ಪುಸ್ತಕ ಬರೆಸಿದ್ದಾರೆ. ಈ ಪುಸ್ತಕದ ದುರುದ್ದೇಶದ ವಾದಗಳನ್ನೇ ಕನ್ನೇರಿ ಸ್ವಾಮಿ ಈ ಸಮಾವೇಶಗಳಲ್ಲಿ ಮಂಡಿಸುತ್ತಿರುವುದು.

ಗದಗಿನಲ್ಲಿ ಕನ್ನೇರಿ ಸ್ವಾಮಿ ಬಸವಣ್ಣನವರ ಪ್ರಸಿದ್ಧ ‘ವೇದಕ್ಕೆ ಒರೆಯ ಕಟ್ಟುವೆ” ವಚನವನ್ನೂ ಹೇಳಿದರು. ಬಸವಣ್ಣ, ಈ ರೀತಿ ಹೇಳಲು ಸಾಧ್ಯವಿಲ್ಲ, ಇದು ಪ್ರಕ್ಷಿಪ್ತ ವಚನ ಎಂದು ಹೇಳಿ ಮಾತು ಮುಗಿಸಿದರು.

ಇದೂ ಕೂಡ ‘ಬಸವ ಶೈವ’ದ ಪುಸ್ತಕದ ವಾದವೇ. ಅದನ್ನೇ ಉರುಹೊಡೆದು ಕನ್ನೇರಿ ಸ್ವಾಮಿ ಹೇಳಿದರು.

ಬಸವ ಶೈವಕ್ಕೆ ಪ್ರತಿಕ್ರಿಯೆಯಾಗಿ ಜಾಗತಿಕ ಲಿಂಗಾಯತ ಮಹಾಸಭಾ ಸಧ್ಯದಲ್ಲೇ ಒಂದು ಪುಸ್ತಕ ಪ್ರಕಟಿಸಲಿದ್ದು, ಅದು ರಾಜ್ಯವಿಡೀ ಬಸವ ಸಂಘಟನೆಗಳ ಸಹಯೋಗದಲ್ಲಿ ಬಿಡುಗಡೆಯಾಗಲಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
5 Comments
  • ಸುನೀಲ ಸಾಣಿಕೊಪ್ಪ ನ್ಯಾಯವಾದಿ ಬೆಳಗಾವಿ says:

    ಇದೇ ರೀತಿ ಸತ್ಯದ ಅನಾವರಣ ಮಾಡಬೇಕು 👏💐💐

  • ನೀವು ಮಾಡಿದ ಅದ್ಭುತ ಪ್ರತಿ ಅಸ್ತ್ರ ಅವರ ಕುಹಕ ಬುದ್ಧಿ ತೆಲೆಕತ್ತರಿಸಿ ಹಾಕುವ ಅಸ್ತ್ರ ಧನ್ಯವಾದಗಳು 💐👏🏻

  • ಕನ್ನೇರಿ ಶ್ರೀಗೆ ಸತ್ಯ ಬೇಕಾಗಿಲ್ಲ, ಜನರನ್ನು ದಾರಿ ತಪ್ಪಿಸುವ ಕೆಲಸವಾಗಬೇಕಾಗಿದೆ ಅಷ್ಟೇ. ಆದ್ದರಿಂದ ಅವರು ಇಂತಹ ವಿವೇಕ ಶೂನ್ಯ ಕೆಲಸಕ್ಕೆ ಕೈ ಹಾಕುದಿದ್ದಾರೆ

  • ವಚನ ತಿರುಚಿವಿಕೆ… ಅವರ ಕೀಳು ಮತಿ ಇವರ ಹಿಂದೆ ಒಂದು ವ್ಯವಸ್ಥೆ ಇದೆ ಅದಕ್ಕೆ ಕೆಲವು ಸ್ವಾಮೀಜಿ ಗಳನ್ನೂ.. ಹೇಗೋ ಕ್ರೋಢಿಕರಿಸಿ ದುರಾಲೋಚನೆ ಸಂಚು ಇದಾಗಿದೆ ಮೊದಲು ಅವರೊಂದಿಗೆ ಹೋದವರ ಬಗ್ಗೆ ಹಿನ್ನೆಲೆ ಇತಿಹಾಸ.. ಎಕನಾಮಿಸ್…. ತಿಳಿದು ಸಂಚು ಬಯಲು ಮಾಡುತ್ತ ಕಾನೂನು ಆಧಾರಿಸಿ.. ಹೋರಾಟ ಮಾಡುವ ಮುತ್ಸದ್ಫಿ.. ತನ ಅಗತ್ಯವಿದೆ 🙏🏻🌹❤️

  • ಕನ್ನೇರಿ ಸ್ವಾಮಿ ಅವಧಾನಿಯೇ ಅಲ್ಲ. ಅವನನ್ನು ಶತಾವಧಾನಿ ಎಂದು ಕರೆದಿದ್ದೀರಿ. ಅವಧಾನಿ ಎಂದರೆ ಮನಸ್ಸಿನ ಏಕಾಗ್ರತೆ ಉಳ್ಳವನು. ಮನೋ ಚಂಚಲ ರಹಿತನು. ಬಸವಾದಿ ಶರಣರು ಸಮ ಸಮಾಜ ಕಟ್ಟುವಲ್ಲಿ, ಲಿಂಗಾನುಸಂಧಾನ ಮಾಡುವಲ್ಲಿ ಅವಧಾನಿಗಳಾಗಿದ್ದು ಶ್ರೇಷ್ಠ ಜೀವನ ನಡೆಸಿದವರು. ಆದರೆ ಕನ್ನೇರಿಯಂತವರು ಮತ್ತೆ ಮತ್ತೆ ಜನಗಳ ಮನಸ್ಸಿನಲ್ಲಿ ಮೌಲ್ಯ ತುಂಬುವ, ವಚನಗಳನ್ನು ತಿರುಚುವ, ಸಾತ್ವಿಕರನ್ನು ತುಳಿಯುವ ಕಾರ್ಯದಲ್ಲಿ ತಲೆಯಿಲ್ಲದ ಪ್ರಾಣಿಯಂತೆ, ಪರರ ಮಾತಿಗೆ ಸೊಪ್ಪು ಹಾಕುವ ಅವಧಾನಿಗಳಿರಬಹುದೇನೋ. ಆದರೂ ಇಷ್ಟೊಂದು ದೊಡ್ಡ ಪದ ಅವನರಿಗೆ ಭೂಷಣವಲ್ಲ.
    ಕಾಡಸಿದ್ದೇಶ್ವರ ಶರಣರ ಒಂದು ವಚನವನ್ನು ಯಾವುದೇ ಒಂದು ವಚನವನ್ನು ಯಾವುದೇ ಒಂದು ಸಮಾವೇಶದಲ್ಲಿ ಹೇಳುವ ಮೂಲಕ ಅರ್ಥೈಸಿ ಜನಗಳಿಗೆ ತಿಳಿಯಪಡಿಸಲಿ.
    ಸುಳ್ಳನ್ನು ಸಾವಿರ ಬಾರಿ ಹೇಳುವ ಮೂಲಕ ಅದೇ ಸತ್ಯ ಎಂದು ಪ್ರತಿಪಾದಿಸುವ ಉಂಡ ಮನೆಗೆ ಎರಡು ಬಗೆಯುವ ದ್ರೋಹಿ.

Leave a Reply

Your email address will not be published. Required fields are marked *