‘ವಿಷಯ ವಾಸನೆಗೆ ಒಳಗಾದವರು ಶರಣರಾಗಲು ಸಾಧ್ಯವಿಲ್ಲ’
ಗುಳೇದಗುಡ್ಡ:
ಬಸವ ಕೇಂದ್ರದ ವತಿಯಿಂದ ಶನಿವಾರ ಮಹೇಶ್ವರಿ ಕುಪ್ಪಸ್ತ ಅವರ ಮನೆಯಲ್ಲಿ ‘ಮಹಾಮನೆ ಕಾರ್ಯಕ್ರಮ ನಡೆಯಿತು.
ಅಂದು ಚಿಂತನೆಗಾಗಿ ಆಯ್ದುಕೊಂಡ ವಚನ ಹೀಗಿದೆ.
ಏತ ತಲೆವಾಗಿದರೇನು? ಗುರು ಭಕ್ತನಾಗಬಲ್ಲುದೆ ಇಕ್ಕುಳ ಕೈ ಮುಗಿದರೇನು ಭೃತ್ಯಾಚಾರಿ ಅನಿಸಬಲ್ಲದೆ ಗಿಳಿಯು ಓದಿದರೇನು? ಲಿಂಗವೇಧಿ ಆಗಬಲ್ಲದೆ ಕೂಡಲಸಂಗನ ಶರಣರ ಬರವು, ನಿಂದ ನಿಲವ ಅಂಗಸಂಗಿಗಳು ಎತ್ತಬಲ್ಲರು?
ಧರ್ಮಗುರು ಬಸವಣ್ಣನವರ ಈ ವಚನದ ಚಿಂತನೆಗೆ ತೊಡಗಿದ ಪ್ರೊ. ಶ್ರೀಕಾಂತ ಗಡೇದವರು, ಶರಣರು ಕೇವಲ ವಚನಗಳನ್ನು ರಚಿಸಲಿಲ್ಲ ಅವುಗಳನ್ನು ಬದುಕಿನ ದಾರಿ ದೀಪವನ್ನಾಗಿಸಿದರು. ಮನುಷ್ಯನಿಗೆ ಕಷ್ಟ ಸುಖಗಳು ಇರುವವೇ. ಅವನ್ನು ಸಹಜವಾಗಿ ಸ್ವೀಕರಿಸಿ ಅಂತರಂಗ ಬಹಿರಂಗಗಳಲ್ಲಿ ಅಳವಡಿಸಿಕೊಂಡು ಶುದ್ಧರಾಗಬೇಕು. ಎಂತಹ ಜನರನ್ನೂ ಸನ್ಮಾರ್ಗಕ್ಕೆ ಎಳೆಯುವ ಶಕ್ತಿ ಗುರು ಲಿಂಗ ಜಂಗಮಕ್ಕಿದೆ. ಅವು ಆಡಂಬರದ ವೇಷಧರಿಸುವುದಕ್ಕಲ್ಲˌ ಒಳ ಹೊರಗನ್ನು ಒಂದು ಮಾಡಿ ಲಿಂಗ ಬದುಕನ್ನು ಬಾಳಲು. ಇಂಥವರು ಮಾತ್ರ ಶರಣರ ನಿಲುವನ್ನು ಅರಿಯುತ್ತಾರಲ್ಲದೆˌ ವಿಷಯ ವಾಸನೆಗೆ ಒಳಗಾಗಿ ವ್ಯಕ್ತಿತ್ವವನ್ನು ನಾಶ ಮಾಡಿಕೊಂಡವರು ಎಂದೂ ಶರಣರಾಗಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

ಮಹಾಂತೇಶ ಸಿಂದಗಿ ಅವರು ವಚನವನ್ನು ಕುರಿತು ಮಾತನಾಡುತ್ತಾ, “ಬಸವಣ್ಣನವರು ಅಂದು ಸ್ತ್ರೀ ಪುರುಷ ಭೇದವಿಲ್ಲದೆ ಅಂಗೈಗೆ ಲಿಂಗವನ್ನು ನೀಡಿ ಅನುಭಾವವನ್ನು ಉಣಪಡಿಸಿದರು. ವಚನಗಳ ಮೂಲಕ ಪಂಚಾಚಾರ ಷಟಸ್ಥಲಗಳನ್ನು ಬೋಧಿಸಿದರು. ಪಂಚಾಚಾರ ಅಂತರ್ಗತವಾದ ಭೃತ್ಯಾಚಾರ ಬಹಳ ವಿಶಿಷ್ಟವಾದದ್ದು ಭಕ್ತನಾದವನು ಕೇವಲ ನಮಸ್ಕಾರ ಚಮತ್ಕಾರಗಳ ಡಾಂಬಿಕನಾಗಬಾರದು. ನಿರ್ಜೀವ ಇಕ್ಕಳವು ಸಹಿತ ಕೈಜೋಡಿಸುತ್ತದೆ ಹಾಗೆಂದ ಮಾತ್ರಕ್ಕೆ ಅದಕ್ಕೆ ಭಕ್ತಿಯೆನ್ನಲಾದಿತೇ ಭೃತ್ಯಾಚಾರಿ ಎನ್ನಲಾದೀತೆ?, ಇಲ್ಲ. ಆದುದರಿಂದ ಒಳಹೊರಗನ್ನೆಲ್ಲ ಒಂದು ಮಾಡಿ ಅರಿವಿನ ಹಾದಿ ಹಿಡಿದು ಲಿಂಗಸಂಗಿಯಾಗಿ ಗುರುಲಿಂಗ ಜಂಗಮಕ್ಕೆ ತನು-ಮನ ಭಾವಗಳನ್ನು ಅರ್ಪಿಸಿದಾಗ ಮಾತ್ರ ಆತ ಪಂಚಾಚಾರ ಸಂಪನ್ನನಾಗುತ್ತಾನೆ” ಎಂದು ಈ ವಚನವನ್ನು ವಿವರಿಸಿದರು.

ಡಾ. ಗಿರೀಶ್ ನೀಲಕಂಠಮಠ ಅವರು, ಈ ವಚನದ ಒಂದೊಂದು ಸಾಲನ್ನು ವಿವರಿಸುತ್ತ” ಏತತಲೆ ಬಾಗಿದ ಮಾತ್ರಕ್ಕೆ ಗುರು ಭಕ್ತನಾಗುವುದಿಲ್ಲ. ಅದು ನೀರನ್ನು ತನ್ನ ಒಡಲಲ್ಲಿ ತುಂಬಿಕೊಳ್ಳಬೇಕಾದರೆ ಮೊದಲು ಬಾಗಿ ನಂತರ ನೀರನ್ನು ಹೀರಿಕೊಳ್ಳಬೇಕು. ಮತ್ತೆ ಮೇಲೆ ಬಂದು ನೀರು ಸುರಿದು ಮರಳಿ ನೀರನ್ನು ತರಬೇಕು. ಇಲ್ಲಿ ಏತ ಬಾರಿಬಾರಿಗೂ ತಲೆಬಾಗಿಸುವುದರಿಂದ ಹೇಗೆ ವಿನೀತ ಭಾವ ಅಳವಡಲಿಕ್ಕೆ ಸಾಧ್ಯವಿಲ್ಲವೋ ಹಾಗೆ ಕೇವಲ ಯಾಂತ್ರಿಕವಾಗಿ ಗುರು ಲಿಂಗ ಜಂಗಮಕ್ಕೆ ಬಾಗಿದ ಮಾತ್ರಕ್ಕೆ ಗುರುಭಕ್ತನಾಗಲಾರ.
ಅಂತೆಯೇ ಭೃತ್ಯಾಚಾರಿ ಆದಾತ ಶಿವಶರಣರೇ ಹಿರಿಯರಾಗಿ ತಾನೇ ಕಿರಿಯನಾಗಿ ಭಯಭಕ್ತಿಯಿಂದ ಶರಣ ರೊಂದಿಗೆ ನಡೆದುಕೊಳ್ಳಬೇಕು. ಭಕ್ತಿ ಎಂಬ ನೀರನ್ನು ಕಲ್ಲಿನಂತೆ(ವ್ಯರ್ಥವಾಗಿ)ಹೀರಿಕೊಳ್ಳದೆ ಸ್ಪಂಜಿನಂತೆ ಹೀರಿಕೊಳ್ಳಬೇಕು. ಇಲ್ಲಿನ ಏತ ಇಕ್ಕುಳ ಗಿಳಿಯ ಪ್ರತಿಮೆಗಳಂತಾಗದೆˌ ತತ್ವಗಳನ್ನು ಕೇವಲ ಓದದೆ ಅವನು ಅರಗಿಸಿಕೊಂಡು ಅರ್ಥೈಸಿಕೊಂಡು ಅಳವಡಿಸಿಕೊಂಡು ಅನುಭಾವಿಯಾಗಬೇಕು. ಅಂತವರು ಮಾತ್ರ ಶರಣರಾಗುತ್ತಾರೆ ಹಾಗೂ ಶರಣ ಧರ್ಮವನ್ನು ಬಾಳುತ್ತಾರೆ. ಅನುಭವವನ್ನು ಅಳವಡಿಸಿಕೊಳ್ಳುವುದುˌ ತಾನೇ ಲಿಂಗವೆಂಬ ಭಾವದಲ್ಲಿರುವುದೇ ಶರಣರ ಬರವು ಹಾಗೂ ನಿಲವು ಇವು ತನಗೆ ಸಾಧ್ಯವಾಗುವುದೇ ಸಮರಸ ಸ್ಥಿತಿ” ಯೆಂದು ಪ್ರತಿಪಾದಿಸಿದರು.

ಸಿದ್ದಲಿಂಗಪ್ಪ ಬರಗುಂಡಿ ವಚನದ ಸಮಾರೋಪ ಮಾಡಿದರು. ಪ್ರಾರಂಭದಲ್ಲಿ ಶರಣೆಯರಾದ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆಯಾಯಿತು. ಕೊನೆಯಲ್ಲಿ ಶರಣ ಮುರುಗೇಶ ಶೇಖಾ ಅವರಿಂದ ವಚನ ಮಂಗಲವಾಯಿತು.
ಶ್ರೀಗಳಾದ ಮಹದೇವಯ್ಯಸ್ವಾಮಿ ನೀಲಕಂಠಮಠ, ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಬಸವರಾಜ ಖಂಡಿ, ಹುಚ್ಚಪ್ಪ ಎಂಡಿಗೇರಿ, ರಾಚಪ್ಪ ಎಂಡಿಗೇರಿ, ದಾಕ್ಷಾಯಿಣಿ ಪವಾಡಶೆಟ್ಟರ, ಮಹಾಲಿಂಗಪ್ಪ ಕರನಂದಿ, ದಾನಪ್ಪ ಬಂಡಿ, ಪಾಂಡಪ್ಪ ಕಳಸಾ, ರಾಚಣ್ಣ ಕೆರೂರ ಮೊದಲಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
