ಬಸವಧರ್ಮಕ್ಕೆ ನವಚೈತನ್ಯ ತುಂಬಿದವರು ಲಿಂಗಾನಂದ ಸ್ವಾಮೀಜಿ: ಪ್ರೊ. ಪವಾಡಿಗೌಡ್ರ

ಗದಗ:

ಬಸವತತ್ವ ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿದೆಯೆಂದರೆ, ಬಸವಾಭಿಮಾನಿಗಳ ಸಂಖ್ಯೆ ಗಣನೀಯವಾಗಿದೆ ಎಂದರೆ ಅದಕ್ಕೆ ಕಾರಣೀಭೂತರಾದವರು ಪೂಜ್ಯ ಲಿಂಗಾನಂದ ಸ್ವಾಮಿಗಳು.

ಈ ಮಹನೀಯರ ಬಗ್ಗೆ ಮಾತನಾಡುವುದೆಂದರೆ ಬಸವತತ್ವದ ಮೇರು ವ್ಯಕ್ತಿತ್ವದ ಕುರಿತು ಮಾತನಾಡಿದಂತೆ,  ಲಿಂಗಾನಂದ ಸ್ವಾಮೀಜಿ ತಮ್ಮದೇ ಶಿಷ್ಯರಪಡೆ ಕಟ್ಟಿಕೊಂಡು ರಾಜ್ಯದ ಮೂಲೆ ಮೂಲೆಗಳಲ್ಲಿ ವಾರ, ತಿಂಗಳುಗಟ್ಟಲೆ ಉಳಿದುಕೊಂಡು ತಮ್ಮ ಪ್ರವಚನಗಳ ಮೂಲಕ ಬಸವತತ್ವವನ್ನು ಜನಸಾಮಾನ್ಯರಲ್ಲಿ ತಿಳಿಸಿಕೊಟ್ಟ ಪರಿಣಾಮ ಇಂದು ರಾಜ್ಯದೆಲ್ಲೆಡೆ ಬಸವಾದಿ ಶರಣರು, ಲಿಂಗಾಯತ ಧರ್ಮದ ಬಗ್ಗೆ ಪ್ರಜ್ಞೆ ಉಂಟಾಗಿದೆ ಎಂದು ನಿವೃತ್ತ ಪ್ರಾಚಾರ‍್ಯ ಎನ್.ಎಂ. ಪವಾಡಿಗೌಡ್ರ ಹೇಳಿದರು.

ಅವರು ಬಸವದಳದ ೧೭೦೪ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿಗಳ ೩೧ನೇ ಸ್ಮರಣೋತ್ಸವ” ಕಾರ್ಯಕ್ರಮದ ಕುರಿತ ಉಪನ್ಯಾಸ ನೀಡುತ್ತ, ಅಂದು ವೇದಾಗಮ, ಜಾತಿ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಧಾರ್ಮಿಕ, ಸಾಮಾಜಿಕ ಶೋಷಣೆ, ಸುಲಿಗೆ ಧಿಕ್ಕರಿಸಿ ಹೊಸಧರ್ಮ ಹುಟ್ಟಲು ಕಾರಣೀಭೂತರಾದವರು ಬಸವಣ್ಣ ಹಾಗೂ ಶರಣರು.

ಆದರೆ ಈ ಚಳುವಳಿಗೆ ಕಲ್ಯಾಣಕ್ರಾಂತಿಯ ನಂತರ ಕತ್ತಲು ಆವರಿಸಿದರೂ, ನಂತರ ಹದಿನೈದನೆ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ವಚನ ಸಾಹಿತ್ಯದ ಶೇಖರಣೆ ನಡೆಯಿತು. ಮುಂದೆ ಫ.ಗು. ಹಳಕಟ್ಟಿಯವರು ಪ್ರಕಟಿಸುವ ಮೂಲಕ ಬೆಳಕಿಗೆ ತಂದರು. ಆದರೆ ಈ ಅಪೂರ್ವ ಸಾಹಿತ್ಯ ವ್ಯಾಪಕವಾಗಿ ಜನಸಾಮಾನ್ಯರಿಗೆ ಮುಟ್ಟಲಿಲ್ಲ. ಮಠಗಳಲ್ಲಿ ಉಳಿದುಹೋಯಿತು.

ಈ ಸಂದರ್ಭದಲ್ಲಿ ಸಂಗಮೇಶ ಕಪ್ಪರದ ಎಂಬ ಯುವಕನಿಗೆ ಅದಾವ ಬಸವಪ್ರಜ್ಞೆ ಬಂದಿತ್ತೋ ಕಾವಳದಲ್ಲಡಗಿದ್ದ ಈ ವಚನ ಸಾಹಿತ್ಯವನ್ನು ತಮ್ಮ ಪ್ರವಚನಗಳ ಮೂಲಕ ರಾಜ್ಯಾದ್ಯಂತ, ಹೊರರಾಜ್ಯಗಳಲ್ಲೂ ಸಂಚರಿಸಿ ಬೆಳಕಿಗೆ ತಂದು ಜನಮಾನಸಕ್ಕೆ ಮುಟ್ಟಿಸಿದರೆಂದು ಪವಾಡಿಗೌಡ್ರ ತಿಳಿಸಿದರು.

ಲಿಂಗಾನಂದರದು ಸಾಧಾರಣ ಮನೆತನ, ಅವರ ಪೂರ್ವಾಶ್ರಮದ ಹೆಸರು ಸಂಗಮೇಶ. ವಿಜಯಪುರ ಜಿಲ್ಲೆ ಮನಗೂಳಿ ಗ್ರಾಮದ ಸಾಧಾರಣ ಮನೆತನದಲ್ಲಿ ಹುಟ್ಟಿದ ಲಿಂಗಾನಂದರು ಸ್ನಾತ್ತಕೋತ್ತರ ಪದವಿ ಪಡೆದರು. ಶಿಕ್ಷಕರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದರು. ಮುಂದೆ ತೀವ್ರ ಓದುವ ಬಯಕೆ ಉಂಟಾಗಿ ತತ್ವಶಾಸ್ತ್ರ ತರ್ಕಶಾಸ್ತ್ರ ಸೇರಿದಂತೆ ಹಲವಾರು ವಿಷಯಗಳನ್ನು ಓದಿದರು. ನಂತರ ಅವರ ದೃಷ್ಠಿ ವಚನ ಸಾಹಿತ್ಯದತ್ತ ಹರಿಯಿತು. ಅದೇ ಶರಣಸಾಹಿತ್ಯದ ಮುಸುಕು ಸರಿಸಿದಂತಾಯಿತು.

ವಚನ ಸಾಹಿತ್ಯ ಲಿಂಗಾನಂದರಿಗೆ ಅದ್ಭುತವಾಗಿ ಕಂಡಿತು. ಆದರೆ ಅಂದು ವಚನ ಸಾಹಿತ್ಯದ ಬಗ್ಗೆ ಜ್ಞಾನ ಅಷ್ಟೊಂದು ಪ್ರಮಾಣದಲ್ಲಿರಲಿಲ್ಲ. ಈ ಅಪೂರ್ವ ಸಾಹಿತ್ಯ ಜನಸಾಮಾನ್ಯರಿಗೆ ತಲುಪದೆ ತಾಡೋಲೆಗಳಲ್ಲಿ,  ಮಠಮಾನ್ಯಗಳ, ಹಲವು ಮನೆಗಳ ಗದ್ದುಗೆ ಮೇಲೆಯೇ ನಶಿಸಿ ಹೋಗುತ್ತಿರುವುದಕ್ಕೆ ಮಮ್ಮಲ ಮರುಗಿದ ಅವರು ಇದನ್ನು ಸಮಾಜಕ್ಕೆ ತಲುಪಿಸುವ ಅವಶ್ಯಕತೆ ಮನಗಂಡರು. ಆ ಕಾರಣಕ್ಕಾಗಿಯೇ ಜಂಗಮದೀಕ್ಷೆ ಪಡೆದರು.

ನಿರಂತರವಾದ ವಚನ ಸಾಹಿತ್ಯ ಅಧ್ಯಯನದಿಂದ ಪರಿಪಕ್ವಗೊಂಡ ಅವರು ಮುಂದಿನ ದಿನಮಾನಗಳಲ್ಲಿ ತಮ್ಮ ಗುರಿ ಸಾಧನೆಗೆ ರಾಜ್ಯಾದ್ಯಂತ ಸಂಚರಿಸಿದರು. ತಮ್ಮ ಕಂಚಿನ ಕಂಠದಿಂದ, ವಿದ್ವತ್‌ಪೂರ್ಣ ಪ್ರವಚನಗಳಿಂದ ಜನಸಾಮಾನ್ಯರಿಗೂ ವಚನ ಸಾಹಿತ್ಯ, ಲಿಂಗಾಯತ ಧರ್ಮತತ್ವಗಳ ಅರಿವುಂಟಾಗುವಂತೆ ಮಾಡುವಲ್ಲಿ ಸಫಲರಾದರು.

ಅಲ್ಲದೇ ಇವರಿಂದ ಪ್ರಭಾವಿತರಾಗಿ ಇವರ ಶಿಷ್ಯರ ಪಡೆಯೂ ಗಣನೀಯವಾಗಿ ಬೆಳೆಯಿತು. ಮಾತೆ ಮಹಾದೇವಿ, ಮಾತೆ ಗಂಗಾದೇವಿ, ಸತ್ಯಕ್ಕ, ನಿಜಗುಣಾನಂದರು, ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ಇನ್ನು ಅನೇಕ ಸಮರ್ಥ ಶಿಷ್ಯರು ತಯಾರಾಗಿ ಗುರುವಿನ ಪಥದಲ್ಲೇ ನಡೆದರು. ಈ ಕಾರಣ ರಾಜ್ಯಾದ್ಯಂತ ಬಸವತತ್ವ ಜನರಿಗೆ ದೊಡ್ಡಮಟ್ಟದಲ್ಲಿ ತಲುಪಿತು.

ಇದೇ ಸಂದರ್ಭದಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟರು. ಮಾತೇ ಮಹಾದೇವಿಯವರನ್ನು ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಪೀಠಕ್ಕೆ ಜಗದ್ಗುರುವನ್ನಾಗಿಸಿ ರಾಜ್ಯದ ಪ್ರಪ್ರಥಮ ಮಹಿಳಾ ಜಗದ್ಗುರು ನೇಮಿಸಿದ ಕೀರ್ತಿಗೆ ಪಾತ್ರರಾದರು. ಆದರೆ ಇದು ಪುರೋಹಿತಶಾಹಿಗಳ ಕೆಂಗಣ್ಣಿಗೆ ಗುರಿಯಾಯಿತು. ವ್ಯಾಪಕ ಟೀಕೆಗಳು ಬಂದರೂ ಲಿಂಗಾನಂದ ಪೂಜ್ಯರು ಯಾವುದಕ್ಕು ಸೊಪ್ಪು ಹಾಕಲಿಲ್ಲ. ಇದು ನಾಡಿನ ಹೊಸ ಇತಿಹಾಸವಾಗಿದೆ.

ನಂತರ ಲಿಂಗಾಯತರನ್ನು ವರ್ಷದಲ್ಲಿ ಒಂದು ಬಾರಿಯಾದರೂ ಒಂದೆಡೆ ಸೇರಿಸುವ ಯೋಜನೆಯಂತೆ ಕೂಡಲಸಂಗಮದಲ್ಲಿ ‘ಶರಣಮೇಳ’ ಆರಂಭಿಸಿದರು. ಇಂದು ಈ ಮೇಳ ಲಿಂಗಾಯತರಲ್ಲಿ ಬಹುದೊಡ್ಡ ಧರ್ಮಪ್ರಜ್ಞೆಯನ್ನು ತುಂಬಿದೆ. ಇಲ್ಲಿ ಬಸವಣ್ಣ ಧರ್ಮಗುರು, ವಚನ ಸಾಹಿತ್ಯ ಧರ್ಮಗ್ರಂಥ, ವರ್ಗ, ವರ್ಣ, ಜಾತಿ ಮೀರಿ ಶರಣರೆಲ್ಲ ಒಂದೇ ಎನ್ನುವ ತತ್ವದಡಿ ಸೇರಿದ್ದು ಐತಿಹಾಸಿಕವಾಗಿತ್ತು.  ಹಾಗೆಯೇ ಅವರ ಯೋಜನೆಯಂತೆ ‘ಬಸವದಳ’ ಸಂಘಟನೆಯನ್ನು ರಾಜ್ಯಾದ್ಯಂತ ಸ್ಥಾಪಿಸಿದರು.

ಇಲ್ಲಿ ಪ್ರತಿವಾರ ಬಸವತತ್ವದವರು ಸೇರಿ ಲಿಂಗಾಯತ ಧರ್ಮದ ಬಗ್ಗೆ ಚರ್ಚೆ, ಉಪನ್ಯಾಸಗಳ ಮೂಲಕ ಧರ್ಮಪ್ರಜ್ಞೆ ಮತ್ತಷ್ಟು ಅಳವಡಲು ಕಾರಣವಾಯಿತು. ಅವರು ಬರೀ ಉಪನ್ಯಾಸಕರಾಗಿರಲಿಲ್ಲ. ತಮ್ಮ ನಿರಂತರ ಓದುವಿಕೆಯಿಂದ ಪಡೆದ ಜ್ಞಾನವನ್ನು ಗ್ರಂಥಗಳ ರಚನೆಗೂ ತೊಡಗಿಕೊಂಡರು. ಈ ಕಾರಣದಿಂದಾಗಿ ಮಹತ್ವದ ಗ್ರಂಥಗಳು ಪ್ರಕಟಿತವಾದವು.

ಯಾವ ದೊಡ್ಡ ಹಿನ್ನೆಲೆ, ಆಸ್ತಿ, ದೊಡ್ಡಮಠ ಇರದ ಸಾಮಾನ್ಯ ವ್ಯಕ್ತಿಯೊಬ್ಬ ಮಠಗಳ ಕತ್ತಲ ಕೋಣೆಯಲ್ಲಿದ್ದ ವಚನ ಸಾಹಿತ್ಯ ಹೊರತಂದು, ಜಗಕೆ ಪಸರಿಸಿ, ಲಿಂಗಾಯತ ಧರ್ಮಕ್ಕೆ ಹೊಸ ಹೊಳಹು ತುಂಬಿದವರು ಪೂಜ್ಯ ಲಿಂಗಾನಂದ ಸ್ವಾಮೀಜಿಯವರೆಂದು ಪವಾಡಿಗೌಡ್ರ ತಮ್ಮ ಪಾಂಡಿತ್ಯಪೂರ್ಣ ಭಾಷಣದಲ್ಲಿ ಲಿಂಗಾನಂದರ ವ್ಯಕ್ತಿತ್ವ ನಾಟುವಂತೆ ಹೇಳುವಲ್ಲಿ ಯಶಸ್ವಿಯಾದರು.

ನಂತರ ಅತಿಥಿಗಳಾಗಿದ್ದ ಗಿರಿಜಕ್ಕ ಹತ್ತಿಕಾಳ ಹಾಗೂ ಷಣ್ಮುಖ ಕುರ್ನಳ್ಳಿಯವರು ತಮ್ಮ ಸುಶ್ರಾವ್ಯ ವಚನ ಗಾಯನ ಮಾಡಿದರು. ಬಸವದಳದ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ಬಸವದಳದ ಗಂಗಮ್ಮ ಹೂಗಾರರಿಂದ ಜರುಗಿತು. ಸ್ವಾಗತವು ವಿಜಯಕುಮಾರ ಗೋಣಿ ಮಾಡಿದರು. ಪ್ರಕಾಶ ಅಸುಂಡಿಯವರು ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ. ಲಿಂಗದಾಳ ಶರಣು ಸಮರ್ಪಣೆ ಗೈದರು. ಪ್ರಸಾದ ದಾಸೋಹ ವ್ಯವಸ್ಥೆಯನ್ನು ಮಂಜುನಾಥ ಅಂಗಡಿ ಹಾಗೂ ಅವರ ಕುಟುಂಬ ವರ್ಗದವರು ಮಾಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *