ದಾವಣಗೆರೆ:
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಡಾ. ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ದಾವಣಗೆರೆ ಕದಳಿ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲ ಶಿವಕುಮಾರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷೆ ವಿಜಯ ಚಂದ್ರಶೇಖರ್, ಯಶಾ ದಿನೇಶ್, ಪ್ರಮಿಳಾ ನಟರಾಜ, ಪಲ್ಲವಿ ಪಾಟೀಲ್, ಪೂರ್ಣಿಮಾ ಪ್ರಸನ್ನ, ವಾಣಿ ರಾಜ್ ಹಾಗೂ ಇತರ ಸದಸ್ಯರು ವಿವಿಧ ಶರಣರ ಹತ್ತು ವಚನಗಳನ್ನು ಸುಮಧುರವಾಗಿ ಗಾಯನ ರೂಪದಲ್ಲಿ ಪ್ರಸ್ತುತಪಡಿಸಿ ಗಮನ ಸೆಳೆದರು.
ಗುರುಗಳಾದ ರೇವಣ ಸಿದ್ದಪ್ಪ ಅವರು ಹಾರ್ಮೋನಿಯಂನಲ್ಲಿ ಹಾಗೂ ಅಭಿಷೇಕ್ ಅವರು ತಬಲಾ ಸಾಥ್ ನೀಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಡಾ. ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ
ಇಂದಿನ ಪೀಳಿಗೆಗೆ ವಚನ ಸಾಹಿತ್ಯ ಹಾಗೂ ಬಸವ ಸಂಸ್ಕೃತಿಯನ್ನು ತಲುಪಿಸುವಲ್ಲಿ “ವಚನ ಪಿತಾಮಹ” ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಕೊಡುಗೆ ಅನನ್ಯವಾಗಿದೆ.
ಅವರು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಪ್ರಕಟಿಸದೇ ಹೋಗಿದ್ದರೆ ಇಂತಹ ಅಮೂಲ್ಯವಾದ ವಚನ ಸಂಪತ್ತು ಇಂದಿನ ಸಮಾಜಕ್ಕೆ ದೊರೆಯುತ್ತಿರಲಿಲ್ಲ ಎಂದು ಹೇಳಿದರು.

ಎಲ್ಲ ವಚನಕಾರರನ್ನು ಸಮಾನ ದೃಷ್ಟಿಯಿಂದ ಕಂಡು, ಅವರ ವಚನಗಳನ್ನು ಯಾವುದೇ ಭೇದಭಾವವಿಲ್ಲದೆ ಸಂಗ್ರಹಿಸಿ ಜನಸಾಮಾನ್ಯರಿಗೆ ತಲುಪಿಸಿದ ವಿಶಾಲ ಮನೋಭಾವದ ವ್ಯಕ್ತಿತ್ವ ಡಾ. ಫ.ಗು. ಹಳಕಟ್ಟಿಯವರದು ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಉಪನ್ಯಾಸಕಿ ಸುಮತಿ ಜಯಪ್ಪ, ಕನ್ನಡ ವಚನ ಸಾಹಿತ್ಯವನ್ನು ಕನ್ನಡಿಗರ ಹೃದಯಕ್ಕೆ ತಲುಪಿಸಿದ ಮಹಾನ್ ಸಾಧಕರಾದ ಡಾ. ಫ. ಗು. ಹಳಕಟ್ಟಿ ಅವರು 1880ರ ಜುಲೈ 2ರಂದು ಧಾರವಾಡದಲ್ಲಿ ದಾನಮ್ಮ ದೇವಿ ಹಾಗೂ ಗುರುಬಸಪ್ಪ ದಂಪತಿಯ ಪುತ್ರರಾಗಿ ಜನಿಸಿದರು ಎಂದು ತಿಳಿಸಿದರು.
ಜೀವನದುದ್ದಕ್ಕೂ ಅನಾರೋಗ್ಯ, ಕಡುಬಡತನ ಹಾಗೂ ಕುಟುಂಬದಲ್ಲಿ ಸಂಭವಿಸಿದ ಸಾಲು ಸಾಲು ಆಘಾತಗಳ ನಡುವೆಯೂ ಧೃತಿಗೆಡದೆ ವಚನಗಳ ಸಂರಕ್ಷಣೆ, ಸಂಶೋಧನೆ, ಸಂಪಾದನೆ, ಸಂಗ್ರಹಣೆ ಹಾಗೂ ಪ್ರಕಟಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ವಚನಗಳಿಗೆ ಸಂಗೀತ ಅಳವಡಿಸಿ, ಅವುಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ಮೂಲಕ ವಚನ ಸಾಹಿತ್ಯವನ್ನು ವಿಶ್ವದ ಗಮನಕ್ಕೆ ತಂದ ಕೀರ್ತಿ ಅವರದು ಎಂದು ವಿವರಿಸಿದರು.

ಡಾ. ಹಳಕಟ್ಟಿಯವರು ಕೇವಲ ಸಾಹಿತಿಯಷ್ಟೇ ಅಲ್ಲದೆ ವಕೀಲ, ಶಾಸಕ, ಬ್ಯಾಂಕರ್, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಪತ್ರಕರ್ತರಾಗಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಇಡೀ ಜೀವನವನ್ನು ಸಮಾಜದ ಏಳಿಗೆಗಾಗಿ ಮುಡಿಪಾಗಿಟ್ಟ ಅವರು ನಿಜಕ್ಕೂ “ಸಚೇತನ ವಿಶ್ವವಿದ್ಯಾಲಯ”ವಾಗಿದ್ದರು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಡಾ. ಫ.ಗು. ಹಳಕಟ್ಟಿಯವರ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಾಮದೇವಪ್ಪ ಬಿ., ರೈತ ಮುಖಂಡ ರವಿಕುಮಾರ ಸೇರಿದಂತೆ ಸಾಹಿತ್ಯಾಸಕ್ತರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
