ಸಿದ್ಧಲಿಂಗ ಶ್ರೀಗಳಂತೆ ಗವಿಶ್ರೀ ಹೋರಾಟದ ನಾಯಕತ್ವ ವಹಿಸಲಿ: ರವಿಕೃಷ್ಣಾ ರೆಡ್ಡಿ

ಕೊಪ್ಪಳ

ಗದಗ ಜಿಲ್ಲೆಯಿಂದ ಫೋಸ್ಕೋ ಕಂಪನಿಯ ಉಕ್ಕು ಘಟಕವನ್ನು ಓಡಿಸಿದ ಪೂಜ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ನಮಗೆ ಆದರ್ಶ.

ಅವರ ಮಾರ್ಗ ಅನುಸರಿಸಿ ಕೊಪ್ಪಳದಲ್ಲಿ ನಡೆಯುತ್ತಿರುವ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟಕ್ಕೆ ಬೇಗನೆ ಪೂಜ್ಯ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಂತ್ಯ ಕಾಣಿಸಬೇಕು, ಎಂದು ಕೆ.ಆರ್.ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ 250ನೇ ದಿನದ ಬಲ್ಡೋಟ ತೊಲಗಿಸಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.

ನಾಡು ಕಾಯಲು ಹೋರಾಟಗಾರರಿಗೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಜವಾಬ್ದಾರಿಯ ಬಾಧ್ಯತೆ ಧರ್ಮಗುರುಗಳಿಗಿದೆ.

ನಾಡಿನ ನೆಲಕ್ಕೆ ಕುತ್ತು ಬಂದಾಗ ಏನು ಮಾಡಬೇಕು ಎಂದು ಗದುಗಿನ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳು ತೋರಿಸಿದರು. ಫೋಸ್ಕೋ ಕಂಪನಿ ಭೂ ಅತಿಕ್ರಮಣ ಮಾಡಲು ಮುಂದಾದಾಗ, ಬಲ್ಡೋಟ ಎಂ.ಎಸ್.ಪಿ.ಎಲ್. ಕಪ್ಪತ್ತಗುಡ್ಡ ಗಣಿಗಾರಿಕೆ ಮಾಡಲು ಮುಂದಾದಾಗ ಅವರನ್ನು ಓಡಿಸಿದ ಹೋರಾಟ ನಮಗೆ ಆದರ್ಶ.

ಇಲ್ಲಿನ ಗವಿಶ್ರೀಗಳು ತಮ್ಮ ಮಾನವತಾವಾದಿ ಚಿಂತನೆಯಿಂದ ಪ್ರಖ್ಯಾತಿ ಪಡೆದಿದ್ದಾರೆ. ಅವರು ಬಲ್ಡೋಟ ವಿರುದ್ಧ ಹೋರಾಡಲು ಮುಂದಾದ ಸಂದರ್ಭ ರಾಜ್ಯದ ಜನತೆ ಗಮನಿಸಿದ್ದಾರೆ.

ಇಷ್ಟೊಂದು ದೀರ್ಘಕಾಲಕ್ಕೆ ಹೋರಾಟ ಮುಂದುವರಿಯಬಾರದಿತ್ತು. ಸ್ವಾಮಿಗಳು ಹೀಗೆ ಸಮಸ್ಯೆ ಮುಂದುವರೆಯಲು ಬಿಡಬಾರದು. ಜನರಿಲ್ಲದ ಧರ್ಮ, ಜನರಿಲ್ಲದ ಧರ್ಮಪೀಠ ಇರಲು ಸಾಧ್ಯವಿಲ್ಲ. ಶತಮಾನಗಳಿಂದ ಭಕ್ತರು ಕಟ್ಟಿದ ಶ್ರೀಗವಿಮಠವು ಭಕ್ತರನ್ನು ಕಾಪಾಡಲು ಎಂತಹ ತಪಸ್ಸಿಗೂ ಸಿದ್ಧವಾಗಲಿ, ಕರೆ ನೀಡಿದರು.

ಎರಡು ದಶಕಗಳಿಂದ ಇಲ್ಲಿನ ಮಾಲಿನ್ಯಕಾರಕ ಕಾರ್ಖಾನೆಗಳು 22 ಹಳ್ಳಿಗಳ ಕೃಷಿ ಬದುಕನ್ನು ನಾಶಗೊಳಿಸಿವೆ. ಕಾರ್ಖಾನೆಗಳ ಮಾಲಿನ್ಯದಿಂದ ಕೃಷಿ ಸತತವಾಗಿ ಎರಡು ದಶಕಗಳಿಂದ ನಷ್ಟವಾಗುತ್ತಿದೆ. ಈ ನಷ್ಟದ ಕುರಿತು ಕೃಷಿ ಇಲಾಖೆ ಏನು ವರದಿ ಮಾಡಿದೆ, ಎಂದು ಪ್ರಶ್ನಿಸಿದರು.

ಕೆ.ಆರ್.ಎಸ್. ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಶಾ ವೀರೇಶ ಮಾತನಾಡಿ, ಇಲ್ಲಿನ ಕಂಪನಿಗಳ ಭ್ರಷ್ಟಾಚಾರದಲ್ಲಿ ರಾಜಕಾರಣಿಗಳು ಪಾಲುದಾರರಾಗಿದ್ದು ಇದನ್ನು ಜನರು ಅರಿತುಕೊಂಡು ಜಾಗೃತರಾಗಿ ಭ್ರಷ್ಟಾಚಾರರಹಿತ ರಾಜಕೀಯ ಮಾಡಲು ಮುಂದಾಗಬೇಕು ಎಂದರು.

ಧರಣಿ ಸ್ಥಳದ ಬಹಿರಂಗ ಸಭೆ ಮುಗಿಸಿದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಲವು ವಾದ್ಯ ಪರಿಕರಗಳನ್ನು, ಖಾಲಿತಟ್ಟೆ ಬಾರಿಸಿ, ಅನ್ನ ಕಸಿದುಕೊಳ್ಳಬೇಡಿ ಎನ್ನುವ ಸಂದೇಶ ಸಾರಲು ‘ಕೊಪ್ಪಳ ಸಪ್ಪಳ’ ಮಾಡಿ ಕಿವುಡಾದ ಇಲಾಖೆಗಳ, ರಾಜಕಾರಣಿಗಳ ಕಿವಿ ತೆರೆಸಲು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅಶೋಕ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಸಪ್ಪಳ ಜತೆಗೆ ಬಲ್ಡೋಟ ತೊಲಗಲಿ, ಕೊಪ್ಪಳ ಉಳಿಯಲಿ, ಕೃಷಿ ಉಳಿಸಿ, ಜೀವ ಉಳಿಸಿ, ಬಸಾಪುರ ಕೆರೆ ಮುಕ್ತಗೊಳಿಸಿ, ತುಂಗಭದ್ರಾ ಉಳಿಸಿ ಎಂದು ಘೋಷಣೆ ಕೂಗಲಾಯಿತು.

ರೈತ ಸಂಪರ್ಕ ಕೇಂದ್ರದ ಮುಂದೆ ನಡೆದ ಸಪ್ಪಳ ಪ್ರತಿಭಟನೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ್, ಹೆಡ್ ಕ್ವಾರ್ಟರ್ ಎ.ಡಿ.ಎ. ಅವರನ್ನು ತರಾಟೆಗೆ ತೆಗೆದುಕೊಂಡ ರೈತರು ನಷ್ಟ ಪರಿಹಾರ ಸರ್ಕಾರ ಭರಿಸಿ ಕೊಡಬೇಕೆಂದು ಒತ್ತಾಯ ಮಾಡಿದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ಸಮಾವೇಶಕ್ಕೆ ಬಂದ ಹೋರಾಟದ ಕೆ.ಆರ್.ಎಸ್.ಪಕ್ಷದ ಕಾರ್ಯಕರ್ತರನ್ನು ಸ್ವಾಗತ ಮಾಡಿ ಮಾತನಾಡಿದರು. ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಬಾಕಳೆ ಮಾತನಾಡಿದರು. ಇನ್ನೊಬ್ಬ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.

ಪ್ರತಿಭಟನೆಯಲ್ಲಿ ಕೆ.ಆರ್.ಎಸ್. ಪಕ್ಷದ ಜಂಟಿ ಕಾರ್ಯದರ್ಶಿ ಎಲ್. ಜೀವನ್, ರಾಜ್ಯ ಎಸ್ಸಿ/ಎಸ್ಟಿ ಘಟಕ ಅಧ್ಯಕ್ಷ ಪ.ಯ. ಗಣೇಶ, ಜಿಲ್ಲಾ ಅಧ್ಯಕ್ಷ ಗಣೇಶ ಅಮೃತ, ಆಪ್ ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ, ಜಿಲ್ಲಾ ಕಾರ್ಯದರ್ಶಿ ಮೆಹಬೂಬ ಜಮಕಾನದಾರ, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ, ಸರೋಜಾ ಬಾಕಳೆ, ಮಾಲಾ ಬಡಿಗೇರ, ವಿದ್ಯಾ ನಾಲವಾಡ, ಶಂಭುಲಿಂಗಪ್ಪ ಹರಗೇರಿ, ಡಾ. ಬಸವರಾಜ ಪೂಜಾರ, ಡಿ. ಎಂ. ಬಡಿಗೇರ, ಮಂಜುನಾಥ ಸೊರಟೂರು, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ, ಚೆನ್ನವೀರಯ್ಯ ಹಿರೇಮಠ, ಮಹೇಶ ವದ್ನಾಳ, ಶಿವಪ್ಪ ದೇವರಮನಿ, ಗವಿಸಿದ್ದಪ್ಪ ಪುಟಗಿ, ಗವಿಸಿದ್ದರೆಡ್ಡಿ ರಡ್ಡೇರ, ಮಂಜುನಾಥ ಕೆಂಚನಗೌಡ್ರ, ರಮೇಶ ಡಂಬ್ರಳ್ಳಿ, ಸುಖಮುನಿ ಬಡಿಗೇರ, ಮಹಾದೇವಪ್ಪ ಮಾವಿನಮಡು, ಮಲ್ಲಪ್ಪ ಮಾದಿನೂರು, ಶರಣು ಪಾಟೀಲ, ಬಿ.ಜಿ. ಕರಿಗಾರ, ಡಾ. ವಿ.ಬಿ. ರಡ್ಡೇರ, ಸಲೀಮಾ ಜಾನ್, ಶಾಂತಯ್ಯ ಅಂಗಡಿ, ಹನುಮಂತಪ್ಪ ಗೊಂದಿ, ಯಲ್ಲಪ್ಪ ಬಂಡಿ, ಶಿವಾನಂದಯ್ಯ ಬೀಳಗಿಮಠ, ಯಮನೂರಪ್ಪ ಹಾಲಳ್ಳಿ, ಹನುಮಂತಪ್ಪ ಚಿಂಚಲಿ, ಸಣ್ಮ ಹನುಮಂತ ಬೊಮ್ಮಸಾಗರ, ಲಂಬಾಣಿ ಸಂಪ್ರದಾಯ ಉಡುಗೆಯುಟ್ಟ ಮಹಿಳೆಯರು ಹಾಗೂ ಬಾಧಿತ ಹಳ್ಳಿಗಳ ನೂರಾರು ರೈತರು ಪಾಲ್ಗೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *