The Lamp Bearers – ಇಂಗ್ಲೀಷ್ ಪುಸ್ತಕ ಪರಿಚಯ
ಬೆಳಗಾವಿ
ಪುಸ್ತಕದ ಹೆಸರು : The Lamp Bearers – Where the Vachanas Breathed and Blossomed
ಲೇಖಕರು : ಡಾ. ಸಂತೋಷ ಹಾನಗಲ್ಲ
ಪ್ರಕಾಶಕರು : ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಿತಿ, ಭಾಲ್ಕಿ, ೨೦೨೬
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನಮ್ಮ ದಿನಮಾನದ ಗಟ್ಟಿ ಬಸವತತ್ವದ ಧ್ವನಿಯಾದವರು. ಬಸವತತ್ವದ ಉಳವಿಗಾಗಿ ಲೋಕವನ್ನೆ ಎದುರು ಹಾಕಿಕೊಳ್ಳುವ ಧೀಮಂತಿಕೆಯುಳ್ಳವರು.
ಇಂತಹ ಪೂಜ್ಯರ ಕುರಿತು ಡಾ. ಸಂತೋಷ ಹಾನಗಲ್ಲ ಅವರು The Lamp Bearers – Where the Vachanas Breathed and Blossomed ಎಂಬ ಕೃತಿಯನ್ನು ಬರೆಯುವ ಮೂಲಕ ಪರಮಪೂಜ್ಯರು ವಚನಗಳು ಉಸಿರಾಡಿ ಅರಳಿದ ಅನುಭಾವದ ಲೋಕದಲ್ಲಿ ಬೆಳಕಿನ ವಾಹಕರಾಗಿ ಚೈತನ್ಯಶೀಲರಾಗಿ ಬದುಕಿದ ಒಂದು ಘನವ್ಯಕ್ತಿತ್ವವನ್ನು ಪರಿಚಯಿಸಿಕೊಟ್ಟಿದ್ದಾರೆ.
ಇಂತಹ ಮೌಲಿಕ ಕೃತಿಯು ಇತ್ತೀಚೆಗೆ ಭಾರತದ ಉಪರಾಷ್ಟ್ರಪತಿಗಳಾದ ಡಾ. ಸಿ.ಪಿ.ರಾಧಾಕೃಷ್ಣನ್ ಅವರಿಂದ ಲೋಕಾರ್ಪಣೆಗೊಂಡಿತು.
ಈ ಹಿಂದೆ ರಾಜು ಜುಬರೆ ಅವರು ಬರೆದ ‘ಮಹಾಜಂಗಮ’ ಎಂಬ ಪೂಜ್ಯರ ಜೀವನ ಚರಿತ್ರೆಯನ್ನು ಡಾ. ಅಶ್ವಿನಿ ವಾಗ್ಮೊರೆ ಎನ್ನುವರು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದರು. ಈಗ ಡಾ. ಸಂತೋಷ ಹಾನಗಲ್ಲ ಅವರು ಇಂಗ್ಲಿಷ್ ಭಾಷೆಯಲ್ಲಿ ಪೂಜ್ಯರ ಜೀವನದ ಯಶೋಗಾಥೆಯನ್ನು ಬರೆಯುವ ಮೂಲಕ ಇಂಗ್ಲಿಷ್ ಕೃತಿ ರಚನೆಯಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಪೂಜ್ಯರನ್ನು ಡಾ. ಸಂತೋಷ ಹಾನಗಲ್ಲ ಅವರು ಮೊಟ್ಟಮೊದಲು ೧೯೮೮ರಲ್ಲಿ ಎನ್.ಸಿ.ಸಿ. ಕ್ಯಾಂಪಿಗೆ ಹೋದಾಗ ಭೇಟಿಯಾದದ್ದು, ತದನಂತರ ೨೦೨೪ರಲ್ಲಿ ಭೇಟಿಯಾದದ್ದು ಒಂದು ಅಪೂರ್ವ ಘಳಿಗೆಯಾಗಿದೆ. ಲೇಖಕರ ಮಾತಿನಲ್ಲಿ ಈ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
೧. The Sansthan ಎಂಬ ಮೊದಲ ಅಧ್ಯಾಯದಲ್ಲಿ ಲಿಂಗಾಯತ ಮಠಗಳ ಉಗಮ ವಿಕಾಸವನ್ನು ಸಂಕ್ಷಿಪ್ತವಾಗಿ ತಿಳಿಸುವುದರ ಜೊತೆಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ.
ಭಾಲ್ಕಿಯ ಭಾಲ್ಕಿ ಹಿರೇಮಠ ಸಂಸ್ಥಾನವು ಲಿಂಗಾಯತ ಪರಂಪರೆಯ ಪ್ರಮುಖ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಮಠವು ಬಸವತತ್ವ, ವಚನ ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ.
ಬಸವಣ್ಣನವರ ಕಾಯಕ-ದಾಸೋಹ ತತ್ವ, ಸಮಾನತೆಯ ಸಂದೇಶ, ಅನುಭವದ ಆಧ್ಯಾತ್ಮಿಕತೆ ಮತ್ತು ಮಾನವ ಕಲ್ಯಾಣದ ದೃಷ್ಟಿಕೋನಗಳನ್ನು ಜನಜೀವನದಲ್ಲಿ ಬೆಳೆಸುವುದು ಈ ಪರಂಪರೆಯ ಮುಖ್ಯ ಉದ್ದೇಶವಾಗಿದೆ ಎಂಬುದನ್ನು ಡಾ. ಹಾನಗಲ್ಲ ಅವರು ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ತಿಳಿಸಿಕೊಟ್ಟಿದ್ದಾರೆ.
೨. Cultural Thoughts ಭಾಲ್ಕಿ ಹಿರೇಮಠದ ಸಾಂಸ್ಕೃತಿಕ ಚಿಂತನೆಗಳನ್ನು ಕುರಿತು ಈ ಅಧ್ಯಾಯದಲ್ಲಿ ವಿವರಿಸಿದ್ದಾರೆ.
ಭಾಲ್ಕಿ ಹಿರೇಮಠದ ಸಾಂಸ್ಕೃತಿಕ ದೃಷ್ಟಿಯಲ್ಲಿ ಧರ್ಮ ಮತ್ತು ಸಂಸ್ಕೃತಿಗಳು ಜೀವನದಿಂದ ಬೇರ್ಪಟ್ಟವುಗಳಲ್ಲ. ವಚನ ಸಂಸ್ಕೃತಿಯ ಪೋಷಣೆ, ಧಾರ್ಮಿಕ ಉನ್ನತೀಕರಣ, ಶೈಕ್ಷಣಿಕ ಬೆಳವಣಿಗೆ, ಕನ್ನಡ ಭಾಷೆಯ ಸಂರಕ್ಷಣೆ, ಸಾಮಾಜಿಕ ಕ್ರಾಂತಿ, ಲಿಂಗಸಮಾನತೆ, ದೀನ ದಲಿತರ ಉದ್ಧಾರ, ಸಾಹಿತ್ಯಿಕ ಚಟುವಟಿಕೆ, ಮಾನವೀಯ ಸೇವೆಗಳನ್ನು ಕುರಿತು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ.
ಭಾಲ್ಕಿ ಹಿರೇಮಠವು ಕನ್ನಡದ ಉಸಿರನ್ನು ಉಳಿಸಿ ಬೆಳೆಸುವ ಹಾಗೂ ಬಸವತತ್ತ್ವದ ಮಾನವೀಯ ಸಂದೇಶದ ಮೂಲಕ ಸಮಾಜಮುಖಿ ಚಿಂತನೆಗೆ ದಾರಿ ತೋರಿಸುವ ಸಾಂಸ್ಕೃತಿಕ ಸಂಸ್ಥೆಯಾಗಿದೆ ಎಂಬುದರ ಕುರಿತು ಡಾ. ಹಾನಗಲ್ಲ ಅವರು ನಮ್ಮ ಗಮನ ಸೆಳೆದಿದ್ದಾರೆ.
೩. The Religiosity ಅಧ್ಯಾಯದಲ್ಲಿ ಬಸವ ಪರಂಪರೆಯಲ್ಲಿ ಬಂದ ಶ್ರೀಮಠವು ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳು, ಶರಣ ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಇವುಗಳ ಹುಟ್ಟು ಬೆಳವಣಿಗೆ ಕುರಿತು ತಿಳಿಸಿಕೊಟ್ಟಿದ್ದಾರೆ.
೪. The Breath of Kannada and Social Concern – Bhalki Hiremath ಭಾಲ್ಕಿ ಹಿರೇಮಠದ ಕನ್ನಡ ಪ್ರೀತಿ ಮತ್ತು ಸಾಮಾಜಿಕ ಕಾಳಜಿ ಕುರಿತು ಇಲ್ಲಿ ಚಿಂತಿಸಲಾಗಿದೆ. ಭಾಲ್ಕಿ ಹಿರೇಮಠ ಸಂಸ್ಥಾನವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ಕಾರ್ಯನಿರ್ವಹಿಸಿದ ಪ್ರಮುಖ ಪರಂಪರಾ ಕೇಂದ್ರಗಳಲ್ಲಿ ಒಂದಾಗಿದೆ.
ಈ ಮಠದ ಚಿಂತನೆಗಳಲ್ಲಿ ಕನ್ನಡವು ಕೇವಲ ಒಂದು ಭಾಷೆಯಲ್ಲ; ಅದು ಜನಜೀವನದ ಉಸಿರು, ಸಂಸ್ಕೃತಿಯ ಆತ್ಮ ಮತ್ತು ಸಮಾಜದ ಜ್ಞಾನ ಪರಂಪರೆಯ ವಾಹಕ ಎಂಬ ಭಾವನೆ ಅಡಕವಾಗಿದೆ. ಭಾಲ್ಕಿ ಹಿರೇಮಠವು ಬಸವವಾದಿ ಶಿವಶರಣರ ವಚನ ಪರಂಪರೆಯನ್ನು ಆಧಾರವಾಗಿಸಿಕೊಂಡು ಕನ್ನಡದ ಮೂಲಕ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದೆ-ಮಾಡುತ್ತಿದೆ.
ಮಹಿಳಾ ಸಬಲೀಕರಣಕ್ಕಾಗಿ ಜನಸಮುದಾಯದಲ್ಲಿ ವೈಜ್ಞಾನಿಕ ಮನೋಭೂಮಿಕೆಯನ್ನು ಬಿತ್ತುವುದಕ್ಕಾಗಿ ೧೯೭೬ರಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ನಾಗರಪಂಚಮಿಯನ್ನು ಬಸವ ಪಂಚಮಿಯನ್ನಾಗಿ ರೂಪಿಸಿದ ರೋಚಕ ಕಥನ ಇಲ್ಲಿದೆ.
ದೀನ ದಲಿತರಿಗಾಗಿ ಶ್ರೀಮಠ ಮಾನವೀಯ ಅಂತಃಕರಣದಿಂದ ಸ್ಪಂದಿಸಿದ ವಿವರವೂ ಇಲ್ಲಿದೆ. ಡಾ. ಬಸವಲಿಂಗ ಪಟ್ಟದ್ದೇವರ ಬದುಕಿನ ಮಹತ್ವಾಕಾಂಕ್ಷೆ ಯೋಜನೆಯಾದ ‘ವಚನ ವಿಶ್ವವಿದ್ಯಾಲಯ’ದ ಕುರಿತಾದ ಚಿಂತನೆಗಳು ಇತ್ತೀಚೆಗೆ ಸರಕಾರ ಇದಕ್ಕಾಗಿ ೨೫ ಎಕರೆ ಭೂಮಿಯನ್ನು ಮಂಜೂರು ಮಾಡಿದ ವಿಷಯ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಶ್ರೀಗಳು ತಮ್ಮ ಶ್ರೀಮಠದ ಪ್ರಸಾರಾಂಗದಿಂದ ಮಾಡುತ್ತಿರುವ ಸಾರಸ್ವತ ಸೇವೆ ಮೊದಲಾದವುಗಳು ಇಲ್ಲಿ ಬಂದಿರುವುದರಿಂದ, ಪೂಜ್ಯರ ಇಲ್ಲಿಯವರೆಗಿನ ಸಮಗ್ರ ಸಾಧನೆಯ ವಿವರಗಳು ಬಂದಿವೆ.
೫. The Needs of the Era : Dr. Channabasav Pattaddevaru ಈ ಅಧ್ಯಾಯದಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ಯುಗದ ಅಗತ್ಯಕ್ಕೆ ತಕ್ಕಂತೆ ಮಾಡಿದ ಸೇವಾಕಾರ್ಯಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಮಾನವ ಸಮಾಜವು ಕಾಲದೊಂದಿಗೆ ನಿರಂತರವಾಗಿ ಪರಿವರ್ತನೆಗೊಳ್ಳುತ್ತದೆ. ಪ್ರತಿಯೊಂದು ಯುಗಕ್ಕೂ ಅದರದೇ ಆದ ಸಮಸ್ಯೆಗಳು, ಸವಾಲುಗಳು ಮತ್ತು ಅವುಗಳಿಗೆ ತಕ್ಕ ಪರಿಹಾರಗಳ ಅಗತ್ಯವಿರುತ್ತದೆ.
ಯುಗದ ಅಗತ್ಯಗಳನ್ನು ಸರಿಯಾಗಿ ಗುರುತಿಸಿ, ಸಮಾಜದ ಉನ್ನತಿಗಾಗಿ ಕಾರ್ಯನಿರ್ವಹಿಸುವುದು ಮಹನೀಯರ ಕರ್ತವ್ಯವಾಗಿದೆ. ಡಾ. ಚನ್ನಬಸವ ಪಟ್ಟದ್ದೇವರ ಚಿಂತನೆಗಳಲ್ಲಿ ಶಿಕ್ಷಣ, ಸಂಸ್ಕಾರ, ಧಾರ್ಮಿಕ ಸಹಿಷ್ಣುತೆ, ಮಾನವೀಯ ಮೌಲ್ಯಗಳು ಮತ್ತು ಸಮಾಜಸೇವೆಗೆ ವಿಶೇಷ ಮಹತ್ವವಿತ್ತು. ಇಂದಿನ ಯುಗಕ್ಕೆ ಮುಖ್ಯವಾಗಿ ಅಗತ್ಯವಾಗಿರುವುದು ಉತ್ತಮ ಶಿಕ್ಷಣ, ವೈಚಾರಿಕತೆ, ವ್ಯಕ್ತಿತ್ವ ನಿರ್ಮಾಣ ಮತ್ತು ಮಾನವೀಯತೆ. ಅಜ್ಞಾನ, ಮೂಢನಂಬಿಕೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ದೂರಮಾಡಿ, ಜ್ಞಾನ ಮತ್ತು ಸಂಸ್ಕಾರದ ಮೂಲಕ ಸಮಾಜವನ್ನು ಬೆಳಗಿಸುವುದು ಕಾಲದ ಬೇಡಿಕೆಯಾಗಿದೆ ಎಂಬುದನ್ನು ಡಾ. ಚನ್ನಬಸವ ಪಟ್ಟದ್ದೇವರು ಅರಿತುಕೊಂಡು ಮಾಡಿದ ಸಾಧನೆಯ ಸಮಗ್ರ ವಿವರಗಳನ್ನು ಡಾ. ಸಂತೋಷ ಹಾನಗಲ್ಲ ಅವರು ರಸವತ್ತಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
೬. The Path of Basava : Dr. Basavalinga Pattaddevaru ಎಂಬ ಆರನೆಯ ಅಧ್ಯಾಯದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಬಸವಪಥದಲ್ಲಿ ಸಾಗಿಬಂದ ಕಥನವನ್ನು ಚಿತ್ರಿಸಿದ್ದಾರೆ.
ಬಸವಣ್ಣನವರ ದಾರಿ ಕೇವಲ ಧಾರ್ಮಿಕ ಮಾರ್ಗವಲ್ಲ; ಅದು ಮಾನವೀಯ ಮೌಲ್ಯಗಳ, ಸಮಾನತೆಯ, ಕಾಯಕದ ಮತ್ತು ಅನುಭವದ ಮಾರ್ಗವಾಗಿದೆ.
ಬಸವಣ್ಣರ ಅನುಭವ ಮಂಟಪವು ವಿಚಾರ ಸ್ವಾತಂತ್ರ್ಯ, ಸಮಾನತೆ ಮತ್ತು ಸಂವಾದದ ಮಹತ್ವವನ್ನು ಸಾರಿದ ಅಪೂರ್ವ ಚಿಂತನಾ ವೇದಿಕೆಯಾಗಿದೆ. ಜಾತಿ, ಲಿಂಗ, ವರ್ಗದ ಬೇಧಗಳನ್ನು ಮೀರಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಅನುಭವದ ಹಕ್ಕಿದೆ ಎಂಬ ಕ್ರಾಂತಿಕಾರಿ ಸಂದೇಶವನ್ನು ಅದು ನೀಡಿತು.
ಇಂತಹ ಅನುಭವ ಮಂಟಪದ ಪುನರುಜ್ಜೀವನಕ್ಕೆ ಶ್ರೀಗಳು ಶ್ರಮಿಸುತ್ತಿರುವ ದಾರಿ ಅತ್ಯಂತ ದುರ್ಗಮವಾಗಿದೆ. ಆದರೂ ಪೂಜ್ಯರು ಬಸವಪಥದ ಬೆಳಕಿನಲ್ಲಿ ಸಾಗಿದ್ದಾರೆ.
ಇಂದು ಅವರನ್ನು ವಿರೋಧಿಸುವ ಒಂದು ಪಂಗಡವೇ ಹುಟ್ಟಿಕೊಂಡಿದ್ದರೂ ಛಲದಂಕ ಮಲ್ಲರಾಗಿ ಪೂಜ್ಯರು ಆನೆ ನಡೆದುದೆ ದಾರಿ ಎಂಬಂತೆ ಸಾಗುತ್ತಿದ್ದಾರೆ. ಅವರ ಬಸವಪಥದ ದಾರಿಯ ವಿವೇಚನೆ ಇಲ್ಲಿದೆ.
೭. The Organic Success of Channabasaveshwar Gurukul ಚನ್ನಬಸವೇಶ್ವರ ಗುರುಕುಲದ ಸಹಜ ಯಶೋಗಾಥೆಯನ್ನು ಕುರಿತು ಈ ಅಧ್ಯಾಯದಲ್ಲಿ ಡಾ. ಸಂತೋಷ ಹಾನಗಲ್ಲ ಅವರು ಸಮೃದ್ಧ ವಿವರಗಳೊಂದಿಗೆ ದಾಖಲಿಸಿದ್ದಾರೆ.
ಶ್ರೀ ಚನ್ನಬಸವೇಶ್ವರ ಗುರುಕುಲವು ಶಿಕ್ಷಣ, ಸಂಸ್ಕಾರ ಮತ್ತು ಸಾಮಾಜಿಕ ಬದ್ಧತೆಯ ಸಮನ್ವಯದಿಂದ ಬೆಳೆದ ಒಂದು ವಿಶಿಷ್ಟ ಶೈಕ್ಷಣಿಕ ಕೇಂದ್ರವಾಗಿದೆ. ಇದರ ಸ್ಥಾಪನೆಯ ಹಿಂದೆ ಡಾ. ಬಸವಲಿಂಗ ಪಟ್ಟದ್ದೇವರು ಅವರ ದೂರದೃಷ್ಟಿ, ಸೇವಾಭಾವ ಮತ್ತು ಬಸವತತ್ವದ ಪ್ರೇರಣೆ ಇದೆ.
ಗುರುಕುಲವು ೧೯೯೨-೯೩ರಲ್ಲಿ ಕೇವಲ ೪೦ ವಿದ್ಯಾರ್ಥಿಗಳು ಮತ್ತು ೨ ಶಿಕ್ಷಕರೊಂದಿಗೆ ಆರಂಭವಾಗಿ, ಇಂದು ಬೃಹದಾಕಾರದ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ. “ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ” ಎಂಬ ಧ್ಯೇಯವು ಈ ಗುರುಕುಲದ ಯಶಸ್ಸಿನ ಮೂಲಾಧಾರವಾಗಿದೆ.
ಈ ಸಂಸ್ಥೆಯ ಮತ್ತೊಂದು ಮಹತ್ವದ ಅಂಶವೆಂದರೆ ಸಮಾಜದ ದುರ್ಬಲ ವರ್ಗಗಳ ಮಕ್ಕಳಿಗೂ ಶಿಕ್ಷಣದ ಅವಕಾಶ ಕಲ್ಪಿಸುವ ಮನೋಭಾವ. ಗುರುಕುಲ ಆವರಣದಲ್ಲಿ ಅನಾಥ ಮಕ್ಕಳ ಆರೈಕೆ ಕೇಂದ್ರವೂ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಶಿಕ್ಷಣವೆಂದರೆ ಕೇವಲ ಪಠ್ಯಜ್ಞಾನವಲ್ಲ; ಅದು ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳು, ಸಾಂಸ್ಕೃತಿಕ ಅರಿವು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಪ್ರಕ್ರಿಯೆಯಾಗಿದೆ ಎಂಬುದನ್ನು ಈ ಅಧ್ಯಾಯ ನಮಗೆ ತಿಳಿಸಿಕೊಡುತ್ತದೆ.
೮. Preservation of Nadu–Nudi ನಾಡು-ನುಡಿಯ ಸಂರಕ್ಷಣೆಗಾಗಿ ಶ್ರೀಮಠದ ಯೋಗದಾನವು ಏನು ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.
ನಾಡು-ನುಡಿ ಎಂದರೆ ಒಂದು ಜನಾಂಗದ ಅಸ್ತಿತ್ವ, ಸಂಸ್ಕೃತಿ, ಇತಿಹಾಸ ಮತ್ತು ಜೀವನದ ಅನುಭವಗಳ ಜೀವಂತ ಪ್ರತೀಕ. ಒಂದು ನಾಡಿನ ಭಾಷೆ, ಸಾಹಿತ್ಯ, ಆಚರಣೆ, ಕಲೆ, ಸಂಪ್ರದಾಯ ಮತ್ತು ಮೌಲ್ಯಗಳು ಉಳಿದಾಗ ಮಾತ್ರ ಅದರ ಸಾಂಸ್ಕೃತಿಕ ಸ್ವರೂಪ ಉಳಿಯುತ್ತದೆ. ಆದ್ದರಿಂದ ನಾಡು-ನುಡಿಯ ಸಂರಕ್ಷಣೆ ಎಂದರೆ ಕೇವಲ ಭಾಷೆಯನ್ನು ಉಳಿಸುವುದಲ್ಲ; ಅದು ಒಂದು ಸಮುದಾಯದ ಆತ್ಮವನ್ನು ಕಾಪಾಡುವ ಕಾರ್ಯವಾಗಿದೆ.
ಬಸವ ಪರಂಪರೆಯ ಮಠಗಳು, ವಿಶೇಷವಾಗಿ ಭಾಲ್ಕಿ ಹಿರೇಮಠ ಸಂಸ್ಥಾನದಂತಹ ಸಂಸ್ಥೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ವಚನ ಸಾಹಿತ್ಯ, ಪ್ರವಚನ, ಸಾಹಿತ್ಯಿಕ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೂಲಕ ಕನ್ನಡದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿವೆ.
ಶೋಧನೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಭಾಷೆಯ ಭವಿಷ್ಯವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ನಾಡು-ನುಡಿಯ ಸಂರಕ್ಷಣೆ ಎಂದರೆ ಭೂತಕಾಲದ ನೆನಪುಗಳನ್ನು ಕಾಪಾಡುವುದಷ್ಟೇ ಅಲ್ಲ; ಭವಿಷ್ಯದ ಪೀಳಿಗೆಗೆ ತನ್ನ ಗುರುತು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹಸ್ತಾಂತರಿಸುವ ಜವಾಬ್ದಾರಿಯಾಗಿದೆ ಎಂಬುದನ್ನು ಭಾಲ್ಕಿ ಅರ್ಥ ಮಾಡಿಕೊಂಡು ಮಾಡಿದ ಸೇವಾಕಾರ್ಯಗಳನ್ನು ಡಾ. ಹಾನಗಲ್ಲ ಅವರು ಪರಾಮರ್ಶಿಸಿದ್ದಾರೆ.
೯. The Worship ಒಂಬತ್ತನೆಯ ಅಧ್ಯಾಯದಲ್ಲಿ ಬಸವತತ್ವದ ದೃಷ್ಟಿಯಲ್ಲಿ ಪೂಜೆಯೆಂದರೆ ಇಷ್ಟಲಿಂಗದ ಅನುಸಂಧಾನ, ಲಿಂಗಾಂಗಯೋಗದ ಸಾಧನೆಯಾಗಿದೆ.
ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಇಷ್ಟಲಿಂಗ ಪೂಜೆಯ ಮೂಲಕ ಸಮಾಜದಲ್ಲಿ ಮಾಡಿದ ಜಾಗೃತಿ ಕಾರ್ಯಗಳನ್ನು ಅಷ್ಟಾವರಣ-ಪಂಚಾಚಾರ-ಷಟ್ಸ್ಥಲಗಳನ್ನು ಕುರಿತು ಕೃತಿ ರಚನೆಯ ಮೂಲಕ ಸಾಮಾನ್ಯ ಭಕ್ತರಿಗೂ ಧಾರ್ಮಿಕ ಪೂಜಾ ಆಚರಣೆಗಳನ್ನು ಕುರಿತು ಶ್ರೀಗಳು ಮಾಡಿದ ಕಾರ್ಯಗಳನ್ನು ಡಾ. ಹಾನಗಲ್ಲ ಅವರು ಇಲ್ಲಿ ಪ್ರಸ್ತಾಪಿಸಿದ್ದಾರೆ.
ಬಸವ ಪರಂಪರೆಯ ದೃಷ್ಟಿಯಲ್ಲಿ ಆರಾಧನೆಯು ಅಂತರಂಗದ ಅರಿವಿನ ಮಾರ್ಗವಾಗಿದೆ. ಇಷ್ಟಲಿಂಗ ಆರಾಧನೆಯ ಮೂಲಕ ವ್ಯಕ್ತಿಯು ತನ್ನೊಳಗಿನ ದೈವಚೈತನ್ಯವನ್ನು ಅರಿಯುವ ಪ್ರಯತ್ನ ಮಾಡುತ್ತಾನೆ. ಈ ಆರಾಧನೆಯ ಉದ್ದೇಶ ಕೇವಲ ಬೇಡಿಕೆಗಳನ್ನು ಸಲ್ಲಿಸುವುದಲ್ಲ; ಬದಲಾಗಿ: ಆತ್ಮಶುದ್ಧಿ, ಸತ್ಯದ ಅರಿವು, ವಿನಯ, ಸಮಾನತೆ, ಕಾಯಕದ ಪಾವಿತ್ಯ-ದಾಸೋಹ ಭಾವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ.
೧೦ The Celebration of Basavatattvas ಹತ್ತನೆಯ ಅಧ್ಯಾಯದಲ್ಲಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಬಸವತತ್ವಗಳ ಪ್ರಸಾರ-ಪ್ರಚಾರದ ಮೂಲಕ ಮಾಡಿದ ಸಮಾಜೋ-ಧಾರ್ಮಿಕ ಕ್ರಾಂತಿಯ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ.
ಬಸವತತ್ವಗಳ ಸಂಭ್ರಮವು ಭಕ್ತಿಯ ಪ್ರದರ್ಶನವಲ್ಲ; ಅದು ಮನುಷ್ಯನ ಬದುಕನ್ನು ಮೌಲ್ಯಮಯವಾಗಿಸುವ ಒಂದು ಸಾಮಾಜಿಕ-ಆಧ್ಯಾತ್ಮಿಕ ಚಳವಳಿಯಾಗಿದೆ. ಬಸವಣ್ಣನವರ ಆದರ್ಶಗಳನ್ನು ಆಚರಣೆಯಲ್ಲಿ ಜೀವಂತವಾಗಿಡುವುದೇ ಈ ಸಂಭ್ರಮದ ಸಾರ್ಥಕತೆ ಎಂದು ಡಾ. ಬಸವಲಿಂಗ ಪಟ್ಟದ್ದೇವರು ನಂಬಿದವರು. ಪೂಜ್ಯರು ಕರ್ನಾಟಕ-ಮಹಾರಾಷ್ಟç-ತೆಲಂಗಾಣ ಪ್ರದೇಶಗಳಲ್ಲಿ ಬಸವ ಪರಿಷತ್ಗಳ ಮೂಲಕ ಮಾಡಿದ ಬಸವಕ್ರಾಂತಿಯ ಚಿತ್ರಣ ಇಲ್ಲಿ ಅನನ್ಯವಾಗಿ ಮೂಡಿ ಬಂದಿದೆ.
೧೧. Honours and Recognitions ಡಾ. ಬಸವಲಿಂಗ ಪಟ್ಟದ್ದೇವರಿಗೆ ದೊರೆತ ಅನೇಕ ಪ್ರತಿಷ್ಠಿತ ಗೌರವಗಳು ಮತ್ತು ಪುರಸ್ಕಾರಗಳ ಕುರಿತು ಈ ಅಧ್ಯಾಯದಲ್ಲಿ ವಿಶದವಾಗಿ ಅವಲೋಕಿಸಿದ್ದಾರೆ.
ಡಾ. ಬಸವಲಿಂಗ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾಗಿ ಬಸವತತ್ವದ ಪ್ರಸಾರ, ಶಿಕ್ಷಣ, ಕನ್ನಡ ಸೇವೆ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಅವರ ಸೇವೆಯನ್ನು ಗುರುತಿಸಿ ಅನೇಕ ಗೌರವಗಳು ಮತ್ತು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ಘನ ಸರಕಾರದ ರಾಷ್ಟ್ರೀಯ ಬಸವಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರತಿಷ್ಠಿತ ಗೌರವ ಪುರಸ್ಕಾರಗಳ ವಿವರಗಳನ್ನು ಈ ಅಧ್ಯಾಯದಲ್ಲಿ ಕೊಟ್ಟಿದ್ದಾರೆ.
೧೨. In the Eyes of Society ಈ ಅಧ್ಯಾಯದಲ್ಲಿ ಸಮಾಜದ ಗಣ್ಯರ ದೃಷ್ಟಿಯಲ್ಲಿ ಡಾ. ಬಸವಲಿಂಗ ಪಟ್ಟದ್ದೇವರ ಘನವ್ಯಕ್ತಿತ್ವ ಹೇಗೆ ಕಂಡಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.
ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಮೊದಲುಗೊಂಡು, ಅನೇಕ ಸಮಾಜದ ಗಣ್ಯಾತಿ ಗಣ್ಯರ ದೃಷ್ಟಿಯಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿಯವರು ಕೇವಲ ಒಬ್ಬ ಮಠಾಧೀಶರಲ್ಲ; ಅವರು ಬಸವತತ್ತ್ವದ ಪ್ರಚಾರಕರು, ಶಿಕ್ಷಣದ ಹರಿಕಾರರು, ಕನ್ನಡದ ಸೇವಕರು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರು ಎಂಬ ಗೌರವವನ್ನು ಪಡೆದಿದ್ದಾರೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಮೂಲಕ ಅವರು ಧರ್ಮವನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಸೇವೆ, ಶಿಕ್ಷಣ ಮತ್ತು ಸಮಾಜದ ಉನ್ನತಿ ಎಂಬ ರೂಪದಲ್ಲಿ ಅರ್ಥೈಸಿದ್ದಾರೆ. ಅವರ ಕಾರ್ಯಗಳಲ್ಲಿ ಬಸವಣ್ಣನವರ “ಕಾಯಕವೇ ಕೈಲಾಸ”, “ದಾಸೋಹ” ಮತ್ತು ಸಮಾನತೆ ಎಂಬ ತತ್ವಗಳ ಜೀವಂತ ಅನುಷ್ಠಾನವಾಗಿರುವುದನ್ನು ಈ ಗಣ್ಯರು ಗುರುತಿಸಿದ್ದಾರೆ.
೧೩ Key Events in the Life of Dr. Basavalinga Pattaddevaru Swamiji Early Life and Education ಕೊನೆಯ ಅಧ್ಯಾಯದಲ್ಲಿ ಶ್ರೀಗಳ ಜೀವನದ ಪ್ರಮುಖ ಘಟ್ಟಗಳನ್ನು ಪಟ್ಟಿ ಮಾಡಿ ಕೊಟ್ಟಿರುವುದು ತುಂಬ ಔಚಿತ್ಯಪೂರ್ಣವಾಗಿದೆ.
ಇಂತಹ ಮಹತ್ವದ ಕೃತಿಗೆ ಸುಪ್ರಿಂಕೋರ್ಟ ನಿವೃತ್ತ ನ್ಯಾಯಾಧೀಶರಾದ ಡಾ. ಶಿವರಾಜ ಪಾಟೀಲ ಅವರು ತುಂಬ ಮೌಲಿಕವಾದ ಮುನ್ನುಡಿ ತೋರಣಕಟ್ಟಿದ್ದಾರೆ. ಪುಸ್ತಕಗಳಲ್ಲಿರುವ ವೈವಿಧ್ಯತೆ, ಎಂತಹ ಪುಸ್ತಕಗಳನ್ನು ಓದಬೇಕು, ಎಂತಹ ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸು ಬುದ್ಧಿ ಭಾವಗಳು ವಿಕಾಸಗೊಳ್ಳುತ್ತವೆ ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಕುರಿತು ಮತ್ತು ಕೃತಿಯ ಕುರಿತು ಅವರು ಹೇಳಿದ ಮಾತುಗಳು ಹೀಗಿವೆ:
“His Holiness Basavalinga Pattaddevaru has greatly expanded and developed the Hiremath into a scientific and ideological center for the realization and practice of Basavatattva in its true sense and spirit. He has established several socially relevant institutions for the welfare of humanity. His efforts in serving the needy, the sick, the suffering, and the poor are relentless.““This book reflects the hard work, sincerity, and commit-ment of Dr. Santosh Hanagal. I hope and wish that this book will be well received. I also wish Dr. Hanagal many more such worthy contributions in the future. While congratulating him for writing this book, I extend my best wishes to him.” – Justice Shivaraj V. Patil
ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿಯವರು ಹಿರೇಮಠವನ್ನು ಅದರ ನಿಜವಾದ ಅರ್ಥ ಮತ್ತು ಆಶಯದಲ್ಲಿ ಬಸವತತ್ತ್ವದ ಸಾಕ್ಷಾತ್ಕಾರ ಮತ್ತು ಆಚರಣೆಯ ಕೇಂದ್ರವಾಗಿ, ವೈಜ್ಞಾನಿಕ ಹಾಗೂ ವೈಚಾರಿಕ ನೆಲೆಯಲ್ಲಿ ಮಹತ್ತರವಾಗಿ ವಿಸ್ತರಿಸಿ ಅಭಿವೃದ್ಧಿಪಡಿಸಿದ್ದಾರೆ. ಮಾನವ ಕಲ್ಯಾಣಕ್ಕಾಗಿ ಅವರು ಅನೇಕ ಸಾಮಾಜಿಕವಾಗಿ ಉಪಯುಕ್ತವಾದ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ಅಗತ್ಯವಿರುವವರು, ರೋಗಿಗಳು, ದುಃಖಿತರು ಮತ್ತು ಬಡವರ ಸೇವೆಯಲ್ಲಿ ಅವರ ಪ್ರಯತ್ನಗಳು ನಿರಂತರವಾಗಿವೆ. ಈ ಕೃತಿಯು ಡಾ. ಸಂತೋಷ ಹಾನಗಲ್ ಅವರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯ ಪ್ರತಿಬಿಂಬವಾಗಿದೆ. ಈ ಪುಸ್ತಕವು ಓದುಗರಿಂದ ಉತ್ತಮ ಸ್ವೀಕಾರವನ್ನು ಪಡೆಯಲಿ ಎಂದು ನಾನು ಆಶಿಸುತ್ತೇನೆ ಮತ್ತು ಹಾರೈಸುತ್ತೇನೆ. ಭವಿಷ್ಯದಲ್ಲಿಯೂ ಡಾ. ಹಾನಗಲ್ ಅವರು ಇಂತಹ ಅನೇಕ ಮೌಲ್ಯಯುತ ಕೃತಿಗಳನ್ನು ರಚಿಸಲಿ ಎಂದು ಹಾರೈಸುತ್ತೇನೆ.
ಈ ಕೃತಿಯನ್ನು ರಚಿಸಿರುವುದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಮುಂದಿನ ಸಾಹಿತ್ಯ ಪಯಣಕ್ಕೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ. ಎಂದು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಶುಭ ಹಾರೈಸಿದ್ದಾರೆ.
ಡಾ. ಸಂತೋಷ ಹಾನಗಲ್ಲ ಅವರು ಪೂಜ್ಯರ ಜೀವನ ಕಥನವನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ಕಟ್ಟಿಕೊಡುತ್ತ ಹೋಗಿದ್ದಾರೆ. ಒಂದು ಮಾದರಿ ಜೀವನ ಚರಿತ್ರೆಯನ್ನು ಹೇಗೆ ಬರೆಯಬಹುದು ಎಂಬುದಕ್ಕೆ ಈ ಕೃತಿ ನಿದರ್ಶನವಾಗಿದೆ. ಶ್ರೀಗಳ ಬಹುಮುಖ ವ್ಯಕ್ತಿತ್ವ, ಶ್ರೀಮಠದ ಸೇವಾಕಾರ್ಯಗಳ ಸಮಗ್ರ ಚಿತ್ರಣವು ಇಲ್ಲಿ ಮೂಡಿ ಬಂದಿದೆ. ಇಂತಹ ಅತ್ಯುತ್ತಮ ಕೃತಿಯನ್ನು ರಚಿಸಿದ ಡಾ. ಸಂತೋಷ ಹಾನಗಲ್ಲ ಅವರಿಗೆ ವಂದನೆ-ಅಭಿನಂದನೆಗಳು.
