ಬೂದಂಬಳ್ಳಿ ಗ್ರಾಮದಲ್ಲಿ 30ನೇ ವಚನಗ್ರಾಮ ಕಾರ್ಯಕ್ರಮ
ಚಾಮರಾಜನಗರ:
ವಚನ ಸಾಹಿತ್ಯವೇ ಸಮಾಜದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಎನ್. ಶಿವಪ್ರಸಾದ ಅವರ ದತ್ತಿ ಅಂಗವಾಗಿ ಚಾಮರಾಜನಗರ ಜಿಲ್ಲೆಯ ಬೂದಂಬಳ್ಳಿ ಗ್ರಾಮದಲ್ಲಿ 30ನೇ ವಚನಗ್ರಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜ ಎದುರಿಸುತ್ತಿರುವ ಬಹುತೇಕ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿಯೇ ಪರಿಹಾರ ಅಡಗಿದೆ. ವಚನಗಳನ್ನು ಓದುವುದಷ್ಟೇ ಅಲ್ಲ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ.

ಈ ನಿಟ್ಟಿನಲ್ಲಿ ಶರಣು ವಿಶ್ವವಚನ ಫೌಂಡೇಷನ್ ನಡೆಸುತ್ತಿರುವ ವಚನಗ್ರಾಮ ಕಾರ್ಯಕ್ರಮ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುವ ಅಪರೂಪದ ಸಾಂಸ್ಕೃತಿಕ ಚಳವಳಿಯಾಗಿದೆ ಎಂದು ಶ್ಲಾಘಿಸಿದರು.
ಬಸವಣ್ಣನವರ ಸಪ್ತಸೂತ್ರಗಳನ್ನು ಉಲ್ಲೇಖಿಸಿದ ಅವರು, “ಕಳಬೇಡ, ಕೊಲಬೇಡ” ಎಂದು ಅನೈತಿಕ ಮಾರ್ಗಗಳನ್ನು ತ್ಯಜಿಸುವಂತೆ ಹಾಗೂ “ಛಲ ಬೇಕು ಶರಣಂಗೆ, ಪರಧನ ಪರಸತಿ ಒಲ್ಲೆ” ಎಂದು ಸದ್ಗುಣಗಳನ್ನು ಬೆಳೆಸಿಕೊಳ್ಳುವಂತೆ ಬಸವಣ್ಣನವರು ಸಂದೇಶ ನೀಡಿದ್ದಾರೆ.
ಆದರೆ ಇಂದು ನಾವು ಬೇಡವಾದುದನ್ನೇ ಬೇಕೆಂದು ಬಯಸುತ್ತಾ, ಬೇಕಾದುದನ್ನು ನಿರ್ಲಕ್ಷಿಸುವ ಸ್ಥಿತಿಗೆ ತಲುಪಿದ್ದೇವೆ. ವಚನದಂತೆ ಬದುಕಿದರೆ ವ್ಯಕ್ತಿಯ ಚರಿತ್ರೆಯೂ ಚಾರಿತ್ರ್ಯವೂ ಉಜ್ವಲವಾಗುತ್ತವೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಕೋಶಾಧ್ಯಕ್ಷ ಎನ್. ಶಿವಪ್ರಸಾದ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಅಧಿಕೃತ ಮಾನ್ಯತೆ ದೊರೆಯುವ ಹೋರಾಟದಲ್ಲಿ ಪ್ರತಿಯೊಬ್ಬರೂ ತಮ್ಮ ಪಾಲಿನ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಅವರು ಅಲ್ಲಮಪ್ರಭುಗಳ ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು, ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು ಎಂಬ ವಚನವನ್ನು ಉಲ್ಲೇಖಿಸಿ, ಅಜ್ಞಾನವನ್ನು ದೂರ ಮಾಡಿ ಸುಜ್ಞಾನದ ಬೆಳಕು ಹರಡುವ ಶಕ್ತಿ ವಚನ ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಶಿವನನ್ನು ನೆನೆಯುವಿಕೆಯೇ ಉದಯವಾದರೆ, ಅವರ ಮರೆಯುವಿಕೆಯೇ ಅಸ್ತಮಾನ ಎಂದು ಹೇಳಿ, ಶರಣರು ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸಮಾನತೆಯನ್ನು ಬೆಳೆಸುವ ಅನೇಕ ವಚನಗಳನ್ನು ರಚಿಸಿದ್ದಾರೆ.
ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ ದಂಪತಿ ಏಕಭಾವವಾಗಿ ನಿಂದಲ್ಲಿ ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತು ಸಂಗನ ಬಸವಣ್ಣ ಎಂಬ ವಚನದ ಆಶಯವನ್ನು ಪ್ರತಿಯೊಂದು ಕುಟುಂಬ ಅಳವಡಿಸಿಕೊಂಡರೆ ಸಮಾಜ ಸುಂದರವಾಗುತ್ತದೆ ಎಂದು ತಿಳಿಸಿದರು.

ನಂತರ ಗ್ರಾಮದ ಪ್ರತಿಯೊಂದು ಮನೆಗೂ ಉಚಿತವಾಗಿ ವಚನ ಪುಸ್ತಕಗಳನ್ನು ವಿತರಿಸಿ, ಬೂದಂಬಳ್ಳಿ ಗ್ರಾಮವನ್ನು 30ನೇ ವಚನಗ್ರಾಮ ಎಂದು ಘೋಷಿಸಿ ಪ್ರಮಾಣಪತ್ರವನ್ನು ನೀಡಲಾಯಿತು.
ರೂಪ ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶಂಕರಪ್ಪ ಸ್ವಾಗತಿಸಿದರು. ಫೌಂಡೇಷನ್ ಕೇಂದ್ರಿಯ ಸಂಚಾಲಕ ವಿ. ಲಿಂಗಣ್ಣ, ಗೌಡಿಕೆ ಮಹದೇವಪ್ಪ ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ವಚನ ಸಾಹಿತ್ಯದ ಪ್ರಸಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
