ಅಖಿಲ ಭಾರತ ೧೪ನೆಯ ಶರಣ ಸಾಹಿತ್ಯ ಸಮ್ಮೇಳನ ಸಮ್ಮೇಳನಾಧ್ಯಕ್ಷರ ನುಡಿ
ಬೆಂಗಳೂರು
ಹನ್ನೆರಡನೆಯ ಶತಮಾನದ ಶರಣೆ ಮುಕ್ತಾಯಕ್ಕ ತನ್ನ ಒಂದು ವಚನದಲ್ಲಿ ಜಡದೇಹಿಗಳನ್ನು ಕುರಿತು, “ಸುಮ್ಮನೇಕೆ ದಿನ ಕಳೆವಿರಿ? ಸುಮ್ಮನೇಕೆ ಹೊತ್ತ ಕಳೆವಿರಿ?” ಎಂದು ಹೇಳಿ, ‘ಮಾಡ ಬನ್ನಿ ಶಿವರಾತ್ರಿಯ, ಕೇಳಬನ್ನಿ ಶಿವಾನುಭವವ’ ಎಂದು ಕರೆ ನೀಡಿದ್ದಾಳೆ.
ಬಹುಶಃ, ನಮ್ಮ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು, ಆ ಶರಣೆಯ ಕರೆೆಯಂತೆಯೇ ನನ್ನಂತಹ ಜಡದೇಹಿ ಸಮಾಜದ ವೃದ್ಧನನ್ನು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಕರೆದಿರುವಂತೆ ಕಾಣುತ್ತದೆ.
ವಾಸ್ತವವಾಗಿ, ನಾನು ಎಂದೂ ಸುಮ್ಮನೆ ಕಾಲ ಕಳೆದವನಲ್ಲ, ಸುಮ್ಮನೆ ಹೊತ್ತು ಕಳೆದವನಲ್ಲ. ಆದರೆ, ಈಗ ವೃದ್ಧಾಪ್ಯದ ಸೆರೆಮನೆಯಲ್ಲಿ ಬಂಧಿತನಾಗಿ, ಒಂದು ರೀತಿಯ ಅಸಹಾಯಕತೆಯನ್ನು ಅನುಭವಿಸುತ್ತಿದ್ದೇನೆ.
ನಾನೀಗ ಹಸಿರಿಲ್ಲದ ಮರ, ಎಣ್ಣೆಯಿಲ್ಲದ ಹಣತೆ, ನೀರಿಲ್ಲದ ಕೆರೆ, ಇಂಧನವಿಲ್ಲದ ವಾಹನದಂತಿದ್ದೇನೆ. ಹೊಸದು ಹೊಳೆಯುವುದಿಲ್ಲ. ಹಳೆಯದು ನೆನಪಾಗುವುದಿಲ್ಲ.
ಸಾಲದ್ದಕ್ಕೆ ನನ್ನ ಪಂಚೇಂದ್ರಿಯಗಳೂ “ಅಯ್ಯಾ, ನಿನಗಾಗಿ ಕಳೆದ ೯೮ ವರ್ಷಗಳ ಕಾಲ ಸವೆದಿದ್ದೇವೆ. ನಮಗೂ ಆಯಾಸವಾಗಿದೆ. ಇನ್ನು ಸಾಕು” ಎಂದು ಹೇಳಿದರೂ ನಾನು ಕೇಳದಿದ್ದಾಗ, ಅವು ಗುಪ್ತ ಸಭೆ ಸೇರಿ, ನನ್ನ ವಿರುದ್ಧ ಸಂಚುಮಾಡಿ ವಂಚಿಸಿಬಿಟ್ಟಿವೆ.
“ಇಂತಹ ಅಸಹಾಯಕ ಸ್ಥಿತಿಯಲ್ಲಿರುವ ನನ್ನನ್ನೇಕೆ ಕರೆಯುತ್ತೀರಿ? ಈ ಮಹತ್ವದ ಬೃಹತ್ ಸಮ್ಮೇಳನದ ಅಧ್ಯಕ್ಷಸ್ಥಾನಕ್ಕೆ ನಾನು ಅರ್ಹನಲ್ಲ” ಎಂದು ನನ್ನನ್ನು ಕರೆಯಲು ಬಂದಿದ್ದ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು ಮತ್ತು ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಅವರಿಗೆ ಎಷ್ಟು ಬಗೆಯಲ್ಲಿ ಹೇಳಿದರೂ, ಅವರು “ನೀವು ಪರಿಷತ್ತು ಆರಂಭವಾದಂದಿನಿಂದಲೂ ನಿರಂತರವಾಗಿ ಅದರೊಡನೆ ಸಂಬಂಧವಿರುವವರು. ನಿಮಗೆ ಗೌರವ ಸಲ್ಲಿಸಲು ನಮಗೆ ಇದೊಂದು ಅವಕಾಶ. ಯಾವ ಕಾರಣದಿಂದಲೂ ಇಲ್ಲವೆನ್ನಬೇಡಿ” ಎಂದೆಲ್ಲ ಹೇಳಿ, ನನ್ನನ್ನು ಅವರ ಅಭಿಮಾನದ ತೆಕ್ಕೆಯಲ್ಲಿ ಸಿಕ್ಕಿಸಿ ಒಪ್ಪಿಸಿಬಿಟ್ಟರು.
ಇಲ್ಲಿಗೆ ಒಂದೂವರೆ ವರ್ಷದ ಹಿಂದೆ, ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಕರೆದಾಗಲೂ ಇಂತಹುದೇ ಇಕ್ಕಟ್ಟನ್ನು ಅನುಭವಿಸಿದ್ದೆ.
ವಾಸ್ತವವಾಗಿ, ಆ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ನನ್ನ ವೃದ್ಧಾಪ್ಯದಿಂದಾಗಿ ಸಲ್ಲಬೇಕಾದ ನ್ಯಾಯ ಸಲ್ಲಲಿಲ್ಲವೆಂದೇ ನನಗನಿಸಿದೆ. ಈಗ ಮತ್ತಷ್ಟು ವೃದ್ಧನಾಗಿದ್ದೇನೆ. ರಾಷ್ಟ್ರಕವಿ ಲಿಂ. ಡಾ. ಜಿ.ಎಸ್. ಶಿವರುದ್ರಪ್ಪನವರು ಹೇಳಿರುವಂತೆ ಆ ಕೊನೆಯ ಕರೆಗಂಟೆಗಾಗಿ ಕಾಯುತ್ತಿದ್ದೇನೆ.
ಸಾಮಾನ್ಯವಾಗಿ ಯಾವುದೇ ಸಮ್ಮೇಳನವಿದ್ದರೂ, ‘ಅಧ್ಯಕ್ಷ ಭಾಷಣ’ಕ್ಕೆ ಒಂದು ವಿಶಿಷ್ಟ ಸ್ಥಾನ ಕೊಡುತ್ತಾ ಬರುತ್ತಿರುವುದೇನೋ ನಿಜ. ಸಮ್ಮೇಳನಾಧ್ಯಕ್ಷ ಭಾಷಣವೆಂದರೆ, ಕುತೂಹಲ ಕೆರಳಿಸುವಂತಿರಬೇಕು. ಆಸಕ್ತಿಯನ್ನು ಅರಳಿಸುವಂತಿರಬೇಕು. ಚಿಂತನೆಗೆ ಗ್ರಾಸ ಒದಗಿಸುವಂತಿರಬೇಕು. ಸಮ್ಮೇಳನದ ಆಶಯದ ಮೇಲೆ ಬೆಳಕು ಚೆಲ್ಲುವಂತಿರಬೇಕು. ಹೊಸ ವಿಚಾರಗಳು ಹೊಮ್ಮಬೇಕು. ಹೆಚ್ಚೇನು ಸಮ್ಮೇಳನದ ಇಡೀ ಕಾರ್ಯಕಲಾಪಗಳಿಗೆ ಪೀಠಿಕೆಯಂತಿರಬೇಕು.

ಆದರೆ, ಈ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಅಂತಹ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಈ ಮಹಾ ಸಭಿಕರ ಕ್ಷಮೆ ಕೋರುತ್ತೇನೆ. ಈ ಎಲ್ಲ ಲಕ್ಷಣಗಳು ಇಲ್ಲದಿದ್ದರೂ, ಅಧ್ಯಕ್ಷ ಭಾಷಣದ ಸತ್ವಕ್ಕೆ ಸಲ್ಲದಿದ್ದರೂ, ನನ್ನ ಇಂದಿನ ಸ್ಥಿತಿಯ ಮಿತಿಯಲ್ಲಿ ನಾಲ್ಕು ಮಾತು ಆಡುವ ಧೈರ್ಯ ಮಾಡಿದ್ದೇನೆ.
ಇದು ಅಖಿಲ ಭಾರತ ೧೪ನೆಯ ಶರಣ ಸಾಹಿತ್ಯ ಸಮ್ಮೇಳನ. ಅತ್ಯಂತ ಬೃಹತ್ ಪ್ರಮಾಣದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳೇ ಅಲ್ಲದೆ, ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಇತರ ಸಾಹಿತ್ಯ ಸಮ್ಮೇಳನಗಳೂ ನಡೆಯುತ್ತವೆ.
ಇತರ ಸಾಹಿತ್ಯ ಸಮ್ಮೇಳನಗಳು ಆಯಾ ವಿಷಯಕ್ಕಷ್ಟೇ ಸಂಬಂಧಿಸಿದರೆ ಶರಣ ಸಾಹಿತ್ಯ ಸಮ್ಮೇಳನಕ್ಕಿರುವ ವಿಶಿಷ್ಟ ಹಿನ್ನೆಲೆ ಬೇರಾವ ಸಮ್ಮೇಳನಕ್ಕೂ ಇರಲಾರದೆಂದು ಹೇಳಬಹುದು.
ಆ ಹಿನ್ನೆಲೆ ಎಂದರೆ ೧೨ನೆಯ ಶತಮಾನದಲ್ಲಿ, ಕನ್ನಡದ ನೆಲದಲ್ಲಿ, ವಿಶ್ವಗುರು ಬಸವಣ್ಣನವರ ನಾಯಕತ್ವದಲ್ಲಿ ಶರಣರು ಮಾನವ ಘನತೆ ಮತ್ತು ಸಮಾನತೆಗಳಿಗಾಗಿ ನಡೆಸಿದ ಪ್ರಥಮ ಲೋಕಸೋಜಿಗದ ಸಮಾಜೋ-ಧಾರ್ಮಿಕ ಆಂದೋಲನ, ಆ ಆಂದೋಲನದ ಅಂಗವಾಗಿ ಹೊಮ್ಮಿದ ವಚನ ಸಾಹಿತ್ಯ, ಅಸ್ತಿತ್ವಗೊಂಡ ಅನುಭವ ಮಂಟಪ ಮತ್ತು ಆಗ ಶರಣರು ನಡೆಸುತ್ತಿದ್ದ ವಾರ್ಷಿಕ ಗಣಮೇಳ.
ಅನುಭವ ಮಂಟಪ, ಜೀವನ ಸಿದ್ಧಾಂತವಾದ ಅನುಭಾವ ಚಿಂತನದ ವೇದಿಕೆಯಾಗಿದ್ದರೆ, ವಾರ್ಷಿಕ ಗಣಮೇಳ ಜನಜಾಗೃತಿಯ ಒಂದು ಸಾಮೂಹಿಕ ಸಮಾವೇಶವಾಗಿತ್ತು.
ಇತಿಹಾಸದಲ್ಲೇ ಕಂಡರಿಯದ ಆ ಅಪೂರ್ವ ವ್ಯವಸ್ಥೆಗೆ ಕಾರಣ-ಪ್ರೇರಣೆಗಳೇನು ಎನ್ನುವುದನ್ನು ಇಲ್ಲಿ ಸೇರಿರುವ ಬಂಧುಗಳಿಗೆ ಹೊಸತಾಗಿ ಹೇಳುವ ಅಗತ್ಯವಿಲ್ಲದಿದ್ದರೂ ಸಂದರ್ಭ ಸೂಕ್ತತೆಗಾಗಿ ಒಂದು ಸಂಕ್ಷಿಪ್ತ ಪ್ರಸ್ತಾಪ.
ಅಂದಿನ ಧಾರ್ಮಿಕ ವ್ಯವಸ್ಥೆಯಲ್ಲಿ ಪೂರ್ವಜನ್ಮ-ಪುನರ್ಜನ್ಮ ಸಿದ್ಧಾಂತ, ಮಾಯಾ-ಮೋಕ್ಷ ಸಿದ್ಧಾಂತ, ಅವತಾರವಾದ, ಸ್ವರ್ಗ-ನರಕಗಳ ನಂಬಿಕೆ – ಇವುಗಳನ್ನು ಜನರ ತಲೆಯಲ್ಲಿ ತುಂಬಲಾಗುತ್ತಿತ್ತು.
ಅನಾರೋಗ್ಯ ಅನಿಷ್ಟಗಳ ನಿವಾರಣೆಗೆ, ಆಸ್ತಿ-ಅಧಿಕಾರಗಳ ರಕ್ಷಣೆಗೆ, ಹೋಮ-ಹವನಗಳು, ಶಾಂತಿ-ಸಮಾರಾದನೆಗಳನ್ನು ನಡೆಸಲಾಗುತ್ತಿತ್ತು. ಭೂತ-ಪ್ರೇತಗಳನ್ನು ಕಲ್ಪಿಸಿ ಹರಕೆ-ಬಲಿ ಮೊದಲಾದ ಆಚರಣೆಗಳನ್ನು ರೂಡಿಗೆ ತರಲಾಗಿತ್ತು.
ಜನರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ದೇವರು ಮತ್ತು ಧರ್ಮದ ಬಗೆಗೆ ಅವರಲ್ಲಿ ಭಯ-ಭೀತಿ ಅಂಧಶ್ರದ್ಧೆ-ಮೂಢನಂಬಿಕೆಗಳನ್ನು ಮೈಗೂಡಿಸಲಾತ್ತಿತ್ತು.
ಸಾಮಾಜಿಕ ವ್ಯವಸ್ಥೆಯಲ್ಲಿದ್ದ ವರ್ಣಾಶ್ರಮ ಪದ್ಧತಿಯು, ವ್ಯಕ್ತಿಯ ಸ್ಥಾನಮಾನಗಳ ನಿರ್ಧಾರಕ್ಕೆ ಮಾನದಂಡವಾಗಿತ್ತು. ಆ ವ್ಯವಸ್ಥೆಯಲ್ಲಿ ಮೇಲ್ವರ್ಗದವರಿಗಿದ್ದ ಯಾವ ಅವಕಾಶಗಳೂ, ಸ್ಥಾನಮಾನಗಳೂ, ಕೆಳವರ್ಗದ ಜನರಿಗಿರಲಿಲ್ಲ.
ಶೂದ್ರ ದಾಸ್ಯದಲ್ಲಿ ಹುಟ್ಟಿರುವ ಕಾರಣ, ಅವನು ಎಂದೆಂದಿಗೂ ದಾಸ್ಯದಲ್ಲೇ ಇರಬೇಕಾಗಿತ್ತು. ಶೂದ್ರಾತಿಶೂದ್ರರೆನಿಸಿದ್ದ ಪಂಚಮರ ಸ್ಥಿತಿಯಂತೂ ಚಿಂತಾಜನಕವಾಗಿತ್ತು.
ಅಂತರ್ಜಾತಿ ವಿವಾಹ ಅಪರಾಧವಾಗಿತ್ತು. ಬಾಲ್ಯ ವಿವಾಹ ಪ್ರತಿಷ್ಠೆಯ ವಿಷಯವಾಗಿತ್ತು. ವೃತ್ತಿಯಿಂದ ವ್ಯಕ್ತಿಯ ಜಾತಿಯನ್ನು ನಿರ್ಣಯಿಸಲಾಗುತ್ತಿತ್ತು. ದೇವಾಲಯಗಳಿಗೆ ಎಲ್ಲರಿಗೂ ಪ್ರವೇಶದ ಅವಕಾಶವಿರಲಿಲ್ಲ. ಕೆಳವರ್ಗದವರಿಗೆ ಅಕ್ಷರಜ್ಞಾನದ ಅವಕಾಶವೇ ಇರಲಿಲ್ಲ. ವೃತ್ತಿಗಳೂ ಅಷ್ಟೆ. ವ್ಯಕ್ತಿ ತನ್ನ ಒಲವಿನ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಅದಕ್ಕೂ ವಂಶಪರಂಪರೆಯ ಅಂಕುಶವಿತ್ತು.
ವೃತ್ತಿಗಳಲ್ಲೂ ಮೇಲು-ಕೀಳುಗಳ ಪರಿಗಣನೆ ಇತ್ತು. ಶ್ರಮಜೀವಿಗಳಿಗೆ ಸಾಮಾಜಿಕ ಸ್ಥಾನಮಾನಗಳು ಕನಸಾಗಿದ್ದವು. ಸಂಪತ್ತಿನ ಸಂಗ್ರಹ ಕೆಲವೇ ಜನರ ಹಕ್ಕಾಗಿತ್ತು. ಎಷ್ಟೇ ಭಾರವಾದರೂ ಕೆಳವರ್ಗದವರು ತೆರಿಗೆ ಸಲ್ಲಿಸಬೇಕಾಗಿತ್ತು. ದೇವಾಲಯಗಳಲ್ಲಿ ಪೂಜಾರಿ-ಪುರೋಹಿತರ ಲಾಲಸೆಗಾಗಿ ದೇವದಾಸಿ ಪದ್ಧತಿ ಅಸ್ತಿತ್ವದಲ್ಲಿತ್ತು.
ಹೀಗೆ ಮಾನವತ್ವವನ್ನೇ ಅಣಕಿಸುವ, ಮಾನವ ಘನತೆ-ಸಮಾನತೆಗಳನ್ನು ಹತ್ತಿಕ್ಕುವ ನೂರಾರು ಪದ್ಧತಿ ಮತ್ತು ಕಟ್ಟುಪಾಡುಗಳಿಂದ ಸಾಮಾನ್ಯ ಜನರು ಕ್ರೂರ ಶೋಷಣೆಗೆ ಒಳಗಾಗಿದ್ದರು. ಅಸಹನೀಯ ಅವಮಾನಕ್ಕೆ ಈಡಾಗಿದ್ದರು.
ಇಂತಹ ಅಮಾನವೀಯ ಸ್ಥಿತಿಯ ಕತ್ತಲು ಕವಿದಿದ್ದಾಗ, ಸೂರ್ಯೋದಯದಂತೆ ಕಾಣಿಸಿಕೊಂಡ ಬಸವಣ್ಣನವರು ಪರಿಸ್ಥಿತಿಯನ್ನು ಸೂಕ್ಷವಾಗಿ ಪರಿಶೀಲಿಸಿ, ಅಂದಿನ ಆ ವ್ಯವಸ್ಥೆಗೆ ಆಧಾರವೆನಿಸಿದ್ದ ವೇದಾಗಮ, ಶಾಸ್ತ-ಪುರಾಣಗಳನ್ನೆಲ್ಲ ಗಂಭೀರವಾಗಿ ಅಧ್ಯಯನ ಮಾಡಿ, ಅವುಗಳಲ್ಲಿರುವ ಟೊಳ್ಳುಗಳನ್ನೆಲ್ಲ ಬಯಲಿಗಳೆದು, ಜನ ಸಮುದಾಯದಲ್ಲಿ ವಸ್ತುಸ್ಥಿತಿಯ ವೈಚಾರಿಕ ಪ್ರಜ್ಞೆ ಮೂಡಿಸುವ ಮಹಾಮಣಿಹವನ್ನು ಕೈಗೊಂಡರು.
ಬಸವಣ್ಣನವರು ವೈದಿಕ ಧರ್ಮದ ಮತ್ತು ಜಾತಿಜಾಡ್ಯದ ಸಮಾಜ ವ್ಯವಸ್ಥೆಯನ್ನು ಧಿಕ್ಕರಿಸಿ, ಮುಕ್ತ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆಯನ್ನು ಘೋಷಿಸಿದರು.
ಶತಶತಮಾನಗಳಿಂದ ಸನಾತನಿಗಳೆನ್ನುವವರು ಆಚರಿಸುತ್ತಿದ್ದ ಅಸ್ಪ್ರಶ್ಯತೆಯ ಅನಿಷ್ಟವನ್ನು ತೊಡೆದುಹಾಕಲು ಕ್ರಮಕೈಗೊಂಡರು. ಕಾಯಕಸೂತ್ರದ ಮೂಲಕ ಆರ್ಥಿಕ ಸಮಾನತೆ ಮತ್ತು ವೃತ್ತಿಗೌರವಕ್ಕೆ ಅವಕಾಶ ಕಲ್ಪಿಸಿದರು. ದಾಸೋಹಸೂತ್ರದ ಮೂಲಕ ಸಮಾನ ವಿತರಣೆ ಮತ್ತು ಸಹಬಾಳ್ವೆಯ ವಾತಾವರಣವನ್ನು ಮೂಡಿಸಿದರು.

ದುಡಿಮೆಯ ಬಿಡುವಿನಲ್ಲಿ ಯಾವುದೇ ವರ್ಗ-ವರ್ಣ ಭೇದವಿಲ್ಲದೆ ಎಲ್ಲರೂ ಸಮಾನವಾಗಿ ಪಾಲುಗೊಂಡು, ಅನುಭಾವ ಚಿಂತನೆ ನಡೆಸಲು ‘ಅನುಭವ ಮಂಟಪ’ ಸ್ಥಾಪಿಸಿದರು.
ಈ ಎಲ್ಲ ಪ್ರಗತಿಪರ ಹೆಜ್ಜೆಗಳ ಪರಿಣಾಮವಾಗಿ ಅಂದಿದ್ದ ಪ್ರಕೀರ್ಣ ಸಂಪ್ರದಾಯದ ವ್ಯವಸ್ಥೆಗೆ ಬದಲಾಗಿ, ಪ್ರಗತಿಪರ ಪರ್ಯಾಯ ವ್ಯವಸ್ಥೆಯೊಂದು ನೆಲೆಗೊಳ್ಳಲು ಅವಕಾಶವಾಯಿತು. ಇದರಿಂದಾಗಿ, ಸಹಸ್ರಾರು ವರ್ಷಗಳ ಮೌನವನ್ನು ಮುರಿದು ದೀನ-ದಲಿತರೆನ್ನುವವರೆಲ್ಲ ಮುಕ್ತವಾಗಿ ದನಿಮೂಡತೊಡಗಿದರು.
ವಾಸ್ತವವಾಗಿ, ಕನ್ನಡದ ನೆಲದಲ್ಲಿ ದಲಿತರ ದನಿ ಮೊದಲು ಕೇಳಿ ಬಂದದ್ದೇ ಶರಣರ ಆಂದೋಲನದಿಂದಾಗಿ. ಬಸವಣ್ಣನವರು ಕಲ್ಪಿಸಿದ್ದು ಕಲ್ಯಾಣ ರಾಜ್ಯ. ಆ ಕಲ್ಯಾಣ ರಾಜ್ಯಕ್ಕಾಗಿ ರೂಪಿಸಿದ ಅಲಿಖಿತ ಸಂವಿಧಾನದ ಮೂರು ಮಹತ್ವದ ಅಧಿನಿಯಮಗಳೆಂದರೆ, ಕಾಯಕ-ದಾಸೋಹ-ಅನುಭಾವ. ಅವರು ಪ್ರವರ್ತಿಸಿದ ಇಡೀ ಚಳವಳಿಯ ಆಶಯ ಜನಮನದ ಅಜ್ಞಾನ ನಿವಾರಣೆ ಮತ್ತು ಪ್ರಜ್ಞಾಜಾಗೃತಿ.
ಆ ಚಳವಳಿಗೆ ಮಾಧ್ಯಮವಾದದ್ದೇ ವಿಶ್ವ ಸಾಹಿತ್ಯದಲ್ಲೇ ವಿಶಿಷ್ಟ ಪ್ರಕಾರವೆನಿಸಿರುವ ವಚನ ಸಾಹಿತ್ಯ. ಅದು ಶರಣರು ರಚಿಸಿದ ಸಾಹಿತ್ಯವಾಗಿರುವ ಕಾರಣ ‘ಶರಣ ಸಾಹಿತ್ಯ’ವೆಂದಾಗಿದೆ.
ವಚನ ಸಾಹಿತ್ಯ ನೇರ, ಸರಳ, ಸ್ಪಷ್ಟ ಮತ್ತು ವಸ್ತುನಿಷ್ಠ. ಅಷ್ಟೇ ಅರ್ಥಪೂರ್ಣ. ನಿರ್ಭಯ, ನಿರ್ಭಿಡೆ, ನಿಸ್ವಾರ್ಥ, ನಿರಹಂಕಾರಗಳೇ ವಚನಗಳ ಆಭರಣಗಳು. ವಚನ ಸಾಹಿತ್ಯದ ಸಂದೇಶ ಆಳ್ವಿಕೆಯ ಅಧಿಕಾರವಾಣಿಯಲ್ಲ; ಬಾಳ್ವಿಕೆಯ ಮನೋಜ್ಞ ಬಿನ್ನಹ. ಅದು ಬಹಿರಂಗದ ಬಣ್ಣದಾಟವಲ್ಲ; ಅಂತರಂಗದ ಹುಡುಕಾಟ. ವಚನ ಸಾಹಿತ್ಯ ನಿಜವಾದ ಅರ್ಥದಲ್ಲಿ ಜನಪರ ಆಶಯಗಳಿಗೆ ಬದ್ಧವಾದ ಶುದ್ಧ ಸಾಹಿತ್ಯ.
ಹಾಗಾಗಿ, ವಚನ ಸಾಹಿತ್ಯ ಅಂದಿನ ಜನ ಸಮುದಾಯದಲ್ಲಿ ಮಿಂಚಿನ ಸಂಚಾರವುಂಟುಮಾಡಿತು. ಜನರಲ್ಲಿ ಅಧಿಕಾರವನ್ನು, ಅನ್ಯಾಯವನ್ನು ಪ್ರಶ್ನಿಸುವ ಕೆಚ್ಚು ಮೂಡಿತು. ಈ ಕ್ರಾಂತಿಕಾರಿ ಬೆಳವಣಿಗೆ ಸಹಜವಾಗಿಯೇ ಪಟ್ಟಭದ್ರ ಹಿತಾಸಕ್ತ ಸಂಪ್ರದಾಯಸ್ಥರ ನಿಂತ ನೆಲ ಅಲುಗಾಡತೊಡಗಿತು.
ಅಂತೇ ಚಳವಳಿಯ ಹುಟ್ಟಿಡಗಿಸಲು ಸಾಧ್ಯವಿರುವ ಎಲ್ಲ ಹುನ್ನಾರಗಳನ್ನೂ ನಡೆಸಿ, ಆ ಪುರೋಹಿತಶಾಹಿ, ಅಂದಿನ ರಾಜಶಾಹಿಯನ್ನು ಬಳಸಿಕೊಂಡು, ಶರಣರಿಗೆ ಕೊಡಬಾರದ ಹಿಂಸೆಕೊಟ್ಟು, ಜನಜಾಗೃತಿಯ ಮಾಧ್ಯಮವಾದ ವಚನ ಸಾಹಿತ್ಯವನ್ನು ನಾಶಗೊಳಿಸಲು ಏನೆಲ್ಲ ಮಾಡಿದರು ಎಂಬುದನ್ನು ಇತಿಹಾಸ ದಾಖಲಿಸಿದೆ.
ಶರಣರ ಕಾಲಾನಂತರವಂತೂ ಮತ್ತೆ ಆ ಸಂಪ್ರದಾಯವಾದಿಗಳದ್ದೇ ಕೈವಾಡ ನಡೆಯತೊಡಗಿ, ಇಂದಿನವರೆಗೂ ಅದು ಮುಂದೆವರೆದಿರುವುದನ್ನು ನಾನು ಬೇರೆ ಹೇಳಬೇಕಾಗಿಲ್ಲ. ಅದಕ್ಕೆ ಈಗಲೂ ವೈದಿಕ ಮನಸ್ಸುಗಳು ಮತ್ತು ಬಸವ ವಿಚಾರವಾದಿಗಳ ನಡುವೆ ನಡೆದಿರುವ ಸಂಘರ್ಷವೇ ಸಾಕ್ಷಿಯಾಗಿದೆ.
ಶರಣ ಚಳವಳಿ ನಡೆದ ಎಂಟು ನೂರು ವರ್ಷಗಳ ನಂತರ, ನಮ್ಮ ಅದೃಷ್ಟವೆಂಬಂತೆ, ಕಳೆದ ಶತಮಾನದಲ್ಲಿ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಕಾಲದ ಧೂಳಿನಲ್ಲಿ ಕಣ್ಮರೆಯಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದದ್ದನ್ನು ನಾವು ಎಷ್ಟು ನೆನೆದರೂ ಸಾಲದು.
ಅವರು ಶರಣರ ಆಂದೋಲನದ ನಂತರ, ಎಲ್ಲೆಂದರಲ್ಲಿ ಚೆಲ್ಲಿಹೋಗಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸಿ, ಪ್ರಸಾರ ಮಾಡದೇ ಹೋಗಿದ್ದಿದ್ದರೆ, ಇಷ್ಟು ವೇಳೆಗೆ ಅದು ಪೂರ್ಣ ನಾಮಾವಶೇಷವಾಗಿ ಬಿಡುತ್ತಿತ್ತು. ವಿಶ್ವ ಸಾಹಿತ್ಯದಲ್ಲೇ ಅದ್ವಿತೀಯವೆನಿಸಿದ ಒಂದು ಶ್ರೇಷ್ಠ ಮತ್ತು ವಸ್ತುನಿಷ್ಠ ಸಾಹಿತ್ಯ ಸಂಪತ್ತಿನಿಂದಲೇ ನಾವು ಎರವಾಗಿ ಬಿಡುತ್ತಿದ್ದೆವು.
ಒಂದು ದೃಷ್ಟಿಯಿಂದ ಶರಣರದ್ದು ‘ವಚನ ಚಳವಳಿ’ಯಾಗಿದ್ದರೆ, ಹಳಕಟ್ಟಿ ಅವರದ್ದು ‘ವಚನ ಜಾಗೃತಿ ಚಳವಳಿ’ ಎನ್ನಬಹುದು.
ಆ ಮಹಾನುಭಾವರ ಸ್ಮರಣೆಗೆ ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆ ‘ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಿ, ಆ ಮೂಲಕ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ನಾನು ಈ ಸಂದರ್ಭದಲ್ಲಿ ಹೃದಯ ತುಂಬಿ ಸ್ಮರಿಸುತ್ತೇನೆ. ಹಾಗೆಯೇ, ಬಿ.ಎಲ್.ಡಿ.ಇ. ಸಂಸ್ಥೆ ಅಧ್ಯಕ್ಷರೂ, ರಾಜ್ಯದ ಪ್ರಸ್ತುತ ಬೃಹತ್ ಕೈಗಾರಿಕಾ ಸಚಿವರೂ ಆದ ಮಾನ್ಯ ಶ್ರೀ ಎಂ.ಬಿ. ಪಾಟೀಲ ಅವರಂತೂ ಶರಣ ವಿಚಾರಧಾರೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಇಲ್ಲಿಗೆ ೧೨ ವರ್ಷಗಳ ಹಿಂದೆ, ವಿಜಯಪುರದಲ್ಲಿ ನಡೆದ ದಾಖಲೆಯ ಅಖಿಲ ಭಾರತ ೧೨ನೆಯ ಶರಣ ಸಾಹಿತ್ಯ ಸಮ್ಮೇಳನದ ನೇತೃತ್ವ ಮಹಾದಾರ್ಶನಿಕರಾಗಿದ್ದ ಲಿಂ. ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳದ್ದೇ ಆಗಿತ್ತು. ಮಾನ್ಯ ಶ್ರೀ ಎಂ.ಬಿ. ಪಾಟೀಲ ಅವರೇ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸಮ್ಮೇಳನದ ಸ್ವಾಗತ ಸಮಿತಿಗೂ ಅವರೇ ಅಧ್ಯಕ್ಷರಾಗಿರುವುದು ಒಂದು ಯೋಗಾಯೋಗವೆಂದೇ ಹೇಳಬೇಕು.
ಇಂದು ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಅತ್ಯಂತ ಮಹತ್ವದ ಭಾಗ ಎನಿಸಿಕೊಂಡಿದ್ದರೆ. ಅದಕ್ಕೆ ಡಾ. ಫ.ಗು. ಹಳಕಟ್ಟಿ ಅವರು ಪರಿಶ್ರಮವೇ ಕಾರಣ. ಬಹುಶಃ ಅವರ ಕಾಲದಿಂದ ಈಚೆಗೆ ಶರಣರು ಮತ್ತು ಅವರ ಸಾಹಿತ್ಯ ಕುರಿತಂತೆ ನಡೆದಿರುವಷ್ಟು ಸಂಶೋಧನೆ, ಸಂಪಾದನೆ, ಪ್ರಕಟಣೆ, ಚರ್ಚೆ, ಸಂವಾದ, ಉಪನ್ಯಾಸ, ಪ್ರವಚನ ಇತ್ಯಾದಿಗಳು ಕನ್ನಡ ಸಾಹಿತ್ಯದ ಇತರ ಬೇರಾವ ಪ್ರಕಾರಗಳನ್ನು ಕುರಿತು ನಡೆದಿರುವಂತೆ ಕಾಣುವುದಿಲ್ಲ.
ಈ ಬೆಳವಣಿಗೆಯನ್ನು ಕಂಡು ಸಹಿಸಲಾಗದ ಸನಾತನವೆನ್ನುವ ಕೆಲವು ಹಿತಾಸಕ್ತಿಗಳು ಬಹಿರಂಗವಾಗಿ ವಿರೋಧ ವ್ಯಕ್ತ ಪಡಿಸುವ ಶಕ್ತಿಯಿಲ್ಲದೆ, ಗುಪ್ತವಿನಾಶಕ ಕೃತ್ಯಗಳಲ್ಲಿ ತೊಡಗಿರುವುದು ಒಂದು ವಿಷಾದದ ಸಂಗತಿ.
ವಚನಕಾರರು ಹಿಂದೂ ಧರ್ಮದ ಪ್ರಮಾಣಾಧಾರಗಳಾದ ವೇದಾಗಮಗಳನ್ನು, ಶಾಸ್ತ್ರ ಪುರಾಣಗಳನ್ನು, ಪೂಜಾರಿ-ಪೌರೋಹಿತ್ಯ ಪದ್ಧತಿಗಳನ್ನು ವಿರೋಧಿಸುವ ಕಾರಣ, ವಚನ ಸಾಹಿತ್ಯ ಹಿಂದೂ ವಿರೋಧಿಯೆಂದೇ ಆ ಸನಾತನ ಮನಸ್ಸುಗಳು ತಿಳಿದುಕೊಂಡಂತಿದೆ.
ವಚನಕಾರರ ವಿಚಾರಧಾರೆ ಅರ್ಥಹೀನ ಸಂಪ್ರದಾಯಾಚರಣೆಗಳ ವಿರೋಧಿಯೇ ವಿನಃ, ರಾಷ್ಟ ವಿರೋಧಿಯಲ್ಲ, ಅಥವಾ ಅನ್ಯಧರ್ಮ ವಿರೋಧಿಯೂ ಅಲ್ಲ.
ವೈಚಾರಿಕವಾಗಿ, ವೈಜ್ಞಾನಿಕವಾಗಿ. ಸೋಜಿಗಪಡುವಷ್ಟು ಮುಂದುವರೆದಿರುವ ಇಂದಿನ ಕಾಲಮಾನಕ್ಕೂ ಸಲ್ಲುವ ಶರಣರ ವಿಚಾರಧಾರೆ ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ, ಅನಿವಾರ್ಯವಾಗಿದೆ. ಏಕೆಂದರೆ, ಇಂದೂ ಸಹ ಜನಸಮುದಾಯವನ್ನು ಅನೇಕ ಅನಿಷ್ಠಗಳು ಕಾಡುತ್ತಲೇ ಇವೆ.

ಈಗ ಎಲ್ಲೆಲ್ಲೂ ವೈಯಕ್ತಿಕ ಶೀಲ-ಚಾರಿತ್ರ್ಯಗಳಿಗೆ ದಾರಿದ್ರ್ಯದ ಗರಬಡಿದಿದೆ. ಸಾಂಸಾರಿಕ ಸಂಬಂಧಗಳಿಗೆ ಸಿಡಿಲು ಬಡಿದಿದೆ. ಸಾಮಾಜಿಕ ಸಾಮರಸ್ಯದ ಸೇತುವೆ ಮುರಿದು ಬಿದ್ದಿದೆ. ಧಾರ್ಮಕ ಕ್ಷೇತ್ರದ ಪಥ-ಪಾವಿತ್ರ್ಯಗಳಿಗೆ ವಿಪರ್ಯಾಸದ ವಿಪ್ಪತ್ತು ಒದಗಿದೆ. ರಾಜಕೀಯ ನೀತಿ-ನಿಲುವುಗಳಿಗೆ ಸಮಯ ಸಾಧಕ ಪ್ರವೃತ್ತಿಯ ರೋಗ ತಗುಲಿದೆ.
ಆರ್ಥಿಕ ವ್ಯವಸ್ಥೆಯ ವ್ಯವಹಾರಗಳು ಹಗರಣಗಳ ಹುತ್ತಗಳಾಗಿವೆ. ಆಡಳಿತದ ಸುಗಮ ನಿರ್ವಹಣೆಗೆ ಸ್ವಹಿತಾಸಕ್ತಿಗಳ ತೊಡಕುಂಟಾಗಿದೆ. ಗ್ರಾಮೀಣರ ಸಹಜ ನೆಮ್ಮದಿಯ ಬದುಕಿಗೆ ಬೆಂಕಿ ಬಿದ್ದಿದೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕರಣೆಯ ತೊನ್ನು ತಗಲಿದೆ. ಸಾಹಿತ್ಯದ ಸಾತ್ವಿಕ ಚಿಂತನೆಗೆ ವಿವಾದಗಳು ಗಂಟುಬಿದ್ದಿವೆ.
ಒಟ್ಟಾರೆ, ಜನ ಸಮುದಾಯದ ಬದುಕು ಭಯ-ಭೀತಿ, ಅನಿಶ್ಚಿತತೆ-ಆತಂಕಗಳ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ.
ಇಂದಿನ ಕಳವಳಕಾರಿ ಸನ್ನಿವೇಶದಲ್ಲಿ ಅಷ್ಟಿಷ್ಟಾದರೂ ಸಮಾಧಾನ ಕಂಡುಕೊಳ್ಳಲು ನಮಗಿರುವ ಒಂದು ಸರಳ ಮಾರ್ಗವೆಂದರೆ, ೧೨ನೆಯ ಶತಮಾನದ ಶರಣರ ವಿಚಾರಧಾರೆಯನ್ನು ಇಂದಿನ ತಲೆಮಾರಿಗೆ ತಲುಪಿಸುವುದು.
ಈ ಬಗೆ ಗಂಭೀರ ಚಿಂತನೆ ನಡೆಸಿದ ಸುತ್ತೂರು ಶ್ರೀಕ್ಷೇತ್ರದ ಪೂಜ್ಯ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರು, ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸರೂ, ಶರಣ ಸಾಹಿತ್ಯ ಸಂಶೋಧಕರೂ ಆಗಿದ್ದ ಡಾ. ಎಚ್. ತಿಪ್ಪೇರುದ್ರಸ್ವಾಮಿ ಮತ್ತಿತರ ಆಸಕ್ತರೊಡನೆ ಸಮಾಲೋಚಿಸಿ, ನಾಲ್ಕು ಗೋಡೆಗಳ ನಡುವಿನ ತರಗತಿಗಳ ಶಿಕ್ಷಣದಂತೆಯೇ, ಮುಕ್ತ ಬಯಲಿನ ಸಮುದಾಯ ಶಿಕ್ಷಣದ ಆಗತ್ಯವೂ ಇದೆ ಎಂದು ವಿಚಾರಮಾಡಿದ ಫಲರೂಪವೇ ಇಲ್ಲಿಗೆ ೪೦ ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು.
ನಾಡು-ನುಡಿಯ ಮಾತೃಸಂಸ್ಥೆಯಂತಿರುವ ಕನ್ನಡ ಸಾಹಿತ್ಯ ಪರಿಷತ್ತೇ ಇರುವಾಗ ಮತ್ತೊಂದು ಸಾಹಿತ್ಯ ಪರಿಷತ್ತಿನ ಅಗತ್ಯವಿದೆಯೇ ಎಂದು ಆಗ ಕೆಲವರು ದನಿಮಾಡಿದ್ದುಂಟು. ಆದರೆ, ಕನ್ನಡ ಸಾಹಿತ್ಯದ ಬಹು ಮಹತ್ವದ ಬೃಹತ್ ಪಾಲೆನಿಸಿರುವ ಶರಣ ಸಾಹಿತ್ಯದ ಸಂಶೋಧನೆ, ಪ್ರಕಟಣೆ ಮತ್ತು ಪ್ರಸಾರಗಳಿಗೆ ಮೀಸಲಾದ ಒಂದು ಸ್ವತಂತ್ರ ಸಂಸ್ಥೆ ಇರಬೇಕೆನ್ನುವುದೇ ಪೂಜ್ಯಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಸಂಕಲ್ಪವಾಗಿತ್ತು.
ಅವರ ಸಂಕಲ್ಪದಂತೆ ಶರಣ ಸಾಹಿತ್ಯ ಪರಿಷತ್ತು ಬೆಳೆದಂತೆಲ್ಲ ಆ ಭಿನ್ನ ದನಿ ಎತ್ತಿದವರಿಗೂ ಪರಿಷತ್ತಿನ ಪ್ರತ್ಯೇಕ ಅಸ್ಥಿತ್ವ ಮನವರಿಕೆಯಾಯಿತು. ಈಗ ಕನ್ನಡ ಸಾಹಿತ್ಯ ಪರಿಷತ್ತಿನಂತೆಯೇ ನಾಡು-ಹೊರನಾಡುಗಳಲ್ಲಿ ತನ್ನ ಕ್ಷೇತ್ರ ಘಟಕಗಳನ್ನು ಹೊಂದಿರುವ ಪರಿಷತ್ತು ಶರಣ ಸಾಹಿತ್ಯ ಸಂಬಂಧದ ಗ್ರಂಥ ಪ್ರಕಟಣೆ, ಚಿಂತನ ಸಂಕಿರಣ, ದತ್ತಿ ಉಪನ್ಯಾಸ, ವಚನ ಸಂಗೀತ, ಶರಣ ಕ್ಷೇತ್ರಗಳ ಚಿತ್ರ ದಾಖಲೀಕರಣ, ಶರಣ ಸಾಹಿತ್ಯ ಪ್ರಶಸ್ತಿ ಪ್ರದಾನ, ‘ಮಹಾಮನೆ’ ಮಾಸಿಕದ ಪ್ರಕಟಣೆ, ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಅಭಿಮಾನದ ಸಂಗತಿ.
ಪರಿಷತ್ತಿನ ಚಟುವಟಿಕೆಗಳಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ ಒಂದು ಪ್ರತಿಷ್ಠಿತ ಕಾರ್ಯಕ್ರಮ. ಈ ಸಮ್ಮೇಳನಕ್ಕೆ ರಾಷ್ಟ್ರ ವ್ಯಾಪ್ತಿಯಷ್ಟೇ ಅಲ್ಲ ಜಾಗತಿಕ ವ್ಯಾಪ್ತಿಯೂ ಒದಗಿರುವುದುಂಟು.
ಬೆಳಗಾವಿಯಲ್ಲಿ ಹಿರಿಯ ಶಿಕ್ಷಣತಜ್ಞರಾದ ಡಾ. ಪ್ರಭಾಕರ ಕೋರೆ ಅವರ ಸಾರಥ್ಯದಲ್ಲಿ ನಡೆದ ೫ನೆಯ ಸಮ್ಮೇಳನದಲ್ಲಿ ಅಮೇರಿಕಾದ ಬ್ರಾಡ್ ಬಿಮನ್ ಅವರು “ಬಸವಣ್ಣ ಮತ್ತು ಮಾರ್ಟಿನ್ ಲೂಥರ್” ಎಂಬ ವಿಷಯವನ್ನು ಕುರಿತೂ, ದಕ್ಷಿಣ ಆಫ್ರಿಕಾದ ಅಲೆನ್ ವೆನ್ ರೈಟ್ ಅವರು “ಬಸವಣ್ಣ ಮತ್ತು ನೆಲ್ಸನ್ ಮಂಡೇಲಾ” ಎಂಬ ವಿಷಯವನ್ನು ಕುರಿತೂ ಪ್ರಬಂಧ ಮಂಡಿಸಿದ್ದರು.
ಸಮ್ಮೇಳನಗಳೆಂದರೆ ಚಿಂತನ ಗೋಷ್ಠಿಗಳು ಪ್ರಧಾನವಾಗಿರುತ್ತವೆ. ಪ್ರಸ್ತುತ ಸಮ್ಮೇಳನದಲ್ಲಿ ಪರಿಷತ್ತು ೫ ಗೋಷ್ಠಿಗಳನ್ನು ಸಂಯೋಜಿಸಿದೆ. ಇಲ್ಲಿನ ಪ್ರತಿಯೊಂದು ಗೋಷ್ಠಿಗೂ ಒಂದೊಂದೇ ಪ್ರಬಂಧ ಮಂಡನೆಗೆ ಅಥವಾ ವಿಷಯ ಚಿಂತನೆಗೆ ಅವಕಾಶ ಕಲ್ಪಿಸಿರುವುದು ಒಂದು ವಿಶೇಷ.
ಚಿಂತನೆಗೆ ಗೊತ್ತುಮಾಡಿರುವ ವಿಷಯಗಳೂ ಪ್ರಸ್ತುತದ ಸನ್ನಿವೇಶದಲ್ಲಿ ಗಂಭೀರ ಆಲೋಚನೆ ನಡೆಸಬೇಕಾದ ಮಹತ್ವದ ವಿಷಯಗಳೇ ಆಗಿವೆ.
“ವಿಶ್ವಗುರು ಬಸವಣ್ಣ – ಸಾಂಸ್ಕೃತಿಕ ನಾಯಕ”, “ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ”, “ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ”, “ಯುವಜನರತ್ತ ಶರಣ ಸಾಹಿತ್ಯ”, ಜೊತೆಗೆ ಆಧುನಿಕ ವಚನ ಗೋಷ್ಠಿ. ಈ ಗೋಷ್ಠಿಗಳಲ್ಲಿ, ಶರಣ ಸಾಹಿತ್ಯ ಕುರಿತಂತೆ ಗಾಢ ಆಧ್ಯಯನ ಮಾಡಿರುವ ನಮ್ಮ ನಾಡಿನ ಉದ್ದಾಮ ವಿದ್ವಾಂಸರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಪೂಜ್ಯಶ್ರೀ ಶಿವರುದ್ರ ಸ್ವಾಮೀಜಿ, ಕನಕಪುರದ ಡಾ. ಚನ್ನಬಸವ ಸ್ವಾಮೀಜಿ, ಅಥಣಿಯ ಡಾ. ಪ್ರಭುಚನ್ನಬಸವ ಸ್ವಾಮೀಜಿ, ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಡಾ. ಹೇಮಾಪಟ್ಟಣ ಶೆಟ್ಟಿ, ಡಾ. ಎಂ.ಎಸ್. ಆಶಾದೇವಿ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಮಹಾಂತೇಶ ಬಿರಾದಾರ, ಡಾ. ಎಲ್. ಹನುಮಂತಯ್ಯ, ಶ್ರೀ ಬಿ.ಎಸ್. ಪಾಟೀಲ, ಡಾ. ಅವನೀಶ್ ಕವಿ – ಇವರು ನಡೆಸುವ ಚಿಂತನೆಗಳಿಸಿದ ಶರಣ ಸಾಹಿತ್ಯದ ಬಗೆಗೆ ಇನ್ನೂ ಸ್ಪಷ್ಟ ಕಲ್ಪನೆ ಇಲ್ಲದ ಕೆಲವರಿಗೆ ವಸ್ತುನಿಷ್ಠ ಸತ್ಯದ ಅರಿವಾಗಲಿ ಎಂದು ನಾನು ಆಶಿಸುತ್ತೇನೆ.
ಇಂದು ನಮ್ಮ ಮಧ್ಯೆಯೇ ಇರುವ ನಾಡಿನ ಪ್ರಚಲಿತ ಹಿರಿಯ ವಿದ್ವಾಂಸರೂ, ವಿಚಾರವಾದಿಗಳೂ ಆದ ಸೋದರಿ ಡಾ. ಎಂ.ಎಸ್. ಆಶಾದೇವಿ ಅವರು, “ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ” ಎಂಬ ನನ್ನ ಅನುವಾದ ಗ್ರಂಥದ ಪ್ರಸ್ತಾವನೆಯಲ್ಲಿ “ಇತಿಹಾಸದ ನೋಟಗಳನ್ನು ಪ್ರಭಾವಿಸುವ, ನಿಯಂತ್ರಿಸುವ ಸಂಗತಿಗಳು ಎಲ್ಲ ಕಾಲದಲ್ಲೂ ಇದ್ದೇ ಇರುತ್ತವೆ – ಎನ್ನುವುದು ಸತ್ಯ. ಇದನ್ನು ಒಪ್ಪಿಯೂ, ಇತಿಹಾಸದ ಯಾವ ಹುನ್ನಾರಗಳೂ ಮುಚ್ಚಿಡಲಾಗದ ಕೆಲವು ಸತ್ಯಗಳು ಎಲ್ಲ ಪ್ರಯತ್ನಗಳನ್ನೂ ಮೀರಿ ಇಣುಕಿ ನಮ್ಮನ್ನು ತಲುಪುತ್ತಲೇ ಇರುತ್ತವೆ” ಎಂದಿದ್ದಾರೆ. ಅವರ ಮಾತಿಗೆ ಶರಣ ಸಾಹಿತ್ಯ ಒಂದು ನಿಚ್ಚಳ ನಿದರ್ಶನ ಎಂದು ನಾನು ಭಾವಿಸಿದ್ದೇನೆ.
ನಮ್ಮ ಶರಣರು ಶಿಲೆಯಿಂದಲೋ ಮತ್ತಾವುದರಿಂದಲೋ ಇದ್ದಕ್ಕಿದ್ದಂತೆ ಉದ್ಭವವಾದವರಲ್ಲ, ಅಥವಾ ಮುಗಿಲಿನಿಂದ ಇಳಿದು ಬಂದವರೇನಲ್ಲ. ಅವರು ನಮ್ಮ-ನಿಮ್ಮಂತೆ ಸಹಜ ಸಾಮಾನ್ಯರು. ಆದರೆ, ಅವರ ಲೋಕಪ್ರಜ್ಞೆ ಅದ್ಭುತವಾದದ್ದು. ಸೃಷ್ಟಿಯ ಬೆರಗನ್ನು ಅವರು ಕಂಡ ಮತ್ತು ಅನುಭವಿಸಿದ ರೀತಿ ಅನನ್ಯವಾದದ್ದು. ಲೋಕ ಜೀವನದ ಬಗೆಗೆ ಅವರಿಗಿದ್ದ ವಿಶ್ವಾಸ ಅದ್ವಿತೀಯವಾದದ್ದು. “ಅವರು ರಚಿಸಿದ ವಚನಗಳು ಮಾನವನ ಜನನ-ಬದುಕು-ಮರಣಗಳೊಡನೆ ಅನುಸಂಧಾನ ಮಾಡುವ ಮನೋವಲಯದ ಸುತ್ತಲೇ ಇರುತ್ತವೆ” ಎಂಬ ಮಾತನ್ನು ಗಮನಿಸಿದಾಗ, ವಚನ ಸಾಹಿತ್ಯ ನಿಜವಾದ ಅರ್ಥದಲ್ಲಿ ಲೋಕಜೀವನದ ಸಂವಿಧಾನವೆಂದೆ ಹೇಳಬೇಕು.
ವಚನ ಸಾಹಿತ್ಯ ಮನರಂಜನೆಯ ಸಾಹಿತ್ಯವಲ್ಲ. ಅದು ಆತ್ಮಾನುಸಂಧಾನದ ಆವಿಷ್ಕಾರ. ಅದು ಶರಣರ ಮನದಿಂದ ಮೂಡಿಬಂದದ್ದಲ್ಲ; ಹೃದಯದಿಂದ ಹೊಮ್ಮಿಬಂದದ್ದು. ಅದು ಕೇವಲ ಅಕ್ಷರಜ್ಞಾನದ ಉತ್ಪನ್ನವಲ್ಲ; ಅನುಭವಜ್ಞಾನದ ಉದ್ಘೋಷ! ಎಂತಲೇ ವಚನ ಸಾಹಿತ್ಯದ ರಚನೆ ಸುಮಾರು ೯೦೦ ವರ್ಷಗಳ ಹಿಂದಿನದ್ದಾದರೂ ಇಂದಿನ, ಮುಂದಿನ ಕಾಲಮಾನದ ವೈಚಾರಿಕ ಒರೆಗಲ್ಲಿಗೆ ಸಲ್ಲುವ ಸಾಹಿತ್ಯವಾಗಿದೆ.
ಸ್ವತಂತ್ರ ಭಾರತವು ಅಂಗೀಕರಿಸಿರುವ ಪ್ರಜಾಸತ್ತಾತ್ಮಕ ಸಂವಿಧಾನ ಶರಣರ ವಿಚಾರಧಾರೆಯನ್ನೇ ಪ್ರತಿಧ್ವನಿಸುತ್ತದ ಎಂದರೆ ಅತಿಶಯೋಕ್ತಿಯೇನಲ್ಲ. ನಮ್ಮ ಸಂವಿಧಾನದ ಆಶೋತ್ತರಗಳು ಪೂರ್ಣಾರ್ಥದಲ್ಲಿ ಈಡೇರಬೇಕಾದರೆ, ನಮ್ಮ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಶರಣರ ನೀತಿ-ನಿಲುವುಗಳಂತೆ ಪರಿವರ್ತನೆ ಹೊಂದಬೇಕಾಗಿದೆ.
ಬಸವಾದಿ ಶರಣರ ಸಾರ್ವಕಾಲಿಕ ಸಂದೇಶ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ ಎನ್ನುವುದನ್ನು ಮನಗಂಡೇ ನಮ್ಮ ಕರ್ನಾಟಕ ಸರ್ಕಾರವು, ಬಸವಣ್ಣನವರನ್ನು “ವಿಶ್ವಗುರು ಬಸವಣ್ಣ – ಸಾಂಸ್ಕೃತಿಕ ನಾಯಕ” ಎಂದು ಅಂಗೀಕರಿಸಿ, ಅಧಿಕೃತ ಘೋಷಣೆ ಮಾಡಿರುವುದು ಮತ್ತು ಕಲ್ಯಾಣದಲ್ಲಿ, ಎಂದರೆ ಇಂದಿನ ಬಸವ ಕಲ್ಯಾಣದಲ್ಲಿ ‘ನೂತನ ಅನುಭವ ಮಂಟಪ’ವನ್ನು ನಿರ್ಮಿಸುತ್ತಿರುವುದು ನಿಜಕ್ಕೂ ಐತಿಹಾಸಿಕ ಮಹತ್ವದ ಕ್ರಮಗಳಾಗಿವೆ.
ಇದಕ್ಕೆ ಕಾರಣರಾದ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಅವರ ಸಚಿವ ಸಂಪುಟಕ್ಕೆ ಈ ಸಂದರ್ಭದಲ್ಲಿ ನಾಡು ಮತ್ತು ಹೊರನಾಡುಗಳಲ್ಲಿರುವ ಕೋಟ್ಯಾಂತರ ಬಸವ ಧರ್ಮಾಭಿಮಾನಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
‘ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಸರಕಾರ ಘೋಷಣೆ ಮಾಡಿದಾಗಲೇ ನಾನು ಆ ಘೋಷಣೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಒಂದು ಸ್ಥೂಲ ಯೋಜನೆ ಕಳುಹಿಸಿದ್ದೆ. ಆ ಬಗೆಗೆ ಸರ್ಕಾರ ಕೈಗೊಂಡ ಕ್ರಮ ಕುರಿತಂತೆ ನನಗೆ ತಿಳಿಯದು.
ಆದರೆ ಬಸವ ಕಲ್ಯಾಣದಲ್ಲಿ ನಡೆಯುತ್ತಿರುವ ‘ನೂತನ ಅನುಭವ ಮಂಟಪ’ದ ನಿರ್ಮಾಣಕಾರ್ಯ ಈಗ ಅಂತಿಮ ಹಂತದಲ್ಲಿರುವುದು ನನಗೆ ಹೆಚ್ಚಿನ ಸಮಾಧಾನ ಉಂಟುಮಾಡಿದೆ. ಈ ಹೆಚ್ಚಿನ ಸಮಾಧಾನಕ್ಕೆ ಕಾರಣ, ಆ ‘ನೂತನ ಅನುಭವ ಮಂಟಪ’ ಯೋಜನೆಯನ್ನು ಸಿದ್ಧಪಡಿಸಿದ ತಜ್ಞರ ಸಮಿತಿಗೆ ನಾನು ಅಧ್ಯಕ್ಷನಾಗಿದ್ದೆನೆಂಬುದು. ಸುಮಾರು ೭೫೦ ಕೋಟಿ ರೂ.ಗಳ ಅಂದಾಜು ವೆಚ್ಚದ ಈ ಯೋಜನೆ ಪೂರ್ಣಗೊಂಡರೆ, ಬಹುಶಃ ಇಡೀ ಭಾರತದಲ್ಲೇ ಅತ್ಯಂತ ಬೃಹತ್ ಜ್ಞಾನಕೇಂದ್ರವಾಗಲಿದೆ.
ಸಮಕಾಲೀನ ಜನಸಮುದಾಯದ ಸಮಸ್ಯೆಗಳ ಬಗೆಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಮಹತ್ವದ ಕೇಂದ್ರವಾಗಲಿದೆ. ದೇಶ-ವಿದೇಶದ ಆಸಕ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರವಾಗಲಿದೆ. ಇತಿಹಾಸದ ಪ್ರತಿರೂಪವಾಗಿ, ಜಾಗತಿಕ ಆಕರ್ಷಣೆಯ ಒಂದು ಪ್ರವಾಸಿ ಕ್ಷೇತ್ರವಾಗಲಿದೆ. ಆಧುನಿಕ ತಂತ್ರಜ್ಞಾನ ಮತ್ತು ಶರಣರ ತತ್ವಜ್ಞಾನಗಳ ಸಮನ್ವಯದ ಒಂದು ಅದ್ಭುತವಾಗುವ ನೂತನ ಅನುಭವ ಮಂಟಪ ರಾಷ್ಟ್ರದ ಮತ್ತು ಕರ್ನಾಟಕದ ಒಂದು ಪ್ರತಿಷ್ಠಿತ ಚಿಂತನ ವೇದಿಕೆಯಾಗಲಿದೆ.
ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರಂತೆಯೇ ನಮ್ಮ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೂ ಬಸವ ವಿಚಾರಧಾರೆಗೆ ಬದ್ಧರಾಗಿದ್ದಾರೆಂದು ನಾನು ತಿಳಿದಿದ್ದೇನೆ. ಅದಕ್ಕೆ ಸೂಚನೆ ಎಂಬಂತೆ, ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಸ್ವೀಕರಿಸಿದ ತರುಣದಲ್ಲೇ ಪ್ರಥಮ ಬಾರಿಗೆ ರಾಷ್ಟçದ ಪ್ರಧಾನಿ ಅವರನ್ನು ಭೇಟಿ ಮಾಡಿದಾಗ, ಬಸವಣ್ಣನವರ ಪ್ರತಿಮೆಯನ್ನು ಪ್ರಧಾನಿ ಅವರಿಗೆ ನೀಡಿರುವುದು. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ನಾಡಿನ ಜನಕ್ಕೆಲ್ಲ ಸಂತಸ ಉಂಟುಮಾಡಿದೆ. ಅವರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಬಸವಾದಿ ಶರಣರಿಗೆ ಸಂಬಂಧಿಸಿದಂತೆ ಕೈಗೊಂಡಿದ್ದ ಎಲ್ಲ ಯೋಜನೆಗಳನ್ನೂ ತ್ವರಿತಗತಿಯಲ್ಲಿ ಕಾರ್ಯಗತಗೊಳಿಸುವರೆಂಬ ವಿಶ್ವಾಸ ನನಗಿದೆ.
ಈ ಸಮ್ಮೇಳನವು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಂತಹ ಪ್ರಾತಿನಿಧಿಕ ಸಾಂಸ್ಕೃತಿಕ ಸಂಸ್ಥೆಯನ್ನು ಇಂದಿನ ಎತ್ತರಕ್ಕೆ ಬೆಳೆಸಿರುವ ಪರಿಷತ್ತಿನ ಗೌರವಾಧ್ಯಕ್ಷರಾದ ಪೂಜ್ಯಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲೇ ನಡೆಯುತ್ತಿರುವುದು ಮತ್ತು ಶ್ರೀ ಸಿದ್ಧಗಂಗಾ ಮಠದ ಪೂಜ್ಯಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರೇ ಸಾನ್ನಿಧ್ಯ ವಹಿಸಿರುವುದು ನನಗೆ ಹರ್ಷವುಂಟು ಮಾಡಿದೆ.
ಸಮ್ಮೇಳನದ ಸ್ಮರಣ ಸಂಚಿಕೆ “ಕಲ್ಯಾಣ ಸಂಗಮ”ವನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ಮಾನ್ಯ ಶ್ರೀ ವಿ. ಸೋಮಣ್ಣನವರೂ, ಪರಿಷತ್ತಿನ ‘ಮಹಾಮನೆ’ ವಿಶೇಷ ಸಂಚಿಕೆಯನ್ನು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಮಾನ್ಯಶ್ರೀ ಎಂ.ಬಿ. ಪಾಟೀಲ್ ಅವರೂ ಬಿಡುಗಡೆ ಮಾಡಿರುವುದು, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಬಸವಣ್ಣನವರ ಭಾವಚಿತ್ರವನ್ನೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಮಾಜಿ ಸಚಿವರಾದ ಶ್ರೀಮತಿ ಲಕ್ಷಿ ಹೆಬ್ಬಾಳ್ಕರ್ ಅವರು ಪರಮ ದಾಸೋಹಮೂರ್ತಿ ಪೂಜ್ಯಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನೂ ಮಾಜಿ ಸಚಿವರಾದ ಶ್ರೀ ಎಂ. ಕೃಷ್ಣಪ್ಪ ಅವರು ಪೂಜ್ಯ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದು ಸಹಜವಾಗಿಯೇ ಎಲ್ಲರಿಗೂ ಹರ್ಷ ಉಂಟು ಮಾಡಿದೆ.
ವಿಶೇಷವಾಗಿ, ಶರಣ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ, ಪ್ರತಿಷ್ಠಿತ ‘ಬಸವ ರಾಷ್ಟ್ರೀಯ ಪ್ರಶಸ್ತಿ’ ಪುರಸ್ಕಾರ ಪಡೆದಿರುವ ಮತ್ತು ೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ನಾಡೋಜ ಡಾ. ಸಿದ್ಧರಾಮ ಬೆಲ್ಟಾಳ ಅವರ ಸಾನ್ನಿಧ್ಯ ಭಾಗ್ಯವೂ ಈ ಸಮ್ಮೇಳನಕ್ಕೆ ದೊರೆತಿರುವುದು ಹರ್ಷದ ಸಂಗತಿ. ಪೂಜ್ಯರಿಗೆ ನನ್ನ ಪ್ರಣಾಮಗಳು.
ಹಾಗೆಯೇ ಸಮಾರೋಪ ಸಮಾರಂಭದಲ್ಲಿ ಗದಗ ತೋಂಟದಾರ್ಯ ಮಠದ ಪೂಜ್ಯಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು, ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯಶ್ರೀ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು, ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಡಾ. ಬಸವಲಿಂಗಪಟ್ಟದ್ದೇವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಗ್ರಾಮೀಣ ಮತ್ತು ಪಂಚಾಯತ್ ರಾಜ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು, ಮಾಜಿ ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರು, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ ಅವರು ಮತ್ತು ರಮಣಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಹಿರಿಯ ಲೇಖಕರೂ ಆದ ನಾಡೋಜ ಶ್ರೀ ಎಸ್. ಷಡಕ್ಷರಿ ಅವರು ಪಾಲುಗೊಳ್ಳುತ್ತಿರುವುದು ನನಗೆ ಸಂತೋಷವುಂಟು ಮಾಡಿದೆ. ಈ ಸಮ್ಮೇಳನ ಸಂದರ್ಭದಲ್ಲೇ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ.
ಇನ್ನು ಸಮ್ಮೇಳನದ ಚಿಂತನ ಗೋಷ್ಠಿಗಳಲ್ಲಿ ನಾಡಿನ ಅನೇಕ ಹಿರಿಯ ವಿದ್ವಾಂಸರು ಮತ್ತು ಶರಣ ವಿಚಾರವಾದಿಗಳೇ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಮತ್ತು ನಾಳೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ಈ ವೇದಿಕೆಯಲ್ಲಿ ನಡೆಯುವ ಇಡೀ ಕಾರ್ಯಕಲಾಪಗಳು ಸಮ್ಮೇಳನದಲ್ಲಿ ಪಾಲುಗೊಂಡಿರುವ ನಾಡಿನ ನಾನಾ ಭಾಗದ ಬಂಧುಗಳಿಗೆ ಒಂದು ಹೊಸ ಅನುಭವವನ್ನು ನೀಡುವಂತಾಗಲಿ ಎಂದು ಆಶಿಸುತ್ತೇನೆ.
ಕೊನೆಯದಾಗಿ, ಸರ್ಕಾರದಲ್ಲಿ: ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸರ್ಕಾರದಲ್ಲಿ ಮುಂದೆ ನನ್ನ ಬಿನ್ನಹ :
೧. ‘ವಿಶ್ವಗುರು ಬಸವಣ್ಣ-ಸಾಂಸ್ಕೃತಿಕ ನಾಯಕ’ ಘೋಷಣೆಯ ಅನುಷ್ಠಾನಕ್ಕಾಗಿ ಸಚಿವ ಸಂಪುಟದ ಒಂದು ಉಪಸಮಿತಿಯನ್ನು ರಚಿಸಿ, ಆ ಸಮಿತಿಗೆ ಸಲಹೆ-ಸಮಾಲೋಚನೆಗಾಗಿ ಕ್ಷೇತ್ರ ತಜ್ಞರ ಒಂದು ಸಮಿತಿಯನ್ನು ರಚಿಸುವುದು.
೨. ರಾಜ್ಯ ಸರ್ಕಾರದ ಆಸಕ್ತಿಯಿಂದಲೇ ಬಸವ ಕಲ್ಯಾಣದಲ್ಲಿ ನಡೆಯುತ್ತಿರುವ ‘ನೂತನ ಅನುಭವ ಮಂಟಪ’ದ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ತಜ್ಞ ಸಮಿತಿ ನೀಡಿರುವ ಸಲಹೆಯಂತೆ ಅದರ ಕಾರ್ಯಾರಂಭವಾಗಬೇಕು.
೩.ಈಗಾಗಲೇ ಜಾಗತಿಕ ಲಿಂಗಾಯತ ಮಹಾಸಭಾದ ನಾಡು-ಹೊರನಾಡುಗಳ ಬಸವ ಧರ್ಮಾನುಯಾಯಿಗಳು ನಡೆಸಿರುವ ಹೋರಾಟದಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮತ್ತು ಈ ಧರ್ಮಾನುಯಾಯಿಗಳಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಶಾಸನದಡಿ ಅಲ್ಪಸಂಖ್ಯಾತ ಸಮುದಾಯದ ಮನ್ನಣೆ ದೊರಕಿಸುವುದು.
೪. ಸಾರ್ವಕಾಲಿಕ ಮೌಲ್ಯದ ಸಾಂವಿಧಾನಾತ್ಮಕ ಅನ್ವಯದ ವಚನ ಸಾಹಿತ್ಯವನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದ ಸ್ನಾತಕೋತ್ತರ ಹಂತದವರೆಗಿನ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಸೇರಿಸುವುದು.
೫. ಈಗಾಗಲೇ, ರಾಜ್ಯ ಸರ್ಕಾರ ಒಪ್ಪಿಕೊಂಡಿರುವ ‘ವಚನ ವಿಶ್ವವಿದ್ಯಾಲಯದ ಆರಂಭಕ್ಕೆ ಅಗತ್ಯವಿರುವ ಎಲ್ಲ ನೆರವನ್ನೂ ಒದಗಿಸುವುದು.
೬. ರಾಷ್ಟ್ರದ ರಾಜ್ಯಧಾನಿ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಭವನಗಳಿರುವಂತೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಎಲ್ಲ ಜಿಲ್ಲೆಗಳ ಜಿಲ್ಲಾ ಭವನಗಳನ್ನು ನಿರ್ಮಿಸಿ, ಆಡಳಿತ ಮತ್ತು ಸಂಬಂಧ ಸಮನ್ವಯಗಳಿಗೆ ಅವಕಾಶ ಕಲ್ಪಿಸುವುದು.
೭. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರಮುಖ ರಸ್ತೆಗಳು, ಬಡಾವಣೆಗಳು ಮತ್ತು ಉದ್ಯಾನವನಗಳಿಗೆ ೧೨ನೆಯ ಶತಮಾನದ ಶರಣರ ಹೆಸರುಗಳನ್ನು ನಾಮಕರಣ ಮಾಡುವುದು.
ಸಾರ್ವಜನಿಕರಲ್ಲಿ –
೧. ಕೇವಲ ವ್ಯಕ್ತಿ ಪ್ರತಿಷ್ಠೆಯಿಂದ, ಕೆಲವು ಮತಾಂಧರಿಂದ, ಕೆಲವು ರಾಜಕೀಯ ಪಕ್ಷಗಳ ಪ್ರಚೋದನೆಯಿಂದ ಸಮುದಾಯದ ಸಾಮರಸ್ಯ ಭಂಗಗೊಳ್ಳುತ್ತಿರುವುದಕ್ಕೆ ಮೂಕಸಾಕ್ಷಿಗಳಾಗದೆ, ಸಮುದಾಯದಲ್ಲಿ ಶರಣ ಜಾಗೃತಿ ಉಂಟು ಮಾಡುವಲ್ಲಿ ಸಹಕರಿಸುವುದು.
೨. ಶರಣರ ಜೀವನ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಅನಗತ್ಯ ವಾದ-ವಿವಾದಗಳನ್ನು ಬಿಟ್ಟು, ಶರಣ ಸಂದೇಶದ ವಸ್ತುನಿಷ್ಠ ಅನುಷ್ಠಾನಕ್ಕೆ ತೊಡಗುವುದು. ಬಂಧುಗಳೇ, ಇಷ್ಟು ಸಾಕೆಂದು ಕಾಣುತ್ತದೆ. ಇಂದು ಮತ್ತು ನಾಳೆ ಇಲ್ಲಿ ನಡೆಯುವ ಈ ಸಮ್ಮೇಳನ ಸಾರ್ಥಕವಾಗುವಂತೆ ನೀವೆಲ್ಲ ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಬೆಂಗಳೂರು, ೭-೮ ಜುಲೈ ೨೦೨೬

ಧನ್ಯವಾದಗಳು 💐ಕೋಟಿ ಕೋಟಿ ಶರಣು 👏🏻👏🏻