‘ಬಸವ ಉತ್ಸವ’ದ ಬಸವಜ್ಯೋತಿಗೆ ಚಾಲನೆ
ಬಸವಕಲ್ಯಾಣ:
ವಿಶ್ವಗುರು ಬಸವಣ್ಣನವರು ಸಂಸ್ಥಾಪಿಸಿದ ಲಿಂಗಾಯತ ಧರ್ಮ, ಇದು ಸರ್ವಸಮಾನತೆ ಸಾರುವ ಧರ್ಮವಾಗಿದೆ. ಇಂತಹ ಧರ್ಮವನ್ನು ಕೆಲವರು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಅದು ಅವರ ಭ್ರಮೆಯಾಗಿದೆ.
ಲಿಂಗಾಯತ ಧರ್ಮವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಈ ಕಾಲದಲ್ಲಿ ಈ ಧರ್ಮಕ್ಕೆ ಬಹುದೊಡ್ಡ ಶಕ್ತಿಯನ್ನು ತುಂಬಿದವರು ಪೂಜ್ಯ ಲಿಂಗಾನಂದ ಶ್ರೀ ಮತ್ತು ಮಾತೆ ಮಹಾದೇವಿ ಹಾಗೂ ರಾಷ್ಟ್ರೀಯ ಬಸವ ದಳದವರು.

ಕೋಟಿ ಜನಗಳ ಶಕ್ತಿ ಒಬ್ಬ ಬಸವತತ್ವ ಲಿಂಗಾಯತನಲ್ಲಿದೆ ಎಂಬುದನ್ನು ರಾಷ್ಟ್ರೀಯ ಬಸವದಳದವರು ಸಾಬೀತುಪಡಿಸುತ್ತಿದ್ದಾರೆ ಎಂದು ಹುಲಸೂರಿನ ಪೂಜ್ಯ ಶಿವಾನಂದ ಸ್ವಾಮೀಜಿಯವರು ಮಾತನಾಡಿದರು.
ಅವರು ನಗರದ ಪರುಷಕಟ್ಟೆಯಲ್ಲಿ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಮಾತೆ ಸತ್ಯಾದೇವಿ ಮತ್ತು ಪೂಜ್ಯ ಬಸವಪ್ರಭು ಸ್ವಾಮೀಜಿ ಅವರ ನೇತೃತ್ವದಲ್ಲಿ ಎಡೆದೊರೆ ನಾಡು ರಾಯಚೂರಿನಲ್ಲಿ ದಿನಾಂಕ 25, 26ರಂದು ನಡೆಯುವ ‘ಬಸವ ಉತ್ಸವ’ ಕಾರ್ಯಕ್ರಮ ಉದ್ಘಾಟನೆಗೆ ಬಸವಜ್ಯೋತಿಗೆ ಚಾಲನೆ ಕೊಟ್ಟು ಮಾತಾನಾಡುತ್ತಾ, ಬಸವ ಬೆಳಗು ನಾಡಿನ ತುಂಬೆಲ್ಲ ಹರಡಲು ಇಂದು ನಾವು ಸಮರ್ಪಣೆಯಿಂದ ದುಡಿಯಬೇಕಾಗಿದೆ.

ನಾಡಿನಲ್ಲಿ ಬಸವತತ್ವವನ್ನು ಗಟ್ಟಿಯಾಗಿ ಪ್ರಚಾರ ಮಾಡುವ ಕೈಂಕರ್ಯವನ್ನು ಮಾತಾಜಿ ಶಿಷ್ಯರು ಧೈರ್ಯದಿಂದ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮಾತಾಜಿ ಲಿಂಗೈಕ್ಯರಾದ ನಂತರ ರಾಷ್ಟ್ರೀಯ ಬಸವದಳದವರು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಹಮ್ಮಿಕೊಂಡ ಕಾರ್ಯದಲ್ಲಿ ತಾವೂ ಭಾಗಿಯಾದ್ದನ್ನು ಸ್ಮರಿಸಿಕೊಂಡರು.
ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಮಾತನಾಡಿ, ಬಸವತತ್ವದ ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ಬಸವಕಲ್ಯಾಣದ ಪರುಷಕಟ್ಟೆಯಿಂದ ಜ್ಯೋತಿ ಹೊತ್ತಿಸಿಕೊಂಡು ಹೋಗುವುದನ್ನು ಎಂದಿನಿಂದಲೂ ರೂಢಿಸಿಕೊಂಡು ಬರಲಾಗಿದೆ. ಆದೇ ರೀತಿ ರಾಯಚೂರಿನಲ್ಲಿ ನಡೆಯುವ ಮೂರನೇ ಬಸವ ಉತ್ಸವ ಯಶಸ್ವಿಗೆ ಇಲ್ಲಿಂದಲೇ ಜ್ಯೋತಿಯನ್ನು ಹೊತ್ತಿಸಿಕೊಂಡು ಹೋಗಲಾಗುತ್ತಿದೆ.
ದುಮ್ಮನಸೂರು, ಬೀದರ, ಮಹಾಗಾವ, ಕಲಬುರಗಿ, ಯಾದಗಿರಿ, ದೇವಸೂಗುರ ಮಾರ್ಗವಾಗಿ ಪ್ರಚಾರ ಮಾಡುತ್ತಾ ರಾಯಚೂರು ನಗರಕ್ಕೆ ಸಾಗುವ ಬಸವಜ್ಯೋತಿಗೆ ಶುಭಕೋರಿದರು.

ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರು ಮಾತನಾಡಿ, ಲಿಂಗಾಯತ ಧರ್ಮ ಮಾನ್ಯತೆಗೆ ಸಂಕಲ್ಪಿಸಿ ನಡೆಯುವ ಬಸವ ಉತ್ಸವವು ಲಿಂಗಾಯತರಲ್ಲಿ ಉತ್ಸಾಹ ತುಂಬುವ ಕಾರ್ಯಕ್ರಮವಾಗಿದ್ದು; ನಾಡಿನಾದ್ಯಂತ ಸುಮಾರು ಐದು ಸಾವಿರ ಬಸವಭಕ್ತರು ಬರುವ ನಿರೀಕ್ಷೆಯಿದೆ. ಬರುವ ಭಕ್ತಾದಿಗಳಿಗೆ ಎರಡು ದಿನ ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು. ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕರೆ ಕೊಟ್ಟರು.

ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಜ್ಯೋತಿಯನ್ನು ಸ್ವಾಗತಿಸಿಕೊಳ್ಳಲಾಯಿತು.
ದಾನಮ್ಮ ಬಳಗದ ಅಧ್ಯಕ್ಷರಾದ ಸುಮಿತ್ರಾದೇವಿ ದಾವಣಗಾವೆ ಸ್ವಾಗತಿಸಿ ನಿರೂಪಿಸಿದರು. ರೇಣುಕಾ ಅವರು ಶರಣು ಸಮರ್ಪಣೆ ಮಾಡಿದರು.
