ರಾಯಚೂರ:
ಬಸವ ಕೇಂದ್ರದ ವತಿಯಿಂದ ರವಿವಾರ ಬಸವಾದಿ ಶರಣ ಕುಂಬಾರ ಗುಂಡಯ್ಯನವರ ಸ್ಮರಣೆ ಕಾರ್ಯಕ್ರಮ ನಡೆಯಿತು.
ವಾರದ ವಚನ ವಿಶ್ಲೇಷಣೆ ” ಶ್ರೀ ಗುರುವನುಳಿದು ಲಿಂಗವುಂಟೆ……… ” ಎಂಬ ಚೆನ್ನಬಸವಣ್ಣನವರ ವಚನದ ವಿಶ್ಲೇಷಣೆ ಮಾಡುತ್ತಾ ತಾತ್ಪರ್ಯವನ್ನು ಮುಕ್ತಾಯಕ್ಕ ನರಕಲದಿನ್ನಿ ಅವರು ತಿಳಿಸಿದರು.
ವಚನ ಪರಂಪರೆಯಲ್ಲಿ ‘ ಶ್ರೀ ಗುರುವನುಳಿದು ಲಿಂಗವುಂಟೆ? ಎಂದರೆ, ಇತರ ಧರ್ಮಗಳಲ್ಲಿ ಗುರು ಗುರುವಾಗಿಯೇ ಕೊನೆಯವರೆಗೆ ಇರುತ್ತಾನೆ. ಶರಣ ಸಿದ್ದಾಂತದಲ್ಲಿ ಶಿಷ್ಯನು ಪರಿಪೂರ್ಣ ಜ್ಞಾನಾರ್ಜನೆ ಹೊಂದಿದ ಬಳಿಕ ಗುರುವಾಗಲು ಅವಕಾಶವಿರುತ್ತದೆ.
ಲಿಂಗವನ್ನು ಪೂಜಿಸಿ ಲಿಂಗವೇ ತಾನಾಗಬೇಕು. ಆ ಲಿಂಗದಲ್ಲಿ ಅದ್ಭುತವಾದ ಶಕ್ತಿ ಇದೆ. ಲಿಂಗದೊಳಗಿನ ಮಹಾ ಬೆಳಗನ್ನು ಅರಿಯಬೇಕಾದರೆ ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳನ್ನು ಸರಿಯಾಗಿ ಅಧ್ಯಯನ ಮಾಡಿ ಅದರಂತೆ ನಡೆಯಬೇಕು.
ಲಿಂಗಾಯತ ಧರ್ಮ ತತ್ವದ ಪ್ರಕಾರ ಇಷ್ಟಲಿಂಗ ಪೂಜೆಗೆ ಗುರುವೇ ಮೊದಲ ಮೆಟ್ಟಿಲು. ಈ ಕುರಿತು ಶರಣರು ಮತ್ತು ವಚನಕಾರರ ವಿವರಣೆಯನ್ವಯ ಗುರುವಿನ ಮಹತ್ವ, ವಚನಕಾರರ ಒಳನೋಟವನ್ನು ಸಮರ್ಪಕವಾಗಿ ತಿಳಿಸುವಾತನೆ ನಿಜಗುರು ಎಂದರು.

ಬೆಟ್ಟಪ್ಪ ಕಸ್ತೂರಿ ಅವರು ಶರಣ ಗುಂಡಯ್ಯ ಕುರಿತು ಮಾತನಾಡಿ, ಕುಂಬಾರ ಗುಂಡಯ್ಯ ಅವರ ಧರ್ಮಪತ್ನಿ ಕೇತಲಾ ದೇವಿಯವರು ಭಲ್ಲುಕೆ (ಭಾಲ್ಕಿ)ಯಲ್ಲಿ ವಾಸವಾಗಿದ್ದರು. ಮಣ್ಣಿನ ಪಾತ್ರೆಯನ್ನು ತಯಾರಿಸಲು ಬೇಕಾಗುವ ತಿರುಗುಣಿ ಚಕ್ರವು ಅವರ ಅಂತರಂಗದ ಆಧಾರ ಚಕ್ರವಾಗಿದ್ದು ಆ ತಿರುಗುಣಿ ಸ್ಥಳವಾಗಿತ್ತು.
ತಿರುಗುಣಿಯ ಮಧ್ಯದ ಮೊಳೆ ನೆಡುವ ರಂಧ್ರವೇ ಅವರಿಗೆ ನಾಭಿಯಲ್ಲಿರುವ ಮಣಿಪುರ ಚಕ್ರವಾಗಿತ್ತು. ಗುಂಡಯ್ಯನವರು ತಮ್ಮ ಅಪ್ರತಿಮ ಶಿವಧ್ಯಾನದಿಂದ ಮಡಿಕೆಗಳನ್ನು ಸುಟ್ಟು ತಯಾರಿಸಿ, ಅವುಗಳನ್ನು ಬಾರಿಸುತ್ತ “ಕಾಯಕವೇ ಶಿವಭಕ್ತಿ ಕಾಯಕವೇ ಶಿವಭಜನೆ ಕಾಯಕವೇ ಲಿಂಗ ಶಿವಪೂಜೆ – ಶಿವಯೋಗ ಕಾಯಕವೇ ಕಾಯ್ವ ಕೈಲಾಸ” ಎಂದು ಹಾಡುತ್ತಾ ಕುಣಿಯುತ್ತಿದ್ದರೆಂದರು.
ಅಮರ ಗುಂಡಪ್ಪ ಹೂಗಾರ್ ಗುಂಡಯ್ಯನವರ ಕಾಯಕ ನಿಷ್ಠೆ ಕುರಿತು ಮಾತನಾಡಿದರು. ಹರವಿ ನಾಗನಗೌಡರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಚೆನ್ನಬಸವ ಇಂಜನಿಯರ್ ಅವರು ಸವದತ್ತಿ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ನಡೆದ ಚನ್ನಬಸವಣ್ಣ ವಿರಚಿತ ‘ಕರಣ ಹಸಿಗೆ’ ಮತ್ತು ‘ಲಿಂಗಾಂಗ ಸಾಮರಸ್ಯ’ ಕುರಿತಾದ ಕಮ್ಮಟದ ಬಗ್ಗೆ ತಿಳಿಸಿದರು.
ಪಾರ್ವತಿ ಪಾಟೀಲ ಮಕ್ಕಳಿಗೆ ವಾರದ ವಚನ ಪಾಠ ಹೇಳಿಕೊಟ್ಟರು. ನಾಗೇಶ್ವರ ಹಾಗೂ ಸಂಗಡಿಗರು ವಚನ ಗಾಯನ ಮಾಡಿದರು. ಬೆಟ್ಟಪ್ಪ ಕಸ್ತೂರಿ ಅವರು ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು.
ವೆಂಕಣ್ಣ ಆಶಾಪುರ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಮಲ್ಲಿಕಾರ್ಜುನ ಗುಡಿಮನಿ ವಂದಿಸಿದರು.
