ಬಸವಣ್ಣನವರ ಸಂಸ್ಮರಣಾ ಸಮಾವೇಶ: ನೂತನ ಅನುಭವ ಮಂಟಪದಲ್ಲಿ ಕರಸೇವೆ ಮಾಡಲು ನಿರ್ಣಯ
ಹಂಪಿ:
ಒಂದು ಕಾಲದಲ್ಲಿ ವಿಶ್ವದಲ್ಲಿಯೇ ಸಂಪದ್ಭರಿತ ರಾಜ್ಯ ವಿಜಯನಗರವಾಗಿತ್ತು. 14 ನೇ ಶತಮಾನದಲ್ಲಿ ರಾಜ್ಯಭಾರ ಮಾಡಿದ ಸಂಗಮ ವಂಶದ ಪ್ರೌಢದೇವರಾಯರ ಆಡಳಿತದಲ್ಲಿ ಬಸವಾದಿ ಶರಣರು ಮತ್ತು ವಚನ ಸಾಹಿತ್ಯ ಉತ್ತುಂಗಕ್ಕೇರಿದ ಕಾಲವಾಗಿತ್ತು ಎಂದು ಅಥಣಿ ತಾಲೂಕಿನ ಬಸವಬೆಳವಿಯ ಪೂಜ್ಯ ಶರಣಬಸವ ದೇವರು ಹೇಳಿದರು.

ಬಳ್ಳಾರಿ, ವಿಜಯನಗರ ರಾಯಚೂರು, ಕೊಪ್ಪಳ ಜಿಲ್ಲೆಗಳ ರಾಷ್ಟ್ರೀಯ ಬಸವದಳ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಾಗೇನಹಳ್ಳಿ ಹತ್ತಿರ ಇರುವ ಧರ್ಮದಗುಡ್ಡದಲ್ಲಿ ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಲಿಂಗವಂತರಿಗೆ ಮೂರು ಕಲ್ಯಾಣಗಳು ಪ್ರಮುಖವೆನಿಸುತ್ತವೆ. ಬಸವಕಲ್ಯಾಣ, ವಿಜಯಕಲ್ಯಾಣ ಮತ್ತು ಅಮರಕಲ್ಯಾಣ. ಬಸವಣ್ಣನವರ ಕ್ರಾಂತಿಗೆ ಬಸವಕಲ್ಯಾಣ, ಅಮರಕಲ್ಯಾಣಕ್ಕೆ ಕೊಡೇಕಲ್ ಬಸವಣ್ಣನವರಾದರೆ, ವಿಜಯಕಲ್ಯಾಣವು ಪ್ರೌಢದೇವರಾಯರ ಆಡಳಿತದಲ್ಲಿ ಲಿಂಗವಂತ ಧರ್ಮಕ್ಕೆ ಆಶ್ರಯ ದೊರೆತು ವಚನ ಸಾಹಿತ್ಯ ರಚನೆಗೆ ಕಾರಣವಾಯಿತು.
ಕಲ್ಯಾಣ ಕ್ರಾಂತಿಯ ನಂತರ ತೆರೆಮರೆಗೆ ಸರಿದಿದ್ದ ವಚನ ಸಾಹಿತ್ಯ ಚಳುವಳಿಗೆ ಮರುಜೀವ ಬಂದಿದ್ದು ನೂರೊಂದು ವಿರಕ್ತರು ಮತ್ತು ಎಡೆಯೂರು ಸಿದ್ದಲಿಂಗೇಶ್ವರ ಅವರಿಂದ ಮತ್ತು ಅದು ನಡೆದುದು ಇದೇ ಪರಿಸರದಲ್ಲಿ.

12ನೆಯ ಶತಮಾನದ ನಂತರ ಈ ಧರ್ಮದ ಮೇಲೆ ಸಾಕಷ್ಟು ಆಕ್ರಮಣಗಳು ನಡೆದರೂ ಈ ಸಾಹಿತ್ಯದಲ್ಲಿರುವ ಜೀವಪರ ಹೋರಾಟಗಳು ಅದನ್ನು ಇಂದಿಗೂ ಜೀವಂತವಾಗಿರಿಸಿರುವದು ನಿಜವಾದರೂ, ವಿರೋಧಿಗಳ ಆಕ್ರಮಣ ಇಂದಿಗೂ ಮುಂದುವರೆದಿದೆ.
ಇದೇ ಸ್ಥಳದಲ್ಲಿ ಚನ್ನಬಸವಣ್ಣನವರ ಗವಿ, ನಿಜಮುಕ್ತೆ ಹಡಪದ ಲಿಂಗಮ್ಮ ತಾಯಿಯವರ ಗವಿ ಇಲ್ಲಿರುವವು. ಶರಣರು ಉಳವಿ ಕ್ಷೇತ್ರದ ಕಡೆ ತೆರಳುವ ಪೂರ್ವದಲ್ಲಿ ಕೆಲಕಾಲ ಇಲ್ಲಿ ನೆಲೆನಿಂತು ಅನುಷ್ಠಾನ ಮಾಡಿರುವ ಕುರುಹುಗಳನ್ನು ನೋಡಬಹುದಾಗಿದೆ.

ಈ ಧರ್ಮವನ್ನು ಮರೆಮಾಚಲು ಬಸವಣ್ಣನವರ ಸಿದ್ಧಾಂತ ವಚನಸಾಹಿತ್ಯದ ಮೂಲ ಆಶಯ ಮರೆಮಾಚಲು ನಡೆದಿರುವ ಪ್ರಸಂಗಗಳನ್ನು ಆಧಾರ ಸಹಿತ ಎಳೆಎಳೆಯಾಗಿ ಬಿಚ್ಚಿಡುತ್ತಾ ಒಟ್ಟಾರೆ “ಬಸ್ ನಮ್ದು ಬೋರ್ಡ್ ಅವರದ್ದಾಗಿದೆ” ಎಂದು ಒಂದೂವರೆ ಗಂಟೆಗೂ ಅಧಿಕ ಸಮಯದಲ್ಲಿ ಇಡೀ ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಟಿ.ಎಚ್. ಬಸವರಾಜ ಅವರು ಧರ್ಮದಗುಡ್ಡದ ಹಿಂದಿರುವ ಐತಿಹಾಸಿಕ ವಿಚಾರಗಳನ್ನು ತಿಳಿಸಿಕೊಡುತ್ತಾ, ಚನ್ನಬಸವಣ್ಣ ಮತ್ತು ಹಡಪದ ಲಿಂಗಮ್ಮ ತಾಯಿಯವರ ಕುರಿತು ತಿಳಿಸಿದರು.
ಅಕ್ಕನಾಗಮ್ಮನವರ ಹಿಂದೆ ಬಸವಣ್ಣನವರಿದ್ದಂತೆ ಈ ಪರಿಸರದ ಹಿಂದೆ ಇರುವ ಬಸವನದುರ್ಗ, ಕಾಲಘಟ್ಟ, ನಾಗಾಯಿ ಹೆಸರು ಬರಬರುತ್ತಾ ನಾಗೇನಹಳ್ಳಿಯಾಗಿದೆ ಎಂದು ಈ ಪ್ರದೇಶದ ಸಂಶೋಧನೆ ಹೇಳುತ್ತದೆ ಎಂದರು.

ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರ ಮೌಳಿ ಅವರು ಮಾತನಾಡಿ, ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪವನ್ನು ನಿರ್ವಹಿಸುವ, ರಕ್ಷಿಸುವ ನಿಟ್ಟಿನಲ್ಲಿ ಸಮಸ್ತ ಬಸವ ಭಕ್ತರು ಸೇವಾಕಾರ್ಯದಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಬಸವರಾಜಪ್ಪ ಶರಣರು ಬಸವತತ್ವ ಪರ ಸಂಘಟನೆಗಳು ನಿರಂತರವಾಗಿ ಇಷ್ಟಲಿಂಗ ಯೋಗ ಅನುಸಂಧಾನ ಮತ್ತು ವಚನ ಗೋಷ್ಠಿಗಳ ಮೂಲಕ ಸಂಘಟಿತರಾಗಬೇಕೆಂದರು.
ವೀರಣ್ಣ ಕೊರ್ಲಳ್ಳಿ ಸಹ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾವೇಶದ ಆರಂಭದಲ್ಲಿ ಷಟಸ್ಥಲ ದ್ವಜಾರೋಹಣ, ವಚನ ಪ್ರಾರ್ಥನೆ ನಡೆಯಿತು.

ನಿರೂಪಣೆ ಹಾಗೂ ಸಮಾರಂಭದ ಮಾರ್ಗದರ್ಶನ ರಾಜ್ಯ ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾದ ಬಳ್ಳಾರಿಯ ರವಿಶಂಕರ ಅವರಿಂದ ನಡೆಯಿತು.
ಬಳ್ಳಾರಿ, ಗಂಗಾವತಿ, ಕೊಪ್ಪಳ, ಹೊಸಪೇಟೆ, ಕಂಪ್ಲಿ, ಸಿಂಧನೂರು, ರಾಯಚೂರು ಮಾತ್ರವಲ್ಲದೆ ಭದ್ರಾವತಿ, ಬೆಂಗಳೂರು ಇನ್ನು ಹಲವಾರು ಕಡೆಗಳಿಂದ ನೂರಾರು ಶರಣರು ಭಾಗವಹಿಸಿದ್ದರು.
ವೇದಿಕೆ ಮೇಲೆ ಬಿಕೆಜಿ ನಾಗನಗೌಡ್ರು, ಎಸ್. ಬಸವರಾಜ ಮಾವಿನಳ್ಳಿ, ನಿಷ್ಟಿ ರುದ್ರಪ್ಪ, ಚಿಂತಕ ಕೆ. ರವೀಂದ್ರನಾಥ, ಡಾ. ಮಹಾಬಲೇಶ್ವರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
1) ಬಸವಕಲ್ಯಾಣದ ನೂತನ ಅನುಭವ ಮಂಟಪದ ಕರಸೇವೆಯಲ್ಲಿ ತನು, ಮನ, ಧನ, ಪ್ರಾಣ, ಅಭಿಮಾನ, ಸಮಯದ ಮೂಲಕ ದಾಸೋಹ ಸೇವೆಯಲ್ಲಿ ಭಾಗವಹಿಸಲು ನಿರ್ಣಯ.
2) ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನಪೀಠ ಪ್ರಾರಂಭಿಸಲು ಆಗ್ರಹ.
3) 2027ರಲ್ಲಿ ಸಂಸ್ಮರಣ ಉತ್ಸವ 10ನೇ ವರ್ಷಕ್ಕೆ ಕಾಲಿಡುವುದರಿಂದ ಅದನ್ನು ವಿಶಿಷ್ಟವಾಗಿ ಆಚರಿಸಲು ತೀರ್ಮಾನ.
4) ಲಿಂಗಾಯತ ಧರ್ಮದ ಪುನರುತ್ಥಾನ, ಸಂಗಮ ವಂಶದ ಕೊಡುಗೆ, ಪ್ರೌಢದೇವರಾಯ, ನೂರೊಂದು ವಿರಕ್ತರು, ಯಡಿಯೂರು ಸಿದ್ದಲಿಂಗೇಶ್ವರ ಮತ್ತು ವಚನ ಪ್ರಕಟಣೆಗಳ ಬಗ್ಗೆ ಸಮಗ್ರ ಅಧ್ಯಯನ ಗ್ರಂಥ ಪ್ರಕಟಿಸಲು ಸಂಕಲ್ಪ.
