ಚಿತ್ರದುರ್ಗ:
ಭಿಕ್ಷೆಗೆ ಒಂದು ಸಾಮಾಜಿಕ ಮೌಲ್ಯವನ್ನು ತಂದುಕೊಟ್ಟವರು 19ನೇ ಶತಮಾನದ ದೇವನೂರಿನ ಗುರುಮಲ್ಲೇಶ್ವರರು. ಕಂತೆಭಿಕ್ಷೆ ಕಾಯಕದ ಮೂಲಕ ಸಮಾಜದ ಹಸಿವು, ಬಡತನ, ಅಸಮಾನತೆ ಹೋಗಲಾಡಿಸುವುದರ ಮೂಲಕ ಬಸವಾದಿ ಶಿವಶರಣರ ಕಾಯಕ ಮತ್ತು ದಾಸೋಹದ ತತ್ವ ಸಿದ್ಧಾಂತಗಳನ್ನು ನಿಜಾಚರಣೆಗೆ ತಂದು ಮಹಾರಾಜರನ್ನು ಒಳಗೊಂಡಂತೆ ಜನಸಾಮಾನ್ಯರ ಭಕ್ತಿ ಗೌರವಾದರಗಳಿಗೆ ಪಾತ್ರರಾಗಿದ್ದರು.

ಅವರು ಅಂದು ದಾಸೋಹಕ್ಕಾಗಿ ಹಚ್ಚಿದ ಒಲೆ ಈಗಲೂ ನಂದದೆ ಸಮಾಜಕ್ಕಾಗಿ ಸಮರ್ಪಿತಗೊಂಡಿರುವುದು ಅಚ್ಚರಿಯ ಸಂಗತಿ ಎಂದು ದೇವನೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಡಿ.ಎಸ್. ಸದಾಶಿವಮೂರ್ತಿ ಅವರು ಗುರುಮಲ್ಲೇಶ್ವರರ ಜೀವನ ಸಾಧನೆಯ ಮೇಲೆ ಬೆಳಕು ಚೆಲ್ಲಿದರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ತಾಣದಲ್ಲಿ ಏರ್ಪಡಿಸಿದ್ದ ದೇವನೂರಿನ ತ್ರಿವಿಧ ದಾಸೋಹಿಗಳಾದ ಗುರುಮಲ್ಲೇಶ್ವರರ 199ನೇ ಜಯಂತಿಯಲ್ಲಿ ವಿಷಯಾವಲೋಕನ ಮಾಡುತ್ತಿದ್ದರು.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾರದೋ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪೂರೈಸಿ, ದೇಶ ಸಂಚಾರ ಮಾಡುತ್ತ ಹಳ್ಳಿಯಿಂದ ಹಳ್ಳಿಗೆ ಹೋಗುತ್ತ, ಯಾವುದೋ ಗುರುವಿನಿಂದ ದೀಕ್ಷೆ ಪಡೆದು, ಪರಿಚಯವಿಲ್ಲದ ಕಡೆ ವಾಸಿಸುತ್ತ ಅಲ್ಲಿರುವವರ ಪಾಲಿಗೆ ಆಶಾಕಿರಣ, ಭರವಸೆಯ ಬೆಳಕಾಗಿ ದೈವಾಂಶ ಸಂಭೂತರಾಗುತ್ತಾರೆ. ಅಂತಹವರು ಆಗೊಮ್ಮೆ ಈಗೊಮ್ಮೆ ಶತಮಾನಕ್ಕೊಬ್ಬರಂತೆ ಉದಯಿಸುತ್ತಾರೆ. ಅಂತಹವರಲ್ಲಿ ಗುರುಮಲ್ಲೇಶ್ವರರೂ ಒಬ್ಬರು.

ಅಂದಿನ ಶಿವಮೊಗ್ಗ ಜಿಲ್ಲೆಯ ಚವುಳಂಗ ಗ್ರಾಮದಲ್ಲಿ ಹುಟ್ಟಿ, ಬಾಲ್ಯಜೀವನ ಕಳೆದು ವಿವಿಧ ಕಾರಣಗಳಿಂದ ಮೈಸೂರಿಗೆ ಬಂದು ನೆಲಸಿ, ಮೈಸೂರಿನ ಮಹಾಲಿಂಗೇಶ್ವರ ಮಠ (ಈಗ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೊಳಪಟ್ಟಮಠ)ದಲ್ಲಿದ್ದು ಅಲ್ಲಿ ಗುರುವಿನಿಂದ ದೀಕ್ಷೆ ಪಡೆದು ನಂತರ ಅಧ್ಯಯನ, ಶಿವಯೋಗ ಪಡೆದು, ಸಮಾಜಸೇವೆಯಲ್ಲಿ ನಿರತರಾಗಿರುವಾಗ ಇವರಿಂದ ಅನೇಕ ಮಹತ್ಸಾಧನೆಗಳು ನಡೆಯುತ್ತವೆ. ಇವರು ಹೇಳಿದ ವಾಕ್ಯ ಸತ್ಯವಾಗಿರುತ್ತವೆ.
ಹೀಗಿರುವಾಗ ದೇವನೂರಿನ ಸುಬ್ಬೇಗೌಡರ ಹೆಂಡತಿ ಯಾವುದೋ ಒಂದು ಗಾಳಿ ಸೋಂಕಿನಿಂದ ಬಳಲುತ್ತಿರುತ್ತಾರೆ. ಅವರಿಗೆ ಗುರುಮಲ್ಲೇಶ್ವರನನ್ನು ಕರೆತಂದರೆ ಈ ಸೋಂಕು ನಿವಾರಣೆಯಾಗುತ್ತದೆಂಬ ಭರವಸೆಯಿಂದ ಗುರುಮಲ್ಲೇಶ್ವರರನ್ನು ಕರೆದುಕೊಂಡು ಹೋಗುತ್ತಾರೆ. ಇವರನ್ನು ನೋಡಿದ ತಕ್ಷಣ ಅವರ ಮೈಯಲ್ಲಿದ್ದ ಯಾವುದೋ ದೆವ್ವ ಅಥವಾ ಪಿಶಾಚಿ ಬಿಟ್ಟು ಹೋಗುತ್ತದೆ. ಇದರಿಂದ ಹರ್ಷಿತರಾದ ಸುಬ್ಬೇಗೌಡರು ತಾವು ಇಲ್ಲಿಯೇ ನೆಲೆ ನಿಲ್ಲಬೇಕೆಂದು ಕೇಳಿಕೊಂಡಾಗ ಒಪ್ಪುತ್ತಾರೆ.
ಅವರಿಗೆ ತಮ್ಮದೇ ಕರಿಹೆಂಚಿನ ಮನೆಯನ್ನು ಬಿಟ್ಟುಕೊಡುತ್ತಾರೆ.
ಹೀಗಿರುವಾಗ ಗುರುಮಲ್ಲೇಶ್ವರರ ತಪಸ್ಸಿನ ಶಕ್ತಿ ಮತ್ತು ಶಿವಯೋಗ ಸಾಧನೆಯಿಂದ ಏನೇನೋ ಘಟನೆಗಳು ನಡೆಯುತ್ತಿರುತ್ತವೆ. ಅದನ್ನು ಕೇಳಿದ ಅಂದಿನ ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಅರಮನೆಗೆ ಶ್ರೀಗಳನ್ನು ಆಮಂತ್ರಿಸಿ ರಾಜೋಚಿತವಾದ ಸತ್ಕಾರ ಸಿದ್ಧತೆ ನಡೆದು ಒಂದು ಚಿನ್ನದ ಹರಿವಾಣದಲ್ಲಿ ಮುತ್ತುರತ್ನ ಚಿನ್ನಾಭರಣಗಳನ್ನು ತುಂಬಿ ಸ್ವೀಕರಿಸಬೇಕೆಂದು ವಿನಂತಿಸುತ್ತಾರೆ.

ಇದು ಯಾರ ಸ್ವತ್ತು ಮಹಾರಾಜರೆ? ಪ್ರಜೆಗಳದ್ದು ಅಲ್ಲವೇ? ತನು ಮನ ದಂಡಿಸಿ ಸತ್ಯಶುದ್ಧ ಕಾಯಕದಿಂದ ಸಂಪಾದಿಸಿಕೊಟ್ಟದ್ದು ನಿಜವಾದ ಭಕ್ತಿಕಾಣಿಕೆ ಎಂದು ಹೇಳಿ ಅರಮನೆಯಿಂದ ಹೊರಡುತ್ತಾರೆ. ಇತ್ತ ಮಹಾರಾಜರು ಹೇಗಾದರೂ ಮಾಡಿ ಗುರುಮಲ್ಲೇಶ್ವರರಿಗೆ ತನ್ನ ಭಕ್ತಿಕಾಣಿಕೆ ಸಮರ್ಪಿಸಬೇಕೆಂದು ಆಲೋಚಿಸಿ ಮಾರುವೇಷದಲ್ಲಿ ಮಹಾರಾಜರು ಕಮ್ಮಾರನ ಕುಲುಮೆಯಲ್ಲಿ ಕಬ್ಬಿಣ ಕಾಸಿ ಬಡಿಯುವ ಒಂದುದಿನದ ಕಾಯಕ ಮಾಡಿ ಅದರಿಂದ ಬಂದ ಒಂದು ಹಾಗ(ನಾಲ್ಕಾಣೆ)ವನ್ನು ಅರ್ಪಿಸಿ, ಕಾಯಕದ ಮಹತ್ವವನ್ನು ಅರಿಯುತ್ತಾರೆ.
ಇಂತಹ ಘಟನೆಗಳು ನಡೆಯುತ್ತಿರುವಾಗ ಮೈಸೂರಿನ ಮಹಾಲಿಂಗೇಶ್ವರ ಮಠದಲ್ಲಿನ ಕಂತೆಭಿಕ್ಷೆಯನ್ನು ದೇವನೂರಿನಲ್ಲಿಯೂ ಆರಂಭಿಸುತ್ತಾರೆ. ಇದರಿಂದ ಮನೆಮನೆಗಳಲ್ಲಿ ನೀಡುತ್ತಿದ್ದ ಪ್ರಸಾದ ತಂದು ಭಕ್ತರಿಗೆ ನೀಡುತ್ತಿದ್ದರು. ಇದರಿಂದ ಗುರುಮಲ್ಲೇಶ್ವರರ ಕೀರ್ತಿ ಎಲ್ಲ ಕಡೆಗೂ ವ್ಯಾಪಿಸಿತು. ಗುರುಮಲ್ಲೇಶ್ವರದ ಕೀರ್ತಿ ಕೇಳುತ್ತ ಜನರು ನಾಮುಂದು ತಾಮುಂದು ಎಂದು ಬರಲು ಹತ್ತಿದರು. ಬಂದ ಭಕ್ತರಿಗೆ ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ತತ್ವಗಳನ್ನು ಅರ್ಥವಾಗುವಂತೆ ಪ್ರವಚನದಲ್ಲಿ ಹೇಳುತ್ತಿದ್ದರು.
ಶಿವಯೋಗ ಸಂಪತ್ತನ್ನು ಹಂಚುತ್ತಿದ್ದ ಜತೆಗೆ ಒಳ್ಳೆಯ ಲಿಂಗ ಸಾಧಕರು ಮತ್ತು ಯೋಗಪಟುಗಳಾಗಿದ್ದರು. ಆಗ ಗ್ರಾಮ ಗ್ರಾಮಗಳಲ್ಲಿ ಗರಡಿ ಮನೆ ಕಟ್ಟಿಸಿ ಯುವಕರಿಗೆ ಅಂಗಸಾಧನೆಗೆ ಬೆಂಬಲ ನೀಡಿ ಲಿಂಗಾನುಸಂಧಾನಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು ಎಂದು ಹೇಳುತ್ತ ಜನರಲ್ಲಿ ಧಾರ್ಮಿಕವಾಗಿ ಸಾಧನೆಯ ಮೂಲಕ ಹೇಗೆ ಔನ್ನತ್ಯವನ್ನು ಪಡೆಯಬಹುದೆಂಬ ಪಥವನ್ನು ಹೇಳಿಕೊಡುತ್ತಿದ್ದರು.
ಜನರು ಧಾರ್ಮಿಕತೆಗೆ ಹೇಗೆ ಒಲವು ರೂಢಿಸಿಕೊಳ್ಳಬೇಕು, ಬಸವಾದಿ ಶಿವಶರಣರ ತತ್ವಗಳನ್ನು ಜನಮಾನಸಕ್ಕೆ ಹೇಗೆ ಮುಟ್ಟಿಸಬೇಕೆಂಬುದನ್ನು ಅರಿತು ಪ್ರತಿ ಗ್ರಾಮಗಳಲ್ಲಿ ಭಜನಾ ಸಂಘಗಳನ್ನು ಸ್ಥಾಪಿಸಿ ಅಲ್ಲಿ ಲಿಂಗಭೇದವಿಲ್ಲದೆ ಎಲ್ಲರೂ ವಚನ, ತತ್ವ, ಜಾನಪದ, ಶಿವನಾಮ ಸ್ತುತಿ ಸೇರಿದಂತೆ ಅನೇಕ ಪದಗಳನ್ನು ಹಾಡುತ್ತ ತಮ್ಮನ್ನು ತಾವು ಲೀನವಾಗುವಂತೆ ಮಾಡಿದ್ದರಿಂದ ಜನಸಾಗರದಂತೆ ಸೇರುತ್ತಿದ್ದರು. ಈಗಲೂ ನಮ್ಮ ಭಾಗದಲ್ಲಿ ಗುರುಮಲ್ಲೇಶ್ವರರ ಹೆಸರಿನಲ್ಲಿ ನೂರಾರು ಭಜನಾ ಸಂಘಗಳಿವೆ ಎಂದು ಹೇಳಿದರು.

ಮುಂದುವರೆದು ಮಾತನಾಡುತ್ತ, ಚಿತ್ರದುರ್ಗ ಮುರುಘಾಮಠಕ್ಕೂ ದೇವನೂರಿನ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎನ್ನುವ ದ್ಯೋತಕವಾಗಿ ಇಲ್ಲಿ ನಡೆದಿರುವ ಜಯಂತಿಯೇ ಸಾಕ್ಷಿ. ಹೇಗೆಂದರೆ, ನಾವು ಗುರುಮಲ್ಲೇಶ್ವರರ ಸ್ಮರಣೆ, ಶ್ರದ್ಧಾಂಜಲಿ ಈ ರೀತಿ ಮಾಡುತ್ತೇವೆ. ಆದರೆ ಜಯಂತಿ ಆಚರಿಸಿದ್ದಿಲ್ಲ. ಈ ಮಠಕ್ಕೆ ಈ ದಿನಾಂಕ ಹೇಗೆ ಗೊತ್ತಾಯಿತೋ ತಿಳಿಯಲಿಲ್ಲ, ಆದರೂ ಈ 20-7-2026 ದಿನಾಂಕವನ್ನು ನಾನು ಕೆಲ ಪುಸ್ತಕದಲ್ಲಿ ನೋಡಿದೆ. ಇದು ಸರಿಯಾದ ಜಯಂತಿ ದಿನ ಎಂದು ಗೊತ್ತಾಯಿತು. ನಾವು ದೇವನೂರಿನಲ್ಲಿ ಮಾಡಿರುವ ಮಹೋನ್ನತ ಕೆಲಸವನ್ನು ಚಿತ್ರದುರ್ಗದ ಬೃಹನ್ಮತ ಚಿತ್ರದುರ್ಗದ ಬೃಹನ್ಮಠ ಅದು ಗುರುಮಲ್ಲೇಶ್ವರರ 199ನೇ ಜಯಂತಿ ಆಚರಿಸುತ್ತಿರುವುದು ಯೋಗಾಯೋಗ ಎಂದು ಸ್ಮರಿಸುತ್ತ, ಮುಂದಿನ 200ನೇ ದ್ವಿಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.
ಸಾನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶರಣತತ್ವ ಸಿದ್ಧಾಂತದಲ್ಲಿ ಕಾಯಕ ಮತ್ತು ದಾಸೋಹಕ್ಕೆ ಎಲ್ಲಿಲ್ಲದ ಮಹತ್ವವಿದೆ, ಅಂತಹ ಶರಣರು ಮಾಡಿದ ಕಾರ್ಯವನ್ನು 19ನೇ ಶತಮಾನದಲ್ಲಿ ಗುರುಮಲ್ಲೇಶ್ವರರು ಮಾಡುತ್ತ ದಾಸೋಹ ಚಕ್ರವರ್ತಿ ಎಂಬ ಬಿರುದು ಪಡೆದ ಮಹಿಮಾಪುರುಷರು ಎಂತಹ ಅತ್ಯದ್ಭುತ ಸಾಧನೆ ಮಾಡಿದ್ದಾರೆಂದು ನುಡಿದ ಶ್ರೀಗಳು, ಜಯಂತಿ ಇಷ್ಟೊಂದು ಅರ್ಥಪೂರ್ಣವಾಗಿ ನಡೆಯಲು ಮತ್ತೊಂದು ಕಾರಣ ನಮ್ಮ ಬೃಹನ್ಮಠದ ಕಾರ್ಯಕರ್ತರು, ಇತ್ತೀಚೆಗೆ ದೇವನೂರಿಗೆ ಹೋಗಿ ಅಲ್ಲಿನ ವ್ಯವಸ್ಥೆ ನೋಡಿ ಪ್ರಭಾವಗೊಂಡು ಜಯಂತಿಯನ್ನು ಅರ್ಥಪೂರ್ಣಗೊಳ್ಳಲು ಸಹಕರಿಸಿದ್ದಾರೆ.
ಅದರಂತೆ ಕಂತೆಭಿಕ್ಷೆಯು ಈಗ ಇಲ್ಲ. ಆದರೆ ಕಾರ್ಯಕರ್ತರು ಮತ್ತು ಅಭಿಮಾನಿ ಭಕ್ತರುಗಳು ವಿವಿಧ ರೀತಿ ಅಡುಗೆ ಪದಾರ್ಥಗಳನ್ನು ಇಂದು ಮಾಡಿಕೊಂಡು ಬಂದಿದ್ದಾರೆ. ಅದು ಗುರುಮಲ್ಲೇಶ್ವರರ ಗುರು ಮುರುಘಾ ಶರಣರ ಪ್ರಸಾದ ಎಂದೇ ತಿಳಿದು ಸೇವಿಸಬೇಕು. ದುಡಿದ ಹಣದಲ್ಲಿ ದಾಸೋಹಕ್ಕಷ್ಟು ಮೀಸಲಿರಿಸಿ ಸಮಾಜಕ್ಕೆ ಕೊಟ್ಟಾಗ ನಮ್ಮಲ್ಲಿನ ಅಹಂ ಕಡಿಮೆಯಾಗುತ್ತದೆಂದು ನುಡಿದರು.
ಈ ಸಂದರ್ಭದ ವೇದಿಕೆಯಲ್ಲಿ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹಮಠದ ಶರಣೆ ಜಯದೇವಿತಾಯಿ, ಚಿನ್ಮಯಿತಾಯಿ, ಬಸವಮುರುಫೇಂದ್ರ ಸ್ವಾಮಿಗಳು, ದೇವನೂರಿನ ಶಿವಕುಮಾರ್, ಬಸವೇಶ್ವರ ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಗೌಡ ಸೇರಿದಂತೆ ವಿವಿಧ ಸಮಾಜ, ಸಂಘ- ಸಂಸ್ಥೆಗಳ ಪದಾಧಿಕಾರಿಗಳಾದ ನಾಗರಾಜ ಸಂಗಮ್, ಬಸವರಾಜ ಕಟ್ಟಿ, ಕವಿ ಗಂಗಾಧರಪ್ಪ, ಚಂದ್ರಣ್ಣ ತಿಮ್ಮಾರೆಡ್ಡಿ, ಮಹಾಂತಮ್ಮ ಜಯಪ್ಪ, ಗೀತಾ ರುದ್ರೇಶ, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿ, ನಿವೃತ್ತ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಉಮೇಶ ಪತ್ತಾರ ಗುರುಮಲ್ಲೇಶ್ವರರ ಕುರಿತಾದ ಗೀತೆಯೊಂದನ್ನು ಹಾಡಿದರು. ತುರುವನೂರಿನ ಆರ್. ಮಂಜುನಾಥ್ ಭಜನೆ ಪ್ರಸ್ತುತಪಡಿಸಿದರು. ಸಿದ್ಧಗಂಗಮ್ಮ ಸ್ವಾಗತಿಸಿದರೆ, ಮಂಜುಳಾ ಕಾರ್ಯಕ್ರಮ ನಿರ್ವಹಿಸಿ ಶರಣುಸಮರ್ಪಣೆ ನೆರವೇರಿಸಿದರು.

ಕೊನೆಯಲ್ಲಿ ಭಕ್ತಾದಿಗಳು ತಮ್ಮ ಮನೆಗಳಿಂದ ಭಕ್ತಿಯಿಂದ ತಯಾರಿಸಿ ತಂದಿದ್ದ ಪದಾರ್ಥವನ್ನು ಪ್ರಸಾದ ರೂಪದಲ್ಲಿ ಬಂದ ಎಲ್ಲರಿಗೂ ವಿತರಿಸಲಾಯಿತು.
