‘ವಚನಕಾರರ, ತತ್ವಪದಕಾರರ ಚಿಂತನೆ ಅರಿತರೆ ಯಶಸ್ವಿ ಬದುಕು’

ಬಸವ ಮೀಡಿಯಾ
ಬಸವ ಮೀಡಿಯಾ

ವಚನಗಳು ಬಹುದೊಡ್ಡ ನೈತಿಕ ಪಠ್ಯಗಳು

ಬಸವಕಲ್ಯಾಣ:

ಬಸವ ಫಿಲಾಸಫಿ ಮತ್ತು ಶರಣ ಫಿಲಾಸಫಿ ಬಹುದೊಡ್ಡ ನೈತಿಕ ಪಠ್ಯಗಳಾಗಿವೆ. ಭಾರತೀಯ ಮೌಲಿಕ ಶಿಕ್ಷಣದ ಅಂಶಗಳು ವಚನಗಳಲ್ಲಿ ಅಡಗಿದೆ. ಬದುಕಿನ ಯಶಸ್ಸಿಗೆ ವಚನಕಾರರು, ತತ್ವಪದಕಾರರು ಮುಂತಾದವರ ತಾತ್ವಿಕ ಚಿಂತನೆಗಳನ್ನು ಅರಿಯುವುದು ಅಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ. ಬಿ. ಪರತಾಪೂರೆ ಹೇಳಿದರು.

ಶ್ರೀ ಬಸವೇಶ್ವರ ಪದವಿ ಕಾಲೇಜು ವತಿಯಿಂದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ‘ಶಿಕ್ಷಣ, ಮೌಲ್ಯ ಮತ್ತು ಯಶಸ್ಸು’ ಕುರಿತು ಉಪನ್ಯಾಸ ಮತ್ತು ಬಿಕಾಂ ೬ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಕನ್ನಡದ ಸಾಂಸ್ಕೃತಿಕ ಪಠ್ಯಗಳಾಗಿವೆ ಎಂದರು.

ಜಾಗತಿಕ ತಾಪಮಾನ ಮೀರಿ ಉಷ್ಣತೆ ಉಲ್ಬಣಗೊಂಡು ಇಡೀ ವಿಶ್ವವೇ ಕುದಿಯುವಿಕೆಯಿಂದ ಬಳಲುತ್ತಿದೆ. ಪ್ರಕೃತಿ ವಿಕೋಪದ ಪರಿಣಾಮ ಈ ಕಾಲವು ಅತ್ಯಂತ ಭೀಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದಲ್ಲಿ ಆರ್ಥಿಕತೆ ಸೇರಿ ಹಲವು ಕ್ಷೇತ್ರಗಳಲ್ಲಿ ಹೊಸ ಸವಾಲುಗಳು ಎದುರಾಗುತ್ತಿವೆ. ಅದರ ಕುರಿತು ಆಳವಾದ ಅಧ್ಯಯನ ಮತ್ತು ಸಂಶೋಧನೆ ಅಗತ್ಯ.

ಪಠ್ಯದ ಓದುವಿಕೆ ಇಡೀ ಸಮಾಜದ ಓದುವಿಕೆಯೂ ಆಗಿರುತ್ತದೆ. ಹಲವು ಸಂದಿಗ್ಧ ಸಂದರ್ಭ ಎದುರಿಸುವ ಎದೆಗಾರಿಕೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಹಲವು ಜ್ಞಾನ ಶಾಖೆಗಳನ್ನು ಓದುವ ನಮ್ಮ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಪಠ್ಯವಾಗಬೇಕಾದ ಅಗತ್ಯವಿದೆ ಎಂದರು.

ವೈದ್ಯ ಡಾ. ಅಭಯ ಸಮದರೆ ಮಾತನಾಡಿ, ಈ ಕಾಲಘಟ್ಟದಲ್ಲಿ ಎಲ್ಲರಿಗೂ ಎಲ್ಲೆಡೆಯೂ ಆರೋಗ್ಯ ಕಾಪಾಡುವ ಮತ್ತು ರೋಗಗಳಿಂದ ರಕ್ಷಣೆ ಪಡೆದುಕೊಳ್ಳುವ ಸವಾಲು ದೊಡ್ಡದಾಗಿದೆ. ವ್ಯಕ್ತಿಯ ಜೀವನಶೈಲಿ, ಆಹಾರಕ್ರಮ, ಆಲೋಚನೆಗಳು, ಒಳ-ಹೊರಗಿನ ಒತ್ತಡಗಳು ಮನುಷ್ಯನ ಆರೋಗ್ಯ ನಿರ್ಧರಿಸುತ್ತವೆ. ಎಲ್ಲರಲ್ಲೂ ಆರೋಗ್ಯ ಪ್ರಜ್ಞೆ ಮೂಡುವುದೇ ಸಮಾಜಿಕ ಬೆಳವಣಿಗೆಯ ರಹದಾರಿ ಎಂದರು.

ವೈದ್ಯ ಡಾ. ಶರಣ್ ದೇಶಮುಖ ಮಾತನಾಡಿ, ಮನಸ್ಸು ಮತ್ತು ದೇಹ ಎರಡೂ ಕ್ರಿಯಾಶೀಲತೆಯಿಂದ ಇಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಿರಂತರ ಓದು, ಸತ್ವಯುತ ಆಹಾರ ಸೇವನೆ, ಒಳ್ಳೆಯ ಯೋಚನೆ, ಸುತ್ತಲಿನ ನೈರ್ಮಲ್ಯ ರಕ್ಷಣೆ ಇವೆಲ್ಲವು ನಮ್ಮ ಆರೋಗ್ಯ ನಿರ್ಧರಿಸುತ್ತವೆ. ರೋಗ ಬಾರದ ದಾರಿಯ ಅರಿವು ಎಲ್ಲರಲ್ಲಿ ಬೆಳೆಯಲಿ ಎಂದು ಆಶಿಸಿದರು.

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಧಾವಂತದ ಕಾಲಘಟ್ಟದಲ್ಲಿ ಬದುಕುತ್ತಿರುವ ನಮಗೆ ಪರಿಸರ, ಕಾಡು, ಹಕ್ಕಿಗಳು, ನೆಲ ಏನನ್ನೋ ಹೇಳುತ್ತಿರುತ್ತವೆ. ಇವೆಲ್ಲ ಕೇಳುವ ವ್ಯವಧಾನ, ತಾಳ್ಮೆ ನಮ್ಮಲ್ಲಿ ಬರಬೇಕಾದ ಶಿಕ್ಷಣ ಇಂದು ಅಗತ್ಯವಿದೆ. ಫೋಟೋಗ್ರಾಫಿ, ಕುಸುರಿ ಕಲೆ ಸೇರಿ ಈ ಕಾಲದ ತಂತ್ರಜ್ಞಾನದ ಕೆಲಸಗಳಲ್ಲೂ ಪ್ರಯೋಗಶೀಲತೆ ಇದ್ದರೆ ಅದಕ್ಕೊಂದು ವಿಶೇಷ ಮೌಲ್ಯ ಬರುತ್ತದೆ ಎಂದರು.

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಾದಿ ಶರಣರ ತತ್ವ, ಸಿದ್ಧಾಂತಗಳು ನಾಡಿನ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ಭಾಗವಾಗಲಿ ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹಕಾರ್ಯದರ್ಶಿ ಸುನಿಲಕುಮಾರ ರಾಯವಾಡೆ, ನಿರ್ದೇಶಕರಾದ ಬಸವರಾಜ ಕೋರಕೆ, ವೀರಣ್ಣ ಹಲಶೆಟ್ಟೆ, ವಿವೇಕಾನಂದ ಹೊದಲೂರೆ, ಸುನೀಲ ಹೊಳಕುಂದೆ, ಪುಷ್ಪಾವತಿ ಮಾಮಾ, ಅಧ್ಯಾಪಕರಾದ ರೋಶನ್ ಬಿ, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪುರೆ, ಜಗದೇವಿ ಜವಳಗೆ, ಪ್ರಿಯಾ ಚೌಹಾಣ, ನಾಗರಾಜ ನಾಸೆ, ಕೃಷ್ಣ ಗೌಳಿ, ಪ್ರವೀಣ ಬಿರಾದಾರ ಇದ್ದರು.

ಗಂಗಾಧರ ಸಾಲಿಮಠ ಸ್ವಾಗತಿಸಿದರು. ಸಂಗೀತಾ ಮಹಾಗಾವೆ ನಿರೂಪಿಸಿದರು.

ಪ್ರಭಾಕರ ನವಗಿರೆ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *