‘ವಚನ ಚಿಂತನೆಗೆ ಅಪ್ರತಿಮ ಕೊಡುಗೆ ನೀಡಿದ ಹಡಪದ ಅಪ್ಪಣ್ಣ’

ಬಸವ ಮೀಡಿಯಾ
ಬಸವ ಮೀಡಿಯಾ

ಗೋಕಾಕ:

ಅರಿವು ಆಚಾರ ಅನುಭಾವದ ಸಂದೇಶ ಬೀರುವ ಹಡಪದ ಅಪ್ಪಣ್ಣನವರ ವಚನಗಳು ಅಂತರಂಗದ ಅವಲೋಕನದ ಜೊತೆಗೆ ವೈಚಾರಿಕ ಚಿಂತನೆಯನ್ನು ಜಾಗೃತಗೊಳಿಸುತ್ತವೆ ಎಂದು ಕವಿ ಈಶ್ವರ ಮಮದಾಪೂರ ಹೇಳಿದರು.

ರಾಷ್ಟ್ರೀಯ ಬಸವದಳ ಬಸವ ಮಂಟಪ ಹಾಗೂ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವುಗಳ ಆಶ್ರಯದಲ್ಲಿ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ, ಅನುಭವ ಮಂಟಪದ ನಿರ್ವಹಣೆಯ ಕಾರ್ಯದರ್ಶಿಯಾಗಿದ್ದಕೊಂಡು ಕಾಯಕ, ದಾಸೋಹ, ವಚನ ಚಿಂತನೆಯ ಕಾರ್ಯದಲ್ಲಿ ಅಪ್ರತಿಮ ಕೊಡುಗೆ ನೀಡಿದ್ದಾರೆ.

ಸಮಾಜದಲ್ಲಿಯ ಮೌಢ್ಯ, ಕಂದಾಚಾರಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬಸವಾದಿ ಶರಣರ ಜೊತೆಗೆ ಹಗಲಿರುಳು ಶ್ರಮಿಸಿದ್ದಾರೆ.

ಅಪ್ಪಣ್ಣನವರ ವಚನಗಳು ಶ್ರೇಷ್ಠವಾಗಿದ್ದು ಶಾಲಾ ಕಾಲೇಜು ಹಂತದಲ್ಲಿ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಕಾಕ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸಿದ್ದಪ್ಪ ನಾವಲಗಿ ವಹಿಸಿದ್ದರು.

ಕವಿ ಕಲಾವಿದ ಈಶ್ವರಚಂದ್ರ ಬೆಟಗೇರಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಚೆನ್ನಬಸವ ನಾವಿ ಇವರುಗಳು ಮಾತಾನಾಡಿದರು.

ವೇದಿಕೆಯ ಮೇಲೆ ಜಿಲ್ಲಾ ಹಡಪದ ಸಮಾಜ ಸಂಘಟನಾ ಕಾರ್ಯದರ್ಶಿ ಶಿವಲಿಂಗ ನಾವಿ, ರವೀಂದ್ರ ನಾವಿ, ಅಶೋಕ ತಡಕೋಡ, ಮಾರುತಿ ಉತ್ತೂರ, ಹಿರಿಯರಾದ ಸಾವಿತ್ರಮ್ಮ ಹಡಪದ ಇದ್ದರು.

ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ರಾಷ್ಟ್ರೀಯ ಬಸವದಳದ ಚನ್ನಬಸವ ಬಿಜಲಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *