ಹುನಗುಂದ:
ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಚಳುವಳಿಗಳು ಉದಯಿಸಿವೆ. ಆದರೆ ಅವುಗಳಲ್ಲಿ ಮಾನವನ ಆತ್ಮಗೌರವ, ಸಮಾನತೆ ಮತ್ತು ಸ್ವತಂತ್ರ ಚಿಂತನೆಗಳನ್ನು ಕೇಂದ್ರಬಿಂದು ಮಾಡಿಕೊಂಡ ಮಹತ್ತರ ಕ್ರಾಂತಿ ಎಂದರೆ 12ನೇ ಶತಮಾನದಲ್ಲಿ ಉದಯಿಸಿದ ಶರಣ ಚಳುವಳಿ.
ಕಲ್ಯಾಣದ ಪವಿತ್ರ ಭೂಮಿಯಲ್ಲಿ ಬಸವಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಅನುಭವ ಮಂಟಪ ಕೇವಲ ಧಾರ್ಮಿಕ ಸಭೆಯಾಗಿರಲಿಲ್ಲ; ಅದು ಮಾನವೀಯ ಮೌಲ್ಯಗಳ ಮಹಾಸಂವಾದಕ್ಕೆ ವೇದಿಕೆಯಾದ ವಿಶ್ವಮಟ್ಟದ ಚಿಂತನಾ ಮಂಟಪವಾಗಿತ್ತು ಎಂದು ಹೊಳಲ್ಕೆರೆಯ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಅಭಿಪ್ರಾಯಪಟ್ಟರು.
ತಾಲೂಕಿನ ಹಿರೇಬಾದವಾಡಗಿ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು.

ಅನುಭವ ಮಂಟಪವು ಆ ಕಾಲದ ರಾಜಸಭೆಗಳಂತೆ ಅಧಿಕಾರಿಗಳಿಗಷ್ಟೇ ಮೀಸಲಾಗಿರಲಿಲ್ಲ ಎಂದು ಹೇಳಿದ ಅವರು, ಅಲ್ಲಿ ಅರಸ, ಅರಣ್ಯವಾಸಿ, ಕುಂಬಾರ, ಕಮ್ಮಾರ, ಚರ್ಮಕಾರ, ಮಹಿಳೆ, ರೈತ, ಕಾರ್ಮಿಕ, ಕಾಯಕಜೀವಿ, ಜ್ಞಾನಿ ಹಾಗೂ ಭಕ್ತರೆಲ್ಲರೂ ಸಮಾನ ಹಕ್ಕಿನಿಂದ ಕುಳಿತು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು.
ಧರ್ಮವನ್ನು ಗ್ರಂಥಗಳ ಗೋಡೆಯೊಳಗೆ ಬಂಧಿಸದೆ, ಬದುಕಿನ ನೇರ ಅನುಭವದಲ್ಲಿ ಕಂಡುಕೊಳ್ಳುವ ಪ್ರಯತ್ನವೇ ಅನುಭವ ಮಂಟಪದ ವೈಶಿಷ್ಟ್ಯವಾಗಿತ್ತು ಎಂದು ಅವರು ವಿವರಿಸಿದರು.
ಇಂದಿನ ಸಂವಿಧಾನ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕಿಂತ ಶತಮಾನಗಳ ಹಿಂದೆಯೇ ಬಸವಣ್ಣನವರು ಅವುಗಳನ್ನು ತಮ್ಮ ಜೀವನ ಮತ್ತು ಶರಣ ಚಳುವಳಿಯ ಮೂಲಕ ಕಾರ್ಯರೂಪಕ್ಕೆ ತಂದಿದ್ದರು. ಆದ್ದರಿಂದ ಅನುಭವ ಮಂಟಪವು ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಮಾದರಿ, ಮತ್ತು ಅದನ್ನು ಸ್ಥಾಪಿಸಿದ ಬಸವಣ್ಣನವರು ಪ್ರಜಾಪ್ರಭುತ್ವದ ನಿಜವಾದ ಜನಕರೆಂದು ಅವರು ಉಲ್ಲೇಖಿಸಿದರು.
ಬಸವಣ್ಣನವರ ಸಮಾನತೆಯ ಸಂದೇಶ ಇಂದಿನ ಸಮಾಜಕ್ಕೂ ದಾರಿದೀಪವಾಗಿದ್ದು, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯವನ್ನು ಡಾ. ಮಂಜುನಾಥ ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದ ಇಲಕಲ್ಲಿನ ಪೂಜ್ಯ ಡಾ. ಗುರುಮಹಾಂತ ಮಹಾಸ್ವಾಮಿಗಳವರಿಗೆ ಹಿರೇಬಾದವಾಡಗಿ ವಿಜಯ ಮಹಾಂತೇಶ್ವರ ಶಾಖಾಮಠದ ವತಿಯಿಂದ ಭಕ್ತಿಪೂರ್ವಕ ಸನ್ಮಾನ ನೆರವೇರಿಸಲಾಯಿತು.
ಶಾಖಾಮಠದ ಪರವಾಗಿ ಪೂಜ್ಯರಿಗೆ ಪುಷ್ಪಾರ್ಚನೆ, ಶಾಲು ಹೊದಿಕೆ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶಿರೂರ ಮಹಾಂತತೀರ್ಥದ ಪೂಜ್ಯ ಬಸವಲಿಂಗ ಸ್ವಾಮಿಗಳು ಮತ್ತು ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು ಅಲಂಕರಿಸಿದ್ದರು, ಅವರು ತಮ್ಮ ಆಶೀರ್ವಚನಗಳಲ್ಲಿ ಶರಣ ಧರ್ಮದ ಸೇವಾ ಪರಂಪರೆ, ಶಿಕ್ಷಣದ ಮಹತ್ವ ಹಾಗೂ ಸಮಾಜಮುಖಿ ಧಾರ್ಮಿಕ ಕಾರ್ಯಗಳ ಕುರಿತು ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.
ಹುನಗುಂದ ಅಕ್ಕನ ಬಳಗದ ಶರಣೆಯರು ಜಗನ್ಮಾತೆ ಅಕ್ಕಮಹಾದೇವಿಯ ಯೋಗಾಂಗ ತ್ರಿವಿಧಿಯನ್ನು ಅತ್ಯಂತ ಸುಶ್ರಾವ್ಯವಾಗಿ ಪಠಿಸಿ ಸಭೆಯ ಭಕ್ತಿಭಾವವನ್ನು ಮತ್ತಷ್ಟು ಉನ್ನತಿಗೇರಿಸಿದರು. ಅಲ್ಲದೆ, ಇಳಕಲ್‌ನ ನಿವೃತ್ತ ಉಪನ್ಯಾಸಕ ಸಂದಿಮನೆ ಅವರು ಮಾತನಾಡಿ, ಬಸವಣ್ಣನವರ ಸಮಾನತೆಯ ಸಂದೇಶ, ಅನುಭವ ಮಂಟಪದ ಆದರ್ಶಗಳು ಹಾಗೂ ಶರಣ ಸಾಹಿತ್ಯದ ಮಾನವೀಯ ಮೌಲ್ಯಗಳನ್ನು ಮನಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮವು ಭಕ್ತಿ, ಜ್ಞಾನ, ಶರಣ ಸಂಸ್ಕೃತಿ ಹಾಗೂ ಸಾಮಾಜಿಕ ಸೌಹಾರ್ದತೆಯ ಸುಂದರ ಸಂಗಮವಾಗಿ ಭಕ್ತರಲ್ಲಿ ವಿಶೇಷ ಆತ್ಮೀಯತೆ ಮೂಡಿಸಿತು.
