ಬೆಳಗಾವಿ:
ಕಿತ್ತೂರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ನಾಯಕ “ಬಸವೇಶ್ವರ ಅಧ್ಯಯನ ಮತ್ತು ಸಂಶೋಧನಾ ಕೆಂದ್ರ”ವನ್ನು ಸ್ಥಾಪಿಸಲಾಗಿದೆ.

ಆ ಪ್ರಯುಕ್ತ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ವಿಶ್ವವಿದ್ಯಾಲಯಕ್ಕೆ ತೆರಳಿ ಕುಲಪತಿಗಳನ್ನು ಹಾಗೂ ಕುಲಸಚಿವರಾದ ಡಾ. ಸಂತೋಷ ಕಾಮಗೌಡ ಹಾಗೂ ಸಿಂಡಿಕೇಟ್ ಸದಸ್ಯರಾದ ಮಹಾಂತೇಶ ಕಂಬಾರ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಕರ್ನಾಟಕ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರ ಕುರಿತಾದ ಅಧ್ಯಯನ ಪೀಠವೊಂದನ್ನು ಸ್ಥಾಪಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಅವರ ನೇತೃತ್ವದ ನಿಯೋಗವು ಎರಡು ವರ್ಷಗಳ ಹಿಂದೆ ಮನವಿ ಸಲ್ಲಿಸಿತ್ತು. ಅದೀಗ ಕಾರ್ಯರೂಪಕ್ಕೆ ಬಂದಿದೆ.

ಈ ಹಿನ್ನಲೆಯಲ್ಲಿ ಸಕಾರಾತ್ಮಕವಾಗಿ ಸ್ವಂದಿಸಿ ಸೂಕ್ತಕ್ರಮ ಕೈಗೊಂಡಿರುವ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ, ಕುಲಸಚಿವರಾದ ಡಾ. ಸಂತೋಷ ಕಾಮಗೌಡ ಹಾಗೂ ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ ಕಂಬಾರ ಅವರನ್ನು ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಅಧ್ಯಕ್ಷರು, ನ್ಯಾಯವಾದಿ ಬಸವರಾಜ ರೊಟ್ಟಿ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಉಪಾಧ್ಯಕ್ಷ ಮುರಗೇಶ ಶಿವಪೂಜಿ, ಖಜಾಂಚಿ ಮರೆಗೆಪ್ಪ ಬಾಳಿ, ನಗರ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಪ್ರವೀಣ ಚಿಕಲಿ, ಶಂಕರ ಗುಡಸ, ಅಶೋಕ ಬೆಂಡಿಗೇರಿ, ಶಿವಾನಂದ ಮೇಟ್ಯಾಳ, ಆನಂದ ಗುಡಸ, ಮಹಾನಂದಾ ಪರುಶೆಟ್ಟಿ, ಶೋಭಾ ಶಿವಳ್ಳಿ, ರತ್ನಾ ಬೆಣಚನಮರಡಿ, ಕಾವೇರಿ ಕಿಲಾರಿ, ಶ್ರೀಗುರಗೌಡ, ಸಿದ್ರಾಮ ಸಾವಳಗಿ ಮುಂತಾದ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
