ನರಗುಂದ:
ಆಪರೇಷನ್ ವಿಜಯ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಕಾರ್ಯತಂತ್ರದ ಶಿಖರಗಳನ್ನು ಮರಳಿ ಪಡೆಯಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ೫೨೭ ಧೈರ್ಯಶಾಲಿ ಸೈನಿಕರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.
೨೬ ವರ್ಷಗಳಿಂದ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಹಾಗೂ ಮಡಿದ ಸೈನಿಕರಿಗೆ ಗೌರವವನ್ನು ಸಲ್ಲಿಸುವ ಕಾರ್ಯವನ್ನು ದೊರೆಸ್ವಾಮಿ ಮಠ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಭಾರತೀಯ ಕಿಸಾನ್ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಅವರು ಬಣ್ಣಿಸಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಒಂದು ಸ್ಮರಣೆ ಹಾಗೂ ೩೮೫ ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಗಿಲ್ ವಿಜಯ್ ದಿವಸ್ ಸ್ವತಂತ್ರ ಭಾರತದ ಎಲ್ಲಾ ದೇಶವಾಸಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ಕಾರ್ಗಿಲ್ ಯುದ್ದ ನಮ್ಮ ದೇಶದ ಹೆಮ್ಮೆಯ ಸಂಕೇತ ಅದು ಸೈನಿಕರ ತ್ಯಾಗ ಬಲಿದಾನದ ಪ್ರತೀಕವಾಗಿದೆ. ನಾನು ನನ್ನದು ಎನ್ನುವ ಮನೋಭಾವನೆ ಬಿಟ್ಟು ನಾವು ನಮ್ಮೋರು ಎಂಬ ದೇಶಾಭಿಮಾನ ಮುಖ್ಯವಾಗಿ ಇಂದಿನ ಮಕ್ಕಳಲ್ಲಿ ಹಾಗೂ ಯುವಸಮುದಾಯದಲ್ಲಿ ರಾಷ್ಟ್ರಾಭಿಮಾನ ಬೆಳೆಯಬೇಕಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕಾರ್ಗಿಲ್ ಯೋಧರಾದ ಜಿ.ಬಿ. ಕಂಠೆನ್ನವರ ಮಾತನಾಡಿ, ೧೯೯೯ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಭಾರತೀಯ ಯೋಧರು ಹುತಾತ್ಮರಾದರು ಎಂದು ಅವರನ್ನು ಸ್ಮರಿಸಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ದೇಶದ ಪ್ರತಿಯೊಬ್ಬ ಯುವಕರಲ್ಲಿ ದೇಶಾಭಿಮಾನವನ್ನು ಬೆಳೆಸಬೇಕಾಗಿದೆ. ಅಂತಹ ಕಾರ್ಯವನ್ನು ಶ್ರೀಮಠ ಮಾಡುತ್ತಿದೆ. ನಾವೆಲ್ಲರೂ ದೇಶದಲ್ಲಿ ಇಷ್ಟೊಂದು ಸುಭದ್ರವಾಗಿರುವುದಕ್ಕೆ ಮುಖ್ಯ ಕಾರಣ ನಮ್ಮ ಹೆಮ್ಮೆಯ ಸೈನಿಕರು, ಅವರಿಗೆ ಪ್ರತಿಯೊಬ್ಬರು ಗೌರವನ್ನು ನೀಡಬೇಕಾಗಿರುವುದು ಆದ್ಯಕರ್ತವ್ಯವಾಗಿದೆ.
ಯುವಕರು ಸ್ವಯಂಪ್ರೇರಿತರಾಗಿ ದೇಶ ಸೇವೆಗೆ ಅಣಿಯಾಗಬೇಕು. ನಮ್ಮ ದೇಶದ ಇತಿಹಾಸವನ್ನು ಅರಿತು ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಭೂಪಟದಲ್ಲಿ ಎತ್ತಿಹಿಡಿಯಬೇಕಾಗಿದೆ ಎಂದು ಯುವಸಮುದಾಯಕ್ಕೆ ಕರೆಕೊಟ್ಟರು.
ಈ ಸಂದರ್ಭದಲ್ಲಿ ೬೦ ಜನ ಮಾಜಿ ಸೈನಿಕರನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಮಾಜಿ ಸೈನಿಕರಾದ ವೆಂಕಪ್ಪ ಭಾವಿ, ಲಿಂಗನಗೌಡ ಪಾಟೀಲ, ಹನಮಂತಗೌಡ ಗದ್ದಿಗೌಡ್ರ, ಶಿವುಕುಮಾರ ಜಾಲಿಹಾಳ, ಜನಾರ್ಧನ ಹಂತ್ಲಿ, ಚಂದ್ರಪ್ಪ ಗಾಣಿಗೇರ, ತಿಮ್ಮರೆಡ್ಡಿ ಕಾಕನಕಿ, ಬಿ.ಎಮ್. ಲಂಕೆನ್ನವರ, ಡಿ.ಆರ್. ಗದ್ದನಕೇರಿ, ನಾಗರಾಜ ನೆಗಳೂರ, ಲಿಂಗಯ್ಯ ಸಾಲಿಮಠ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
