[ಆಗಸ್ಟ್ 9, 2026ರಂದು ಬೆಳಗಾವಿ ನಾಗನೂರು ರುದ್ರಾಕ್ಷಿಮಠದಲ್ಲಿ ಶ್ರೀ ಬಸವರಾಜ ವೆಂಕಟಾಪುರ ಶರಣರು ರಚಿಸಿದ ‘ಶೂನ್ಯಲಿಂಗ ವಿವೇಚನೆ’ಸಂಪುಟ 5ರ ಲೋಕಾರ್ಪಣೆ ಸಮಾರಂಭ ಜರುಗಿತು. ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಹಿರಿಯ ವಿದ್ವಾಂಸರಾದ ಡಾ. ಪ್ರದೀಪಕುಮಾರ ಹೆಬ್ರಿ ಅವರು ಕೃತಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೃತಿ ಪರಿಚಯ ಮಾಡುವ ಸೌಭಾಗ್ಯ ನನ್ನದಾಗಿತ್ತು. ಕಾರ್ಯಕ್ರಮದಲ್ಲಿ ಸಾದರಪಡಿಸಿದ ನನ್ನ ಕೆಲವು ವಿಚಾರಗಳು]
೧೨ನೇ ಶತಮಾನದ ಬಸವಾದಿ ಶಿವಶರಣರು ತಮ್ಮ ಅನುಭಾವದ ಅಭಿವ್ಯಕ್ತಿಯಿಂದ ಕರುಣಿಸಿದ ವಚನಗಳು ಮಾನವ ಬದುಕಿನ ಸಾರ್ವಕಾಲಿಕ ಸಾರ್ವತ್ರಿಕ ಮೌಲ್ಯಗಳನ್ನು ಬೋಧಿಸಿದ ಅಪೂರ್ವ ವಾಙ್ಮಯವಾಗಿದೆ. ಇಂತಹ ಅಪೂರ್ವ ಸಾಹಿತ್ಯ ಸಂಪ್ರದಾಯವಾದಿಗಳ ಕೈಯಲ್ಲಿ ಸಿಕ್ಕು ಹಾಳಾಗುತ್ತಿದ್ದ ಸಂದರ್ಭದಲ್ಲಿ ಚನ್ನಬಸವಣ್ಣನವರು-ಅಕ್ಕನಾಗಮ್ಮ-ಮಡಿವಾಳ ಮಾಚಯ್ಯ ಮೊದಲಾದ ಅಸಂಖ್ಯಾತ ಶರಣರು ತಮ್ಮ ಬೆನ್ನಿಗೆ ವಚನ ಕಟ್ಟುಗಳನ್ನು ಕಟ್ಟಿಕೊಂಡು ಉಳವಿಯೆಡೆಗೆ ಪ್ರಯಾಣ ಮಾಡಿದ ಇತಿಹಾಸ ಸರ್ವರಿಗೂ ವೇದ್ಯವಾದ ಸಂಗತಿ.

ವಚನಗಳು ಮೂರು ನೂರು ವರ್ಷಗಳ ಕಾಲ ಅನಾಥಪ್ರಜ್ಞೆಯನ್ನು ಅನುಭವಿಸಿದವು, ಗುಪ್ತಗಾಮಿನಿಯಾದವು. ನಂತರ ವಿಜಯನಗರ ಅರಸರ ಕಾಲಕ್ಕೆ ಅದರಲ್ಲೂ ಪ್ರೌಢದೇವರಾಯನ ಕಾಲಕ್ಕೆ ನೂರೊಂದು ವಿರಕ್ತರು ಈ ವಚನಗಳಿಗೆ ಪುನರುಜ್ಜೀವನ ನೀಡಿದರು. ಈ ವಚನಗಳನ್ನು ಧಾರ್ಮಿಕಶಾಸ್ತ್ರವಾಗಿ ಪರಿಗಣಿಸಿ, ನೂರಾರು ವಚನ ಸಂಕಲನಗಳನ್ನು ರೂಪಿಸಿದರು. ಈ ಸಂಕಲನ ಪರಂಪರೆಯು ವಿಜಯನಗರ ಪತನಾನಂತರ ಮತ್ತೆ ನಿಂತು ಹೋಗಿತ್ತು.
ಕನ್ನಡ ಸಾಹಿತ್ಯ ಪರಂಪರೆಯ ಪ್ರಥಮ ಮತ್ತು ಪ್ರಮುಖ ವ್ಯಕ್ತೀಕರಣವೆಂದರೆ ವಚನ ಸಾಹಿತ್ಯ. ವಚನಗಳು ಸರಳ ಭಾಷೆಯಲ್ಲಿ ಗಂಭೀರ ತತ್ವಗಳನ್ನು ಹೇಳುವ ವಿಶಿಷ್ಟ ಮಾದರಿಯಾಗಿದ್ದು, ಅವುಗಳಲ್ಲಿ ಜೀವನದ ನೈಜತೆ, ಅನುಭವದ ನೇರತೆ ಮತ್ತು ಭಕ್ತಿಯ ಆಳತೆ ಒಂದೇ ಸಮಯದಲ್ಲಿ ವ್ಯಕ್ತವಾಗುತ್ತವೆ. ವಚನಕಾರರು ದೈನಂದಿನ ಬದುಕಿನ ಭಾಷೆಯನ್ನೇ ಉಪಯೋಗಿಸಿ ತತ್ವವನ್ನು ಜನಮನಗಳಿಗೆ ತಲುಪಿಸಿದ ರೀತಿಯು ಕನ್ನಡ ಸಾಹಿತ್ಯದಲ್ಲಿ ಅಪೂರ್ವ. ಹೀಗಾಗಿ, ವಚನ ಸಾಹಿತ್ಯವು ಲಿಂಗಾಯತ ಧಾರ್ಮಿಕ ಚಳವಳಿಯ ಹೃದಯವಾಗಿಯೇ ಕಾಣಿಸುತ್ತದೆ.
ವಚನ ಸಾಹಿತ್ಯದ ನಂತರ, ಲಿಂಗಾಯತ ಪರಂಪರೆ ವಿವಿಧ ರೀತಿಯ ಸಾಹಿತ್ಯಿಕ ರೂಪಗಳಲ್ಲಿ ವಿಸ್ತಾರಗೊಂಡಿತು. ಹರಿಹರ ಮತ್ತು ರಾಘವಾಂಕ ಮೊದಲಾದ ಕವಿಗಳು ವಚನಗಳ ಅರ್ಥವನ್ನು ಸಾಹಿತ್ಯಿಕ ರೂಪದಲ್ಲಿ ವಿಸ್ತರಿಸಿ, ಕಥನಾತ್ಮಕ ಮತ್ತು ಕಾವ್ಯಾತ್ಮಕ ರೂಪಗಳನ್ನು ನೀಡಿದರು. ನಂತರದ ಶತಮಾನಗಳಲ್ಲಿ ಸಂಕಲನಕಾರರು, ಸಂಪಾದಕರು ಮತ್ತು ವ್ಯಾಖ್ಯಾನಕಾರರು ಈ ಸಾಹಿತ್ಯವನ್ನು ಸಂಗ್ರಹಿಸಿ, ವ್ಯವಸ್ಥಿತಗೊಳಿಸಿ, ತಾತ್ವಿಕ ಅರ್ಥವ್ಯಾಖ್ಯಾನಗಳನ್ನು ರೂಪಿಸಿದರು. ಹೀಗೆ ವೀರಶೈವ ಸಾಹಿತ್ಯವು ಸೃಜನ ಸಾಹಿತ್ಯ, ಸಂಕಲನ-ಸಂಪಾದನ ಸಾಹಿತ್ಯ ಮತ್ತು ವ್ಯಾಖ್ಯಾನ ಸಾಹಿತ್ಯ ಎಂಬ ಮೂರು ಪ್ರಮುಖ ದಿಕ್ಕುಗಳಲ್ಲಿ ಬೆಳವಣಿಗೆಯನ್ನು ಕಂಡಿತು.
ಸಾಹಿತ್ಯ ಸೃಷ್ಟಿಯ ಜೊತೆಗೆ ವಿಮರ್ಶಾ ಪರಂಪರೆ ಸಹ ಸಹಜವಾಗಿ ಬೆಳೆಯುತ್ತದೆ. ಯಾವುದೇ ಕೃತಿಯ ಅರ್ಥ, ಭಾವ ಮತ್ತು ಉದ್ದೇಶಗಳನ್ನು ವಿವರವಾಗಿ ತಿಳಿಯಲು ವಿಮರ್ಶನ ಸಾಹಿತ್ಯವು ಅಗತ್ಯವಾಗುತ್ತದೆ. ಕನ್ನಡ ಭಾಷೆಯ ಅವಸ್ಥಾಭೇದಗಳು, ಅರ್ಥಜಟಿಲತೆಗಳು ಮತ್ತು ಕಾಲಾನುಗತ ವ್ಯತ್ಯಾಸಗಳು ಲಿಂಗಾಯತ ಟೀಕಾ ಸಾಹಿತ್ಯದ ಉದಯಕ್ಕೆ ಕಾರಣವಾದವು. ಟೀಕಾಕಾರರು ಕೃತಿಗಳ ಒಳನೋಟವನ್ನು ಬಿಚ್ಚಿಡುವ ಮೂಲಕ ಓದುಗರಿಗೆ ಸ್ಪಷ್ಟತೆ ನೀಡಿದರು; ಇದರಿಂದ ಸಾಹಿತ್ಯದ ಆಳವಾದ ಅರ್ಥಗಳು ಸುಲಭವಾಗಿ ಗ್ರಹಿಸಲ್ಪಟ್ಟವು.
ಲಿಂಗಾಯತ ಟೀಕಾ ಸಾಹಿತ್ಯವನ್ನು ವಿಶಾಲವಾಗಿ ನೋಡಿದರೆ, ಅದು ಕನ್ನಡ ಭಾಷೆಯಲ್ಲಿಯೇ ರಚಿಸಲ್ಪಟ್ಟ ಒಂದು ವಿಶಿಷ್ಟ ಪರಂಪರೆ. ಇವುಗಳಲ್ಲಿ ಅನ್ಯಭಾಷಾ ಕೃತಿಗಳಿಗೆ ಕನ್ನಡದಲ್ಲಿ ಬರೆದ ಟೀಕೆಗಳು ಹಾಗೂ ಕನ್ನಡ ಕೃತಿಗಳಿಗೆ ಕನ್ನಡದಲ್ಲಿಯೇ ಬರೆದ ಟೀಕೆಗಳು ಎಂಬ ಎರಡು ವಿಭಾಗಗಳನ್ನು ಕಾಣಬಹುದು. ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ, ಕನ್ನಡ ಕೃತಿಗಳಿಗೆ ವೀರಶೈವರು ಬರೆದ ಟೀಕೆಗಳು ಮತ್ತೆ ವೀರಶೈವ ಕೃತಿಗಳಿಗೆ ಬರೆದವು ಮತ್ತು ವೀರಶೈವೇತರ ಕೃತಿಗಳಿಗೆ ಬರೆದವು ಎಂಬ ಉಪವಿಭಾಗಗಳಾಗಿ ವಿಭಜಿಸಬಹುದು. ಈ ವರ್ಗೀಕರಣವು ವೀರಶೈವ ಪಂಡಿತರ ವಿಶಾಲ ಮನೋಭಾವವನ್ನು ಮತ್ತು ಜ್ಞಾನ ಪ್ರಸಾರದ ಬದ್ಧತೆಯನ್ನು ಸೂಚಿಸುತ್ತದೆ.
ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅಧಿಕರಣ ಮೊದಲಾದ ವಿಭಿನ್ನ ಪ್ರಕಾರಗಳು ಪ್ರಚಲಿತವಾಗಿದ್ದರೂ, ಕನ್ನಡದಲ್ಲಿ ಲಿಂಗಾಯತ ಟೀಕಾಕಾರರು ‘ಟೀಕೆ’, ‘ವ್ಯಾಖ್ಯಾನ’, ‘ಟಿಪ್ಪಣಿ’, ‘ಸಾರಾರ್ಥ’, ‘ಸಾರಾಮೃತ’, ‘ವಾಚ್ಯ’, ‘ವಚನಾರ್ಥ’, ‘ನುಡಿ’ ಮುಂತಾದ ಪದಗಳನ್ನು ಬಳಸಿದರು. ಆದರೆ ಇವು ವಿಭಿನ್ನ ಪ್ರಕಾರಗಳನ್ನು ಸೂಚಿಸುವುದಕ್ಕಿಂತಲೂ ‘ಟೀಕೆ’ಎಂಬ ಒಂದು ಪರಿಕಲ್ಪನೆಯ ಪರ್ಯಾಯ ಪದಗಳಾಗಿವೆ. ಕನ್ನಡ ಸಾಹಿತ್ಯದಲ್ಲಿ ‘ಟೀಕೆ’ಅಥವಾ ‘ಟೀಕು’ಪದವೇ ಸಾಮಾನ್ಯವಾಗಿ ಬಳಕೆಯಲ್ಲಿರುವುದು ಗಮನಾರ್ಹ. ಕೆಲವೊಮ್ಮೆ ‘ವ್ಯಾಖ್ಯಾನ’ಎಂಬ ಪದವನ್ನು ಬಳಸಿ ಆರಂಭಿಸಿದರೂ, ಮುಂದಿನ ಭಾಗಗಳಲ್ಲಿ ‘ಟೀಕು’ಎಂಬ ಪದಕ್ಕೆ ಮರಳಿರುವುದು ಈ ಸಮಾನಾರ್ಥಕ ಬಳಕೆಯನ್ನು ಸ್ಪಷ್ಟಪಡಿಸುತ್ತದೆ.
ಮತ್ತೆ ಸಂಪ್ರದಾಯವಾದಿಗಳ ಕೈಯಲ್ಲಿ ಸಿಕ್ಕಿ ನಿಂತು ಹೋದ ವಚನ ಸಾಹಿತ್ಯ ಪರಂಪರೆಗೆ ಮತ್ತೆ ಹೊಸ ರೂಪ ಕೊಟ್ಟು ಪುನರುತ್ಥಾನಗೊಳಿಸಿದ ಕೀರ್ತಿ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರಿಗೆ ಸಲ್ಲಬೇಕು. ತಮ್ಮ ಸಮಸ್ತ ಬದುಕನ್ನು ವಚನ ಸಾಹಿತ್ಯ ಸಂರಕ್ಷಣೆ-ಪ್ರಕಟಣೆಗಾಗಿ ಮೀಸಲಿಟ್ಟ ಮಹಾನುಭಾವರು ಡಾ. ಫ.ಗು.ಹಳಕಟ್ಟಿಯವರು. ಅವರು ಅಧ್ಯಯನ ಮಾಡುವ ಕಾಲಕ್ಕೆ ಲಿಂಗಾಯತ ಸಾಹಿತ್ಯದ ಬಗ್ಗೆ ಅಂದಿನ ಕಾಲದ ಶಿಕ್ಷಕರು ಮಾಡುತ್ತಿದ್ದ ಟೀಕೆ ಡಾ. ಹಳಕಟ್ಟಿಯವರಲ್ಲಿ ನೋವು-ನಿರಾಶೆಯನ್ನುಂಟು ಮಾಡುತ್ತಿತ್ತು. ಆದರೆ ಅವರಿಗೆ ಗಣಭಾಷಿತ ರತ್ನಮಾಲೆಯಂತಹ ಅಪರೂಪದ ವಚನ ಸಂಕಲನಗಳು ನೋಡಲು ದೊರೆತಾಗ ಅವರಿಗೆ ಅಪಾರ ಆನಂದವಾಯಿತು. ಲಿಂಗಾಯತ ಧರ್ಮಕ್ಕೂ ತನ್ನದೇ ಆದ ಒಂದು ವಿಶಿಷ್ಟ ಸಾಹಿತ್ಯವಿದೆ. ಅದು ಇಡೀ ಭಾರತೀಯ ಸಾಹಿತ್ಯದಲ್ಲಿಯೇ ಅಪರೂಪದ ಸಾಹಿತ್ಯ ಎಂಬುದರ ಪರಿಕಲ್ಪನೆ ಡಾ. ಹಳಕಟ್ಟಿಯವರಿಗಾಯಿತು. ಅಂತೆಯೇ ಈ ವಚನವಾಙ್ಮಯದ ಮಹತ್ವದ ಮೊದಲು ನಮ್ಮನ್ನು ಆಳುತ್ತಿರುವ ಆಂಗ್ಲರಿಗೆ ತಿಳಿಯಲೆಂಬ ಉದ್ದೇಶದಿಂದ ೧೯೧೫ರಲ್ಲಿ ಇಂಡಿಯನ್ ಅಂತ್ರಾಪೋಲಿಜಿಕಲ್ ಪತ್ರಿಕೆಯಲ್ಲಿ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸುವ ಮಹಾಕಾರ್ಯ ಮಾಡಿದರು.
೧೯೨೩ ಲಿಂಗಾಯತರ ಪಾಲಿಗೆ ಒಂದು ಅಪೂರ್ವ ಘಳಿಗೆ ಎಂದೇ ಹೇಳಬೇಕು. ಇದೇ ವರ್ಷ ಎರಡು ಮಹತ್ವದ ವಚನ ಸಂಕಲನಗಳು ಕನ್ನಡ ಸಾರಸ್ವತಲೋಕಕ್ಕೆ ಲೋಕಾರ್ಪಣೆಯಾದವು. ಒಂದು ಡಾ. ಹಳಕಟ್ಟಿಯವರ ‘ವಚನ ಶಾಸ್ತ್ರಸಾರ’ಇನ್ನೊಂದು ಉತ್ತಂಗಿ ಚನ್ನಪ್ಪನವರ ‘ಸರ್ವಜ್ಞನ ವಚನಗಳು’. ಈ ಎರಡೂ ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಅಪೂರ್ವ ಸಂಚಲನವನ್ನುಂಟು ಮಾಡಿದವು. ಕವಿಚರಿತೆಕಾರ ಆರ್. ನರಸಿಂಹಾಚಾರ್, ಬಿ.ಎಂ.ಶ್ರೀ. ಮೊದಲಾದ ಘನವಿದ್ವಾಂಸರು ಈ ಕೃತಿಗಳನ್ನು ಓದಿ ರೋಮಾಂಚಿತಗೊಂಡರು. ಈ ಎರಡೂ ಕೃತಿಗಳು ಕಾರಣವಾಗಿ ಡಾ. ಹಳಕಟ್ಟಿಯವರ , ರೆ. ಉತ್ತಂಗಿಯವರ ಹೆಸರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿ ಉಳಿಯುವುದೆಂದು ವಿದ್ವಜ್ಜನರು ಅಭಿಪ್ರಾಯಪಟ್ಟರು.
ಡಾ. ಫ.ಗು. ಹಳಕಟ್ಟಿಯವರು ೧೯೨೩ರಲ್ಲಿ ವಚನ ಶಾಸ್ತ್ರಸಾರವನ್ನು ಲಿಂಗಾಯತ ಧಾರ್ಮಿಕ ಸಂವಿಧಾನ ಎನ್ನುವ ರೀತಿಯಲ್ಲಿ ರಚಿಸಿದ್ದಾರೆ. ಈ ಕೃತಿ ಪ್ರಕಟಣೆಗಾಗಿ ಮಂಗಳೂರಿನ ಬಾಸೆಲ್ ಮಿಶನ್ ಅವರಿಗೆ ಕಳಿಸಿದ್ದರು. ಆದರೆ ಅವರು “ನಮ್ಮ ಧರ್ಮದ ತತ್ವಗಳು ಮತ್ತು ಲಿಂಗಾಯತ ಧರ್ಮದ ತತ್ವಗಳು ಒಂದೇ ಆಗಿರುವುದರಿಂದ, ಇಂತಹ ಕೃತಿಗಳನ್ನು ಪ್ರಕಟಿಸುವುದರಿಂದ ನಮ್ಮ ಮಿಶನರಿ ಉದ್ದೇಶಕ್ಕೆ ಭಂಗ ಬರುತ್ತದೆ ಎಂದು ಹಸ್ತಪ್ರತಿಯನ್ನು ಮರಳಿ ಕಳಿಸಿದರು.
ಆಗ ಡಾ. ಹಳಕಟ್ಟಿಯವರು ತಮ್ಮ ಬಾಲ್ಯದ ಕೆಲವು ವರ್ಷಗಳ ಬದುಕನ್ನು ಬೆಳಗಾವಿಯಲ್ಲಿಯೇ ಕಳೆದಿರುವುದರಿಂದ ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ ವಚನ ಶಾಸ್ತ್ರಸಾರದ ಮೊದಲ ಆವೃತ್ತಿಯನ್ನು ಮುದ್ರಿಸಿದರು. ಹೀಗಾಗಿ ಬೆಳಗಾವಿಗೂ ವಚನ ಶಾಸ್ತ್ರಸಾರಕ್ಕೂ ನೂರು ವರ್ಷಗಳಿಂದಲೂ ಅವಿನಾಭಾವ ಸಂಬಂಧವಿದೆ.
೧೯೫೦ರ ದಶಕದಲ್ಲಿ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರು ಡಾ. ಹಳಕಟ್ಟಿಯವರನ್ನು ಬೆಳಗಾವಿಗೆ ಕರೆಯಿಸಿ, ಅವರಿಗೆ ನಾಗರಿಕ ಸನ್ಮಾನ ಮಾಡುವುದರೊಂದಿಗೆ ಹಮ್ಮಿಣಿ ಅರ್ಪಿಸಿದ್ದು ಮರೆಯಲಾಗದ ಘಟನೆ. ಸದಾ ಮೌನಯೋಗಿಯಾಗಿದ್ದ ಡಾ. ಶಿವಬಸವ ಮಹಾಸ್ವಾಮಿಗಳು ಈ ಕಾರ್ಯಕ್ರಮಕ್ಕೆ ಅಂದಿನ ಕಾಲದ ಮಹಾ ವಾಗ್ಮಿಗಳೂ ಪ್ರವಚನ ಯೋಗಿಗಳೂ ಆಗಿದ್ದ ನವಕಲ್ಯಾಣಮಠದ ಕುಮಾರ ಮಹಾಸ್ವಾಮಿಗಳವರನ್ನು ಮತ್ತು ಮುಧೋಳ ಮೃತ್ಯುಂಜಯ ಸ್ವಾಮಿಗಳವರನ್ನು ಕರೆಯಿಸಿದ್ದರು. ಆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ನೀಡಿದ ಧನ ಸಹಾಯದಿಂದ ಡಾ.ಹಳಕಟ್ಟಿಯವರು ಹಲವಾರು ವಚನ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯಲೋಕಕ್ಕೆ ಕೊಡಮಾಡಿದರು.
೧೯೬೪ರಲ್ಲಿ ಡಾ. ಫ.ಗು. ಹಳಕಟ್ಟಿಯವರು ಲಿಂಗೈಕ್ಯರಾದ ನಂತರ ಲಿಂಗಾಯತ ಸಮಾಜ ಅವರನ್ನು ಮರತೆ ಬಿಟ್ಟಿತು. ಆಗ ಎರಡು ಮಠಗಳು ಡಾ. ಹಳಕಟ್ಟಿಯವರನ್ನು ಜೀವಂತಗೊಳಿಸುವ ಕಾರ್ಯವನ್ನು ಮಾಡಿದವು. ಗದುಗಿನ ತೋಂಟದಾರ್ಯಮಠದ ಪ್ರಸಾರಾಂಗದಿಂದ ‘ವಚನ ಶಾಸ್ತ್ರಸಾರ’ಸಂಪುಟದ ಮೂರು ಭಾಗಗಳನ್ನು ಪ್ರಕಟ ಮಾಡಿದರೆ, ಇತ್ತ ನಾಗನೂರು ರುದ್ರಾಕ್ಷಿಮಠ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದಲ್ಲಿ ಡಾ. ಹಳಕಟ್ಟಿಯವರು ೩೫ ವರ್ಷಗಳ ಕಾಲ ಪ್ರಕಟಿಸಿದ ಶಿವಾನುಭವ ಪತ್ರಿಕೆಯ ಸಮಗ್ರ ಸಂಚಿಕೆಗಳನ್ನು ಸಂಗ್ರಹಿಸಿತು, ಅದರ ಜೊತೆಗೆ ಶಿವಾನುಭವ ಗ್ರಂಥಮಾಲೆಯ ೮೮ ಗ್ರಂಥಗಳನ್ನೂ ಸಂಗ್ರಹಿಸಿತು. ಇದರ ಪರಿಣಾಮವಾಗಿ ಬಿ.ಎಲ್.ಡಿ.ಇ. ಸಂಸ್ಥೆಯವರು ಡಾ. ಹಳಕಟ್ಟಿ ಸಂಶೋಧನ ಕೇಂದ್ರ ಸ್ಥಾಪಿಸಿ, ಆ ಮೂಲಕ ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿತು. ನಾಗನೂರು ರುದ್ರಾಕ್ಷಿಮಠ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದಲ್ಲಿ ಈ ಸಾಹಿತ್ಯವನ್ನು ಸಂಗ್ರಹಿಸದೇ ಹೋಗಿದ್ದರೆ, ಆ ಕಾರ್ಯ ಎಂದೂ ಆಗುತ್ತಿರಲಿಲ್ಲ. ಹೀಗಾಗಿ ತೋಂಟದಾರ್ಯಮಠ ಮತ್ತು ನಾಗನೂರು ರುದ್ರಾಕ್ಷಿಮಠಗಳು ಡಾ. ಹಳಕಟ್ಟಿಯವರನ್ನು ಅವರ ಸಾಹಿತ್ಯವನ್ನು ಜೀವಂತಗೊಳಿಸುವ ಕಾರ್ಯವನ್ನು ಮಾಡಿದವು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
೨೦೨೩ ಡಾ. ಹಳಕಟ್ಟಿಯವರ ವಚನಶಾಸ್ತ್ರಸಾರ ಕೃತಿಯ ಶತಮಾನೋತ್ಸವ ಸಂದರ್ಭ. ಆದರೆ ಲಿಂಗಾಯತ ಸಮಾಜ ಈ ಕುರಿತು ಯಾವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಿಲ್ಲ. ಈ ಶತಮಾನೋತ್ಸವ ಪೂರ್ವದಲ್ಲಿಯೇ ನಮ್ಮ ಬಸವರಾಜ ವೆಂಕಟಾಪುರ ಶರಣರು ಈ ವಚನಶಾಸ್ತ್ರಸಾರ ಕೃತಿಗೆ ವ್ಯಾಖ್ಯಾನ ಬರೆಯುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇಲ್ಲಿಯವರೆಗೆ ೧೬೪೯ ವಚನಗಳಿಗೆ ಅವರು ವ್ಯಾಖ್ಯಾನ ಬರೆದಿದ್ದಾರೆ. ಈ ಶೂನ್ಯಲಿಂಗ ವಿವೇಚನೆ ಮೊದಲ ಸಂಪುಟವನ್ನು ಗದುಗಿನ ತೋಂಟದಾರ್ಯಮಠವೇ ಪ್ರಕಟಿಸಿತು. ಇನ್ನೂ ವಿಶೇಷವೆಂದರೆ ಡಾ. ಹಳಕಟ್ಟಿಯವರು ತಮ್ಮ ಶಿವಾನುಭವ ಪತ್ರಿಕೆಯಲ್ಲಿ ಆತ್ಮನಿವೇದನೆ-ಸ್ಫುಟವಿಷಯಗಳು ಎಂಬ ಹೆಸರಿನಲ್ಲಿ ಮಹತ್ವದ ವಿಷಯಗಳನ್ನು ದಾಖಲಿಸಿದ್ದಾರೆ. ಅವುಗಳಲ್ಲಿ ಒಂದು ಮುಖ್ಯವಾದದ್ದು ಎಂದರೆ- ‘ನಮ್ಮ ಶಿವಾನುಭವ ಪತ್ರಿಕೆ ಮತ್ತು ಶಿವಾನುಭವ ಗ್ರಂಥಮಾಲೆಯ ಕೃತಿಗಳ ಮುದ್ರಣಕ್ಕೆ ಅತಿ ಹೆಚ್ಚು ದಾಸೋಹ ಸೇವೆ ಸಲ್ಲಿಸಿದವರು ಬೆಳಗಾವಿ ಜಿಲ್ಲೆಯವರು’ ಎಂದು ಹೃದಯತುಂಬಿ ಬರೆದಿದ್ದಾರೆ. ಈಗ ವೆಂಕಟಾಪುರ ಶರಣರ ಈ ಸಂಪುಟಗಳಿಗೂ ಬೆಳಗಾವಿ ಜಿಲ್ಲೆಯವರೇ ದಾಸೋಹ ಸೇವೆ ಒದಗಿಸುತ್ತಿರುವುದು ವಿಶೇಷ. ಎರಡನೆಯ ಸಂಪುಟದ ಪ್ರಕಟಣೆಗೂ ಬೆಳಕೂಡ ಗ್ರಾಮದ ಸಮಸ್ತ ಶರಣ ಬಂಧುಗಳು ದಾಸೋಹ ಸೇವೆ ಸಲ್ಲಿಸಿದರು, ಪ್ರಸ್ತುತ ಐದನೆಯ ಸಂಪುಟಕ್ಕೂ ಬೆಳಕೂಡ ಗ್ರಾಮದ ಶರಣರೇ ದಾಸೋಹ ಸೇವೆ ನೀಡಿದ್ದು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.
ನಾನು ವೆಂಕಟಾಪುರ ಶರಣರನ್ನು ಕಳೆದ ಎರಡು ದಶಕಗಳಿಂದ ಗಮನಿಸುತ್ತ ಬಂದಿದ್ದೇನೆ. ೨೦೦೬ರಲ್ಲಿ ನಾನು ಲಿಂಗಾಯತ ಪತ್ರಿಕೆ ಪ್ರಕಟಣೆ ಸಲುವಾಗಿ ಪ್ರತಿತಿಂಗಳು ಗದುಗಿನ ತ್ವರಿತ ಮುದ್ರಣಾಲಯಕ್ಕೆ ಹೋಗುತ್ತಿದ್ದೆ. ಆಗ ಅಂದಿನ ಜಗದ್ಗುರು ಮಹಾಸನ್ನಿಧಿಯವರು ಪ್ರತಿತಿಂಗಳು ಗದುಗಿಗೆ ಬಂದಾಗ, ಮಠದಲ್ಲಿಯೇ ಪ್ರಸಾದ ಮಾಡಿ ಹೋಗು ಎಂದು ಆದೇಶ ಮಾಡಿದ್ದರು. ಹೀಗಾಗಿ ನಾನು ಮಠಕ್ಕೆ ಹೋಗುತ್ತಿದ್ದೆ. ಅಲ್ಲಿ ದಾಸೋಹ ಮನೆಯಲ್ಲಿ ವೆಂಕಟಾಪುರ ಶರಣರು ಬಿಡುವಿನ ಸಮಯದಲ್ಲಿ ಬರೆಯುತ್ತ ಕುಳಿತಿರುತ್ತಿದ್ದರು. ಆಗ ಅವರು ಮೈಲಾರ ಬಸವಲಿಂಗ ಶರಣರ ‘ಬಸವಲಿಂಗವೆಂಬ ಐದಕ್ಷರಗಳು’ಎಂಬ ಪದ್ಯಕ್ಕೆ ವ್ಯಾಖ್ಯಾನ ಬರೆಯುತ್ತಿದ್ದರು. ಐದು ನುಡಿಯ ಒಂದು ಪದ್ಯಕ್ಕೆ ಶರಣರು ೧೨೦ ಪುಟಗಳ ವ್ಯಾಖ್ಯಾನ ಬರೆದಿರುವುದು ಸಣ್ಣ ಮಾತಲ್ಲ. ಆಗ ಅವರು ಈ ಪದ್ಯದ ಒಂದು ವಿಶೇಷತೆಯ ಕಡೆಗೆ ನನ್ನ ಗಮನ ಸೆಳೆದರು. ಮೈಲಾರ ಬಸವಲಿಂಗ ಶರಣರು ಈ ಪದ್ಯದಲ್ಲಿ ‘ಆದಿ ಪ್ರಾಸವನ್ನೂ ಬಳಸಿದ್ದಾರೆ; ಅಂತ್ಯಪ್ರಾಸವನ್ನೂ ಬಳಸಿದ್ದಾರೆ. ಈ ರೀತಿಯ ಉಭಯ ಪ್ರಾಸಬದ್ಧ ಪದ್ಯಗಳನ್ನು ಕನ್ನಡ ಸಾಹಿತ್ಯದಲ್ಲಿ ಹುಡುಕುವುದು ಕಷ್ಟದ ಕೆಲಸ. ತದನಂತರ ಶರಣರು ಮೈಲಾರ ಬಸವಲಿಂಗ ಶರಣರ ಗುರುಕರುಣತ್ರಿವಿಧಿಯ ೩೩೪ ಪದ್ಯಗಳಿಗೂ ವ್ಯಾಖ್ಯಾನ ಬರೆದರು. ಅದೇ ರೀತಿ ಚಾಮರಸನ ಪ್ರಭುಲಿಂಗಲೀಲೆಗೂ ಸರಳಾನುವಾದ ಬರೆದರು. ಹೀಗೆ ಶರಣರ ಸಾಹಿತ್ಯ ಸೇವೆ ನಿತ್ಯನಿರಂತರವಾಗಿ ಸಾಗಿ ಬಂದಿದೆ.
ಇಲ್ಲಿ ವೆಂಕಟಾಪುರ ಶರಣರು ಶರಣರ ಆ ಕಾಲದ ವಚನಗಳಿಗೆ, ಈ ಕಾಲದ ಆಧುನಿಕ ಉದಾಹರಣೆಗಳನ್ನು ನೀಡಿ ಅರ್ಥವನ್ನು ಬರೆದಿರುವುದು ಲೌಕಿಕ ಜೀವನದಲ್ಲಿ ಇರುವವರಿಗೆ ತಟ್ಟನೆ ಮನದಟ್ಟಾಗುತ್ತದೆ. ಯಾರೋ ಒಬ್ಬರು ಅವರನ್ನು ಕೇಳುತ್ತಾರೆ- ‘ನಾವೇ ಲಿಂಗವಾಗಿರುವಾಗ, ಮತ್ತೆ ಲಿಂಗ ಏಕೆ ಧರಿಸಬೇಕು?’ ಈ ಪ್ರಶ್ನೆಗೆ ಶರಣರು ನೀಡುವ ಉತ್ತರ ತುಂಬ ಮಾರ್ಮಿಕವಾಗಿದೆ- ‘ಕಟ್ಟಿಗೆಯೊಳಗೆ ಬೆಂಕಿ ಇದೆ. ಆದರೆ ಆ ಬೆಂಕಿ ಕಾಣಬೇಕಾದರೆ, ಒಂದು ಬೆಂಕಿ ಕಿಡಿ ಆ ಕಟ್ಟಿಗೆಗೆ ತಾಗಬೇಕು. ಆಗ ಮಾತ್ರ ಆ ಕಟ್ಟಿಗೆಯೊಳಗಿನ ಬೆಂಕಿ ಗೋಚರಿಸುತ್ತದೆ. ಹಾಗೆ ಮನುಷ್ಯನೊಳಗೆ ಪರಮಾತ್ಮನಿದ್ದರೂ, ಒಣ ಕಟ್ಟಿಗೆಯಂತೆ ನಿಶ್ಚಲನಾಗಿರುತ್ತಾನೆ. ಅದಕ್ಕೆ ಗುರುವಿನಿಂದ ಪ್ರದತ್ತ ಹಸ್ತಮಸ್ತಕ ಸಂಯೋಗದಿಂದ ಪ್ರಾಪ್ತವಾದ ಇಷ್ಟಲಿಂಗದ ಅನುಸಂಧಾನದಿಂದ ದೇಹದೊಳಗಿನ ಜೀವಾತ್ಮ-ಪರಮಾತ್ಮರ ಸಾಮರಸ್ಯದ ಅರಿವು ನಮಗಾಗುತ್ತದೆ’ಎಂಬ ಲೌಕಿಕ ಉದಾಹರಣೆಯ ಮೂಲಕ ಸ್ಪಷ್ಟನೆ ನೀಡುವುದರಿಂದ ಇಲ್ಲಿಯ ವಚನ ವ್ಯಾಖ್ಯಾನವೆಲ್ಲವೂ ಅತ್ಯಂತ ಹೃದಯಕ್ಕೆ ತಟ್ಟುತ್ತದೆ; ಮನಸ್ಸಿಗೆ ಮುಟ್ಟುತ್ತದೆ.
ಈ ವ್ಯಾಖ್ಯಾನ ಬರೆಯಲು ತಮಗೆ ಪ್ರೇರಣೆ ಏನು ಎಂದು ಕೇಳಿದಾಗ- “ಗದುಗಿನ ತೋಂಟದ ಸಿದ್ಧಲಿಂಗ ಜಗದ್ಗುರುಗಳು ಮತ್ತು ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟಾಧ್ಯಕ್ಷರು ನನಗೆ ಬರೆಯಲು ಪ್ರೇರಣೆ ನೀಡಿದರು. ಅವರಿಬ್ಬರ ಆಶೀರ್ವಾದ ಕಾರಣವಾಗಿ ನಾನು ಈ ವರೆಗೆ ಐದು ಸಂಪುಟಗಳನ್ನು ಹೊರತರಲು ಸಾಧ್ಯವಾಯಿತು’ಎಂದು ವಿನಮ್ರವಾಗಿ ಹೇಳುತ್ತಾರೆ.
ಈ ಶರಣಮಾರ್ಗಕ್ಕೆ ತಾವು ಹೇಗೆ ಬಂದಿರಿ? ಎಂದು ಕೇಳಿದಾಗ- ‘ನನ್ನ ಜೀವನದಲ್ಲಿ ಅಕ್ಕಮಹಾದೇವಿಯ ಒಂದು ವಚನ ದಿವ್ಯಪಥವನ್ನು ತೋರಿಸಿತು. ‘ಹಸಿವಾದಡೆ ಭಿಕ್ಷಾನ್ನಗಳುಂಟು? ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು? ಆತ್ಮ ಸಂಗಾತಕ್ಕೆ ಚನ್ನಮಲ್ಲಿಕಾರ್ಜುನನುಂಟು!’ ಎಂಬ ಒಂದು ವಚನ ನನ್ನ ಬದುಕಿನಲ್ಲಿ ಅದ್ಭುತವಾದ ಮಾರ್ಗವನ್ನು ತೋರಿತು. ಈ ವಚನ ಅರ್ಥವಾದ ಕ್ಷಣವೇ ನನ್ನ ಪೂರ್ವಾಶ್ರಮವನ್ನೆಲ್ಲ ತ್ಯಜಿಸಿ, ಶರಣಮಾರ್ಗಕ್ಕೆ ಬಂದೆ’ಎಂದು ಹೇಳುತ್ತಾರೆ. ಒಂದು ವಚನದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದಕ್ಕೆ ಇದು ಸಾಕ್ಷಿ.
ಒಟ್ಟಾರೆ, ಬಸವರಾಜಪ್ಪ ಶರಣರು ರಚಿಸಿದ ಈ ಶೂನ್ಯಲಿಂಗ ವಿವೇಚನೆ ಶರಣ ಸಿದ್ಧಾಂತವನ್ನು ಅರಿತುಕೊಳ್ಳಬೇಕೆನ್ನುವವರಿಗೆ ಒಂದು ಅಪೂರ್ವ ಆಕರ ಗ್ರಂಥವಾಗಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
