ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ

ಶಿವಮೊಗ್ಗ:

ಶತಮಾನಕ್ಕೂ ಹೆಚ್ಚುಕಾಲ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಶ್ರಯ, ಶಿಕ್ಷಣ ಮತ್ತು ಭವಿಷ್ಯದ ಭರವಸೆಯಾಗಿರುವ ನಗರ ಡಿವಿಜನ್ ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯ ವಿಶ್ವಸ್ಥ ಮಂಡಳಿ ವತಿಯಿಂದ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಬೆಕ್ಕಿನ ಕಲ್ಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ವಿದ್ಯಾರ್ಥಿ ನಿಲಯದ ಅಭಿವೃದ್ಧಿಗಾಗಿ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಹಾಗೂ ಸಮಾಜದ ಹಿರಿಯರು ನಡೆಸಿದ ನಿರಂತರ ಪರಿಶ್ರಮವನ್ನು ಶ್ಲಾಘಿಸಿದರು.

ನಮ್ಮ ರುದ್ರೇಗೌಡರು ಸೇರಿದಂತೆ ಸಂಸ್ಥೆಯ ಮುಖಂಡರು ಹಾಗೂ ಸಮಾಜದ ಅನೇಕ ಪ್ರಮುಖರು ಈ ನೂತನ ಕಟ್ಟಡ ನಿರ್ಮಾಣಕ್ಕಾಗಿ ಯಾವ ರೀತಿಯಲ್ಲಿ ಪರಿಶ್ರಮಪಟ್ಟಿದ್ದಾರೆ ಎಂಬುದನ್ನು ಈಗಾಗಲೇ ವಿವರಿಸಿದ್ದಾರೆ. ಈ ಕಟ್ಟಡದ ಹಿಂದೆ ಇರುವ ಪರಿಶ್ರಮ ಮತ್ತು ಸೇವಾ ಮನೋಭಾವವೇ ಇದರ ನಿಜವಾದ ಶಕ್ತಿ, ಎಂದು ಹೇಳಿದರು.

ಅಲ್ಲಮಪ್ರಭು, ಅಕ್ಕಮಹಾದೇವಿ, ಕುವೆಂಪು, ಶಾಂತವೇರಿ ಗೋಪಾಲಗೌಡ ಅವರಂತಹ ಮಹನೀಯರನ್ನು ನಾಡಿಗೆ ನೀಡಿದ ಪುಣ್ಯಭೂಮಿ ಶಿವಮೊಗ್ಗ ಎಂದು ಬಣ್ಣಿಸಿದ ಯಡಿಯೂರಪ್ಪ, ಶಿವಮೊಗ್ಗ ತಮ್ಮ ಕರ್ಮಭೂಮಿಯಾಗಿದ್ದು, ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ತಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸ್ಮರಿಸಿದರು.

ಯಡಿಯೂರಪ್ಪ ಎಂಬ ಸಾಮಾನ್ಯ ಕಾರ್ಯಕರ್ತನನ್ನು ಈ ಹಂತಕ್ಕೆ ಬೆಳೆಸಿದ ಈ ಪುಣ್ಯಭೂಮಿಗೆ ಮತ್ತು ಶಿವಮೊಗ್ಗದ ಮಹಾಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನವೇ ನನ್ನ ಸಾರ್ವಜನಿಕ ಜೀವನದ ದೊಡ್ಡ ಶಕ್ತಿ, ಎಂದು ಭಾವುಕರಾಗಿ ಹೇಳಿದರು.

ಶತಮಾನ ಪೂರೈಸಿರುವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ನನ್ನ ಹೆಸರನ್ನು ಇಟ್ಟಿರುವುದು ವೈಯಕ್ತಿಕವಾಗಿ ನನಗೆ ದೊರೆತ ದೊಡ್ಡ ಗೌರವ ಎಂದು ಭಾವಿಸುವೆ, ಹೇಳಿದರು.

1916ರಲ್ಲಿ ಬೆಕ್ಕಿನಕಲ್ಮಠದ ಮಠದ ಹಿರಿಯ ಶ್ರೀಗಳ ಸಾನಿಧ್ಯದಲ್ಲಿ ಸಮಾಜದ ಹಿರಿಯರು ಆರಂಭಿಸಿದ ಈ ಸಂಸ್ಥೆ ಇಂದು ಶತಮಾನ ಪೂರೈಸಿ ಬೃಹತ್ ಹೆಮ್ಮರವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ನಾನು ಸಾರ್ವಜನಿಕ ಜೀವನಕ್ಕೆ ಬಂದ ಸಂದರ್ಭದಲ್ಲಿ ಹಳ್ಳಿಗಳು ಹಾಗೂ ದೂರದ ಊರುಗಳಿಂದ ಶಿವಮೊಗ್ಗಕ್ಕೆ ಬಂದು ಶಿಕ್ಷಣ ಪಡೆಯುತ್ತಿದ್ದ ಅನೇಕ ವಿದ್ಯಾರ್ಥಿಗಳು ವಸತಿ ಸೌಲಭ್ಯವಿಲ್ಲದೆ ಎದುರಿಸುತ್ತಿದ್ದ ಸಂಕಷ್ಟವನ್ನು ಹತ್ತಿರದಿಂದ ಕಂಡಿದ್ದೇನೆ. ಒಂದು ಮಗು ವಸತಿ ಅಥವಾ ಊಟದ ಕೊರತೆಯಿಂದ ಶಿಕ್ಷಣದಿಂದ ವಂಚಿತವಾಗಬಾರದು. ಇದನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಹೊಣೆಗಾರಿಕೆಯೂ ಹೌದು, ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಯಾಗಿದ್ದ 2021ರಲ್ಲಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹5 ಕೋಟಿ ಅನುದಾನ ನೀಡಲಾಗಿತ್ತು ಎಂದು ಯಡಿಯೂರಪ್ಪ ನೆನಪಿಸಿಕೊಂಡರು. ಇಂದು ಆ ಅನುದಾನದಿಂದ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ, ಎಂದರು.

ಬಸವಾದಿ ಶರಣರು ಸಾರಿದ ದಾಸೋಹ ಪರಂಪರೆಯನ್ನು ಮುಂದುವರಿಸುವ ಮಹತ್ವದ ಕಾರ್ಯ ಇದಾಗಿದೆ ಎಂದು ಅವರು ಹೇಳಿದರು.

ಈ ವಿದ್ಯಾರ್ಥಿ ನಿಲಯದಲ್ಲಿ ಪಿ. ಲಂಕೇಶ್, ಪ್ರೊ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ ಸೇರಿದಂತೆ ಅನೇಕ ಗಣ್ಯರು ವಿದ್ಯಾಭ್ಯಾಸ ಮಾಡಿ ಬೆಳೆದಿರುವುದನ್ನು ಸ್ಮರಿಸಿದ ಯಡಿಯೂರಪ್ಪ, ನೂತನ ಕಟ್ಟಡದ ಮೂಲಕ ಮುಂದಿನ ದಿನಗಳಲ್ಲಿ ನಾಡಿಗೆ ನೂರಾರು ಪ್ರತಿಭಾವಂತರು ಹಾಗೂ ಸಾಧಕರು ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳ ಅಭಿವೃದ್ಧಿಗಾಗಿ ತಮ್ಮ ಸಾರ್ವಜನಿಕ ಜೀವನದಲ್ಲಿ ಹಲವು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತಂದಿರುವ ತೃಪ್ತಿ ಇದೆ ಎಂದ ಅವರು, ಮುಂದಿನ ಪೀಳಿಗೆಯ ಶಿಕ್ಷಣ ಮತ್ತು ಭವಿಷ್ಯ ನಿರ್ಮಾಣಕ್ಕೆ ಇಂತಹ ವಿದ್ಯಾರ್ಥಿ ನಿಲಯಗಳು ಇನ್ನಷ್ಟು ಬಲಿಷ್ಠವಾಗಬೇಕು ಎಂದು ಆಶಿಸಿದರು.

ಸಮಾರಂಭದಲ್ಲಿ ಎನ್.ಡಿ.ವಿ. ಹಾಸ್ಟೆಲ್ ಟ್ರಸ್ಟ್ ಅಧ್ಯಕ್ಷರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರಾದ ಆಯನೂರು ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಭದ್ರಾವತಿ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಕೆ.ಆರ್.ಐ.ಡಿ.ಎಲ್. ನಿಗಮದ ಅಧ್ಯಕ್ಷರಾದ ಬಿ.ಕೆ. ಸಂಗಮೇಶ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಎನ್.ಡಿ.ವಿ. ಹಾಸ್ಟೆಲ್ ಟ್ರಸ್ಟ್ ಕಟ್ಟಡ ಸಮಿತಿ ಅಧ್ಯಕ್ಷರಾದ ಎಸ್. ರುದ್ರೇಗೌಡ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ, ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷರಾದ ಜೆ. ವಿರೂಪಾಕ್ಷಪ್ಪ, ನಂಜುಂಡ ಶೆಟ್ರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments

Leave a Reply

Your email address will not be published. Required fields are marked *

ಸಂಪಾದಕರು, ಡಿಟೆಕ್ಟಿವ್ ನ್ಯೂಸ್ 24