ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)

ಧಾರವಾಡ

12ನೇ ಶತಮಾನದಲ್ಲಿ ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ ಪ್ರಭಾವಿ ಧಾರ್ಮಿಕ ಗುರುಗಳಾಗಿದ್ದರು.

ಸಿದ್ಧರಾಮ ಹಾಗೂ ಪಂಡಿತಾರಾಧ್ಯ ಬಸವಭಕ್ತರಾದ ಮೇಲೆ ಅವರ ಅನುಯಾಯಿಗಳೂ ಶರಣ ಚಳುವಳಿಯೊಳಗೆ ಸೇರಿಕೊಂಡರು.

ಸಿದ್ಧರಾಮರ ಅನುಯಾಯಿಗಳು ಶರಣರಲ್ಲಿ ಸಂಪೂರ್ಣವಾಗಿ ಲೀನವಾದರೆ, ಪಂಡಿತಾರಾಧ್ಯರ ಅನುಯಾಯಿಗಳು ಒಳ ಬಂದರೂ ಭಿನ್ನವಾಗಿಯೇ ಉಳಿದರು. ಇದು ಮುಂದೆ ಶರಣ ಚಳುವಳಿಯ ಮೇಲೆ ಗಾಢವಾದ ಪ್ರಭಾವ ಬೀರಿತು.

ನಾಥ ಪಂಥದ ಪ್ರಸಿದ್ಧ ಗುರು ಸಿದ್ಧರಾಮರು

ಮಹಾರಾಷ್ಟ್ರದಲ್ಲಿ ಸಿದ್ಧರಾಮರು, ಆಂಧ್ರ ಪ್ರದೇಶದಲ್ಲಿ ಪಂಡಿತಾರಾಧ್ಯರು ೧೨ನೇ ಶತಮಾನದ ಪ್ರಸಿದ್ಧ ಗುರುಗಳು. ಇವರಿಬ್ಬರೂ ತಮ್ಮ ಸಮಕಾಲೀನರಾಗಿದ್ದ ಬಸವಣ್ಣನವರ ಭಕ್ತರಾದರು.

ಸಿದ್ಧರಾಮರ ನಾಥ-ಸಿದ್ದ ಪಂಥ ಶರಣ ಧರ್ಮದಲ್ಲಿ ಲೀನವಾಯಿತು. ಪಂಡಿತಾರಾಧ್ಯರ ಭಕ್ತರಾಗಿದ್ದ ಆರಾಧ್ಯರು ಒಳ ಬಂದರೂ ಪ್ರತ್ಯೇಕವಾಗಿ ಉಳಿದುಕೊಂಡು ಕಾಲಕ್ರಮೇಣ ವೀರಶೈವರಾಗಿ ಬೆಳೆದರು.

ಸಿದ್ದರಾಮರ ಮೂಲ ಹೆಸರು ರಾಮಯ್ಯ. ಸಿದ್ಧರಾಗಿದ್ದರಿಂದ ಅವರ ಹೆಸರು ‘ಸಿದ್ದರಾಮಯ್ಯ’ ಎಂದಾಯಿತು. ಸಿದ್ದರಾಮರು ಪ್ರಸಿದ್ಧ ನಾಥ-ಸಿದ್ದ ಗುರು ರೇವಣಸಿದ್ದರ ಕಿರಿಯ ಸಮಕಾಲೀನರು.

ಸಿದ್ದರಲ್ಲಿ ವಾಮಾಚಾರದತ್ತ ತಿರುಗುತ್ತಿದ್ದ ಕಾಪಾಲಿಕ ಸಿದ್ದ ಮತ್ತು ಶಿವಪರವಾಗಿದ್ದ ನಾಥ-ಸಿದ್ದ ಪಂಥಗಳಿದ್ದವು. ಸಿದ್ಧರಾಮರು ಕಾಪಾಲಿಕ ಸಿದ್ದರನ್ನು ತಿರಸ್ಕರಿಸಿ ನಾಥ-ಸಿದ್ದ ಪಂಥದ ಗುರುಗಳಾದರು.

ಸಿದ್ದರಾಮರ ಪಭಾವ ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಅನೇಕ ಅರಸರು ಇವರಿಗೆ ದತ್ತಿ ನೀಡಿರುವ ಶಾಸನಗಳು ಎರಡೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೊರೆಯುತ್ತವೆ.

ಕುರುಬರಾಗಿ ಹುಟ್ಟಿದ್ದ ಸಿದ್ಧರಾಮರು ಜಾತಿ ನಿಂದನೆ ಎದುರಿಸಿದರು. ಇವರು ಕಟ್ಟಿದ ಕೆರೆಯನ್ನು ಮೊರಬ ಬ್ರಾಹ್ಮಣರು ‘ಶೂದ್ರ’ ಕಟ್ಟಿಸಿದ ಕೆರೆಯೆಂದು ತೆಗಳಿದ್ದು ‘ಸಿದ್ದರಾಮ ಚರಿತ್ರೆ’ಯಲ್ಲಿ ದಾಖಲಾಗಿದೆ.

(‘ಸಿದ್ದರಾಮ ಮತ್ತು ನಾಥ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)

ಬಸವ ಭಕ್ತರಾದ ಸಿದ್ಧರಾಮರು

ಸಿದ್ಧರಾಮರು ಶ್ರೀಶೈಲದ ಕಪಿಲ ಮಲ್ಲಿಕಾರ್ಜುನನ ಭಕ್ತರು. ತಮ್ಮ ನೆಲೆ ಸೊಲ್ಲಾಪುರವನ್ನು ‘ಅಭಿನವ ಶ್ರೀಶೈಲ’ವಾಗಿ ಬೆಳೆಸಲು ಹಲವಾರು ಕ್ಷೇತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಸಿದ್ಧರಾದರು.

ಲೋಕಕಲ್ಯಾಣಕ್ಕಾಗಿ ಅವರು ಅನೇಕ ದೇವಸ್ಥಾನ, ಕೆರೆ, ಉದ್ಯಾನಗಳನ್ನು ನಿರ್ಮಿಸಿದರು. ಯೋಗರಮಣೀಯ ಕ್ಷೇತ್ರ ಮತ್ತು ಅಷ್ಟಷಷ್ಠಿ ತೀರ್ಥ ಕ್ಷೇತ್ರ ಅವರ ಮುಖ್ಯ ಸಾಧನೆಗಳು.

ಸಿದ್ಧರಾಮರು ಅನೇಕ ಸ್ಥಾವರ ಲಿಂಗದ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ಬಹು ದೇವತಾ ಆರಾಧಕರಾಗಿದ್ದ ಅವರು ಅಭಿಷೇಕ, ಹೋಮಗಳಂತಹ ವೈದಿಕ ಆಚರಣೆಗಳಲ್ಲಿ ಮುಳುಗಿದ್ದರು.

ಲೋಕ ಕಲ್ಯಾಣಕ್ಕಾಗಿ ದುಡಿದರೂ, ಅವರ ಸಾಧನೆಯಲ್ಲಿ ಬಾಹ್ಯ ಆಡಂಬರವೇ ಪ್ರಬಲವಾಗಿತ್ತು. ಅಲ್ಲಮ ಪ್ರಭುಗಳ ಪ್ರಭಾವದಿಂದ ಅಂತರಂಗದ ಸಾಧನೆಯ ಮಹತ್ವದ ಅರಿವಾಗಿ ಕಲ್ಯಾಣಕ್ಕೆ ಬಂದರು.

ಅಲ್ಲಿ ಬಸವಣ್ಣನವರ ಪ್ರಭಾವದಿಂದ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು. ಹಲವಾರು ವಚನಗಳನ್ನು ರಚಿಸಿದ್ದು ಮಾತ್ರವಲ್ಲದೆ, ಬಸವ ಸ್ತೋತ್ರ ತ್ರಿವಿಧಿಯಂತಹ ಕೃತಿಗಳನ್ನೂ ರಚಿಸಿದರು.

ಸಿದ್ಧರಾಮರ ಜೊತೆ ಅಪಾರ ಸಂಖ್ಯೆಯಲ್ಲಿದ್ದ ಅವರ ಭಕ್ತರೂ ಶರಣರನ್ನು ಸೇರಿಕೊಂಡರು. ಕೆಲವೇ ವರ್ಷಗಳಲ್ಲಿ ಶರಣ ಚಳುವಳಿ ಪ್ರವಾಹದಂತೆ ಹೊಮ್ಮಲು ಇದೂ ಒಂದು ಮುಖ್ಯ ಕಾರಣವಾಯಿತು.

(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)

ಬಸವ ಭಕ್ತರಾದ ಆರಾಧ್ಯರ ಗುರು ಪಂಡಿತಾರಾಧ್ಯರು

೧೨ನೇ ಶತಮಾನದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಆಂಧ್ರದ ಆರಾಧ್ಯರ ಗುರುಗಳು. ವೀರಶೈವ ಪರಂಪರೆಗೆ ಅಡಿಗಲ್ಲು ಹಾಕಿದ ಇವರು ಪಂಚಾಚಾರ್ಯರಲ್ಲಿ ಪ್ರಮುಖರಾಗಿ ರೂಪುಗೊಂಡರು.

‘ಬಸವ ಪುರಾಣಮು’ ಬರೆದ ಪಾಲ್ಕುರಿಕೆ ಸೋಮನಾಥ ‘ಪಂಡಿತಾರಾಧ್ಯ ಚರಿತಮು’ ಕೃತಿಯನ್ನೂ ರಚಿಸಿದ. ತೆಲುಗು, ಕನ್ನಡ, ಸಂಸ್ಕೃತದ ಹಲವಾರು ಕೃತಿಗಳಲ್ಲಿ ಇವರ ಜೀವನ, ಸಾಧನೆ ದಾಖಲಾಗಿದೆ.

ಶರಣ ಚಳುವಳಿ ಪಂಡಿತಾರಾಧ್ಯರ ಮೇಲೆ ಪ್ರಬಲವಾದ ಪ್ರಭಾವ ಬೀರಿತ್ತು. ಬಸವಣ್ಣನವರ ಕಾರ್ಯಕ್ಕೆ ಪೂರಕವಾಗಿ ಶ್ರಮಿಸಲು ಅವರು ಹುಟ್ಟಿದರೆಂದು ಸೋಮನಾಥ ಹೇಳುತ್ತಾನೆ.

ಅವರು ಕೂಡ ಹುಟ್ಟಿದ್ಧ ವೈದಿಕ ಕುಟುಂಬವನ್ನು ದಿಕ್ಕರಿಸಿ ಹೊರನಡೆದರು. ಆಗ ನಡೆದ ವಾಗ್ವಾದದಲ್ಲಿ ಅವರು ಬಸವಣ್ಣ, ಚನ್ನಯ್ಯ, ಕಕ್ಕಯ್ಯನಂತಹ ಶರಣರ ಸಾಧನೆಗಳನ್ನು ಬಳಸಿಕೊಂಡರು.

ಕಲ್ಯಾಣಕ್ಕೆ ಬರುತ್ತಿದ್ದ ಪಂಡಿತಾರಾಧ್ಯರಿಗೆ ಎಂಟು ದಿನದ ಹಿಂದೆ ಬಸವಣ್ಣನವರು ಲಿಂಗೈಕ್ಯವಾದ ಸುದ್ದಿ ತಿಳಿಯಿತು. ದುಃಖದಿಂದ ‘ಬಸವ ಬಸವ…’ ಎಂದು ಸ್ತುತಿಸುತ್ತಾ ಅರ್ಧ ದಾರಿಯಿಂದಲೇ ಹಿಂದಿರುಗಿದರು.

ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ಹತ್ತಿರ ತಮ್ಮನ್ನೂ ಬಸವಣ್ಣನವರಂತೆ ಐಕ್ಯ ಮಾಡಿಕೋ ಎಂದು ಬೇಡಿಕೊಂಡರು. ಅವರ ನಿಧನದ ನಂತರ ಅವರ ಮಗ ಕೇದಾರಯ್ಯ ಪಟ್ಟಕ್ಕೆ ಬಂದರು.

(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)

ಶರಣರಲ್ಲಿ ಸಂಪೂರ್ಣವಾಗಿ ಲೀನವಾಗದ ಆರಾಧ್ಯರು

ವೈದಿಕ ಮೂಲದವರಾಗಿದ್ದರೂ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ಪ್ರಭಾವದಿಂದ ಇಷ್ಟಲಿಂಗ ಹಿಡಿದರು. ಅವರ ಆರಾಧ್ಯ ಭಕ್ತರೂ ಕೂಡ ಶರಣ ಚಳುವಳಿಯನ್ನು ಸೇರಿಕೊಂಡರು.

ಪಂಡಿತಾರಾಧ್ಯರು ರಚಿಸಿದ ‘ಶಿವತತ್ವ ಸಾರಮು’ ಗ್ರಂಥದಲ್ಲಿ ಶರಣ, ವೈದಿಕ ತತ್ವಗಳ ಮಿಶ್ರಣ ಕಾಣುತ್ತದೆ. ಅವರು ಇಷ್ಟಲಿಂಗ ಸ್ತೋತ್ರ, ಬಸವ ಗೀತ ಮುಂತಾದ ಶರಣ ಕೃತಿಗಳನ್ನೂ ರಚಿಸಿದರು.

ಕಲ್ಯಾಣಕ್ಕೆ ಬರುತ್ತಿದ್ದ ಪಂಡಿತಾರಾಧ್ಯರು ಬಸವಣ್ಣ ಲೈಂಗೈಕ್ಯರಾದ ಸುದ್ದಿ ಕೇಳಿ ಹಿಂದಿರುಗಿದರು. ಅವರ ಪರಂಪರೆ ಸಂಪೂರ್ಣವಾಗಿ ಶರಣರಲ್ಲಿ ಲೀನವಾಗುವ ಅವಕಾಶ ತಪ್ಪಿಹೋಯಿತು.

ಸಿದ್ಧರಾಮರಿಗೆ ಉತ್ತರಾಧಿಕಾರಿ ಇಲ್ಲದ್ದರಿಂದ ನಾಥರು ಶರಣರಲ್ಲಿ ಲೀನರಾದರು. ಆದರೆ ಪಂಡಿತಾರಾಧ್ಯರ ನಂತರ ಅವರ ಮಗ ಪಟ್ಟಕ್ಕೆ ಬಂದಿದ್ದರಿಂದ ಆರಾಧ್ಯರು ಪ್ರತ್ಯೇಕವಾಗಿಯೇ ಉಳಿದರು.

ಆರಾಧ್ಯರು ಇಷ್ಟಲಿಂಗ ಧರಿಸಿದರೂ ಜನಿವಾರ ಬಿಡಲಿಲ್ಲ. ಶರಣ ಚಳುವಳಿಯಲ್ಲಿ ಸೇರಿಕೊಂಡರೂ ಪ್ರತ್ಯೇಕ ಜಾತಿ ಜಂಗಮರಾಗಿ, ವೈದಿಕತೆ ತುಂಬಿದ್ದ ಭಿನ್ನ ಪರಂಪರೆಯನ್ನು ಬೆಳೆಸಿದರು.

ಪಂಡಿತಾರಾಧ್ಯರೂ ಸೇರಿದಂತೆ ಆರಾಧ್ಯರು ಮೊದಮೊದಲು ಬಸವ ನಿಷ್ಠೆಯಿಂದಿದ್ದರು. ಆದರೆ ಮುಂದಿನ ಶತಮಾನಗಳಲ್ಲಿ ಪಂಚಾಚಾರ್ಯ ಪರಂಪರೆ ಬೆಳೆದಂತೆ ಅವರ ಬಸವ ನಿಷ್ಠೆ ಕ್ಷೀಣಿಸಿತು.

(‘ಸಿದ್ದರಾಮ-ಬಸವಣ್ಣ-ಪಂಡಿತಾರಾಧ್ಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *