’12ನೇ ಶತಮಾನದಲ್ಲಿ ಮಹಿಳೆಯರು ಮುನ್ನೆಲೆಗೆ ಬಂದು ವಚನ ಬರೆದರು’

ಸಿಂಧನೂರು:

ನಗರದ ನೀಲಾಂಬಿಕ ಪ್ರಸಾದ ನಿಲಯದಲ್ಲಿ ಗುರುವಾರ ‘ವ್ಯಸನ ಮುಕ್ತ ಬದುಕಿಗಾಗಿ ವಚನ ಶ್ರವಣ’ 8ನೇ ದಿನದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶರಣತತ್ವ ಚಿಂತಕ ಅಶೋಕ ಬರಗುಂಡಿ ಅವರು ಮಾತನಾಡುತ್ತಾ, ಬಸವಾದಿ ಶರಣರು ರೂಪವಾಗಿ ಪುನಃ ಬರುವುದಿಲ್ಲ, ಆದರೆ ನಮ್ಮೊಳಗೆ ಬರಸಿಕೊಳ್ಳಬೇಕು. ಅಂತರಂಗಕ್ಕೆ ಇಳಿಸಿಕೊಳ್ಳಬೇಕು. ಅದುವೇ ಅಂತರಂಗದ ಸಾಧನೆ ಯಾಗುತ್ತದೆ. ನಾವು ಬೋಧಕರಾದರೆ ಸಾಲದು ಸಾಧಕರಾಗಬೇಕು.

ಜ್ಞಾನಕ್ಕೆ ಗಂಡು, ಹೆಣ್ಣು ಎಂದು ಭೇದ ಮಾಡಲು ಸಾಧ್ಯವೇ ಎಂದು ಗೊಗ್ಗವೆ ಎಂಬ ಶಿವಶರಣೆ ಪ್ರಶ್ನೆ ಮಾಡಿದ್ದಾಳೆ. ಜ್ಞಾನ ಸಾಧಕರ ಸ್ವತ್ತು ಅದು ಆಲಿಸಿಗಳ ಸ್ವತ್ತಲ್ಲ. 12ನೇ ಶತಮಾನದಲ್ಲಿ ಮಹಿಳೆಯರು ಬಸವಣ್ಣನವರ ನಾಯಕತ್ವದಲ್ಲಿ ಮುನ್ನೆಲೆಗೆ ಬಂದು ಅಕ್ಷರಭ್ಯಾಸ ಮಾಡಿ ಸ್ವತಃ ವಚನಗಳನ್ನು ಬರೆದು ತಮ್ಮ ಪ್ರತಿಭೆಯನ್ನು ಮೆರೆದರು. ಆ ಮೂಲಕ ಸಾಮಾಜಿಕ ಚಳುವಳಿಯನ್ನು ಕಟ್ಟಿ, ತಮ್ಮ ಬದುಕಿನ ಜೊತೆಗೆ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದರು.

ಸ್ತ್ರೀ ಸಮಾನತೆ ಎನ್ನುವುದು ಕೇವಲ 12ನೇ ಶತಮಾನಕ್ಕೆ ಮಾತ್ರ ಸೀಮಿತವಾಯಿತು. ಬರ ಬರುತ್ತಾ ಮಹಿಳೆ ಪುನಃ ತನ್ನ ಸ್ವಾತಂತ್ರವನ್ನು ಕಳೆದುಕೊಂಡಳು. ನಮಗೆ ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದರೂ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ಭಾಷಣದಲ್ಲಿ ಮಾತನಾಡುತ್ತೇವೆ ಆದರೆ ಮನೆಯಲ್ಲಿ ತಾಯಿಗೆ, ಹೆಂಡತಿಗೆ, ಮಗಳಿಗೆ, ಸೊಸೆಯಂದಿರಿಗೆ ಇವತ್ತಿಗೂ ಗೌರವ ಕೊಡುವುದನ್ನು ಕಾಣುತ್ತಿಲ್ಲ. ಅವಳಿಗೂ ಒಂದು ಸ್ವಂತ ವ್ಯಕ್ತಿತ್ವ ಇದೆ ಎಂದು ನಾವು ಕಲ್ಪಿಸಿಕೊಳ್ಳುತ್ತಿಲ್ಲ.

ಪುರುಷನೇ ಶ್ರೇಷ್ಠ ಸ್ತ್ರೀ ಕನಿಷ್ಠ ಎಂದು ಭಾವಿಸಿರುವುದೇ ಒಂದು ವ್ಯಸನ. ಹೆಣ್ಣು ಉತ್ತುವಳು, ಬಿತ್ತುವಳು, ಅಕ್ಕಡಿ ಹಾಕುವಳು, ರಾಶಿ ಮಾಡುವಳು, ಅಡುಗೆ ಮಾಡುವಳು, ಆದರೆ ರೊಕ್ಕದ ಚೀಲ ತುಂಬುವುದು ಮಾತ್ರ ಗಂಡಸಿಗೆ.

ಶೂದ್ರನ ಹೆಂಡತಿಯಷ್ಟೇ ಶೂದ್ರಳಲ್ಲ ಜಗತ್ತಿನ ಎಲ್ಲಾ ಸ್ತ್ರೀಯರು ಶೂದ್ರರೇ ಎಂದು ಸನಾತನ ಧರ್ಮಶಾಸ್ತ್ರ ಹೇಳುತ್ತದೆ. ಅಂದರೆ ಸ್ತ್ರೀ ಅಸಮಾನತೆ ಮತ್ತು ಚಾತುರ್ವರ್ಣ ಪದ್ಧತಿ ಇನ್ನೂ ಕೂಡ ಅಘೋಷಿತವಾಗಿ ಜೀವಂತವಾಗಿದೆ. ಭಾವನಾತ್ಮಕವಾಗಿ ನೋಡಲಾಗಿ ನಮ್ಮೊಳಗಿನ ಆತ್ಮಕ್ಕೆ ಲಿಂಗ ಭೇದವಿಲ್ಲ.

ಬಸವಾದಿ ಶರಣರು ಲಿಂಗ ಭೇದ ಇಲ್ಲದೆ ಇಷ್ಟಲಿಂಗವನ್ನು ಕೊಟ್ಟರು. ಇದು ಸರ್ವಸಮಾನತೆಯ ಸಂಕೇತವೆಂದು ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಡಾ. ರಾಜಶೇಖರ ನಾರನಾಳ, ಬಸವಂತರಾಯಗೌಡ ದಿದ್ದಿಗೆ, ಗಂಗಮ್ಮ ಪಿ. ವೀರಭದ್ರಪ್ಪ, ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಬಸಪ್ಪ ಸಾಹುಕಾರ ಮಾತನಾಡಿದರು. ಬಸಮ್ಮ ತಾಳಿಕೋಟೆ ಪ್ರಾರ್ಥಿಸಿದರು. ಸ್ವಾಗತವನ್ನು ಮಲ್ಲಪ್ಪ ಮುಖ್ಯ ಗುರುಗಳು ಕುರುಕುಂದ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹನುಮನ ಗೌಡ ಕಾಸರೆಡ್ಡಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಕ್ಕಿಂತ ಹೆಚ್ಚು ಶರಣ ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *