ಕೊಪ್ಪಳ ಜಿಲ್ಲೆ ಬಸವಶಕ್ತಿ ಶಿಬಿರ: ಮೊದಲನೇ ದಿನದ ವರದಿ
ತಾವರಗೇರಾ
ತಾವರಗೇರಾದ ಬುದ್ಧವಿಹಾರದಲ್ಲಿ ನಡೆದ ಎರಡು ದಿನಗಳ ಬಸವಶಕ್ತಿ ಶಿಬಿರ ರವಿವಾರ ಸಮಾರೋಪಗೊಂಡಿತು.
ನಾಡಿನಾದ್ಯಂತ ಸಕ್ರಿಯವಾಗಿರುವ ಬಸವ ಸಂಘಟನೆಗಳಿಗೆ, ಬಸವ ಕಾರ್ಯಕರ್ತರಿಗೆ ರಾಜಕೀಯ ಚಿಂತನೆಯ ವೇದಿಕೆಯಾಗಿ ಈ ಶಿಬಿರಗಳು ನಡೆಯುತ್ತಿವೆ.
ಗಂಭೀರವಾದ ಚರ್ಚೆಗೆ ಅವಕಾಶ ಮಾಡಿಕೊಡಲು ಆಯ್ದ ಶಿಬಿರಾರ್ಥಿ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಮಾತ್ರ ಬಸವ ಶಕ್ತಿ ಶಿಬಿರಗಳಿಗೆ ಆಹ್ವಾನಿಸಲಾಗುತ್ತಿದೆ.
ಕೊಪ್ಪಳ ಜಿಲ್ಲೆ ಶಿಬಿರದಲ್ಲಿ ಡಾ. ಸಂಗಮೇಶ ಕಲಹಾಳ ಸ್ವಾಗತಿಸಿದರೆ, ಪ್ರೊ ಟಿ ಆರ್ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಣಮೇಶ ಕಲ್ಮಂಗಿ ಕಾರ್ಯಕ್ರಮ ನಿರೂಪಿಸಿದರು.



ಮೊದಲನೇ ಅಧಿವೇಶನದಲ್ಲಿ ಹೊಸಪೇಟೆಯ ಅಕ್ಕಿ ಮಲ್ಲಿಕಾರ್ಜುನ ಹಾಗೂ ಜಮಖಂಡಿಯ ರವಿ ಯಡಹಳ್ಳಿ ಲಿಂಗಾಯತರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ಹಾಗೂ ರಾಜಕೀಯ ದಾಳಿಯ ಮೇಲೆ ಮಾತನಾಡಿದರು.
6,000 ಸಾವಿರ ವರ್ಷಗಳಿಂದ ಈ ದೇಶದಲ್ಲಿ ನೆಲಮೂಲದ ಧರ್ಮ, ಸಂಸ್ಕೃತಿ, ಭಾಷೆಗಳ ಮೇಲೆ ಆಕ್ರಮಣ ನಡೆಯುತ್ತಿದೆ.
2023ರ ನಂತರ ಲಿಂಗಾಯತ ಧರ್ಮದ ಮೇಲೆ ನಿರಂತರ ದಾಳಿ ಶುರುವಾಗಿದೆ. ಇದರ ಹಿಂದೆ ಲಿಂಗಾಯತ ನಾಯಕತ್ವ, ತತ್ವ ಎರಡನ್ನೂ ನಾಶಪಡಿಸುವ ಪ್ರಯತ್ನವಿದೆ.
ಹಳ್ಳಿ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಪ್ರತಿ ಜಿಲ್ಲೆಯಲ್ಲಿ 5,000 ಬಸವ ಕಾರ್ಯಕರ್ತರ ಪಡೆ ಕಟ್ಟುವುದೇ ಇದಕ್ಕೆ ಪರಿಹಾರ, ಎಂದು ಅಕ್ಕಿ ಮಲ್ಲಿಕಾರ್ಜುನ ಹೇಳಿದರು.


ನಂತರ ಮಾತನಾಡಿದ ರವಿ ಯಡಹಳ್ಳಿ 2017-18ರ ಲಿಂಗಾಯತ ಧರ್ಮದ ರ್ಯಾಲಿಗಳ ನಂತರ ಬೆಳೆಯುತ್ತಿರುವ ಜಾಗೃತಿ ವೈದಿಕರಿಗೆ ಸಮಸ್ಯೆಯಾಗಿದೆ. ಅದಕ್ಕೆ ಅವರು ಕನ್ನೇರಿ ಸ್ವಾಮಿಯಂತವರನ್ನು ಮುಂದೆ ಬಿಟ್ಟು ಲಿಂಗಾಯತರ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ.
ಇಂತಹ ಯಾವುದೇ ಆಕ್ರಮಣ ಎದುರಿಸುವ ಶಕ್ತಿ ವಚನ ಸಾಹಿತ್ಯದಲ್ಲಿದೆ. ಆದರೆ ಎಲ್ಲರೂ ನಾವು ಸ್ಪಷ್ಟವಾಗಿ ಲಿಂಗಾಯತರು ಎಂದು ಹೇಳುವ ತನಕ, ಮಕ್ಕಳಲ್ಲಿ ಬಸವಶಕ್ತಿ ಮೂಡಿಸುವ ತನಕ ಲಿಂಗಾಯತದ ಮೇಲೆ ದಾಳಿ ನಿಲ್ಲುವುದಿಲ್ಲ, ಎಂದು ಹೇಳಿದರು.
ಇಂದು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟ ತೀವ್ರವಾಗುತ್ತಿದ್ದರೂ ಅದರ ಬಗ್ಗೆ ಸ್ಪಷ್ಟವಾಗಿ, ಸರಳವಾಗಿ ಜನಸಾಮಾನ್ಯರಿಗೆ ನಿರೂಪಿಸುವ ಅಗತ್ಯವಿದೆ. ಈ ವಿಷಯದ ಮೇಲೆ ಹಗರಿಬೊಮ್ಮನಹಳ್ಳಿಯ ಡಾ. ಅಕ್ಕಿ ಬಸವೇಶ ಹಾಗೂ ಸಿಂಧನೂರಿನ ಪಿ ರುದ್ರಪ್ಪ ಮಾತನಾಡಿದರು.


ಕೊಲ್ಲುವ ಭಾಷೆಯ ತಿರಸ್ಕರಿಸಿ ಶರಣರು ಗೆಲ್ಲುವ ಭಾಷೆ ಕಲಿಸಿದರು. ಅವರು ಕಟ್ಟಿದ ಲಿಂಗಾಯತ ತಾಯ್ತನದ ಧರ್ಮ. ಅದನ್ನು ಜನರಿಗೆ ತಲುಪಿಸಬೇಕಾದರೆ ಅವರಲ್ಲಿ ವೈಚಾರಿಕ ಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ, ಐತಿಹಾಸಿಕ ಪ್ರಜ್ಞೆ ಮೂಡಿಸಬೇಕು. ಜೊತೆಗೆ ಪ್ರತಿಯೊಬ್ಬರೂ 24/7 ಲಿಂಗಾಯತರಾಗಿರಬೇಕು ಅಂದರೆ ಲಿಂಗಾಯತ ಪ್ರಜ್ಞೆ ಯಾವಾಗಲೂ ಜಾಗೃತವಾಗಿರಬೇಕು, ಎಂದು ಬಸವೇಶ ಹೇಳಿದರು.
ಲಿಂಗಾಯತ ಧರ್ಮಕ್ಕೆ ಭಕ್ತಿ, ವೈಚಾರಿಕತೆ ಎರಡೂ ಅಗತ್ಯವಿದೆ. ಭಕ್ತಿಯಿಲ್ಲದ ವೈಚಾರಿಕತೆ ಸ್ವೇಚ್ಚೆಯಾದರೆ, ವೈಚಾರಿಕತೆಯಿಲ್ಲದ ಭಕ್ತಿ ಮೌಢ್ಯವಾಗುತ್ತದೆ, ಎಂದು ರುದ್ರಪ್ಪ ಹೇಳಿದರು.
ಲಿಂಗಾಯತ ಧರ್ಮ ಪರಿಚಯ ಮಾಡಿಕೊಡುವಾಗ ಲಿಂಗಪೂಜೆ, ವಿಭೂತಿ, ಗುರುಲಿಂಗಜಂಗಮಗಳ ಬಗ್ಗೆ ಹೇಳಿ. ಆರಂಭದಲ್ಲಿಯೇ ಕುಂಕುಮ ಬೇಡ, ಇತರ ದೇವರುಗಳು ಬೇಡ ಎಂದರೆ ಜನ ಸ್ವೀಕರಿಸುವುದಿಲ್ಲ, ಎಂದು ಅಭಿಪ್ರಾಯ ಪಟ್ಟರು.
ಲಿಂಗಾಯತ ಧರ್ಮ ಬೆಂಬಲಿಸುವಂತೆ ರಾಜಕಾರಣಿಗಳ ಮೇಲೆ ಒತ್ತಡ ತರುವ ಬಗ್ಗೆ ಹೊಸಪೇಟೆಯ ಟಿ ಎಚ್ ಬಸವರಾಜ್ ಹಾಗೂ ಕೊಪ್ಪಳದ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿದರು.


ರಾಜಕಾರಣಿಗಳ ಮೇಲೆ ಒತ್ತಡ ತರಲು ಸಂಖ್ಯಾ ಬಲವಿರಬೇಕು. ಕನಿಷ್ಠ 30-40 ಜನರ ತಂಡ ರಚಿಸಿಕೊಂಡು ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು, ಟಿ ಎಚ್ ಬಸವರಾಜ್ ಹೇಳಿದರು.
ಈ ವಿಷಯದಲ್ಲಿ MLA, MP, MLC ಹಾಗೂ ಇತರ ಜಿಲ್ಲಾ, ರಾಜ್ಯ ರಾಜಕಾರಣಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕು, ಎಂದು ಕರೆ ಕೊಟ್ಟರು.
ಅಲ್ಲಮಪ್ರಭು ಬೆಟ್ಟದೂರ ಅವರು ಚಳುವಳಿಯಿಲ್ಲದೆ ಸಮಾಜದಲ್ಲಿ ಏನ್ನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
‘ಒಂದು ದೇಶ, ಒಂದು ಧರ್ಮ’ ಎನ್ನುವವರು ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವುದಿಲ್ಲ. ನೀವೇ ಪ್ರತ್ಯೇಕ ಧರ್ಮ ಎಂದು ಘೋಷಿಸಿಕೊಂಡು ಮುಂದುವರೆಯಿರಿ.
ಎಲ್ಲಾ ಒಳ ಪಂಗಡಗಳನ್ನು ಸೇರಿಸುವ ಪ್ರಯತ್ನದಂತೆ ದಲಿತ, ಹಿಂದುಳಿದ ವರ್ಗಗಳನ್ನೂ ಜೊತೆ ಮಾಡಿಕೊಳ್ಳಿ. ಅವರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲವಿದೆ, ಎಂದು ಹೇಳಿದರು.
ಚುನಾವಣೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗುವುದರ ಬಗ್ಗೆ ಸಿಂಧನೂರಿನ ಬಸಲಿಂಗಪ್ಪ ಬಾದರ್ಲಿ ಹಾಗೂ ಹೊಸಪೇಟೆಯ ಬಸವರಾಜ ಮಾವಿನಹಳ್ಳಿ ಮಾತನಾಡಿದರು.


ಧರ್ಮ ಮಾನ್ಯತೆ ಪಡೆಯಲು ಹಾಗೂ ನೂತನ ಅನುಭವ ಮಂಟಪದ ನಿರ್ವಹಣೆ, ರಕ್ಷಣೆಗಳಂತಹ ಕಾರ್ಯಗಳಿಗೆ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕು. ಅದಕ್ಕೆ ಚುನಾವಣೆ ಸಮಯದಲ್ಲಿ ಬೂತ್ ಮಟ್ಟದಲ್ಲಿ ಮತಗಳನ್ನು ಕ್ರೋಡೀಕರಿಸುವ ಅಗತ್ಯವಿದೆ.
ಸ್ಥಳೀಯವಾಗಿ ಕೆಲವಾದರೂ ಮತಗಳನ್ನು ನಿಯಂತ್ರಿಸದಿದ್ದರೆ ನಮ್ಮ ಬೇಡಿಕೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಮಗೆ ಸೈದ್ಧಾಂತಿಕವಾಗಿ ಪೂರಕವಾಗಿರುವ ಪಕ್ಷಗಳ ಜೊತೆ
ಗಟ್ಟಿ ಸಂಬಂಧ ಬೆಳೆಸಿಕೊಳ್ಳಬೇಕು, ಎಂದು ಬಸಲಿಂಗಪ್ಪ ಬಾದರ್ಲಿ ಹೇಳಿದರು.
ನಂತರ ಮಾತನಾಡಿದ ಬಸವರಾಜ ಮಾವಿನಹಳ್ಳಿ ಬಹುತೇಕ ಕ್ಷೇತ್ರಗಳಲ್ಲಿ ಶೇಕಡಾ 30ರಷ್ಟು ಮತಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಬಸವ ಸಂಘಟನೆಗಳಿಗಿದೆ, ಎಂದು ಹೇಳಿದರು.
ಇದಕ್ಕಾಗಿ ನಾವು ದಲಿತ, ಕಾರ್ಮಿಕ, ಮಹಿಳಾ, ಹಿಂದುಳಿದ ವರ್ಗಗಳ ಸಂಘಟನೆಗಳ ಜೊತೆ ನೆಟ್ವರ್ಕ್ (network) ಮಾಡಿಕೊಳ್ಳಬೇಕು. ಇವರನ್ನೆಲ್ಲಾ ಒಟ್ಟಿಗೆ ತರುವ ಸಾಮರ್ಥ್ಯ ಬಸವಣ್ಣನವರಲ್ಲಿದೆ ಎಂದು ಹೇಳಿದರು.
ಬಸವ ಸಂಘಟನೆಗಳು ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆದರೆ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ಇದು ಸಾಧ್ಯ.
“ಬರೀ ಚುನಾವಣೆ ಸಮಯದಲ್ಲಿ ಜನರ ಬಳಿ ಹೋಗಬಾರದು. ಅವರಿಗೆ ಪೊಲೀಸ್, ಸರಕಾರಿ ಕಚೇರಿಗಳಲ್ಲಿ ಕೆಲಸವಿದ್ದಾಗ ನೆರವಾಗಿ ಅವರ ವಿಶ್ವಾಸಗಳಿಸಿಕೊಳ್ಳಬೇಕು,” ಎಂದು ತಿಳಿಸಿದರು.


ಒಳ್ಳೆಯ ಸಂದೇಶ ರವಾನಿಸಿದ್ದಿರಿ.ಇದು ಅವಶ್ಯಕತೆ ಇದೆ. ಜೈ ಬಸವ