‘40,000 ಕೃತಿ ಓದಿ ಅತ್ಯಮೂಲ್ಯ ಕೃತಿ ರಚಿಸಿದ ನಿಜಗುಣ ಶಿವಯೋಗಿಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

ನಿಜಗುಣ ಶಿವಯೋಗಿಗಳು ಮೊದಲು ಚಾಮರಾಜನಗರ ಸಮೀಪದ ಒಂದು ರಾಜ್ಯದ ರಾಜನಾಗಿದ್ದವರು. ಅಂದಿನ ಕಾಲಕ್ಕೆ ೭೨ ಕೋಟಿ ಆದಾಯ ಹೊಂದಿದ್ದ ಮಹಾರಾಜರಾಗಿದ್ದರು.

ಇವರೊಬ್ಬ ಜಂಗಮಪ್ರೇಮಿ. ಜಂಗಮರೊಬ್ಬರನ್ನು ಅರಮನೆಗೆ ಕರೆಸಿ ಅವರಿಂದ ಆಗಾಗ ಪೂಜಾ ಮತ್ತು ಪ್ರಸಾದವನ್ನು ಉಣಬಡಿಸಿ ಕೃತಾರ್ಥರಾಗುತ್ತಿದ್ದರು. ಇದು ತನ್ನ ಹೆಂಡತಿಗೆ ಇಷ್ಟವಾಗುತ್ತಿರಲಿಲ್ಲ. ಇವರ ಜಂಗಮಪ್ರೀತಿ ಅತಿಯಾಯಿತೆಂದು ತಿಳಿದು ಒಂದುದಿನ ಮಹಾಸ್ವಾಮಿಗಳು ಬಂದಾಗ ಎಂದಿನಂತೆ ಪೂಜಾವಿಧಾನಗಳು ಮುಗಿದ ನಂತರ ಪತ್ನಿ ಅವರಿಗೆ ಮುರ‍್ನಾಲ್ಕು ದಿನದ ಹಿಂದೆ ಮಾಡಿದ ಅಡುಗೆಯನ್ನು ಬಡಿಸಿ ತನ್ನ ಪತಿಗೆ ಬಿಸಿಯಾದ ಪದಾರ್ಥವನ್ನು ನೀಡಿದ ಪ್ರಸಂಗದಲ್ಲಿ, ಗುರುಗಳು ತಮ್ಮ ತಟ್ಟೆಯ ಪ್ರಸಾದವನ್ನು ಮುಟ್ಟಿ, ಆ ತಟ್ಟೆಯಿಂದ ಒಂದಷ್ಟು ಪ್ರಸಾದವನ್ನು ಭಕ್ತರಿಗೆ ನೀಡುವುದು ವಾಡಿಕೆ. ಅದರಂತೆ ಗುರುಗಳು ತಮ್ಮ ಪ್ರಸಾದ ತಟ್ಟೆಯಲ್ಲಿನ ಒಂದಷ್ಟು ಪ್ರಸಾದವನ್ನು ರಾಜರ ತಟ್ಟೆಗೆ ನೀಡಿದಾಗ ಅದರಿಂದ ವಾಸನೆ ಬರುತ್ತಿರುವುದನ್ನು ತಿಳಿದು ಸಿಟ್ಟಿಗೆದ್ದ ರಾಜ ಪ್ರಸಾದದಲ್ಲಿ ತಾರತಮ್ಯವೆಸಗಿದ ಪರಿಣಾಮ ದೊಡ್ಡ ಪ್ರಮಾದವಾಯಿತೆಂದು ಅಂದಿನಿಂದ ರಾಜವೈಭವ ಬಿಟ್ಟು ಹೊರನಡೆಯುತ್ತಾರೆ. ಮುಂದಿನದು ಇತಿಹಾಸ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಪೂಜ್ಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ರಾಜನಾಗಿದ್ದವರು ನಿಜಗುಣರಾದ ಹಿಂದಿನ ಐತಿಹ್ಯವನ್ನು ಎಳೆಎಳೆಯಾಗಿ ತಮ್ಮ ಪ್ರಚನದ ಮೂಲಕ ನೆರೆದವರಿಗೆ ತಿಳಿಸಿದರು.

ಶ್ರೀಗಳವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ನಿಜಗುಣ ಶಿವಯೋಗಿಗಳ ಕುರಿತು ಮಾತನಾಡುತ್ತ, ಮನೆ ಬಿಟ್ಟ ರಾಜ ಮುಂದಿನ ದಾರಿ ಕಾಣದೆ ಹಸಿವಿನಿಂದ ಕಂಗೆಟ್ಟು ದಾರಿ ಮಧ್ಯೆ ಹೊಲದಲ್ಲಿ ಕೆಲಸ ಮಾಡುವವರು ಮಧ್ಯಾಹ್ನದ ಬುತ್ತಿ ಬಿಚ್ಚಿ ಅಂಗೈಯಲ್ಲಿ ರೊಟ್ಟಿ ತಿನ್ನುತ್ತಿದ್ದುದನ್ನು ನೋಡಿ ತಟ್ಟೆ ಇಲ್ಲದೆ ಊಟ ಮಾಡಬಹುದೆಂದು, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯಲ್ಲಿ ಅವರು ತನ್ನ ಕೈಬೊಗಸೆಯಿಂದ ನೀರು ಕುಡಿಯುತ್ತಿದ್ದನ್ನು ಕಂಡು ತಂಬಿಗೆ ಇಲ್ಲದೆ ನೀರು ಕುಡಿಯಬಹುದೆಂದು, ಹಾಗೆ ಅರಮನೆಯಲ್ಲಿ ಶಯನಕ್ಕಾಗಿ ವಿಶೇಷ ಮಂಚ ಹಾಸಿಗೆ ಬಳಸುತ್ತಿದ್ದ ರಾಜ, ಅಲ್ಲಿ ರೈತನೊಬ್ಬ ಮರದ ಕೆಳಗೆ ಬರೀ ನೆಲದ ಮೇಲೆ ತನ್ನ ಕೈಯನ್ನೇ ತಲೆದಿಂಬಾಗಿ ಆನಿಕೆ ಮಾಡಿಕೊಂಡು ಮಲಗಿದ್ದನ್ನು ಕಂಡು ಓಹೋ ಯಾವುದೇ ಮಂಚ ಹಾಸಿಗೆ ದಿಂಬು ಇಲ್ಲದೇ ಮಲಗಬಹುದೆಂದು ಅರಿಯುತ್ತಾರೆ.

ಹೀಗೆ ಅರಮನೆಯ ಐಷಾರಾಮಿ ಜೀವನ ತ್ಯಜಿಸಿ ಸಾಮಾನ್ಯರಂತೆ ಬದುಕಬಹುದೆಂದು ಅರಿತು ಮುಂದೆ ೪೦ ಸಾವಿರ ಗ್ರಂಥಗಳನ್ನು ಅಧ್ಯಯನ ಮಾಡಿ ಅಮೂಲ್ಯ ಗ್ರಂಥಗಳನ್ನು ರಚಿಸುತ್ತಾರೆ. ಅವುಗಳಲ್ಲಿ ಕೈವಲ್ಯ ಪದ್ಧತಿ ಎನ್ನುವ ಕೃತಿ ಮೋಕ್ಷಕ್ಕೆ ದಾರಿಯನ್ನು ಕಂಡುಕೊಳ್ಳುವ ದಾರಿ ಇದೆ ಎಂದರು.

ಗರಗದ ಮಡಿವಾಳಪ್ಪನವರು ಒಮ್ಮೆ ಸಿದ್ಧಾರೂಢರನ್ನು ಏನೋ ಸಿದ್ಧ ಭುಜದ ಮೇಲೆ ಯಾವುದೋ ಗಂಟು ಹೊತ್ತಿದೀಯಾ ಅದರಲ್ಲೇನಿದೆ ಎಂದು ಪ್ರಶ್ನಿಸುತ್ತಾರೆ. ಸಿದ್ಧಾರೂಢರು ಗಂಟು ಬಿಚ್ಚಿ ತೋರಿಸುತ್ತಾರೆ. ಅದನ್ನು ನೋಡುತ್ತ ನೋಡುತ್ತ ಹೋದ ಮಡಿವಾಳಪ್ಪನವರು ಆಶ್ಚರ್ಯಚಕಿತರಾಗಿ ಎಂತಹ ಅದ್ಭುತ ಸಾಹಿತ್ಯವಿದೆ. ನಿಜಗುಣರ ಈ ಸಾಹಿತ್ಯ ಮೊದಲೇ ನನಗೆ ಸಿಕ್ಕಿದ್ದರೆ ೧೬ ವರ್ಷ ಕಾಶಿಯಲ್ಲಿ ಕಳೆಯುವುದನ್ನೇ ಬಿಡುತ್ತಿದ್ದೆ. ಎಂತಹ ಕೆಲಸವಾಯಿತೆಂದು ನಿಜಗುಣರ ಸಾಹಿತ್ಯವನ್ನು ಪ್ರಶಂಸೆ ಮಾಡಿದ ಪ್ರಸಂಗವನ್ನು ಇತರ ಸಂಗತಿಗಳನ್ನು ತಮ್ಮದೇ ಆದ ಉತ್ತರ ಕರ್ನಾಟಕದ ಪ್ರವಚನ ಶೈಲಿಯಲ್ಲಿ ಹೇಳುತ್ತಾ ಸಾಗಿದಾಗ ಸೇರಿದ ಶ್ರೋತೃಗಳು ಮಂತ್ರಮುಗ್ಧರಾಗಿ ಆಲಿಸಿದರು.

ನಿಜಗುಣ ಶಿವಯೋಗಿಗಳ ಬಗೆಗೆ ವಿಷಯಾವಲೋಕನ ಮಾಡಿದ ಕನ್ನಡ ಭಾಷಾ ಶಿಕ್ಷಕರಾದ ಡಾ. ಮಮತಾ ಆರ್. ಮಾತನಾಡುತ್ತ, ನಿಜಗುಣ ಶಿವಯೋಗಿಗಳು ಕನ್ನಡದ ಆಧ್ಯಾತ್ಮಿಕ ಹಾಗೂ ತತ್ವಪದ ಸಾಹಿತ್ಯ ಪರಂಪರೆಯ ಪ್ರಮುಖ ಚಿಂತಕರಲ್ಲೊಬ್ಬರು. ಅವರ ಸಾಹಿತ್ಯ ಕೇವಲ ಭಕ್ತಿ ಅಭಿವ್ಯಕ್ತಿಯಾಗಿರದೆ ಮನುಷ್ಯನ ಅಂತರಂಗವನ್ನು ವಿಶ್ಲೇಷಿಸುವ ತತ್ವಚಿಂತನೆಯಾಗಿದೆ.

ಜೀವನದ ನಶ್ವರತೆ, ಆತ್ಮಜ್ಞಾನ ಮತ್ತು ಪರಮಸತ್ಯದ ಅನ್ವೇಷಣೆ ಅವರ ಚಿಂತನೆಯ ಪ್ರಮುಖ ವಿಷಯಗಳಾಗಿವೆ. ಭಕ್ತಿ ಮತ್ತು ಜ್ಞಾನ ಪರಸ್ಪರ ವಿರೋಧಿಗಳಲ್ಲ ಅವು ಆತ್ಮೋನ್ನತಿಯ ಎರಡು ಮಾರ್ಗಗಳು. ಮನುಷ್ಯ ತನ್ನೊಳಗಿನ ಅಜ್ಞಾನವನ್ನು ನಿವಾರಿಸಿಕೊಂಡಾಗ ಮಾತ್ರ ನಿಜವಾದ ಮುಕ್ತಿಯನ್ನು ಪಡೆಯಲು ಸಾಧ್ಯ. ಸಾಮಾಜಿಕ ಅಸಮಾನತೆ ಅಹಂಕಾರ ಮತ್ತು ಮೂಢನಂಬಿಕೆಗಳ ವಿರುದ್ಧ ಅವರ ವಿಚಾರಧಾರೆಗಳು ಚಿಂತನೆಗೆ ಪ್ರೇರೇಪಿಸುತ್ತವೆ ಎಂದರು.

ನಿಜಗುಣ ಶಿವಯೋಗಿಗಳ ಕೃತಿಗಳಲ್ಲಿ ಸರಳ ಭಾಷೆಯ ಮೂಲಕ ಗಂಭೀರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಕಂಡುಬರುತ್ತದೆ.

ಭೌತಿಕ ಯಶಸ್ಸಿನ ಬೆನ್ನತ್ತಿರುವ ಆಧುನಿಕ ಮನುಷ್ಯನಿಗೆ ಅವರ ವೈರಾಗ್ಯ ಚಿಂತನೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಅವರ ಸಂದೇಶಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ.

ಕಾಲ ಬದಲಾದರೂ ಅವರ ಮೂಲ ಸಂದೇಶವನ್ನು ಕಳೆದುಕೊಳ್ಳದ ಶಾಶ್ವತ ಚಿಂತನೆಯಾಗಿದೆ. ಅವರ ತತ್ವಪದಗಳು ವ್ಯಕ್ತಿಯ ಒಳಜಗತ್ತನ್ನು ಪ್ರಶ್ನಿಸುವುದರ ಜತೆಗೆ ಸಮಾಜದ ನೈತಿಕ ಸ್ಥಿತಿಯನ್ನೂ ವಿಮರ್ಶಿಸುತ್ತವೆ. ನಿಜಗುಣರ ಸಾಹಿತ್ಯವನ್ನು ಕೇವಲ ಧಾರ್ಮಿಕ ದೃಷ್ಟಿಯಿಂದ ನೋಡುವುದಕ್ಕಿಂತ ತಾತ್ವಿಕ ಮತ್ತು ಸಾಮಾಜಿಕ ದೃಷ್ಟಿಯಿಂದಲೂ ಅಧ್ಯಯನ ಮಾಡಬೇಕಿದೆ.

ಇಂದಿನ ಯುವಜನರಲ್ಲಿ ಮೌಲ್ಯಾಧಾರಿತ ಜೀವನದ ಅರಿವು ಮೂಡಿಸಲು ಅವರ ವಿಚಾರಗಳು ಪರಿಣಾಮಕಾರಿ ಸಾಧನವಾಗಬಲ್ಲವು. ಅವರು ವಿವೇಕ ಚಿಂತಾಮಣಿ, ಕೈವಲ್ಯ ಪದ್ಧತಿ, ಪರಮಾರ್ಥ ಪ್ರಕಾಶಿಕೆ, ಪರಮಾರ್ಥ ಗೀತೆ, ಪರಮಾನುಭವ ಬೋಧೆ, ಅನುಭವಸಾರ ಹಾಗೂ ಅರವತ್ಮೂರು ತ್ರಿಪದಿಯಲ್ಲಿ ನೀತಿಬೋಧೆ ಸಾರಿದ್ದಾರೆ. ಈ ಕೃತಿಗಳಲ್ಲಿ ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕುಟುಂಬ ಚಿಂತನೆಯಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಸಾಗಬೇಕೆಂಬ ಕಳಕಳಿಯ ಅಂಶಗಳು ಅಡಕವಾಗಿವೆ ಎಂದು ಹೇಳಿದರು.

ಶಿಕ್ಷಕ ಕಸವನಹಳ್ಳಿ ಶಿವಣ್ಣ ಮಾತನಾಡಿ, ಬುದ್ಧ ಬಸವ ಹಾಗೂ ಅಂಬೇಡ್ಕರ್‌ರ ತತ್ವಗಳು ಜೀವಕಾರುಣ್ಯ ಹೊಂದಿದ್ದು ಅಂತಹ ಮಾರ್ಗ ಅನುಸರಿಸಬೇಕಿದೆ. ವೈದಿಕ ಸಂಸ್ಕೃತಿಗೆ ಪರ್ಯಾಯವಾಗಿ ನಾವು ನಮ್ಮ ಗ್ರಾಮದಲ್ಲಿ ಅವೈದಿಕ ಆಚರಣೆಗಾಗಿ ಮಠವೊಂದನ್ನು ಕಟ್ಟುತ್ತಿದ್ದೇವೆ. ಲಿಂಗಾಯತ ಸ್ವತಂತ್ರ ಧರ್ಮ ಜಾರಿಯಾಗಬೇಕು ಅದಕ್ಕಾಗಿ ಈ ಹಿಂದೆ ಆ ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿಕೊಂಡರು. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮೂರಿನ ಜನರಿಗೆ ಸಂತಸ ತಂದಿದೆ ಎಂದರು.

ಸಮಾರಂಭದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಇದ್ದರು.

ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಠದ ಅಕ್ಕಪಕ್ಕದ ಹಾಗೂ ವಿವಿಧ ಗ್ರಾಮಗಳ ಭಕ್ತರು ಆಗಮಿಸಿದ್ದರು. ಬೃಹನ್ಮಠ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಕಲಾವಿದ ಉಮೇಶ ಪತ್ತಾರ ನಿಜಗುಣ ಶಿವಯೋಗಿಗಳ ತತ್ವಗೀತೆಗಳನ್ನು ಹಾಡಿದರು. ವಿದ್ಯಾರ್ಥಿನಿ ಬಿಂದು ಪಿ.ಸಿ. ಸ್ವಾಗತಿಸಿದರು. ಎನ್. ಸೌಮ್ಯ ನಿರೂಪಿಸಿದರು. ಪ್ರಾಚಾರ್ಯ ಪಿ.ಎಂ.ಜಿ. ರಾಜೇಶ್ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಒಳ್ಳೆಯ ಮಹತ್ವದ ವಿಷಯಗಳ ಪರಿಚಯ ಆಯಿತು.ಶರಣು ಶರಣಾರ್ಥಿ

Leave a Reply

Your email address will not be published. Required fields are marked *