ಜಗತ್ತಿನ ಶಾಂತಿ ಮತ್ತು ನೆಮ್ಮದಿಗೆ ಬಸವತತ್ವ ಅವಶ್ಯಕ

ಚಿಂಚೋಳಿ:

ಒತ್ತಡ ರಹಿತ ನೆಮ್ಮದಿಯ ಜೀವನ ಸಾಗಿಸಲು ಪ್ರತಿಯೊಬ್ಬರು ಬಸವ ತತ್ವವನ್ನು ಅರ್ಥೈಸಿಕೊಂಡು ಅದರ ಆಶಯದಂತೆ ಜೀವನ ಸಾಗಿಸಬೇಕು ಎಂದು ಶಿಕ್ಷಕ ಬಸವರಾಜ ಪ್ರಭಾ ಹೇಳಿದರು.

ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷಕಟ್ಟೆ ವತಿಯಿಂದ ಜರುಗಿದ ವಚನ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕುಟುಂಬ ವ್ಯವಸ್ಥೆಗಳು ಅಧಃಪತನದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಬಸವತತ್ವ ನಮಗೆ ಅತ್ಯಂತ ಅವಶ್ಯಕವಾಗಿದೆ.

ಬಸವಣ್ಣನವರ ಸಪ್ತಶೀಲಗಳಂತೆ ಜನಮಾನಸ ನಡೆದುಕೊಂಡರೆ ಸುಖೀ ಕುಟುಂಬಗಳನ್ನು, ಸುಖೀ ಸಂಸಾರವನ್ನು ಹಾಗೂ ಸುಖೀ ಜಗತ್ತನ್ನು ನಿರ್ಮಾಣ ಮಾಡಬಹುದು.

ಜಗತ್ತಿಗೆ ಇಂದು ಅತ್ಯಗತ್ಯವಾಗಿರುವುದು ಶಾಂತಿ ಮತ್ತು ನೆಮ್ಮದಿ. ಅದು ಬಸವತತ್ವದ ಮೂಲಕ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇನ್ನೋರ್ವ ಉಪನ್ಯಾಸಕ ಸಂತೋಷ ಪತಂಗೆ ಅವರು ಮಾತನಾಡಿ, ಕಲ್ಯಾಣ ಕ್ರಾಂತಿಗೆ ಕಾರಣವಾದ ಜಾತೀಯತೆ, ಮೂಢನಂಬಿಕೆ ಸೇರಿದಂತೆ ಕ್ರಾಂತಿಯ ಚರಿತ್ರೆಯನ್ನು ಅತ್ಯಂತ ಅರ್ಥಗರ್ಭಿತವಾಗಿ ವಿವರಿಸಿದರು.

ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶರಣರೆಡ್ಡಿ ಮೊಗಲಪ್ಪನವರ ಮಾತನಾಡಿ, ಬಸವಣ್ಣನವರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ಇದು ಅತ್ಯಂತ ಪ್ರಯಾಸಕರವಾದರೂ ಮಹತ್ವದ ಕೆಲಸವಾಗಿದೆ. ಜನರನ್ನು ಆಧ್ಯಾತ್ಮಿಕ ಮಾರ್ಗದತ್ತ ಕೊಂಡೊಯ್ಯುವ ಬಹುದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ ರಗಟೆ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕನಕಪುರ ಗ್ರಾಮದ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ಧಲಿಂಗ ರಾಯನ, ಹುಡದಳ್ಳಿ ಗ್ರಾಮದ ಲಿಂಗಾಯತ ಸಮಾಜದ ಅಧ್ಯಕ್ಷ ದಶರಥ ಬಿರಾದಾರ ಭಾಗವಹಿಸಿದ್ದರು.

ಬಸವ ಪರುಷಕಟ್ಟೆ ಅಧ್ಯಕ್ಷ ಆನಂದಕುಮಾರ ಬೇಡಸೂರೆ, ಉಪಾಧ್ಯಕ್ಷ ಶಿವಮೂರ್ತಿ ಜಾಡರ, ಮಹೇಶಕುಮಾರ ಕೊಡಂಗಲ, ಶಿವಶರಣ ಕೊಡಂಗಲ್ಲ, ಶಿವಕುಮಾರ ಕೋಳ್ಕೂರ, ಶರಣಕುಮಾರ ನೇತಿ, ವೀರಶೆಟ್ಟಿ ದುಬಲಗುಂಡಿ, ಅಣವೀರಯ್ಯ ಮದರ್ಗಿ, ದಿಲೀಪ ಬೇಡಸೂರು, ನಾಗಶೆಟ್ಟಿ ಬೇಡಸೂರು, ಶಾಂತಪ್ಪ ದುಬಲಗುಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಿದ್ಯಾವತಿ ಮದರ್ಗಿಮಠ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಪೂಜಾ ಮದರ್ಗಿಮಠ ವಚನ ಸಂಗೀತ ನಡೆಸಿಕೊಟ್ಟರು.

ಕವಿತಾ ಜಾಡರ ನಿರೂಪಿಸಿದರು. ರೂಪಾ ರೆಡ್ಡಿ ಸ್ವಾಗತಿಸಿದರು. ನಂದಿನಿ ಬೇಡಸೂರು ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *