ಬಸವಣ್ಣನವರ ವಚನಗಳನ್ನು ಸುಟ್ಟು ಹಾಕಿದ್ದು ಏಕೆ: ಸತೀಶ ಜಾರಕಿಹೊಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಅಂಬೇಡ್ಕರ್ ಸಂವಿಧಾನ ತೆಗೆದು ಮನುಸ್ಮೃತಿ ತರುವ ಪ್ರಯತ್ನ ನಡೆಯುತ್ತಿದೆ

ಜಮಖಂಡಿ:

‘ಬಸವಣ್ಣವರ ವಚನಗಳಲ್ಲಿ ಇರುವ ತತ್ವಗಳನ್ನೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವರ ಎಲ್ಲ ಆಶಯಗಳನ್ನು ನೀಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.

ತಾಲ್ಲೂಕಿನ ಗೋಠೆ ಗ್ರಾಮದಲ್ಲಿ ರವಿವಾರ ಸತ್ಯಶೋಧಕ ಸಂಘ ತಾಲೂಕು ಘಟಕದ ವತಿಯಿಂದ ಸರ್ವಜಾತಿ-ಸರ್ವಧರ್ಮ ಸಹೋದರತ್ವ ಸಮಾವೇಶ, ಬುದ್ಧ-ಬಸವ-ಭೀಮ ಸಂಗಮ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ಮರೆಮಾಚುವ, ತಿರುಚುವ ಕೆಲಸ ಮೊದಲಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಮರೆಮಾಚಿದವರೇ ಇಂದು ಅವರನ್ನು ತಲೆಮೇಲೆ ಹೊತ್ತು ತಿರುಗುತ್ತಿದ್ದಾರೆ. ಬಸವಣ್ಣನವರನ್ನು ಇತಿಹಾಸದಿಂದ ಅಳಿಸಿಹಾಕಲು ಅವರೆಲ್ಲರ ವಚನಗಳನ್ನೇ ಸುಟ್ಟು ಹಾಕಿದ್ದು ಏಕೆ ಎಂದು ಪ್ರಶ್ನಿಸಿದರು.

ಸಂವಿಧಾನ ಬದಲಿಸಿ ಅಂಬೇಡ್ಕರ್ ಅವರನ್ನು ಇತಿಹಾಸದಿಂದ ಮರೆಮಾಚುವ ಷಡ್ಯಂತ್ರ ನಡೆದಿದೆ, ಅಂಬೇಡ್ಕರ್ ತತ್ವಾದರ್ಶಗಳ ವಿರುದ್ಧ ಮನುಸ್ಮೃತಿ ಕೆಲಸ ಮಾಡುತ್ತಿದೆ, ಸಂವಿಧಾನ ತೆಗೆದು ಮನುಸ್ಮೃತಿ ತರುವ ಪ್ರಯತ್ನ ನಡೆಯುತ್ತಿದೆ, ಈ ಹುನ್ನಾರವನ್ನು ತಾವೆಲ್ಲರೂ ವಿರೋಧಿಸಬೇಕು ಎಂದರು.

ನಾವು ಬದಲಾವಣೆ ತರಲು ಶ್ರಮಿಸುತ್ತಿದ್ದೇವೆ, ಬಸವಣ್ಣನವರ ತತ್ವಾದರ್ಶ, ಅಂಬೇಡ್ಕರ್ ಸಿದ್ಧಾಂತಗಳನ್ನು ನಾವು ಹೇಳುತ್ತೇವೆ. ಆದರೆ ಅದನ್ನು ಅನುಸರಿಸುವುದಿಲ್ಲ. ನಿಮ್ಮನ್ನು ಮನುಸ್ಮೃತಿ ಕಟ್ಟಿಹಾಕಿದೆ, ನಮ್ಮ ಜಾತಿಗಳ ಮಧ್ಯೆ ಜಗಳ ಹಚ್ಚುತ್ತಿದ್ದಾರೆ, ಆ ಜಗಳ ಹಚ್ಚುವವರ ಬಗ್ಗೆ ಮೊದಲು ನಾವು ಅರಿಯಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಮಾತನಾಡಿ, ’80 ವರ್ಷ ಕಳೆದರೂ ಸಮಾನತೆ ಸಾಧಿಸಲಾಗಿಲ್ಲ. ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಬೇಕಾಗಿದೆ. ನಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡಬಾರದು’ ಎಂದರು.

ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ಲಿಂಗಾಯತ ಅದು ಜಾತಿಯಲ್ಲ, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತರ ಧರ್ಮಿಯರು ಅಸ್ಪೃಶ್ಯತೆ ವಿರೋಧಿಸುವವರು, ಮಾನವೀಯ ಮೌಲ್ಯಗಳ ಪ್ರತಿಪಾದಕರು, ಜಾತಿ, ವರ್ಣ, ವರ್ಗಭೇದ, ಲಿಂಗತಾರತಮ್ಯ ಹೊಡೆದೊಡಿಸುವ ವಿಚಾರದವರಾಗಿದ್ದಾರೆ.

ಬಸವಾದಿ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ, ಬಸವಣ್ಣನ ಅನುಯಾಯಿಗಳಾಗಬೇಕಾದರೆ ಅವರ ವಿಚಾರಗಳು ನಮ್ಮ ಹೃದಯಕ್ಕೆ ಇಳಿಯಬೇಕು’ ಎಂದರು.

ವೇದಿಕೆಯಲ್ಲಿ ಸಂಗಮೇಶ ನಿರಾಣಿ, ಸಿದ್ದು ಕೊಣ್ಣೂರ, ಬಿ.ಎಸ್. ಸಿಂಧೂರ, ನಜೀರ ಕಂಗನೊಳ್ಳಿ, ಸುಶೀಲಕುಮಾರ ಬೆಳಗಲಿ, ಸಮೀರ ಕಂಗನೊಳ್ಳಿ, ಬಿ.ಜಿ. ಪಾಟೀಲ, ಸದಾಶಿವ ಬೂಟಾಳೆ, ಸಿದ್ದಾರ್ಥ ಗೋಠ, ಸಂತೋಷ ಪೂಜಾರಿ, ಗಂಗಾ ಅನಂತಪೂರ ಮತ್ತಿತರರು ಇದ್ದರು.

ಸಂತೋಷ ತಳಕೇರಿ ಅವರು ಸ್ವಾಗತಿಸಿ ನಿರೂಪಿಸಿದರು. ಸತ್ಯಪ್ಪ ಕಾಂಬಳೆ ವಂದನಾರ್ಪಣೆ ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments
  • ಸತೀಶ್ ಜಾರಕಿಹೊಳಿ ಅವರ ಮಾತು ಒಳ್ಳೆಯ ಸಂದೇಶ ರವಾನಿಸಿದ್ದಿರಿ

  • Sri Jarkihole Satish has stressed upon the Basava tatva & appealed to stop from being followed the ideology & principles laid by Dr. B.R. Ambedkar & Guru Mahatma Basaveshwar for better future & cultural follow up.
    salute to Sri Jarkihole Satish.

Leave a Reply

Your email address will not be published. Required fields are marked *